24 ಲಕ್ಷ ಎಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಜಮೀನು ಮಾರಾಟ; ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯುವ ಪ್ರಸ್ತಾವವಿಲ್ಲ: ಪರಮೇಶ್ವರ್

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961ರ ಕಲಂ 79 ಎ , 79 ಬಿ ಮತ್ತು 79 ಸಿ ತೆರವುಗೊಳಿಸಿದ ನಂತರ ರಾಜ್ಯದಲ್ಲಿ 2026ರ ಸೆಪ್ಟಂಬರ್ 24ರ ಅಂತ್ಯಕ್ಕೆ ಒಟ್ಟಾರೆ 24 ಲಕ್ಷ ಎಕರೆಗೂ ಅಧಿಕ ವಿಸ್ತೀರ್ಣದ ಕೃಷಿ ಜಮೀನು ಮಾರಾಟವಾಗಿದೆ. ಆದರೂ ಈ ತಿದ್ದುಪಡಿಗಳನ್ನು ಹಿಂಪಡೆಯುವ ಪ್ರಸ್ತಾವವು ರಾಜ್ಯ ಸರಕಾರದ ಮುಂದಿಲ್ಲ ಎಂದು ಕಂದಾಯ ಸಚಿವ
ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸದನಕ್ಕೆ ನೀಡಿರುವ ಉತ್ತರವು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961ರ ಕಲಂ 79 ಎ, 79 ಬಿ ಮತ್ತು 79 ಸಿ ಕಲಂನ ನಿರ್ಬಂಧವನ್ನು ಹಿಂದಿನ ಬಿಜೆಪಿ ಸರಕಾರವು ತೆಗೆದಿತ್ತು. 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಕಾಯ್ದೆಗೆ ತಂದಿರುವ ಮಾರಕ ತಿದ್ದುಪಡಿಗಳನ್ನು ಹಿಂಪಡೆದು ರೈತರ ಹಿತ ಕಾಯಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನೀಡಿರುವ ಈ ಉತ್ತರವು, ತಮ್ಮದೇ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಅಣಕಿಸುತ್ತಿದೆ.
ಈ ಕುರಿತು ಆಳಂದ ವಿಧಾನಸಭೆ ಕ್ಷೇತ್ರದ ಸದಸ್ಯ ಬಿ.ಆರ್.ಪಾಟೀಲ್ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕಂದಾಯ ಸಚಿವರಿಗೆ 2026ರ ಆಗಸ್ಟ್ 24ರಂದು ಕೇಳಿದ್ದರು. ಇದಕ್ಕೆ ಡಾ.ಜಿ.ಪರಮೇಶ್ವರ್ ಅವರು ‘ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79 ಎ, 79 ಬಿ ಮತ್ತು 79 ಸಿ ಗಳನ್ನು ಮರು ಸೇರ್ಪಡೆ ಮಾಡುವ ಯಾವುದೇ ಪ್ರಸ್ತಾವವು ಸರಕಾರದ ಮುಂದೆ ಇರುವುದಿಲ್ಲ’ ಎಂದು ತಡವಾಗಿ ಉತ್ತರ ನೀಡಿದ್ದಾರೆ.
ಅಲ್ಲದೇ ಈ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರ ಅಂದರೇ 2021ರಿಂದ 2026ರ ಆಗಸ್ಟ್ 24ರವರೆಗೆ ರಾಜ್ಯಾದ್ಯಂತ ಮಾರಾಟವಾಗಿರುವ ಕೃಷಿ ಜಮೀನಿನ ವಿವರವನ್ನು ತಾಲೂಕುವಾರು ಪಟ್ಟಿಯನ್ನು ಒದಗಿಸಿದ್ದಾರೆ. ಇದರ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
79 ಎ, 79 ಬಿ ಮತ್ತು 79 ಸಿ ನಿರ್ಬಂಧಗಳನ್ನು ರದ್ದುಪಡಿಸಿದ ನಂತರ ರಾಜ್ಯದ ಸಣ್ಣ ಹಾಗೂ ಅಹಿಂದ ವರ್ಗದ ಎಷ್ಟು ರೈತರಿಂದ ಎಷ್ಟು ಎಕರೆ ಕೃಷಿ ಭೂಮಿ ಇತರರಿಗೆ ಮಾರಾಟವಾಗಿದೆ ಎಂದು ಪ್ರಶ್ನೆ ಕೇಳಿದ್ದರು. ಅಲ್ಲದೇ ಈ ಭೂಮಿ ಖರೀದಿದಾರರಲ್ಲಿ ರೈತರು, ಇತರರು ಹಾಗೂ ಹೊರ ರಾಜ್ಯದವರ ಸಂಖ್ಯೆ, ಖರೀದಿಸಿದ ಭೂಮಿಯ ವಿಸ್ತೀರ್ಣ ಎಷ್ಟಿದೆ, ವರ್ಗವಾರು ವಿವರವನ್ನು ಕೋರಿದ್ದರು.
ಕಂದಾಯ ಇಲಾಖೆಯು ಒಟ್ಟು 22 ಪುಟಗಳಲ್ಲಿ ಉತ್ತರ ಒದಗಿಸಿದೆ. ಆದರೆ ಈ ಉತ್ತರದಲ್ಲಿ ಸಣ್ಣ, ಅತೀ ಸಣ್ಣ, ಅಹಿಂದ ವರ್ಗದ ರೈತರ ಸಂಖ್ಯೆಯನ್ನು ವರ್ಗವಾರು ಒದಗಿಸಿಲ್ಲ. ಬದಲಿಗೆ ತಾಲೂಕುವಾರು ಕೃಷಿ ಜಮೀನು ಮಾರಾಟವಾಗಿರುವ ಅಂಕಿ ಸಂಖ್ಯೆಗಳನ್ನಷ್ಟೇ ಒದಗಿಸಿರುವುದು ಉತ್ತರದಿಂದ ಕಂಡು ಬಂದಿದೆ.
ಈ ಉತ್ತರದ ಪ್ರಕಾರ 2021ರಿಂದ 2026ರವರೆಗೆ ಒಟ್ಟು 15,31,497 ಮಾರಾಟ ವಹಿವಾಟುಗಳಾಗಿವೆ. 24,11,864 ಮಂದಿ 24 ಲಕ್ಷ ಎಕರೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡಿದ್ದಾರೆ. ಮತ್ತು ಈ ಜಮೀನುಗಳನ್ನು ಇಷ್ಟೇ ಸಂಖ್ಯೆಯ ಮಂದಿ ಜಮೀನನ್ನು ಖರೀದಿಸಿರುವುದು ಗೊತ್ತಾಗಿದೆ.






