ಮೊರ್ಬಿ ತೂಗು ಸೇತುವೆ ದುರಂತ: ಒರೆವಾ ಸಮೂಹದ ಎಂಡಿ ಜಯಸುಖ್ ಪಟೇಲ್ ನ್ಯಾಯಾಲಯಕ್ಕೆ ಶರಣು

ಮೊರ್ಬಿ, ಜ. 31: ಕಳೆದ ವರ್ಷ 135 ಜನರ ಸಾವಿಗೆ ಕಾರಣವಾದ ತೂಗು ಸೇತುವೆ ಕುಸಿದು ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ಸೇತುವೆಯನ್ನು ನಿರ್ವಹಿಸುತ್ತಿದ್ದ ಒರೆವಾ ಸಮೂಹದ ಆಡಳಿತ ನಿರ್ದೇಶಕ ಜಯಸುಖ್ ಪಟೇಲ್ ಮಂಗಳವಾರ ಮೊರ್ಬಿಯಲ್ಲಿರುವ ನ್ಯಾಯಾಲಯದ ಮುಂದೆ ಮಂಗಳವಾರ ಶರಣಾಗತರಾಗಿದ್ದಾರೆ. ಪೊಲೀಸರು ಜನವರಿ 27ರಂದು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಪಟೇಲ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ತನ್ನ ವಿರುದ್ಧ ಬಂಧನಾದೇಶ ಹೊರಡಿಸಿದ್ದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಅವರ ನ್ಯಾಯಾಲಯದ ಮುಂದೆ ಪಟೇಲ್ ಶರಣಾಗತರಾದರು.
ಕಳೆದ ವರ್ಷ ಅಕ್ಟೋಬರ್ 30ರಂದು ಕುಸಿದ ಮೊರ್ಬಿಯ ಮಚ್ಚು ನದಿಯ ಬ್ರಿಟೀಶ್ ಕಾಲದ ತೂಗು ಸೇತುವೆಯ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ (ಒರೆವಾ ಸಮೂಹ) ನೋಡಿಕೊಳ್ಳುತ್ತಿತ್ತು. ‘‘ಬಂಧನಾದೇಶ ಜಾರಿಗೊಳಿಸಿದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ (ಸಿಜೆಎಂ) ಎಂ.ಜೆ. ಖಾನ್ ಅವರ ನ್ಯಾಯಾಲಯದ ಮುಂದೆ ಜಯಸುಖ್ ಪಟೇಲ್ ಅವರು ಶರಣಾಗತರಾಗಿದ್ದಾರೆ’’ ಎಂದು ಅವರ ವಕೀಲ ದಿಲೀಪ್ ಅಗೆಚಾನಿಯಾ ಅವರು ತಿಳಿಸಿದ್ದಾರೆ. ಉಪ ಪೊಲೀಸ್ ಅಧೀಕ್ಷಕ ಪಿಎಸ್. ಝಲಾ ಅವರು ಸಿಜೆಎಂ ನ್ಯಾಯಾಲಯದಲ್ಲಿ ಸಲ್ಲಿಸಿದ 1200ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯಲ್ಲಿ ಪಟೇಲ್ ಅವರನ್ನು 10ನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಈ ನಡುವೆ ಅವರು ಬಂಧನದ ಭೀತಿಯ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಕೂಡ ಅರ್ಜಿ ಸಲ್ಲಿಸಿದ್ದರು.







