ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ʼಸಂಸ್ಕಾರವಂತ ಬ್ರಾಹ್ಮಣರುʼ ಎಂದು ಬಣ್ಣಿಸಿದ್ದ ವ್ಯಕ್ತಿಗೆ ಬಿಜೆಪಿ ಟಿಕೆಟ್

ಅಹ್ಮದಾಬಾದ್: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು "ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಹೊಂದಿರುವ ಬ್ರಾಹ್ಮಣ ಪುರುಷರು" ಎಂದು ಬಣ್ಣಿಸಿದ್ದ ಸಿ.ಕೆ. ರೌಲ್ಜಿ ಅವರನ್ನು ಗುಜರಾತ್ ವಿಧಾನಸಭಾ ಚುನಾವಣೆಗೆ ಗೋಧ್ರಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷವು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ ಎಂದು ಶುಕ್ರವಾರ ಎನ್‌ಡಿಟಿವಿ ವರದಿ ಮಾಡಿದೆ.
ಮಾರ್ಚ್ 3, 2002 ರಂದು ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆ ಸಮಯದಲ್ಲಿ 19 ವರ್ಷದವಳಾಗಿದ್ದ ಬಿಲ್ಕಿಸ್ ಗರ್ಭಿಣಿಯಾಗಿದ್ದಳು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಹದಿನಾಲ್ಕು ಸದಸ್ಯರನ್ನು ಅಹಮದಾಬಾದ್ ಬಳಿ ಗಲಭೆಕೋರರು ಹತ್ಯೆ ಮಾಡಿದ್ದರು.
ಆಗಸ್ಟ್ 15 ರಂದು, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್ಲಾ 11 ಮಂದಿಯನ್ನು ಗುಜರಾತ್ ಸರ್ಕಾರವು ತನ್ನ ಉಪಶಮನ ನೀತಿಯ ಅಡಿಯಲ್ಲಿ ಅವರ ಅರ್ಜಿಯನ್ನು ಅನುಮೋದಿಸಿದ ನಂತರ ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಗೋಧ್ರಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದ ರೌಲ್ಜಿ ಆಗಸ್ಟ್‌ನಲ್ಲಿ ಪ್ರಕರಣದ ಅಪರಾಧಿಗಳು ಒಳ್ಳೆಯವರು ಎಂದು ಹೇಳಿದ ನಂತರ ವಿವಾದಕ್ಕೆ ಕಾರಣರಾಗಿದ್ದರು. "ಅವರು ಅಪರಾಧ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನಗೆ ತಿಳಿದಿಲ್ಲ..." ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. "ಜೈಲಿನಲ್ಲಿ ಅವರ ನಡತೆ ಚೆನ್ನಾಗಿತ್ತು, ಅವರು ಬ್ರಾಹ್ಮಣರು...ಉತ್ತಮ ಸಂಸ್ಕಾರ (ಮೌಲ್ಯಗಳು) ಹೊಂದಿದವರು" ಎಂದಿದ್ದರು.
ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಅಡಿಯಲ್ಲಿ ಗುಜರಾತ್ ಸರ್ಕಾರ ರಚಿಸಿದ ಗೋಧ್ರಾ ಜೈಲು ಸಲಹಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಮಾಡಲಾಗಿದೆ. ಕೋಮುಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಹೆಚ್ಚಾಗಿ ಗುರಿಯಾಗಿಸಲಾಗುತ್ತದೆ ಎಂದು ಸಮಿತಿಯ ಭಾಗವಾಗಿದ್ದ ರೌಲ್ಜಿ ಹೇಳಿದ್ದರು.







