ಎನ್‌ಡಿಎ ಸರಕಾರದಿಂದ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ:ಎಡಿಟರ್ಸ್ ಗಿಲ್ಡ್ ಆರೋಪ

ಹೊಸದಿಲ್ಲಿ,ಆ.8: ಎರಡು ಟಿವಿ ವಾಹಿನಿಗಳಿಗೆ ಹಿರಿಯ ಪತ್ರಕರ್ತರ ರಾಜೀನಾಮೆ ಮತ್ತು ಕಾರ್ಯಕ್ರಮಗಳ ಪ್ರಸಾರದ ವೇಳೆ ಉಪಗ್ರಹ ಸಿಗ್ನಲ್‌ಗಳಿಗೆ ತಡೆಯುಂಟಾಗುತ್ತಿರುವ ಬಗ್ಗೆ ಸರಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ,ಮಾಧ್ಯಮಗಳ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಸರಕಾರದ ಎಲ್ಲ ಪ್ರಯತ್ನಗಳನ್ನು ಬಲವಾಗಿ ಖಂಡಿಸಿದೆ.
ಪತ್ರಿಕಾ ಸ್ವಾತಂತ್ರ್ಯದ ‘ಉಸಿರುಗಟ್ಟಿಸುವ’ ಉದ್ದೇಶದ ‘ದುಷ್ಟ ಚಟುವಟಿಕೆ’ಗಳಿಗೆ ಹೊಣೆಗಾರರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿರುವ ಮಾಧ್ಯಮ ಸಂಸ್ಥೆಗಳ ಒಕ್ಕೂಟವಾಗಿರುವ ‘ಗಿಲ್ಡ್’,ಸರಕಾರ ಅಥವಾ ಇತರ ಯಾವುದೇ ಶಕ್ತಿಗಳು ತಮ್ಮ ಮೇಲೆ ಹೇರುತ್ತಿರುವ ಒತ್ತಡಗಳಿಗೆ ಮಣಿಯದಂತೆ ಮಾಧ್ಯಮಗಳ ಮಾಲಿಕರನ್ನು ಒತ್ತಾಯಿಸಿದೆ.
ಟಿವಿ ಕಾರ್ಯಕ್ರಮಗಳ ಸಿಗ್ನಲ್‌ಗಳಲ್ಲಿ ವ್ಯತ್ಯಯದ ಪ್ರಕರಣಗಳನ್ನು ಗಮನಕ್ಕೆ ತೆಗೆದುಕೊಂಡು ತನಿಖೆ ನಡೆಸುವಂತೆ ಹಾಗೂ ಹೇಗೆ ಮತ್ತು ಯಾವ ಸನ್ನಿವೇಶಗಳಲ್ಲಿ ಈ ‘ಕೆಟ್ಟ ಉಲ್ಲಂಘನೆಗಳು’ ನಡೆಯುತ್ತಿವೆ ಎನ್ನುವುದನ್ನು ವಿವರಿಸುವಂತೆಯೂ ಸರಕಾರವನ್ನು ಆಗ್ರಹಿಸಿರುವ ‘ಗಿಲ್ಡ್’,ಇಂತಹ ಪ್ರಯತ್ನಗಳು ಮಾಧ್ಯಮ ಸ್ವಾತಂತ್ರ್ಯದ ಬುಡಕ್ಕೆ ಮತ್ತು ಭಾರತೀಯ ಪ್ರಜಾಪ್ರಭುತ್ವದ ಬುನಾದಿಗೆ ಹೊಡೆತವನ್ನು ನೀಡುತ್ತವೆ ಎಂದು ಹೇಳಿದೆ.
ನೇರವಾಗಿ ಅಥವಾ ಯಾವುದೇ ಛಾಯಾಶಕ್ತಿ ಅಥವಾ ಏಜೆನ್ಸಿಗಳ ಮೂಲಕ ಪರೋಕ್ಷವಾಗಿ ತಾನು ಈ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಸರಕಾರವು ದೇಶಕ್ಕೆ ಭರವಸೆ ನೀಡಬೇಕು. ಸರಕಾರವು ಇದನ್ನು ಮಾಡಿರದಿದ್ದರೆ ಇಂತಹ ಸಂಚುಕೋರರನ್ನು ಶಿಕ್ಷೆಗೆ ಗುರಿಪಡಿಸಬೇಕು. ಟಿವಿ ವಾಹಿನಿಗಳ ಸ್ವಾತಂತ್ರದಲ್ಲಿ ಹಸ್ತಕ್ಷೇಪ ಸಲ್ಲದು ಎಂದು ಗಿಲ್ಡ್ ಹೇಳಿದೆ.







