'ಅನರ್ಹ ಸಂಸದ': ಟ್ವಿಟರ್ ಖಾತೆಯ ಬಯೋ ಬದಲಾಯಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ: ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದ್ದು, 'ಅನ(ಅ)ರ್ಹ ಸಂಸದ' ಎಂದು ತಮ್ಮ ಗುರುತನ್ನು ದಾಖಲಿಸಿದ್ದಾರೆ.
"ಇದು ರಾಹುಲ್ ಗಾಂಧಿಯವರ ಅಧಿಕೃತ ಖಾತೆ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ | "ಡಿಸ್'ಕ್ವಾಲಿಫೈಡ್ ಎಂಪಿ " ಎಂದು ಬಯೋದಲ್ಲಿ ಬರೆಯಲಾಗಿದೆ.
ಮೋದಿ ಉಪನಾಮ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ರಾಹುಲ್ರಿಗೆ ಶಿಕ್ಷೆ ವಿಧಿಸಿದ ಬಳಿಕ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
ರಾಹುಲ್ ಗಾಂಧಿಗೆ ಬೆಂಬಲ ಸೂಚಿಸುವ ಸಲುವಾಗಿ ಕಾಂಗ್ರೆಸ್ ರವಿವಾರ ದೇಶಾದ್ಯಂತ ಒಂದು ದಿನದ ‘ಸಂಕಲ್ಪ ಸತ್ಯಾಗ್ರಹ’ ನಡೆಸುತ್ತಿದ್ದು, ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ಆರಂಭಿಸಿದೆ.
“ನನ್ನನ್ನು ಅನರ್ಹಗೊಳಿಸಿ, ಜೀವನಪರ್ಯಂತ ಅನರ್ಹಗೊಳಿಸಿ. ನನ್ನನ್ನು ಜೈಲಿಗೆ ಹಾಕಿ. ನಾನು ಮುಂದುವರಿಯುತ್ತೇನೆ. ನನ್ನನ್ನು ತಡೆದು ನಿಲ್ಲಿಸಲಾಗುವುದಿಲ್ಲ” ಎಂದು ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಕೋಟಾ ರದ್ದು: ಕೋರ್ಟ್ ಮೊರೆ ಹೋಗಲು ಮುಂದಾದ ಜಮೀಯತ್ ಉಲಮಾ-ಎ-ಹಿಂದ್







