ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಅನುದಾನ: ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು, ಫೆ.2: ಇದೇ ವರ್ಷದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ 100ಕೋಟಿ ರೂ. ಅನುದಾನವನ್ನು ನೀಡುತ್ತೇನೆ. ಕ್ರಿಯಾ ಯೋಜನೆಯನ್ನು ಪ್ರಾಧಿಕಾರವು ಸರಕಾರಕ್ಕೆ ಸಲ್ಲಿಸಿದ್ದಲ್ಲಿ, ಮಾ.31ರೊಳಗೆ ಅನುದಾನವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ಗಾಂಧಿಭವನದಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಆಯೋಜಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಧಿಕಾರಕ್ಕೆ ಈ ವರ್ಷವೂ 100ಕೋಟಿ ರೂ.ಗಳನ್ನು ನೀಡಲಾಗುತ್ತದೆ, ಮುಂದಿನ ವರ್ಷವೂ 100ಕೋಟಿ ರೂ.ನೀಡಲಾಗುತ್ತದೆ. ಹಣ ಕೊಡುವುದು ಮುಖ್ಯವಲ್ಲ, ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಯುವಕರು ಅತ್ಯಂತ ಶ್ರೇಷ್ಟ ಸಾಹಿತ್ಯವನ್ನು ಬರೆಯುತ್ತಿದ್ದಾರೆ. ಆಧ್ಯಾತ್ಮಿಕ, ವಿಸ್ಮಯ ಕ್ಷೇತ್ರಗಳಲ್ಲಿ ಚನ್ನಾಗಿ ಬರೆಯುತ್ತಿದ್ದಾರೆ. ಮತ್ತೇ ಕೆಲವರು ಅನುವಾದ ಮಾಡುತ್ತಿದ್ದಾರೆ. ಜ್ಞಾನ ಎಲ್ಲ ಕಡೆಯಿಂದಲೂ ಬರಬೇಕು. ಎಲ್ಲಿಂದ ಸಿಕ್ಕಿದರೂ ಕನ್ನಡಕ್ಕೆ ಅರ್ಪಿಸಬೇಕು ಎಂದ ಅವರು, ಗಡಿನಾಡ ಆಚೆಗೆ ಇರುವ ಕನ್ನಡಿಗರಿಗೂ ಸರಕಾರದ ಸವಲತ್ತುಗಳು ಸಿಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಚನ್ನಬಸಪ್ಪ ಪಟ್ಟದೇವರು ಪ್ರಶಸ್ತಿಯನ್ನು ‘ಎಂ.ಎಸ್.ಸಿಂಧೂರ’ ಅವರಿಗೆ, ಡಾ. ಜಯದೇವಿತಾಯಿ ಲಿಗಾಡೆ ಪ್ರಶಸ್ತಿಯನ್ನು ‘ಅಶೋಕ ಚಂದರಗಿ’ ಹಾಗೂ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣರೈ ಪ್ರಶಸ್ತಿಗೆ ‘ಎಡನೀರು ಮಠ’ಕ್ಕೆ ಪ್ರದಾನ ಮಾಡಲಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉಪಸ್ಥಿತರಿದ್ದರು.







