Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತಮಿಳುನಾಡು ವಿಜಯ್‌ಗೆ ಮಣೆ ಹಾಕುವುದೇ?

ತಮಿಳುನಾಡು ವಿಜಯ್‌ಗೆ ಮಣೆ ಹಾಕುವುದೇ?

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ10 Oct 2025 12:00 PM IST
share
ತಮಿಳುನಾಡು ವಿಜಯ್‌ಗೆ ಮಣೆ ಹಾಕುವುದೇ?

ರಾಜಕೀಯ ‘ಅಖಾಡ’ಕ್ಕೆ ಇಳಿದಿರುವ ವಿಜಯ್‌ಸ್ಥಾಪಿಸಿರುವ ಟಿವಿಕೆ ತೃತೀಯ ರಾಜಕೀಯ ಶಕ್ತಿ ಆಗಬಹುದೇ? ಇಲ್ಲವೇ ಮತ್ತೊಂದು ಡಿಎಂಡಿಕೆ ಅಥವಾ ಎಂಎನ್‌ಎಂ ಆಗುವುದೇ ಎಂಬ ಕುತೂಹಲ ಹುಟ್ಟಿದೆ. ಇದನ್ನು ಮುಂದಿನ ವಿಧಾನಸಭೆಯ ಚುನಾವಣೆ ನಿರ್ಧರಿಸಲಿದೆ. ದಳಪತಿ ಹೋದ ಕಡೆ ಜನ ಗಿಜಿಗುಟ್ಟಿದ್ದಾರೆ. ಸಭೆಗಳಿಗೆ ಬರುವ ಜನ ಬದಲಾವಣೆ ತರುವರೆಂದು ಹೇಳುವುದು ಕಷ್ಟ. ಕರೂರು ಘಟನೆ ವಿಜಯ್ ಅವರಿಗೆ ರಾಜಕೀಯ ಅನುಭವ ಇಲ್ಲವೆಂದು ನಿರೂಪಿಸಿದೆ. ದುರಂತದ ಬಳಿಕ ನಿಲ್ಲದೆ ಪಲಾಯನ ಮಾಡಿದ್ದು ಅಪ್ರಬುದ್ಧತೆಯ ಲಕ್ಷಣ.

ಕರೂರು ದುರ್ಘಟನೆ ನಡೆದು ಎರಡು ವಾರ ಸಮೀಪಿಸುತ್ತಿದ್ದರೂ ತಮಿಳುನಾಡಿನ ಜನರ ಕಣ್ಣಂಚಿನ ನೀರು ಬತ್ತಿಲ್ಲ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಒಡಲುರಿ ಇನ್ನೂ ಆರಿಲ್ಲ. ‘ಕಾರ್ಗತ್ತಲು ಆವರಿಸಿದ ಬದುಕಿಗೆ ಬೆಳಕು ಕಾಣುವುದೇ?’ ಎಂದು ಒಡಲ ಕುಡಿಗಳು, ಹೆತ್ತವರ ಕಳೆದುಕೊಂಡ ಮನಸ್ಸುಗಳು ಪರಿತಪಿಸುತ್ತಿವೆ. ದುರಂತದಿಂದ ಲಾಭ ಪಡೆಯಲು ಮುಂದಾಗಿರುವ ರಾಜಕೀಯ ನಾಯಕರು ‘ಬೆಂದ ಮನೆಯಲ್ಲಿ ಏನಾದರೂ ಸಿಗಬಹುದೇ?’ ಎಂದು ಜಾಲಾಡುತ್ತಿದ್ದಾರೆ. ಈ ಘಟನೆ ಹೇಗಾಯಿತು? ಏಕಾಯಿತು? ಹೊಣೆ ಯಾರು? ಎಂದು ‘ಪೋಸ್ಟ್ ಮಾರ್ಟಂ’ ನಡೆಯತ್ತಿದೆ.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್‌ಸಿಬಿ) ವಿಜಯೋತ್ಸವದ ವೇಳೆ, ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ದುರಂತ ಪಾಠವಾಗಬೇಕಿತ್ತು. ಯಾರೂ ಎಚ್ಚೆತ್ತುಕೊಳ್ಳದ್ದರಿಂದ ಕರೂರು ದುರ್ಘಟನೆ ನಡೆದು ಹೋಗಿದೆ. ‘ಊರು ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬ ಗಾದೆಯಂತೆ ಈಗ ಸಾರ್ವಜನಿಕ ಸಮಾರಂಭಗಳಲ್ಲಿ ಜನಸ್ತೋಮ ನಿಯಂತ್ರಿಸಲು ನಿಯಮಗಳನ್ನು ರೂಪಿಸುವ ಚಿಂತನೆ ನಡೆಯುತ್ತಿದೆ. ವಿಳಂಬ ಆದರೂ ಪರವಾಗಿಲ್ಲ. ಈ ಕೆಲಸ ಆಗಬೇಕಿದೆ.

ವಿಜಯ್ ‘ಕಾಲಿವುಡ್’ನಲ್ಲಿ ರಜನಿ, ಕಮಲ್ ಬಳಿಕ ಹೆಸರು ಮಾಡಿರುವ ನಟರಲ್ಲಿ ಪ್ರಮುಖರು. ತಮಗಿರುವ ಜನಪ್ರಿಯತೆ ಕಂಡೇ ರಾಜಕೀಯ ಹುಚ್ಚು ಹಿಡಿಸಿಕೊಂಡಿರಬೇಕು. ಮುಖ್ಯಮಂತ್ರಿ ಆಗುವ ಕನಸು ಕಂಡಿರಬೇಕು. ಅದೇನು ತಪ್ಪಲ್ಲ. ಒಂದು ಕಾಲಕ್ಕೆ ತಮಿಳು ಬೆಳ್ಳಿತೆರೆ ಮೇಲೆ ಮೆರೆದ ಎಂ.ಜಿ. ರಾಮಚಂದ್ರನ್, ಜಯಲಲಿತಾ, ಚಿತ್ರಕಥೆ, ಸಂಭಾಷಣೆ ಬರೆದ ಅಣ್ಣಾದೊರೈ ಮತ್ತು ಕರುಣಾನಿಧಿ ತಮಿಳುನಾಡನ್ನು ಆಳಲಿಲ್ಲವೇ? ಕ್ಯಾ. ವಿಜಯಕಾಂತ್ ತಮಿಳುನಾಡು ವಿಧಾನಸಭೆ ವಿರೋಧಪಕ್ಷದ ನಾಯಕರಾಗಲಿಲ್ಲವೇ? ತೆಲುಗರ ‘ಹೃದಯ ಸಾಮ್ರಾಟ’ ಎನ್.ಟಿ. ರಾಮರಾವ್ ಮುಖ್ಯಮಂತ್ರಿ ಆಗಿರಲಿಲ್ಲವೇ? ಅವರದೇ ಹಾದಿ ಹಿಡಿದ ನಟ ಚಿರಂಜೀವಿ ಕೇಂದ್ರ ಸಚಿವರಾಗಿರಲಿಲ್ಲವೇ? ಪವನ್ ಕಲ್ಯಾಣ್ ಟಿಡಿಪಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿಲ್ಲವೇ?

21 ವರ್ಷ ತುಂಬಿದ ಯಾರಾದರೂ ಶಾಸಕರಾಗಬಹುದು. ಸಂಸದರಾಗಬಹುದು. ಮಂತ್ರಿ, ಮುಖ್ಯಮಂತ್ರಿ ಆಗಬಹುದು. ಅಷ್ಟೇ ಏಕೆ? ಪ್ರಧಾನಿಯೂ ಆಗಬಹುದು. ‘ಗುಜರಾತಿನ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ ವ್ಯಕ್ತಿ ನಮ್ಮ ಕಣ್ಣ ಮುಂದೆಯೇ ಪ್ರಧಾನಿ ಆಗಿಲ್ಲವೇ?’ ಇಂಥ ಅವಕಾಶವನ್ನು ನಮ್ಮ ಸಂವಿಧಾನ ಕೊಡಮಾಡಿದೆ. ಆದರೆ, ಅಧಿಕಾರದ ಆಸೆಗಾಗಿ ಸಮಾಜ ಒಡೆಯಬಾರದಷ್ಟೆ. ಜನರ ಗೋರಿ ಮೇಲೆ ‘ಸಾಮ್ರಾಜ್ಯ’ ಕಟ್ಟಬಾರದಷ್ಟೆ. ವಿಜಯ್ ಸ್ವಲ್ಪ ಸಂಯಮ ತೋರಿದ್ದರೆ ದುರ್ಘಟನೆ ತಪ್ಪಿಸಬಹುದಿತ್ತು. ಅದೇನೆ ಇರಲಿ, ಕರೂರು ಘಟನೆ ತನಿಖೆಗೆ ಒಳಪಟ್ಟಿದೆ. ಇಲ್ಲಿ ಅವಲೋಕಿಸುತ್ತಿರುವುದು ತಮಿಳುನಾಡು ರಾಜಕಾರಣವನ್ನು.

ತಮಿಳುನಾಡು ರಾಜಕಾರಣ ನಿಂತಿರುವುದು ದ್ರಾವಿಡ ತತ್ವ- ಸಿದ್ಧಾಂತದ ಮೇಲೆ. ಅಲ್ಲಿ ‘ಪುರೋಹಿತಶಾಹಿ’ ಮೌಲ್ಯಗಳಿಗೆ ಜಾಗವಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ರಾಮಸಾಮಿ ನಾಯ್ಕರ್ (ಪೆರಿಯಾರ್) ಬಿತ್ತಿರುವ ದ್ರಾವಿಡ ಚಳವಳಿ ಬೀಜಗಳು ಹೆಮ್ಮರವಾಗಿವೆ. ಅವರ ವಿಚಾರಗಳು ಮಣ್ಣಲ್ಲಿ ಬೆರೆತುಹೋಗಿವೆ. ಭಾಷೆ, ನೆಲ, ಜಲ ಬಿಟ್ಟು ದ್ರಾವಿಡ ಸಂಸ್ಕೃತಿ ಇಲ್ಲ. ತಮಿಳರಿಗೆ ಇವುಗಳ ಮೇಲೆ ಇನ್ನಿಲ್ಲದ ಅಭಿಮಾನ. ತಮ್ಮ ಭಾಷೆ- ಸಂಸ್ಕೃತಿ ಅಸ್ಮಿತೆಗೆ ಕುತ್ತು ಬಂದಾಗ ಸಿಡಿದೇಳುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹೀಗೇ ಇರಬೇಕು. ಕೇಂದ್ರದ ಬಾಲ ಬಡಿಯಬಾರದು. ಪ್ರಾದೇಶಿಕತೆಗೂ ಸಮಾನವಾದ ಗೌರವವಿರಬೇಕು. ದಕ್ಷಿಣದ ಮಿಕ್ಕ ರಾಜ್ಯಗಳಿಗಿಂತ ತಮಿಳುನಾಡು ಈ ವಿಷಯದಲ್ಲಿ ಯಾವಾಗಲೂ ಮುಂದು. ರಾಜಿ ಇಲ್ಲವೇ ಇಲ್ಲ.

ಬೇರೆ ರಾಜ್ಯಗಳಂತೆ ಇಲ್ಲೂ ಪುರೋಹಿತಶಾಹಿ ಶಕ್ತಿಗಳು ಒಳನುಸುಳಲು ಪ್ರಯತ್ನಿಸಿವೆ. ಪ್ರತ್ಯಕ್ಷವಾಗಲ್ಲದಿದ್ದರೂ ಹಿಂಬಾಗಿಲಿನಿಂದ ಪ್ರವೇಶಿಸಲು ‘ಹಿಂದುತ್ವ’ವಾದಿ ಪಕ್ಷ ಕಸರತ್ತು ನಡೆಸಿದೆ. ಅದರ ಪ್ರಯತ್ನ ಕೈಗೂಡಿಲ್ಲವೆಂದರೆ ಜನರ ಬದ್ಧತೆ ಹೇಗಿರಬಹುದೆಂದು ಬಿಡಿಸಿ ಹೇಳಬೇಕಿಲ್ಲ. 1967ರಲ್ಲಿ ಕಾಂಗ್ರೆಸ್ ಕೋಟೆ ಕುಸಿದ ಬಳಿಕ ಮತದಾರರು ಬೆಂಬಲಿಸಿದ್ದು ದ್ರಾವಿಡ ಪಕ್ಷಗಳನ್ನು. ಹೀಗಾಗಿ, ದ್ರಾವಿಡ ನಾಯಕರ ಬಿಗಿ ಹಿಡಿತವಿದೆ. ರಾಜಕೀಯ ಅಧಿಕಾರ ಆಗಾಗ ಡಿಎಂಕೆ, ಎಐಎಡಿಎಂಕೆ ನಡುವೆ ಕೈ ಬದಲಾಯಿಸುತ್ತಿದೆ. ಡಿಎಂಕೆ ನಾಯಕರಾಗಿದ್ದ ಅಣ್ಣಾ ದೊರೈ, ಕರುಣಾನಿಧಿ, ಎಐಎಡಿಎಂಕೆ ಮುಖಂಡರಾಗಿದ್ದ ಎಂಜಿಆರ್ ಎಲ್ಲರೂ ಪೆರಿಯಾರ್ ‘ಗರಡಿ’ಯಲ್ಲಿ ಪಳಗಿದವರು. ರಾಜಕಾರಣಕ್ಕೆ ಬರುವ ಮೊದಲೇ ಆಳ-ಅಗಲ ಅರಿತವರು. ದ್ರಾವಿಡ ಚಳವಳಿಯಲ್ಲಿ ಸಕ್ರಿಯರಾಗಿದ್ದವರು. ಜನರ ನಾಡಿಮಿಡಿತ ಅರಿತು ರಾಜಕಾರಣ ಮಾಡಿದವರು. ಯಶಸ್ವಿಯೂ ಆದವರು.

ತಮಿಳುನಾಡು ರಾಜಕಾರಣವೂ ಅಷ್ಟೇ ಜಿಗುಟು. ಸುಮಾರು ಆರು ದಶಕದಿಂದ ಎರಡೇ ಪಕ್ಷಗಳು ಪಾರುಪತ್ಯ ಮೆರೆದಿವೆ. ರಾಷ್ಟ್ರೀಯ ಪಕ್ಷಗಳ ಸ್ಥಿತಿ ಹೇಗಿದೆ ಎಂದರೆ, ಈ ಪಕ್ಷಗಳನ್ನು ಬಿಟ್ಟು ರಾಜಕಾರಣ ಮಾಡಲಾಗದು. ಕಾಂಗ್ರೆಸ್‌ಗೆ ಡಿಎಂಕೆ ಮತ್ತು ಬಿಜೆಪಿಗೆ ಎಐಎಡಿಎಂಕೆ ಸಖ್ಯ ಬೇಕೇಬೇಕು. ಅವುಗಳ ಜತೆಗೇ ಮುನ್ನಡೆಯಬೇಕು. ಹೊಸ ಪ್ರಾದೇಶಿಕ ಪಕ್ಷಗಳದ್ದೂ ಇದೇ ಗತಿ. ನಟ ಕಮಲ್ ಹಾಸನ್ ಅವರ ‘ಎಂಎನ್‌ಎಂ’ ಇದಕ್ಕೆ ತಾಜಾ ಉದಾಹರಣೆ. 8 ವರ್ಷಗಳಿಂದ ಅದು ಟೇಕಾಫೇ ಆಗಿಲ್ಲ.

ಕಮಲ್ ಪಕ್ಷದಿಂದ ತಮಿಳುನಾಡು ರಾಜಕಾರಣದಲ್ಲಿ ಏನೂ ಬದಲಾವಣೆ ಆಗಲಿಲ್ಲ. 2019ರ ಲೋಕಸಭೆ, 2021ರ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವ ಧೈರ್ಯ ಮಾಡಿದರೂ ಇವೆರಡೂ ಚುನಾವಣೆಯಲ್ಲಿ ಕ್ರಮವಾಗಿ ಸಿಕ್ಕಿದ್ದು ಶೇ. 3.7 ಹಾಗೂ ಶೇ. 2.5 ಮತಗಳು. ಸ್ವತಃ ಕಮಲ್‌ಹಾಸನ್ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋತರು. ಎಂಎನ್‌ಎಂ ನಂಬಿಕೆ-ಸಿದ್ಧಾಂತ, ವಿಚಾರಗಳು ದ್ರಾವಿಡ ಚಳವಳಿ ಸಮೀಪವೇ ಇದ್ದರೂ ಜನ ಅವರನ್ನು ಒಪ್ಪಲಿಲ್ಲ. ಆಮೇಲೆ ಡಿಎಂಕೆ, ಕಾಂಗ್ರೆಸ್ ಜತೆ ಕೈಜೋಡಿಸುವ ತೀರ್ಮಾನ ಮಾಡಿದ್ದು.

ಎಂಎನ್‌ಎಂ ರಾಜಕೀಯ ಹಿನ್ನಡೆಗೆ ಕಮಲ್ ಅವರೇ ಕಾರಣ ಕೊಟ್ಟಿದ್ದಾರೆ. ‘‘ನಾನು ತಡವಾಗಿ ರಾಜಕೀಯ ಪ್ರವೇಶ ಮಾಡಿದೆ. 20 ವರ್ಷ ಮೊದಲೇ ಪಕ್ಷ ಕಟ್ಟಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು’’ ಎಂದಿದ್ದಾರೆ. ಜಯಲಲಿತಾ, ಕರುಣಾನಿಧಿ ನಿಧನರಾದ ಬಳಿಕ ತಮಿಳುನಾಡು ರಾಜಕಾರಣದಲ್ಲಿ ಶೂನ್ಯ ಆವರಿಸಿದ್ದು ನಿಜ. ಕರುಣಾನಿಧಿ ಸ್ಥಾನವನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್ ಸಮರ್ಥವಾಗಿ ತುಂಬಿದ್ದಾರೆ. ಎಐಎಡಿಎಂಕೆಯಲ್ಲಿ ನಾಯಕರ ಮಧ್ಯೆ ಕಿತ್ತಾಟವಿದೆ. ಗುಂಪುಗಾರಿಕೆ ಇದೆ. ಈ ಅವಕಾಶ ಬಳಸಿಕೊಂಡು ಕಮಲ್ ತಳ ಮಟ್ಟದಿಂದ ಪಕ್ಷ ಕಟ್ಟುವ ಪ್ರಯತ್ನ ಮಾಡಬಹುದಿತ್ತು.

20 ವರ್ಷಗಳ ಹಿಂದೆಯೇ ಕ್ಯಾ. ವಿಜಯಕಾಂತ್ ಡಿಎಂಕೆ, ಎಐಎಡಿಎಂಕೆಗೆ ಪರ್ಯಾಯವಾಗಿ ಡಿಎಂಡಿಕೆ ಕಟ್ಟಿದರೂ ಹಿನ್ನಡೆ ಕಂಡರು. 2006ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಶೇ. 8.4 ಮತಗಳು ಬಂದರೂ ಗೆಲ್ಲಲು ಸಾಧ್ಯವಾಗಿದ್ದು ಒಂದು ಸ್ಥಾನ. 2009ರ ಲೋಕಸಭೆಯ ಚುನಾವಣೆಯಲ್ಲಿ ಮತಗಳ ಪ್ರಮಾಣ ಶೇ. 0.75ಕ್ಕೆ ಕುಸಿಯಿತು. ಡಿಎಂಕೆ-ಎಐಎಡಿಎಂಕೆಗೆ ಡಿಎಂಡಿಕೆ ಪರ್ಯಾಯ ಎಂದಿದ್ದ ವಿಜಯಕಾಂತ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಡವಿದರು. ಏಕಾಂಗಿಯಾಗಿ ಚುನಾವಣೆ ಎದುರಿಸದೆ ಜಯಾ ಜತೆ ಹೋದರು. ಆ ಸಲ ಅವರು ಗೆದ್ದಿದ್ದು 29 ಕ್ಷೇತ್ರವಾದರೂ ಮತ ಗಳಿಕೆಯಲ್ಲಿ ಶೇ. 0.50ರಷ್ಟು ಕಡಿಮೆಯಾಯಿತು. 150 ಸ್ಥಾನ ಎಐಎಡಿಎಂಕೆ ಪಾಲಾಯಿತು. ಡಿಎಂಕೆಗೆ ಆಗ ಸಿಕ್ಕಿದ್ದು 23 ಸ್ಥಾನ. ವಿಜಯಕಾಂತ್ ವಿರೋಧ ಪಕ್ಷದ ನಾಯಕರಾದರು. ಮುಂದೆ ಅವರಿಟ್ಟ ತಪ್ಪು ಹೆಜ್ಜೆ ಡಿಎಂಡಿಕೆ ಬೆಳವಣಿಗೆಗೆ ಅಡ್ಡಿಯಾಯಿತು. ಲೋಕಸಭೆ ಚುನಾವಣೆಗಳಲ್ಲಿ ಎನ್‌ಡಿಎ ತೆಕ್ಕೆಗೆ ಜಾರಿದರು. ಇದರಿಂದ ಬಿಜೆಪಿಗೆ ಲಾಭವಾಯಿತೇ ವಿನಾ ಡಿಎಂಡಿಕೆಗೆ ಪ್ರಯೋಜನವಾಗಲಿಲ್ಲ.

2017ರಲ್ಲಿ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದ ಸೂಪರ್ ಸ್ಟಾರ್ ರಜನಿ ಕಾಂತ್ ಮತದಾರರ ಮನಸ್ಥಿತಿ ನೋಡಿಯೇ ತಮ್ಮ ತೀರ್ಮಾನದಿಂದ ಹಿಂದೆ ಸರಿದಿರಬಹುದು. ಬೆಂಗಳೂರಿನ, ಮರಾಠಿ ಮೂಲದ ಅವರಿಗೆ ‘ತಮಿಳುನಾಡಲ್ಲಿ ಮೂರನೇ ಶಕ್ತಿಗೆ ಬೆಂಬಲ ಸಿಗುವುದಿಲ್ಲ’ ಎಂದು ಮನವರಿಕೆ ಆಗಿರಬಹುದು. ಈ ತೀರ್ಮಾನ ರಜನಿಗಿಂತಲೂ ಬಿಜೆಪಿ ನಾಯಕರಿಗೇ ಹೆಚ್ಚು ಬೇಸರ ತರಿಸಿರಬಹುದು. ರಜನಿ ಜನಪ್ರಿಯತೆ ಅಲೆಯಲ್ಲಿ ತಮ್ಮ ನೆಲೆ ವಿಸ್ತರಿಸುವ ನಿರೀಕ್ಷೆ ಕಮಲ ಪಾಳೆಯದ ನಾಯಕರಿಗಿತ್ತು. ಹೇಗಾದರೂ ಅವರನ್ನು ಎಳೆದು ತರಲು ತೆರೆಮರೆಯಲ್ಲಿ ಸರ್ಕಸ್ ಮಾಡಿದರೂ ಪ್ರಯೋಜನವಾಗಿಲ್ಲ. ಆದರೂ ದ್ರಾವಿಡ ನೆಲದಲ್ಲಿ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಶ್ರಮ ಹಾಕುತ್ತಿದೆ. 2014ರಲ್ಲಿ ಶೇ. 5.56 ಮತ ಪಡೆದಿದ್ದ ಈ ಪಕ್ಷಕ್ಕೆ ಕಳೆದ ವರ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 11.38ರಷ್ಟು ಮತ ಬಂದಿವೆ. ಇದು ದ್ರಾವಿಡ ಪಕ್ಷಗಳು ಗಮನಿಸಬೇಕಾದ ಅಂಶ.

ಈ ಪರಿಸ್ಥಿತಿಯಲ್ಲಿ ವಿಜಯ್ ರಾಜಕೀಯ ‘ಅಖಾಡ’ಕ್ಕೆ ಇಳಿದಿದ್ದಾರೆ. ಅವರು ಸ್ಥಾಪಿಸಿರುವ ಟಿವಿಕೆ ತೃತೀಯ ರಾಜಕೀಯ ಶಕ್ತಿ ಆಗಬಹುದೇ? ಇಲ್ಲವೆ ಮತ್ತೊಂದು ಡಿಎಂಡಿಕೆ ಅಥವಾ ಎಂಎನ್‌ಎಂ ಆಗುವುದೇ ಎಂಬ ಕುತೂಹಲ ಹುಟ್ಟಿದೆ. ಇದನ್ನು ಮುಂದಿನ ವಿಧಾನಸಭೆಯ ಚುನಾವಣೆ ನಿರ್ಧರಿಸಲಿದೆ. ದಳಪತಿ ಹೋದ ಕಡೆ ಜನ ಗಿಜಿಗುಟ್ಟಿದ್ದಾರೆ. ಸಭೆಗಳಿಗೆ ಬರುವ ಜನ ಬದಲಾವಣೆ ತರುವರೆಂದು ಹೇಳುವುದು ಕಷ್ಟ. ಕರೂರು ಘಟನೆ ವಿಜಯ್ ಅವರಿಗೆ ರಾಜಕೀಯ ಅನುಭವ ಇಲ್ಲವೆಂದು ನಿರೂಪಿಸಿದೆ. ದುರಂತದ ಬಳಿಕ ನಿಲ್ಲದೆ ಪಲಾಯನ ಮಾಡಿದ್ದು ಅಪ್ರಬುದ್ಧತೆಯ ಲಕ್ಷಣ.

ತಮಿಳುನಾಡು ರಾಜಕಾರಣವನ್ನು ಒಂದೇ ಸಾಲಿನಲ್ಲಿ ಹೇಳುವುದಾದರೆ, ಡಿಎಂಕೆ ಸದ್ಯಕ್ಕೆ ಸುಸ್ಥಿಯಲ್ಲಿರುವಂತೆ ಕಾಣುತ್ತಿದೆ. ಎಐಎಡಿಎಂಕೆಗೆ ಭಿನ್ನಮತ ಕಾಡುತ್ತಿದೆ. ವಿಧಾನಸಭೆ ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದ್ದು ಅಷ್ಟರಲ್ಲಿ ಏನು ಬೆಳವಣಿಗೆ ಆಗುವುದೋ?

share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X