ಸರಕಾರ ಅನುಮತಿ ನೀಡದಿದ್ದರೂ ಭೂ ಸ್ವಾಧೀನ : ಬೆಣ್ಣೆತೋರಾ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ನೋಟಿಸ್

ಬೆಣ್ಣೆತೋರಾ ಅಣೆಕಟ್ಟು Photo: x.com/MiraskarRavi
ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಸರಕಾರವು ಅನುಮತಿ ನೀಡದೇ ಇದ್ದರೂ ಅಂತಿಮ ಅಧಿಸೂಚನೆ ಹೊರಡಿಸಿದ್ದಲ್ಲದೇ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ನೀಡಿರುವ ಪ್ರಕರಣವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಕವಲಗಾ (ಕೆ) ಗ್ರಾಮದ ಒಟ್ಟು 3 ಎಕರೆ 25 ಗುಂಟೆ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳದೆಯೇ ಸೇತುವೆ-ಕಂ- ಬ್ಯಾರೇಜ್ ನಿರ್ಮಾಣ ಮಾಡಿರುವ ಪ್ರಕರಣದ ಕುರಿತು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ಬೆಳವಣಿಗೆ ಮಧ್ಯೆಯೇ ಭೂ ಸ್ವಾಧೀನಕ್ಕೆ ಸರಕಾರವೂ ಅನುಮತಿ ನೀಡಿರಲಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು (ಭೂ ಸ್ವಾಧೀನ) ಬೆಣ್ಣೆತೋರಾ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. 2026ರ ಎಪ್ರಿಲ್ನಲ್ಲಿಯೇ ಹೊರಡಿಸಿರುವ ನೋಟಿಸ್ನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ವಿವರ:
ಕಲಬುರಗಿ ಜಿಲ್ಲೆಯ ಹಾಗೂ ತಾಲೂಕಿನ ಫರತಾಹಬಾದ್ನ ಕವಲಗಾ (ಕೆ) ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶಿತ ಸೇತುವೆ-ಕಂ-ಬ್ಯಾರೇಜ್ ನಿರ್ಮಾಣಕ್ಕೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಗೀನಾಬಾಯಿ ಹೆಸರಿನಲ್ಲಿ 0-15, ಹಜರತ ಗೌಮ ಅಲಿ ಪೀಠ ದರ್ಗಾದ ಹೆಸರಿನಲ್ಲಿ 0-35, ಸತೀಶ್ ಹೆಸರಿನಲ್ಲಿ 0-20, ಪರ್ವತ ಪರ್ವತರೆಡ್ಡಿ ಎಂಬವರ ಹೆಸರಿನಲ್ಲಿ 1-10 ಸೇರಿ ಒಟ್ಟಾರೆ 3 ಎಕರೆ 25 ಗುಂಟೆ ಜಮೀನಿತ್ತು. ಭೂ ಸ್ವಾಧೀನ ಕಾಯ್ದೆ ಕಲಂ 19(1) ಅನ್ವಯ 19 (2)ರ ಅನ್ವಯ ಈ ಬಗ್ಗೆ ಇಲಾಖೆಯು ಘೋಷಣೆ ಮಾಡಿತ್ತು. ಈ ಬಗ್ಗೆ 2025ರ ಜನವರಿ 17ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿತ್ತು. ಆದರೆ ಕಲಂ 15 (1)ರ ಅನ್ವಯ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರಲಿಲ್ಲ.
ಆನಂತರ ಸೂಕ್ತ ವಿಚಾರಣೆ ನಡೆಸಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲು ವಿಚಾರಣೆ ವರದಿ ಅನುಸಾರ ಕಂದಾಯ ಇಲಾಖೆಯು 2026ರ ಎಪ್ರಿಲ್ 21ರಂದು ಭೂ ಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ನಿರ್ದೆಶನ ನೀಡಲಾಗಿತ್ತು. ಅಲ್ಲದೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013ರ ಕಲಂ 19(1)ರ ಅಡಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಅಗತ್ಯ ಎಂದು ನಿರ್ಧರಿಸಿತ್ತು. ಅದರ ಪ್ರಕಾರ ಅಧಿನಿಯಮ 19(1)ನೇ ಪ್ರಕರಣದಂತೆ ಭೂ ಸ್ವಾಧೀನವನ್ನು ಘೋಷಿಸಿತ್ತು.
ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ಕಲಬುರಗಿ ಪೀಠದಲ್ಲಿ ಭೂ ಮಾಲಕರು ರಿಟ್ ಅರ್ಜಿ (ಸಂಖ್ಯೆ; 202731/2023) ಸಲ್ಲಿಸಿದ್ದರು. ಈ ಅರ್ಜಿಯನ್ನು ಆಲಿಸಿದ್ದ ಪೀಠವು ಅರ್ಜಿದಾರರಿಗೆ 2 ವಾರದೊಳಗಾಗಿ ಮನವಿ ಸಲ್ಲಿಸಬೇಕು ಮತ್ತು ಈ ಮನವಿಗಳನ್ನು 6 ವಾರದೊಳಗಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ನ ಕಲಬುರಗಿ ಪೀಠವು 2023ರ ಅಕ್ಟೋಬರ್ 5ರಂದು ನಿರ್ದೇಶನ ನೀಡಿತ್ತು.
ಪ್ರಸ್ತಾವಿತ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಒಂದು ವರ್ಷ 6 ತಿಂಗಳ ಕಾಲ ವಿಳಂಬವಾಗಿತ್ತು. ಅಲ್ಲದೆ ಭೂ ಸ್ವಾಧೀನ ಪ್ರಕರಣದಲ್ಲಿ ಸಾಮಾಜಿಕ ಪರಿಣಾಮದ ಅಧ್ಯಯನ ಮಾಡುವುದರಿಂದ ವಿನಾಯಿತಿ ನೀಡಬೇಕು ಎಂದು 2025ರ ಎಪ್ರಿಲ್ 8ರಂದು ಸರಕಾರಕ್ಕೆ ಪ್ರಸ್ತಾವನೆ ಸ್ವೀಕೃತವಾಗಿತ್ತು.
ಈ ಬೆಳವಣಿಗೆ ನಡುವೆಯೇ ಭೂ ಮಾಲಕರು ಸಲ್ಲಿಸಿದ್ದ ರಿಟ್ ಅರ್ಜಿ (ಸಂಖ್ಯೆ 202731/2023)ಗೆ ಸಂಬಂಧಿಸಿದಂತೆ ಹೈಕೋರ್ಟ್ನ ಕಲಬುರಗಿ ಪೀಠವು ನೀಡಿದ್ದ ಆದೇಶವನ್ನು ಪಾಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು. ಅಲ್ಲದೆ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ (ಸಂಖ್ಯೆ :200215/2024) ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿನ ಮೂರನೇ ಪ್ರತಿವಾದಿಯಾಗಿದ್ದ ಪರ್ವತ ರೆಡ್ಡಿ ಜಮೀನಿಗೆ ಸಂಬಂಧಿಸಿದಂತೆ ಭೂ ಸ್ವಾಧೀನಕ್ಕೆ ಕಲಂ 15(2)(3) ಅನ್ವಯ ಅನುಮತಿ ಪಡೆದಿದ್ದರು. ಆನಂತರ ಕಲಂ 19(1)ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಲು ಕರಡನ್ನು ಸಿದ್ಧಪಡಿಸಿದ್ದರು.
ನಿಯಮಾನುಸಾರ ಐ ತೀರ್ಪು ಸಿದ್ಧಪಡಿಸಿ ಪರಿಹಾರ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ಅಫಿಡವಿಟ್ ಸಲ್ಲಿಸಲಾಗಿತ್ತು. ಹೀಗಾಗಿ ನ್ಯಾಯಾಲಯವು 2025ರ ಎಪ್ರಿಲ್ 16ರಂದು ಪ್ರಕರಣವನ್ನು ಕೈ ಬಿಟ್ಟಿತ್ತು. ಆದರೆ ಪ್ರತಿವಾದಿಗಳು ಅಫಿಡವಿಟ್ನಲ್ಲಿ ಹೇಳಿರುವಂತೆ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಅರ್ಜಿದಾರರು ಹೊಸದಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು.
ಈ ಪ್ರಕರಣದಲ್ಲಿ ಕಲಂ 15(2)(3)ರಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲು ಸರಕಾರದಿಂದ ಅನುಮತಿಯನ್ನು ಪಡೆಯದೆ ಇದ್ದರೂ ಕಲಂ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಿ, ನಿಯಮಾನುಸಾರ ತೀರ್ಪು ಸಿದ್ಧಪಡಿಸಿ ಪರಿಹಾರ ಪಾವತಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿಯು ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದರು. ಅಲ್ಲದೆ ಸರಕಾರದ ಪರವಾಗಿ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ನೀಡುವ ಮೂಲಕ ಕ್ರಿಮಿನಲ್ ಕ್ರಮವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಅದೇ ರೀತಿ ಈ ಪ್ರಸ್ತಾವನೆಗೆ ಕಲಂ 10(3)ರಡಿ ಸಾಮಾಜಿಕ ಪರಿಣಾಮ ಅಧ್ಯಯನದಿಂದ ವಿನಾಯಿತಿ ನೀಡಿತ್ತು. ಕಲಂ 11(1)ರಡಿ 2025ರ ಜನವರಿ 17ರಂದು ಪ್ರಾಥಮಿಕ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿಯೂ ಹೊರಡಿಸಿತ್ತು. ಸುಮಾರು 1 ವರ್ಷ 3 ತಿಂಗಳುವರೆಗೆ ಕಲಂ 15(3)ರಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲು ಸರಕಾರದ ಅನುಮತಿ ಪಡೆಯಲು ಪ್ರಸ್ತಾವ ಸಲ್ಲಿಸಿರಲಿಲ್ಲ. ಈ ಬಗ್ಗೆ ವಿಳಂಬ ಮಾಡಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿಯು 2026ರ ಫೆ.17ರಂದು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಈ ಪ್ರಸ್ತಾವನೆಯಲ್ಲಿಯೂ ಸರಕಾರದ ಮಾರ್ಗಸೂಚಿ ಅನ್ವಯ ಭೂ ಕೋರಿಕಾ ಇಲಾಖೆಯು ಶೇ. 50ರಷ್ಟು ಪರಿಹಾರ ಮೊತ್ತವನ್ನು ಠೇವಣಿಕರಿಸಿರುವ ಬಗ್ಗೆ ದಾಖಲೆ ಸಲ್ಲಿಸಿರಲಿಲ್ಲ. ಹೀಗಾಗಿ ಇದೊಂದು ಅಪೂರ್ಣ ಪ್ರಸ್ತಾವವಾಗಿತ್ತು. ಇದು ವಿಶೇಷ ಭೂ ಸ್ವಾಧೀನಾಧಿಕಾರಿಯ ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಈ ಪ್ರಕರಣದಲ್ಲಿ ಕಲಂ 11(1)ರ ಅನ್ವಯ ಅಧಿಸೂಚನೆಯು 2026ರ ಜನವರಿ 17ಕ್ಕೆ ಅಸಿಂಧುಗೊಂಡು ಸುಮಾರು 1 ವರ್ಷ 2 ತಿಂಗಳು ಕಳೆದರೂ ಕಲಂ 19(7)ರಡಿ ಕಾಲಾವಧಿ ವಿಸ್ತರಣೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸದೇ ಇರುವುದು, ಕಲಂ 15(3) ಅನುಮೋದನೆ ಪಡೆಯದೇ ಇರುವುದು, ನ್ಯಾಯಾಲಯದ ಆದೇಶವನ್ನು ನಿಗದಿತ ಅವಧಿಯಲ್ಲಿ ಪಾಲಿಸದೇ ಇರುವುದು, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವುದು ಕರ್ತವ್ಯಲೋಪವಾಗಿರುತ್ತದೆ ಎಂದು ಕಂದಾಯ ಇಲಾಖೆಯು ಬೆಣ್ಣೆತೋರಾ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಗೆ ನೋಟಿಸ್ನಲ್ಲಿ ವಿವರಿಸಿರುವುದು ಗೊತ್ತಾಗಿದೆ.






