ಜೆಡಿಎಸ್ ಗೆಲ್ಲದ ಕ್ಷೇತ್ರದಲ್ಲಿ ಅಶೋಕ್ಗೆ ಕಾಂಗ್ರೆಸ್ ಪ್ರಬಲ ಪೈಪೋಟಿ?
ದಿ ಬಿಗ್ ಫೈಟ್

ಆರ್.ಅಶೋಕ್ :
ಬಿಜೆಪಿ ಹಿರಿಯ ನಾಯಕ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ. ಆರು ಬಾರಿ ಶಾಸಕರಾಗಿರುವವರು. ಬೆಂಗಳೂರು ನಗರದ ಮೇಲೆ ಹಿಡಿತವಿರುವ ಪ್ರಭಾವಿ ನಾಯಕರಲ್ಲಿ ಒಬ್ಬರು. ಬೆಂಗಳೂರಿನವರೇ ಆದ ಅಶೋಕ್, ಕಾಲೇಜು ವಿದ್ಯಾಭ್ಯಾಸದ ಬಳಿಕ ಬಿಜೆಪಿಯೊಡನೆ ಗುರುತಿಸಿಕೊಂಡು ರಾಜಕೀಯಕ್ಕೆ ಎಂಟ್ರಿ ಪಡೆದವರು. ನಂತರ ಹಂತ ಹಂತವಾಗಿ ಪಕ್ಷ ಹಾಗೂ ರಾಜಕೀಯದಲ್ಲಿ ಮುನ್ನೆಲೆಗೆ ಬಂದರು. ಯಡಿಯೂರಪ್ಪ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉಪ ಮುಖ್ಯ ಮಂತ್ರಿಯಾಗಿದ್ದರು ಮಾತ್ರವಲ್ಲ, ಗೃಹ ಮತ್ತು ಸಾರಿಗೆ ಇಲಾಖೆಗಳ ಹೊಣೆ ನಿರ್ವಹಿಸಿದ್ದರು. ಬೊಮ್ಮಾಯಿ ಸಂಪುಟದಲ್ಲಿ ಪ್ರಸಕ್ತಕಂದಾಯ ಸಚಿವರಾಗಿದ್ದಾರೆ. ಪದ್ಮನಾಭನಗರದಲ್ಲಿ ಎದುರಾಳಿ ಗಳೇ ಇಲ್ಲ ಎನ್ನುವಂಥ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಪದ್ಮನಾಭ ನಗರ ಕ್ಷೇತ್ರವೂ ಒಂದು. ಮೊದಲು ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವೆಂಬ ಹೆಗ್ಗಳಿಕೆ ಪಡೆದಿದ್ದ ಉತ್ತರಹಳ್ಳಿ ವಿಧಾನ ಸಭಾ ಕ್ಷೇತ್ರದ ಭಾಗವಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು.
1997ರಲ್ಲಿ ಉತ್ತರಹಳ್ಳಿ ಕ್ಷೇತ್ರಕ್ಕೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾದ ಆರ್.ಅಶೋಕ್, ಆನಂತರ 1999 ಹಾಗೂ 2004ರಲ್ಲಿ ಅದೇ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಅವರು ಬಿಜೆಪಿಯ ಯುವ ಘಟಕದೊಂದಿಗೆ ಗುರುತಿಸಿಕೊಂಡಿದ್ದರು. ಹೀಗೆ ಪದ್ಮನಾಭನಗರ ಕ್ಷೇತ್ರ ರಚನೆಯಾಗುವುದಕ್ಕೂ ಮೊದಲೇ ಮೂರು ಬಾರಿ ಶಾಸಕರಾಗಿದ್ದ ಅಶೋಕ್, ಪದ್ಮನಾಭನಗರ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೇಲೂ ಹ್ಯಾಟ್ರಿಕ್ ಗೆಲುವು ಸಾಧಿಸಿ, ಕ್ಷೇತ್ರದಲ್ಲಿ ಎದುರಾಳಿಗಳೇ ಇಲ್ಲವೆನ್ನಿಸುವಂಥ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿಯಿಂದ ಬೇರೆ ಅಭ್ಯರ್ಥಿ?
ಕ್ಷೇತ್ರದಲ್ಲಿ ಅಶೋಕ್ ಸತತವಾಗಿ ಗೆಲ್ಲುತ್ತ ಬಂದರೆ, 2008, 2013 ಹಾಗೂ 2018ರ ಮೂರೂ ಚುನಾವಣೆಗಳಲ್ಲಿ ಸಮೀಪದ ಪ್ರತಿಸ್ಪರ್ಧಿಯಾಗಿದ್ದುದು ಜೆಡಿಎಸ್. ಕಾಂಗ್ರೆಸ್ ಮೂರನೇ ಸ್ಥಾನದಿಂದ ಮೇಲಕ್ಕೇರಿದ್ದಿಲ್ಲ. ಈ ಬಾರಿಯೂ ಮತ್ತೆ ಪೈಪೋಟಿ ಕೊಡುವ ಹಠದಲ್ಲಿರುವ ಎರಡೂ ಪಕ್ಷಗಳು, ಹೇಗಾದರೂ ಅಶೋಕ್ ಅವರನ್ನು ಮಣಿಸಲೇಬೇಕು ಎಂಬ ಜಿದ್ದಿಗೆ ಬಿದ್ದಿವೆ ಎನ್ನಲಾಗುತ್ತಿದೆ. ಈ ನಡುವೆ ಅಶೋಕ್ ಅವರಿಗೆ ಈ ಸಲ ಟಿಕೆಟ್ ಸಿಗುವುದೇ ಇಲ್ಲವೆ ಎಂಬ ಪ್ರಶ್ನೆಯೂ ಎದ್ದಿದೆ. ಕ್ಷೇತ್ರದಲ್ಲಿ ಬೇರೆ ನಾಯಕರನ್ನು ಕಣಕ್ಕಿ ಳಿಸುವ ಇರಾದೆಯೂ ಪಕ್ಷಕ್ಕಿದೆ ಎಂಬ ಮಾತುಗಳಿವೆ. ಹಾಗೇನಾದರೂ ದಿಲ್ಲಿ ನಾಯಕರು ಪಟ್ಟು ಬದಲಿಸಿದರೆ ಬಿಜೆಪಿಯಿಂದ ಯಾರು ಎಂಬುದು ಕುತೂಹಲಕಾರಿಯಾಗಿದೆ.
ಒಂದು ವೇಳೆ ಅಭ್ಯರ್ಥಿ ಬದಲಾವಣೆಗೆ ಬಿಜೆಪಿ ನಿರ್ಧರಿಸಿದರೆ, ಕಣಕ್ಕಿಳಿಯಲು ಮಾಜಿ ಕಾರ್ಪೊರೇಟರ್ಗಳ ಪೈಪೋಟಿಯಿದೆ. ಎಲ್. ಶ್ರೀನಿವಾಸ್, ಎ.ಎಚ್.ಬಸವರಾಜು ಹೆಸರುಗಳು ಮುಂಚೂಣಿ ಯಲ್ಲಿವೆ. ಎನ್.ಆರ್. ರಮೇಶ್ ಕೂಡ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ.
ಪದ್ಮನಾಭನಗರ ಕ್ಷೇತ್ರವನ್ನು ಬೇರೆ ಅಭ್ಯರ್ಥಿಗಳಿಗೆ ಕೊಟ್ಟರೆ, ಅಶೋಕ್ ಅವರಿಗೆ ಬೇರೆ ಕ್ಷೇತ್ರದಿಂದ ಕಣಕ್ಕಿಳಿಯಲು ಸೂಚಿಸಬ ಹುದೆನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಅಶೋಕ್ ಬಗ್ಗೆ ಅಲ್ಲದಿದ್ದರೂ ಅವರ ಜೊತೆಗಿರುವವರ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಅಸಮಾಧಾನ ಜನರಿಗೆ ಇದ್ದಂತೆ ಕಾಣುತ್ತಿದೆ ಎಂಬ ವರದಿಗಳಿವೆ.
ಕಾಂಗ್ರೆಸ್ ಲೆಕ್ಕಾಚಾರವೇನು?
ಒಕ್ಕಲಿಗರು, ಎಸ್ಸಿ, ಎಸ್ಟಿಗಳ ಮತ ಮುಖ್ಯವಾಗುವ ಕ್ಷೇತ್ರದಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಈ ಸಲ ಏನಿರಲಿದೆ ಎಂಬುದನ್ನು ನೋಡಬೇಕಿದೆ. ಕಾಂಗ್ರೆಸ್ನಿಂದ ಈ ಹಿಂದೆ ಸ್ಪರ್ಧಿಸಿ ಸೋತಿದ್ದ ಡಾ. ಗುರಪ್ಪ ನಾಯ್ಡು ಈ ಬಾರಿಯೂ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ, ಪಕ್ಷದ ಸ್ಥಳೀಯ ಮುಖಂಡ ಮತ್ತು ಗುತ್ತಿಗೆದಾರ ರಘುನಾಥ್ ನಾಯ್ಡು ಕೂಡ ಸ್ಪರ್ಧಿಸುವ ಉಮೇದು ತೋರಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಇವರೆಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿ ರುವ ರಘುನಾಥ್ ನಾಯ್ಡು ಸ್ಪರ್ಧಿಸಿದರೆ, ಸಮುದಾಯದ ಮತ ಗಳಲ್ಲದೆ ಕಾಂಗ್ರೆಸ್ನ ಮೂಲ ಮತಗಳನ್ನೂ ಸೆಳೆಯಬಹುದು ಎಂಬ ಲೆಕ್ಕಾಚಾರವೊಂದು ಮುನ್ನೆಲೆಯಲ್ಲಿದೆ. ಇದೇ ವೇಳೆ, ಮಾಜಿ ಮೇಯರ್ ವೆಂಕಟೇಶಮೂರ್ತಿ, ಪ್ರಮೋದ್ ಕುಮಾರ್, ಸಂಜಯ್ ಗೌಡ ಅವರೂ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಜೆಡಿಎಸ್ ನಡೆ ನಿಗೂಢ
ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಿ ರುವುದು ಪದ್ಮನಾಭನಗರ ದಲ್ಲಿಯೇ. ಆದರೆ, ಕ್ಷೇತ್ರವನ್ನು ಜೆಡಿಎಸ್ ಎಂದೂ ತನ್ನ ತೆಕ್ಕೆಗೆ ತೆಗೆದುಕೊಂಡಿಲ್ಲ. ಜೆಡಿಎಸ್ಗೆ ಕ್ಷೇತ್ರ ದಲ್ಲಿ ಅದರದ್ದೇ ಆದ ಮತಬ್ಯಾಂಕ್ ಇದೆ ಯೆಂಬುದು ನಿಜ. ಕಣಕ್ಕಿಳಿಯುವವರು ಯಾರು ಎಂಬುದು ಮಾತ್ರ ಇನ್ನೂ ನಿಗೂಢ. ಹರಿಬಾಬು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆಯಾದರೂ, ಪಕ್ಷ ಮಾತ್ರ ಅಭ್ಯರ್ಥಿ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಇನ್ನು, ಆಮ್ ಆದ್ಮಿ ಕೂಡ ಸ್ಪರ್ಧಿಸಲಿದೆ ಎಂದು ಹೇಳಲಾಗಿದೆ.
ಜಾತಿ ಸಮೀಕರಣ
ಪದ್ಮನಾಭನಗರ ಕ್ಷೇತ್ರದಲ್ಲಿ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರದೇ ನಿರ್ಣಾಯಕ ಪಾತ್ರ. ಒಕ್ಕಲಿಗರ ಜೊತೆ ನಾಯ್ಡು ಸಮುದಾಯದ ಅಭ್ಯರ್ಥಿಗಳೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುವುದುಂಟು.
- ಒಟ್ಟು ಮತದಾರರು - 2,69,297
- ಪುರುಷರು 1,37,250
- ಮಹಿಳೆಯರು 1,32,030
- ತೃತೀಯ ಲಿಂಗಿಗಳು - 17
- ಕ್ಷೇತ್ರದ ಜಾತಿ ಲೆಕ್ಕಾಚಾರ ಒಕ್ಕಲಿಗರು 60 ಸಾವಿರ
- ಲಿಂಗಾಯತರು 10 ಸಾವಿರ
- ಬ್ರಾಹ್ಮಣರು 25 ಸಾವಿರ
- ಒಬಿಸಿ 72 ಸಾವಿರ
- ಎಸ್ಸಿ, ಎಸ್ಟಿ 18 ಸಾವಿರ
- ಮುಸ್ಲಿಮರು 44 ಸಾವಿರ
- ಇತರರು 40 ಸಾವಿರಕ್ಕೂ ಅಧಿಕ
ಮೂಲಸೌಕರ್ಯ ಕೊರತೆ
ಕೊಳೆಗೇರಿ ಮತ್ತು ಬಡವರ್ಗದವರೇ ಹೆಚ್ಚಿರುವ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದುಕಾಣುವ ಅಂಶ. ಬಿಬಿಎಂಪಿ ಯ ಒಂದು ಶಾಲೆ ಮಾತ್ರವೇ ಇದೆ. ಶಾಲೆ-ಕಾಲೇಜು ಸ್ಥಾಪನೆಯ ಬೇಡಿಕೆ ಈಡೇರದೇ ಉಳಿದಿದೆ. ಸ್ಮಶಾನ, ಆಟದ ಮೈದಾನಗಳ ವಿಚಾರದಲ್ಲಿಯೂ ಇಂಥದೇ ಆರೋಪಗಳಿವೆ. ಆಟದ ಮೈದಾನ ಗಳನ್ನು ಭೂಗಳ್ಳರು ನುಂಗಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಮಳೆ ಬಂದರಂತೂ ಕಂದಾಯ ಸಚಿವರ ಕ್ಷೇತ್ರದಲ್ಲಿ ಮನೆಗೆ ನೀರು ಬಂತು ಅಂತಲೇ ಲೆಕ್ಕ ಎಂಬ ಟೀಕೆಗಳೂ ಇವೆ. ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಈ ಸಮಸ್ಯೆ ಸಾಮಾನ್ಯವೇ ಆಗಿಬಿಟ್ಟಿದೆ. ಸಂಚಾರ ವ್ಯವಸ್ಥೆ ಸರಿಯಿಲ್ಲ, ಕೆರೆಗಳ ರಕ್ಷಣೆಯಾಗಿಲ್ಲ ಮೊದಲಾದ ತಕರಾರುಗಳೂ ಇವೆ. ಇವೆಲ್ಲದರ ನಡುವೆಯೂ ಸೂಕ್ತ ಎದುರಾಳಿಗಳ ಕೊರತೆ ಅಶೋಕ್ ಪಾಲಿನ ಪ್ಲಸ್ ಪಾಯಿಂಟ್ ಆಗಿದೆ ಎಂದೇ ಹೇಳಲಾ ಗುತ್ತದೆ. ಒಕ್ಕಲಿಗರು ಮತ್ತು ಬ್ರಾಹ್ಮಣ ಸಮುದಾಯದ ದೊಡ್ಡ ಮಟ್ಟದ ಬೆಂಬಲವನ್ನೇ ನೆಚ್ಚಿಕೊಂಡು ಗೆಲ್ಲುತ್ತಿರುವ ಅಶೋಕ್ ಈಗಲೂ ಅದೇ ಕೈಹಿಡಿಯಲಿದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಪ್ರಬಲ ಪೈಪೋಟಿ ನೀಡಬೇಕೆಂಬ ಕಾಂಗ್ರೆಸ್, ಜೆಡಿಎಸ್ ಲೆಕ್ಕಾಚಾರ ಮತ್ತು ಕ್ರಿಯಾಶೀಲತೆ ಯಾವ ಮಟ್ಟದಲ್ಲಿರಲಿದೆ ಎಂಬುದರ ಮೇಲೆ ಪದ್ಮನಾಭನಗರ ಕ್ಷೇತ್ರದ ಅಖಾಡದ ಸ್ವರೂಪ ನಿಶ್ಚಯಗೊಳ್ಳಲಿದೆ.
ಆರು ಬಾರಿ ಗೆದ್ದಿರುವ ಆರ್. ಅಶೋಕ್ಗೆ ಅಡ್ಡಿಯಾಗುವವರು ಯಾರು? ದಿಲ್ಲಿ ನಾಯಕರ ಪಟ್ಟು ಬದಲಾದರೆ ಯಾರ ಪಾಲಿಗೆ ಬಿಜೆಪಿ ಟಿಕೆಟ್? ಒಕ್ಕಲಿಗರ ಈ ಕ್ಷೇತ್ರದಲ್ಲಿ ಪ್ರಬಲ ಎದುರಾಳಿಯಾಗುವುದೇ ಕಾಂಗ್ರೆಸ್? ‘ಹೆಡ್ಕ್ವಾರ್ಟರ್ಸ್’ ಇದ್ದರೂ ಪದ್ಮನಾಭನಗರದಲ್ಲೇಕೆ ಹಿಂದಿದೆ ಜೆಡಿಎಸ್?







