ಲಂಡನ್ ನಲ್ಲಿ ಖಲಿಸ್ತಾನ್ ಪರ ಪ್ರತಿಭಟನೆ: ದಿಲ್ಲಿ ಪೊಲೀಸರಿಂದ ಪ್ರಕರಣ ದಾಖಲು

ಹೊಸದಿಲ್ಲಿ,ಮಾ.24: ಲಂಡನ್ ನಲ್ಲಿ ಮಾ.19ರಂದು ಭಾರತೀಯ ರಾಯಭಾರ ಕಚೇರಿಯ ಎದುರು ನಡೆದಿದ್ದ ಖಲಿಸ್ತಾನ್ ಪರ ಪ್ರತಿಭಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಐಪಿಸಿ,ಯುಎಪಿಎ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ (ಪಿಡಿಪಿಪಿ) ಕಾಯ್ದೆಗಳಡಿ ದಿಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೋರ್ವರು ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಘಟನೆಯ ಕುರಿತು ವರದಿಯನ್ನು ಸ್ವೀಕರಿಸಿದ ಬಳಿಕ ಗೃಹ ಸಚಿವಾಲಯವು ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಲಂಡನ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ನಡೆದ ದಾಂಧಲೆಯಲ್ಲಿ ಪಾಲ್ಗೊಂಡವರು ಭಾರತಕ್ಕೆ ಮರಳಿದ ಬಳಿಕ ಬಂಧನ ಮತ್ತು ಕ್ರಿಮಿನಲ್ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ರವಿವಾರ ಬ್ರಿಟಿಷ್ ಉಪ ರಾಯಭಾರಿ ಕ್ರಿಸ್ಟಿನಾ ಸ್ಕಾಟ್ ಅವರನ್ನು ಕರೆಸಿಕೊಂಡಿದ್ದ ಭಾರತ ಸರಕಾರವು,ಕೆಲವು ಪ್ರತಿಭಟನಾಕಾರರು ರಾಯಭಾರ ಕಚೇರಿಯ ಆವರಣವನ್ನು ಪ್ರವೇಶಿಸಲು ಕಾರಣವಾಗಿದ್ದ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿಯ ಬಗ್ಗೆ ವಿವರಣೆ ಕೇಳಿತ್ತು.
ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯ ಕುರಿತು ಬ್ರಿಟಿಷ್ ಸರಕಾರದ ಉದಾಸೀನವು ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ. ಮಾ.19ರಂದು ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರನೋರ್ವ ಭಾರತೀಯ ಧ್ವಜವನ್ನು ಕೆಳಕ್ಕೆ ಇಳಿಸಿದ್ದು,ರಾಯಭಾರ ಕಚೇರಿಯ ಸಿಬ್ಬಂದಿಯೋರ್ವರು ಅದನ್ನು ಮರಳಿ ಪಡೆದುಕೊಂಡಿದ್ದರು. ನಂತರ ಬೃಹತ್ ತ್ರಿವರ್ಣ ಧ್ವಜವನ್ನು ಭಾರತೀಯ ರಾಯಭಾರ ಕಚೇರಿಯ ಮೇಲೆ ಹಾರಿಸಲಾಗಿದೆ.
ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ರವಿವಾರ ತಿಳಿಸಿದ್ದ ಬ್ರಿಟನ್ನ ಮಹಾನಗರ ಪೊಲೀಸರು,ಆದರೆ ಪೊಲೀಸರು ಸ್ಥಳವನ್ನು ತಲುಪುವ ಮುನ್ನವೇ ಹೆಚ್ಚಿನ ಪ್ರತಿಭಟನಾಕಾರರು ಅಲ್ಲಿಂದ ಚದುರಿದ್ದರು ಎಂದು ಹೇಳಿದ್ದರು. ಖಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ಮತ್ತು ಆತನ ‘ವಾರಿಸ್ ಪಂಜಾಬ ದೆ ’ ಸಂಘಟನೆಯ ಮೇಲೆ ಪೊಲೀಸ್ ದಾಳಿಯನ್ನು ವಿರೋಧಿಸಿ ಮಾ.19ರಂದು ಲಂಡನ್ನಲ್ಲಿ ಪ್ರತಿಭಟನೆ ನಡೆದಿತ್ತು.
ಕಳೆದ ಶನಿವಾರದಿಂದ ಪಂಜಾಬ್ ಪೊಲೀಸರು ಸಿಂಗ್ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದರೂ ಆತನಿನ್ನೂ ಅವರ ಬಲೆಗೆ ಬಿದ್ದಿಲ್ಲ.







