ಬಿಹಾರ ಗ್ರಾಮದ ಒಂದೇ ಮನೆಯಲ್ಲಿ 947 ಮತದಾರರ ವಾಸ!

PC : X \ @IYCTelangana
ಹೊಸದಿಲ್ಲಿ,ಆ.29: ಬಿಹಾರದ ಮತದಾರರ ಪಟ್ಟಿಗಳಲ್ಲಿ ಇನ್ನಷ್ಟು ವ್ಯತ್ಯಾಸಗಳನ್ನು ಎತ್ತಿ ತೋರಿಸಿರುವ ಕಾಂಗ್ರೆಸ್ ಪಕ್ಷವು ಅವುಗಳನ್ನು ಪ್ರಶ್ನಿಸುವುದನ್ನು ಮುಂದುವರಿಸಿದೆ. ಮತದಾರರ ಪಟ್ಟಿಗಳ ಪ್ರಕಾರ ಬೋಧಗಯಾದ ನಿಡಾನಿ ಗ್ರಾಮದಲ್ಲಿ 947 ಮತದಾರರು ಒಂದೇ ಮನೆಸಂಖ್ಯೆಯಡಿ ವಾಸವಾಗಿದ್ದಾರೆ ಎಂದು ಅದು ಆರೋಪಿಸಿದೆ.
ಈ ಆರೋಪದ ಬಳಿಕ ಸ್ಥಳೀಯ ಅಧಿಕಾರಿಗಳು ಮತ್ತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಗ್ರಾಮದ ನಿವಾಸಿಗಳು ಯಾವುದೇ ಮನೆ ಸಂಖ್ಯೆಯನ್ನು ಹೊಂದಿಲ್ಲ, ಹೀಗಾಗಿ ಮತದಾರರ ಪಟ್ಟಿಗಳಲ್ಲಿ ಕಾಲ್ಪನಿಕ ಮನೆಸಂಖ್ಯೆಗಳನ್ನು ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಅಧಿಕೃತ ಮತದಾರರ ಪಟ್ಟಿಯಲ್ಲಿ 947 ಜನರು ಮನೆ ಸಂಖ್ಯೆ 6ರಡಿ ವಾಸವಿದ್ದಾರೆ. ನಿಡಾನಿ ಗ್ರಾಮದಲ್ಲಿ ನೂರಾರು ಮನೆಗಳು ಮತ್ತು ಕುಟುಂಬಗಳಿವೆ, ಆದರೂ ಪಟ್ಟಿಯಲ್ಲಿ ಇಡೀ ಗ್ರಾಮವನ್ನು ಒಂದು ಕಾಲ್ಪನಿಕ ಮನೆಯಲ್ಲಿ ತುಂಬಲಾಗಿದೆ ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ನಲ್ಲಿ ಎತ್ತಿ ತೋರಿಸಿದೆ.
‘ಬೂತ್ ಮಟ್ಟದ ಅಧಿಕಾರಿ(ಬಿಎಲ್ಒ) ಮನೆಮನೆ ಪರಿಶೀಲನೆಯನ್ನು ಹೇಗೆ ನಡೆಸಿದ್ದರು? ಮತದಾರರ ಪಟ್ಟಿಗಳಿಂದ ನಿಜವಾದ ಮನೆ ಸಂಖ್ಯೆಗಳನ್ನು ಏಕೆ ತೆಗೆಯಲಾಗಿದೆ? ಇದರಿಂದ ಯಾರಿಗೆ ಲಾಭವಾಗಲಿದೆ?’ ಎಂದು ಪಕ್ಷವು ಪ್ರಶ್ನಿಸಿದೆ.
ಇದು ಸಾಮಾನ್ಯ ತಪ್ಪಲ್ಲ ಎಂದಿರುವ ಕಾಂಗ್ರೆಸ್, ಇದು ಪಾರದರ್ಶಕತೆಯ ಹೆಸರಿನಲ್ಲಿ ಮಾಡಿರುವ ಅಪಹಾಸ್ಯ ಎಂದು ಬಣ್ಣಿಸಿದೆ.
ಒಂದು ಸಣ್ಣ ಗ್ರಾಮದ 947 ಮತದಾರರನ್ನು ಒಂದೇ ವಿಳಾಸದಲ್ಲಿ ಗುಡ್ಡೆ ಹಾಕಲು ಸಾಧ್ಯವಾದರೆ ಬಿಹಾರ ಮತ್ತು ಭಾರತದಾದ್ಯಂತ ನಡೆದಿರುವ ಅಕ್ರಮಗಳ ಪ್ರಮಾಣವನ್ನು ಊಹಿಸಿ. ಇಡೀ ನಿಡಾನಿ ಗ್ರಾಮವು ನಿಜಕ್ಕೂ ಒಂದೇ ಮನೆಯಲ್ಲಿ ವಾಸವಾಗಿದೆಯೇ ಅಥವಾ ಇದು ಪ್ರಜಾಪ್ರಭುತ್ವವನ್ನು ಕೊಳ್ಳೆ ಹೊಡೆಯಲು ಹೊಸ ಮಾರ್ಗವೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಚುನಾವಣಾ ಆಯೋಗದ ಉತ್ತರದಾಯಿತ್ವಕ್ಕೆ ಆಗ್ರಹಿಸಿದೆ.
ಕಾಂಗ್ರೆಸ್ನ ಟ್ವೀಟ್ ನ್ನು ಮರುಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಜಾದೂ ನೋಡಿ, ಇಡೀ ಗ್ರಾಮವನ್ನು ಒಂದೇ ಮನೆಯಲ್ಲಿ ನೆಲೆಗೊಳಿಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಗಯಾ ಜಿಲ್ಲಾಡಳಿತವು ನಾಲ್ವರು ಗ್ರಾಮಸ್ಥರ ಕ್ಲಿಪ್ ಗಳೊಂದಿಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು,ಅನೇಕ ಗ್ರಾಮಗಳಲ್ಲಿ ಮನೆಸಂಖ್ಯೆಗಳನ್ನು ನೀಡಲಾಗಿಲ್ಲ,ಹೀಗಾಗಿ ಮತದಾರರ ಪಟ್ಟಿಗಳಲ್ಲಿ ಸಾಂಕೇತಿಕ ಮನೆ ಸಂಖ್ಯೆಗಳನ್ನು ನೀಡಲಾಗಿದೆ. ಇಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ಮತದಾರರು ಗ್ರಾಮದಲ್ಲಿ ವಾಸವಾಗಿದ್ದಾರೆ ಮತ್ತು ನಿಜವಾದ ಮತದಾರರಾಗಿದ್ದಾರೆ. ನಿಡಾನಿಯ ಗ್ರಾಮದ ಬೂತ್ ನಂ.161ರ ಮತದಾರರೇ ಸ್ವತಃ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿಕೊಂಡಿದೆ.







