ಸ್ಟೈಪಂಡ್ ನೀಡದ ವೈದ್ಯಕೀಯ ಕಾಲೇಜುಗಳಿಗೆ ಮತ್ತೆ ಎನ್ಎಂಸಿ ಎಚ್ಚರಿಕೆ

ಹೊಸದಿಲ್ಲಿ: ಇಂಟರ್ನಿ ಮತ್ತು ಸ್ಥಳೀಯ ನಿವಾಸಿ ವೈದ್ಯರಿಗೆ ಸ್ಟೈಪಂಡ್ ಪಾವತಿಸದ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮತ್ತೆ ಸಾರ್ವಜನಿಕ ನೋಟಿಸ್ ಮೂಲಕ ಎಚ್ಚರಿಕೆ ನೀಡಿದೆ.
2023 ಮತ್ತು 2024ರಲ್ಲಿ ಇಂಥದ್ದೇ ಎಚ್ಚರಿಕೆಯನ್ನು ನೀಡಿದರೂ ಯಾವುದೇ ಕ್ರಮಗಳನ್ನು ಎನ್ಎಂಸಿ ಕೈಗೊಂಡಿಲ್ಲ. ಇದೀಗ ಆಯೋಗದ ಅಧ್ಯಕ್ಷರು ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಪ್ರತಿ ವರ್ಷ ಸ್ಟೈಪಂಡ್ ನೀಡದೇ ಕೋಟ್ಯಂತ ರೂಪಾಯಿಗಳನ್ನು ಉಳಿಸಿಕೊಂಡಿರುವ ವೈದ್ಯಕೀಯ ಕಾಲೇಜುಗಳಿಗೆ 50 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎರಡು ತಿಂಗಳ ಹಿಂದೆ ಎನ್ಎಂಸಿ ಎಚ್ಚರಿಕೆ ನೀಡಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜುಗಳು ನೀಡುವಷ್ಟೇ ಶಿಷ್ಯವೇತನವನ್ನು ಎಲ್ಲ ಸ್ಥಳೀಯ ನಿವಾಸಿ ವೈದ್ಯರು ಮತ್ತು ಇಂಟರ್ನಿಗಳಿಗೆ ನೀಡಬೇಕು ಎಂದು ಎನ್ಎಂಸಿ ನಿಬಂಧನೆಗಳು ಕಡ್ಡಾಯಪಡಿಸಿವೆ.
ಜುಲೈ 11ರಿಂದ ನೋಟಿಸ್ ನೀಡುವ ಮೂರು ದಿನ ಮೊದಲು, ಎನ್ಎಂಸಿ ಮತ್ತೊಂದು ನೋಟಿಸ್ ಹೊರಡಿಸಿ, ವೈದ್ಯ ವಿದ್ಯಾರ್ಥಿಗಳ ಅಹವಾಲನ್ನು ಬಗೆಹರಿಸುವ ಹೊಣೆಗಾರಿಕೆಯನ್ನು ವೈದ್ಯಕೀಯ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಆಯಾ ರಾಜ್ಯಗಳ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಗಳಿಗೆ ವರ್ಗಾಯಿಸಿತ್ತು. ಆದರೆ ಇದೀಗ ದಂಡ ವಿಧಿಸುವುದು, ಕೋರ್ಸ್ ಗೆ ನೀಡಿದ ಮಾನ್ಯತೆಯನ್ನು ಹಿಂಪಡೆಯುವುದು ಮತ್ತು ಪ್ರವೇಶವನ್ನು ತಡೆಹಿಡಿಯುವ ಎಚ್ಚರಿಕೆಯ ನೋಟಿಸ್ ನೀಡಿದೆ.
ಸುಪ್ರೀಂಕೋರ್ಟ್ ಏಪ್ರಿಲ್ 29ರಂದು ನೀಡಿದ ಆದೇಶದ ಅನ್ವಯ ಈ ನೋಟಿಸ್ ನೀಡಲಾಗಿದೆ. ಎಲ್ಲ ಖಾಸಗಿ ಮತ್ತು ಸ್ವಾಯತ್ತ ವಿಶ್ವವಿದ್ಯಾನಿಲಯಗಳು ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ, ಮುಂಜಾಗ್ರತಾ ಠೇವಣಿ ಮತ್ತು ಎಲ್ಲ ಇತರ ಶುಲ್ಕಗಳ ಬಗ್ಗೆ ಕೌನ್ಸಿಲಿಂಗ್ ಪೂರ್ವದಲ್ಲೇ ವಿವರವಾದ ಮಾಹಿತಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. 2022ರಲ್ಲಿ ನೀಡಿದ ಇನ್ನೊಂದು ಆದೇಶದಲ್ಲಿ ಸ್ಟೈಪಂಡ್ ನೀಡಿಕೆಯನ್ನು ಕಡ್ಡಾಯಪಡಿಸಲಾಗಿದೆ.







