ಅಸಮರ್ಪಕ ಅಧ್ಯಯನ ವರದಿಯನ್ನು ಹಿಂಪಡೆಯಿರಿ: ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಮಂಗಳೂರು: ದಿಢೀರ್ ಹೃದಯಾಘಾತದಿಂದ ಆಗುತ್ತಿರುವ ಸಾವುಗಳ ಬಗ್ಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿ ಅಸಮರ್ಪಕವಾಗಿದೆ, ಅದನ್ನು ಹಿಂಪಡೆಯಬೇಕು ಎಂದು ತಜ್ಞ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಸರಕಾರವನ್ನು ಆಗ್ರಹಿಸಿದ್ದಾರೆ.
'ವಾರ್ತಾಭಾರತಿ' ಜೊತೆ ಮಾತಾಡಿರುವ ಡಾ.ಕಕ್ಕಿಲ್ಲಾಯ, ಕೊರೋನ ಲಸಿಕೆಗೂ, ಈಗ ಆಗುತ್ತಿರುವ ದಿಢೀರ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಈ ವರದಿ ಹೇಳಿಬಿಟ್ಟಿದೆ ಎಂಬಂತೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇಂತಹ ಯಾವುದೇ ನಿರ್ಣಯವೂ ಸಮಿತಿಯ ವರದಿಯಲ್ಲಿ ಎಲ್ಲಿಯೂ ಇಲ್ಲ. ಆ ವರದಿಯಲ್ಲಿ ಉಲ್ಲೇಖಿಸಿರುವ ಅಧ್ಯಯನದ ವರದಿಗಳಿಗೂ ಸಮಿತಿಯು ಮಾಡಿರುವ ಅಧ್ಯಯನಕ್ಕೂ ಯಾವುದೇ ಸಂಬಂಧವಿಲ್ಲ. ಕೊರೋನ ಲಸಿಕೆ ತೆಗೆದುಕೊಂಡ ನಾಲ್ಕೈದು ವರ್ಷಗಳ ಬಳಿಕ ನಡೆಯುತ್ತಿರುವ ಈ ದಿಢೀರ್ ಸಾವುಗಳಿಗೂ ಕೊರೋನ ಲಸಿಕೆಗೂ ಏನಾದರೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಯಾವುದೇ ಅಧ್ಯಯನವನ್ನು ಇವರು ಉಲ್ಲೇಖಿಸಿಲ್ಲ, ಅಂತಹ ಯಾವುದೇ ಅಧ್ಯಯನವು ಲಭ್ಯವೂ ಇಲ್ಲ ಎಂದು ಹೇಳಿದ್ದಾರೆ. ಐಸಿಎಂಆರ್ ಹಾಗೂ ಜಯದೇವ ಆಸ್ಪತ್ರೆಯಂತಹ ಪ್ರತಿಷ್ಠಿತ ಸಂಸ್ಥೆಗಳು ಇಂತಹ ವರದಿಗಳನ್ನು ಪ್ರಕಟಿಸುತ್ತವೆ ಅಂದರೆ ವೈದ್ಯಕೀಯ ವಿಜ್ಞಾನದಲ್ಲಿ ನಮ್ಮ ದೇಶ ಎಲ್ಲಿಗೆ ತಲುಪಿದೆ ಎಂದು ಚಿಂತಿಸಬೇಕಾಗಿದೆ ಎಂದು ಡಾ.ಕಕ್ಕಿಲ್ಲಾಯ ಆತಂಕ ವ್ಯಕ್ತ ಪಡಿಸಿದ್ದಾರೆ.
53+17+180 ಅಂದರೆ 250 ಅಂತ ಸಣ್ಣ ಮಕ್ಕಳೂ ಹೇಳುತ್ತವೆ. ಆದರೆ ಈ ವರದಿಯಲ್ಲಿ ಈ ಲೆಕ್ಕವು 249 ಆಗಿದೆ. ಹಾಗೆಯೇ ಅಧ್ಯಯನಕ್ಕೊಳಪಟ್ಟ 77 ಮಂದಿಯಲ್ಲಿ ಹೃದ್ರೋಗಕ್ಕೆ ಕಾರಣವಾಗಬಲ್ಲ ಯಾವುದೇ ಸಮಸ್ಯೆಗಳೂ ಇರಲಿಲ್ಲ ಎಂಬುದನ್ನು ಗುರುತಿಸಿರುವ ಸಮಿತಿಯು ಅದನ್ನು ಸಣ್ಣ ಪ್ರಮಾಣ ಎಂದಿರುವುದು ತಪ್ಪಾಗುತ್ತದೆ, ಮೂವರಲ್ಲಿ ಒಬ್ಬರಲ್ಲಿ ಯಾವುದೇ ಕಾರಣವು ಕಂಡುಬಂದಿಲ್ಲದಿರುವುದು ಸಣ್ಣ ಪ್ರಮಾಣ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಈ 77 ಮಂದಿಯಲ್ಲಿ ಯಾವುದೋ ಗೊತ್ತಿಲ್ಲದ ಅಥವಾ ಹೊಸ ಬಗೆಯ ಸಮಸ್ಯೆಯು ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂದು ಸಮಿತಿಯ ವರದಿಯಲ್ಲೇ ಹೇಳಿರುವುದು ಲಸಿಕೆ ಅಥವಾ ಕೊರೋನ ಸೋಂಕನ್ನು ದೋಷಮುಕ್ತಗೊಳಿಸುವುದಕ್ಕೆ ವ್ಯತಿರಿಕ್ತವಾಗುತ್ತದೆ ಎಂದು ಡಾ.ಕಕ್ಕಿಲ್ಲಾಯ ಹೇಳಿದ್ದಾರೆ. ಆದ್ದರಿಂದ ಈ ಸಮಿತಿಯ ವರದಿಯ ಆಧಾರದಲ್ಲಿ ಕೊರೋನ ಲಸಿಕೆಗೂ ದಿಢೀರ ಸಾವುಗಳಿಗೂ ಸಂಬಂಧ ಇದೆಯೇ ಎಂದು ಕೇಳಿದರೆ ಜಯದೇವ ಸಂಸ್ಥೆಯಾಗಲಿ, ಅದರ ನಿರ್ದೇಶಕರಾಗಲಿ, ಮುಖ್ಯಮಂತ್ರಿಗಳಾಗಲೀ, ಕೇಂದ್ರ ಸರಕಾರವಾಗಲೀ, ಅಥವಾ ಯಾರೇ ವೈದ್ಯರಾಗಲೀ "ನಮಗೆ ಇನ್ನೂ ಗೊತ್ತಿಲ್ಲ" ಎಂದು ಹೇಳಬೇಕೇ ವಿನಃ " ಸಂಬಂಧ ಇಲ್ಲ " ಎಂದು ಹೇಳಲೇಬಾರದು ಎನ್ನುವುದು ಸುಸ್ಪಷ್ಟ ಎಂದು ಡಾ. ಕಕ್ಕಿಲ್ಲಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಈ ವರದಿ ಅರ್ಧಂಬರ್ಧ ಆಗಿದೆ, ಲೆಕ್ಕಾಚಾರ ತಪ್ಪಾಗಿದೆ, ಇದನ್ನು ಹಿಂಪಡೆಯುತ್ತೇವೆ, ಮುಂದಿನ ಆರು ತಿಂಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಸರಿಯಾದ ಆಳವಾದ ಅಧ್ಯಯನ ನಡೆಸಿ ಒಂದು ವರದಿ ಕೊಡುತ್ತೇವೆ, ಅವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಸರಕಾರ ನೇಮಿಸಿರುವ ಸಮಿತಿ ಸ್ಪಷ್ಟೀಕರಣ ಕೊಡಬೇಕು ಎಂದು ಡಾ. ಕಕ್ಕಿಲಾಯ ಆಗ್ರಹಿಸಿದ್ದಾರೆ.







