ಚಿಕ್ಕಮಗಳೂರು | ಸಂತ್ರಸ್ತ ದಲಿತ ವಿದ್ಯಾರ್ಥಿನಿಯ ಬಗ್ಗೆ ಅಸಭ್ಯ ಹೇಳಿಕೆ; ಪೊಲೀಸ್ ಸಿಬ್ಬಂದಿ ಅಮಾನತಿಗೆ ಆಗ್ರಹ

ಚಿಕ್ಕಮಗಳೂರು, ಫೆ.2: ನಗರದ ಕಾಲೇಜು ಯುವತಿಯರ ವಿದ್ಯಾರ್ಥಿ ನಿಲಯದಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗಿರುವ ದಲಿತ ವಿದ್ಯಾರ್ಥಿನಿಗೆ ಪೊಲೀಸ್ ಅಧಿಕಾರಿಗಳು ಅಸಭ್ಯವಾಗಿ ನಿಂದಿಸಿದ್ದಾರೆ ಎಂದು ಎಂದು ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ಜಿಲ್ಲಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಆರೋಪಿಸಿದ್ದಾರೆ.
ನಗರ ಪೊಲೀಸ್ ಠಾಣೆಯ ಪಿಐ ಜಯರಾಮ್ ಹಾಗೂ ಪಿಎಸ್ಸೈ ರನ್ನಗೌಡ ಎಂಬವರು ಪೊಲೀಸ್ ಅಧಿಕಾರಿ, ಸಿಬ್ಬಂದಿ ಇರುವ ವಾಟ್ಸ್‌ಪ್ ಗ್ರೂಪೊಂದರಲ್ಲಿ ಅಸಭ್ಯ ಪದ ಬಳಸಿ ಚಾಟ್ ಮಾಡಿದ್ದಾರೆ. ಈ ಮೂಲಕ ನೊಂದವರಿಗೆ ನ್ಯಾಯ ನೀಡಬೇಕಾದ ಪೊಲೀಸ್ ಅಧಿಕಾರಿಗಳೇ ಕಿಡಿಗೇಡಿಗಳಂತೆ ವರ್ತಿಸಿದ್ದಾರೆ. ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇಲಾಖೆಯ ಮಾನ, ಮರ್ಯಾದೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಸ್ಪಿ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬೇಲೂರು ರಸ್ತೆಯಲ್ಲಿರುವ ಕಾಲೇಜು ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ಕಾಲೇಜು ಯುವತಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಘಟನೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣವಾಗಿದೆ. ಇಲಾಖೆಯ ಅಧಿಕಾರಿಗಳ ಬೇಜವಬ್ದಾರಿಯನ್ನು ಮುಚ್ಚಿ ಹಾಕಲು ಹುನ್ನಾರ ನಡೆದ ಸಂದರ್ಭದಲ್ಲಿ ಸಂಘಟನೆಗಳು ಧ್ವನಿ ಎತ್ತಿದ ಪರಿಣಾಮ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.ಆದರೆ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಇರುವ ವಾಟ್ಸ್‌ಪ್ ಗ್ರೂಪೊಂದರಲ್ಲಿ ಪೊಲೀಸ್ ಸಿಬ್ಬಂದಿ ಅಸಭ್ಯವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಂಗಡಿ ಚಂದ್ರು, ಮರ್ಲೆ ಅಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.







