ನಾಳೆಯಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ‘ಪ್ರಜಾಧ್ವನಿ ಯಾತ್ರೆ’: ಡಿ.ಕೆ. ಶಿವಕುಮಾರ್
''ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ''

ಬೆಂಗಳೂರು, ಫೆ. 2: ನಾಳೆಯಿಂದ ‘ಪ್ರಜಾಧ್ವನಿ ಬಸ್ ಯಾತ್ರೆ’ ಆರಂಭಿಸುತ್ತಿದ್ದು, ಇದು ಯಾವುದೇ ರೀತಿಯಲ್ಲಿಯೂ ಪ್ರತ್ಯೇಕ ಯಾತ್ರೆಯಲ್ಲ. ಜಿಲ್ಲಾ ಹಂತದಲ್ಲಿ ನಾವು ಈಗಾಗಲೇ ಯಾತ್ರೆ ಮುಗಿಸಿದ್ದು, ಇದೀಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಮಾಡುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಯಾತ್ರೆ ಆರಂಭಿಸಲಾಗುತ್ತಿದ್ದು, ನಾಳೆ (ಫೆ.3)ಬೆಳಗ್ಗೆ 10ಗಂಟೆಯ ಸುಮಾರಿಗೆ ಕ್ಷೇತ್ರದಲ್ಲಿನ ಕುರುಡುನಲೆ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆ ಆರಂಭಿಸಲಾಗುವುದು ಎಂದು ಹೇಳಿದರು.
ಸ್ಕ್ರೀನಿಂಗ್ ಕಮಿಟಿ ತೀರ್ಮಾನ: ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯುತ್ತಿದ್ದು, ಪ್ರತಿ ಜಿಲ್ಲೆಯ ಆಕಾಂಕ್ಷಿಗಳ ಜತೆ ಚರ್ಚೆ ಮಾಡಿ ಕೆಲವು ಹೆಸರುಗಳನ್ನು ಶಿಫಾರಸ್ಸು ಮಾಡಲು ಕಾರ್ಯದರ್ಶಿಗಳು, ಕಾರ್ಯಾಧ್ಯಕ್ಷರು, ಚುನಾವಣಾ ಸಮಿತಿ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರ ಶಿಫಾರಸ್ಸುಗಳನ್ನು ನಮಗೆ ನೀಡಲಿದ್ದಾರೆ. ದಿಲ್ಲಿ ನಾಯಕರು ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ನಾವೂ ಸಮೀಕ್ಷೆ ಮಾಡಿಸಿದ್ದೇವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷ ಸ್ಕ್ರೀನಿಂಗ್ ಕಮಿಟಿ ತೀರ್ಮಾನ ಮಾಡಲಿದೆ ಎಂದು ಹೇಳಿದರು.
‘ಯಾವುದೇ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸವಾಲಾಗಿಲ್ಲ. ನಮಗೆ ಗೆಲುವಿನ ಗುರಿ ಇದೆ. ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮತದಾರರು ವಿಶ್ವಾಸ ನೀಡಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ 10, 12, 20 ಅರ್ಜಿಗಳು ಬಂದಿವೆ. ಇಂತಹ ಕಡೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತ್ಯಾಗ ಮಾಡಲೇಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಬೇರೆ, ಬೇರೆ ರೀತಿಯಲ್ಲಿ ಅವರಿಗೆ ಅಧಿಕಾರ ನೀಡಲಾಗುವುದು. ಹೀಗಾಗಿ ಪಕ್ಷದ ಟಿಕೆಟ್ಗೆ ಆಸೆ ಪಟ್ಟು ಅರ್ಜಿ ಹಾಕಿರುವುದರಲ್ಲಿ ತಪ್ಪಿಲ್ಲ. ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ನೀವೆಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕು ಎಂದು ಆಕಾಂಕ್ಷಿಗಳಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಅವರು ತಿಳಿಸಿದರು.
ಹಾಲಿ ಶಾಸಕರಿಗೆ ಟಿಕೆಟ್: ‘ಇಂದು ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಒಂದು ಹಂತಕ್ಕೆ ಬರಲಿದೆ. ನಂತರ ಕೇಂದ್ರ ಚುನಾವಣಾ ಸಮಿತಿಯು ಪರಿಶೀಲಿಸಿ ಪ್ರಕಟಿಸಲಿದೆ’ ಎಂದ ಅವರು, ಪಕ್ಷದ ಎಲ್ಲ ಶಾಸಕರು ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಬಿಜೆಪಿ ಸಹಕಾರ ನೀಡದಿದ್ದರೂ ನಮ್ಮ ಶಾಸಕರು ಜನರ ಮಧ್ಯೆ ನಿಂತು ಕೆಲಸ ಮಾಡಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ’ ಎಂದು ಸ್ಪಷ್ಟಪಡಿಸಿದರು.
‘ಅವರವರ ಪಕ್ಷದ ವಿಚಾರವಾಗಿ ಯಾರು ಏನಾದರೂ ಮಾಡಿಕೊಳ್ಳಲಿ. ಅವರ ಸಿದ್ಧಾಂತ ಬೇರೆ, ನಮ್ಮ ಸಿದ್ಧಾಂತ ಬೇರೆ. ನಮ್ಮ ನಾಯಕತ್ವ ಬೇರೆ, ಅವರ ನಾಯಕತ್ವ ಬೇರೆ. ಎಲ್ಲರಿಗೂ ಒಳ್ಳೆಯದಾಗಲಿ. ನಮ್ಮದು ಇತಿಹಾಸವಿರುವ ಪಕ್ಷ, ಜನರ ಮಧ್ಯೆ ಇದ್ದು, ಅವರ ಸೇವೆ ಮಾಡಿ, ಅವರ ಜೀವನದಲ್ಲಿ ಬದಲಾವಣೆ ತರುವ ಪಕ್ಷ ಎಂದು ಶಿವಕುಮಾರ್, ಜನಾರ್ದನ ರೆಡ್ಡಿ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದರು.







