ಯಾರೂ ಕಾನೂನಿಗಿಂತ ಮಿಗಿಲಲ್ಲ: ರಾಜಕೀಯ ರ್ಯಾಲಿಗಳಿಗೆ ನಿಯಮಗಳನ್ನು ರೂಪಿಸಲು ಮದ್ರಾಸ್ ಹೈಕೋರ್ಟ್ ಆದೇಶ

PC: x.com/TamilTheHindu
ಚೆನ್ನೈ: ಸಾರ್ವಜನಿಕ ರ್ಯಾಲಿ ಹಾಗೂ ಸಭೆಗಳನ್ನು ನಡೆಸಲು ಅನುಮತಿ ಮಂಜೂರು ಮಾಡುವ ಮುನ್ನ ಎಲ್ಲ ರಾಜಕೀಯ ಪಕ್ಷಗಳಿಗ ಅನ್ವಯವಾಗುವಂತೆ ಏಕರೂಪ ನಿಯಮ ರೂಪಿಸುವಂತೆ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಜತೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆಗಬಹುದಾದ ಸಂಭಾವ್ಯ ಹಾನಿಗೆ ಮುಂಚಿತವಾಗಿ ಭದ್ರತಾ ಠೇವಣಿಯನ್ನು ಪಕ್ಷಗಳಿಂದ ಸಂಗ್ರಹಿಸುವಂತೆಯೂ ಸೂಚನೆ ನೀಡಿದೆ.
ಚಿತ್ರನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸೂಚನೆ ನೀಡಿದೆ. ರಾಜಕೀಯ ರ್ಯಾಲಿಗಳಿಗೆ ಅನುಮತಿ ನೀಡುವ ವೇಳೆ ಇತರ ಯಾವುದೇ ಪಕ್ಷಗಳಿಗೆ ಅನ್ವಯವಾಗದ ಅತ್ಯಂತ ಕಠಿಣ ಹಾಗೂ ಈಡೇರಿಸಲು ಸಾಧ್ಯವಾಗದಂಥ ಷರತ್ತುಗಳನ್ನು ಪೊಲೀಸರು ವಿಧಿಸಿದ್ದಾರೆ ಎಂದು ವಿಜಯ್ ಆಪಾದಿಸಿದ್ದರು.
ಟಿವಿಕೆ ಪರ ಹಾಜರಾದ ಹಿರಿಯ ವಕೀಲ ವಿ.ರಾಘವಾಚಾರಿ, "ರ್ಯಾಲಿಯ ಬಳಿಕ ಜನರು ಹಾಗೂ ಕಾರ್ಯಕರ್ತರು ಹೇಗೆ ಎಲ್ಲಿ ಹೋಗಬೇಕು, ಭಾಗವಹಿಸಬಹುದಾದ ವಾಹನಗಳ ಸಂಖ್ಯೆ ಸೇರಿದಂತೆ ಅಧಿಕಾರಿಗಳು ತರ್ಕಬದ್ಧವಲ್ಲದ ನಿರ್ಬಂಧಗಳನ್ನು ವಿಧಿಸಿದ್ದಾರೆ. ಗರ್ಭಿಣಿ ಮಹಿಳೆಯರು ಮತ್ತು ಅಂಗವಿಕಲರು ಸಮಾರಂಭದಲ್ಲಿ ಭಾಗವಹಿಸಬಾರದು ಎಂದೂ ಸೂಚಿಸಲಾಗಿದೆ. ನೀವು ಬರಬಾರದು ಎಂದು ಹೇಗೆ ಹೇಳಲು ಸಾಧ್ಯ?" ಎಂದು ಪ್ರಶ್ನಿಸಿದರು. ಈ ಆಯ್ದ ಷರತ್ತುಗಳು ತಾರತಮ್ಯಕ್ಕೆ ಎಡೆಮಾಡಿಕೊಡುತ್ತವ ಎಂದು ಆಪಾದಿಸಿದರು.
ಈ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎನ್.ಸತೀಶ್ ಕುಮಾರ್ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಇದನ್ನು ಅನ್ವಯಿಸಲಾಗುತ್ತದೆಯೇ ಎಂದು ಪ್ರಶ್ನಿಸಿದರು. "ಯಾರು ಕೂಡಾ ಕಾನೂನಿಗಿಂತ ಮೇಲಲ್ಲ; ಸಾರ್ವಜನಿಕ ಸಭೆ ಸಮಾರಂಭಗಳನ್ನು ಕಾನೂನಿನ ಇತಿಮತಿಯಲ್ಲಿ ಆಯೋಜಿಸಬೇಕು. ಸಂಚಾರ ದಟ್ಟಣೆ ಉಂಟಾದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲವೇ?" ಎಂದು ನ್ಯಾಯಾಧೀಶರು ಪ್ರಶ್ನಿಸಿದರು.







