ಪೂರಿ ಸಬ್ಜಿ ನೀಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಮಾಲಕನನ್ನು ಗುಂಡಿಕ್ಕಿ ಕೊಂದ ಡೆಲಿವರಿ ಬಾಯ್

ಗ್ರೇಟರ್ ನೋಯ್ಡಾ: ಆನ್‌ಲೈನ್ ಪ್ಲಾಟ್‌ಫಾರ್ಮ್ ಸ್ವಿಗ್ಗಿಯ ಡೆಲಿವರಿ ಬಾಯ್ ಪೂರಿ ಸಬ್ಜಿ ನೀಡುವುದು ತಡವಾಗಿರುವ ವಿಚಾರಕ್ಕೆ ಗಲಾಟೆ ನಡೆಸಿದ್ದಲ್ಲದೆ, ಜಗಳ ಬಿಡಿಸಲು ಬಂದಿದ್ದ ರೆಸ್ಟೋರೆಂಟ್‌ನ ಮಾಲಕರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ದಿಲ್ಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ವಿತರಣಾ ಏಜೆಂಟ್ ಅನ್ನು ಪತ್ತೆಹಚ್ಚಲು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು NDTV ವರದಿ ಮಾಡಿದೆ.
ಕೊಲೆಯಾದ ವ್ಯಕ್ತಿ ಸುನೀಲ್ ಅಗರ್ವಾಲ್ ಮಿತ್ರ ವಸತಿ ಸಂಕೀರ್ಣದಲ್ಲಿ ರೆಸ್ಟೋರೆಂಟ್ ಹೊಂದಿದ್ದರು. ಮಂಗಳವಾರ ತಡರಾತ್ರಿ,ಡೆಲಿವರಿ ಬಾಯ್, ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿಯ ಆರ್ಡರ್ ಸಂಗ್ರಹಿಸಲು ರೆಸ್ಟೋರೆಂಟ್ ತಲುಪಿದ್ದ. ಸಮಯಕ್ಕೆ ಸರಿಯಾಗಿ ಬಿರಿಯಾನಿ ಸಿದ್ಧವಾಗಿತ್ತು. ಪೂರಿ ಸಬ್ಜಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ವಿತರಣಾ ಏಜೆಂಟರಿಗೆ ಓರ್ವ ಕೆಲಸಗಾರನು ಹೇಳಿದನು. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ನಂತರ ಡೆಲಿವರಿ ಏಜೆಂಟ್ ರೆಸ್ಟೋರೆಂಟ್ ಉದ್ಯೋಗಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ವೇಳೆ ರೆಸ್ಟೋರೆಂಟ್ ಮಾಲಕ ಸುನೀಲ್ ಅಗರ್ವಾಲ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಪ್ರಯತ್ನಿಸಿದರು. ಡೆಲಿವರಿ ಏಜೆಂಟ್ ತನ್ನ ಸ್ನೇಹಿತನ ಸಹಾಯದಿಂದ ರೆಸ್ಟೋರೆಂಟ್ ಮಾಲಕನ ತಲೆಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.





