ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ: ಕನಿಷ್ಟ 10 ಮಂದಿ ಮೃತ್ಯು; ವರದಿ

ವಾಷಿಂಗ್ಟನ್, ಜ.22: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 10 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ದಿ ಲಾಸ್ ಏಂಜಲೀಸ್ ಟೈಮ್ಸ್' ವರದಿ ಮಾಡಿದೆ.
ಏಶ್ಯಾದ ಜನರೇ ಹೆಚ್ಚಿರುವ, ಲಾಸ್ ಏಂಜಲೀಸ್ ನಗರದಿಂದ ಸುಮಾರು 16 ಕಿಮೀ ದೂರದ ಮೊಂಟೆರೆಯ್ ಪಾರ್ಕ್ನಲ್ಲಿ, ಚೀನಾದ ಚಾಂದ್ರಮಾನ ಹೊಸ ವರ್ಷಾಚರಣೆ ಸಂದರ್ಭ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದ್ದು ಮೃತರ ಅಥವಾ ಗಾಯಗೊಂಡವರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.
ಮೆಷಿನ್ ಗನ್ ಹೊಂದಿದ್ದ ದಾಳಿಕೋರ ಸಂಭ್ರಮಾಚರಣೆಯ ಸ್ಥಳಕ್ಕೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಆಗ ಸ್ಥಳದಲ್ಲಿ ಗೊಂದಲ ಉಂಟಾಗಿದ್ದು ಜನ ದಿಕ್ಕಾಪಾಲಾಗಿ ಓಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಯಾಳುಗಳನ್ನು ಸ್ಟ್ರೆಚರ್ನಲ್ಲಿ ಇರಿಸಿ ಆಂಬ್ಯುಲೆನ್ಸ್ಗೆ ರವಾನಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.
ಗುಂಡಿನ ದಾಳಿಯಲ್ಲಿ ಕನಿಷ್ಟ 12 ಸಾವುನೋವು ದಾಖಲಾಗಿದೆ. ಘಟನೆಯ ಮಾಹಿತಿ ದೊರೆತೊಡನೆ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿದ್ದು ಹೆಲಿಕಾಪ್ಟರ್ ಬಳಸಿ ಆರೋಪಿಯ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಕಾನೂನು ಜಾರಿ ಪ್ರಾಧಿಕಾರದ ಮೂಲಗಳನ್ನು ಉಲ್ಲೇಖಿಸಿ `ಲಾಸ್ಏಂಜಲೀಸ್ ಟೈಮ್ಸ್' ವರದಿ ಮಾಡಿದೆ.







