ಲೈಂಗಿಕ ಕಿರುಕುಳ ಪ್ರಕರಣ: ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಡಿ.13: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ.16ಕ್ಕೆ ಮುಂದೂಡಿದೆ.
ಜಾಮೀನು ಕೋರಿ ಮುರುಘಾ ಶ್ರೀಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಏಕಸದಸ್ಯ ನ್ಯಾಯಪೀಠವು ಡಿ.16ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಪ್ರಕರಣ ಸಂಬಂಧ ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ನಿಟ್ಟಿನಲ್ಲಿ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಹೀಗಾಗಿ, ಅರ್ಜಿದಾರರೊಂದಿಗೆ ಚರ್ಚೆ ನಡೆಸುವುದಕ್ಕೆ ಅವಕಾಶ ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.
ಸಂತ್ರಸ್ತ ಬಾಲಕಿಯರ ಪರ ಎನ್‍ಜಿಒ ವಕೀಲರ ವಕಾಲತ್ತು ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಪೋಷಕರ ಮೇಲೆ ಬಾಲಕಿಯರಿಗೆ ವಿಶ್ವಾಸ ಇಲ್ಲದಿದ್ದಲ್ಲಿ ನ್ಯಾಯಾಲಯವೇ ವಕೀಲರನ್ನು ನೇಮಕ ಮಾಡಲಿ. ಆದರೆ, ಎನ್‍ಜಿಒ ವಕೀಲರ ವಕಾಲತಿಗೆ ಅವಕಾಶವಿಲ್ಲವೆಂದು ಎಂದು ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿವಮೂರ್ತಿ ಶರಣರನ್ನು ಪೊಲೀಸರು 2022ರ ಸೆ.1ರಂದು ಬಂಧಿಸಿದ್ದರು. ಅಂದಿನಿಂದ ಈವರೆಗೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ







