ಮೋದಿಗೊಂದು ‘ಕ್ಷಮಾಪಣಾ’ ಪತ್ರ

ನರೇಂದ್ರ ಮೋದಿಜೀ, ಸೈದ್ಧಾಂತಿಕವಾಗಿ ಸಾವಿರ ಭಿನ್ನಾಭಿಪ್ರಾಯಗಳಿರಬಹುದು. 140 ಕೋಟಿ ಭಾರತೀಯರ ಪೈಕಿ ನಿಮ್ಮನ್ನು ಮೆಚ್ಚಿ ಮತ ಹಾಕಿದವರು ಕೇವಲ 23,59,73,935 ಜನ (ಸುಮಾರು 37ಶೇ.) ಮಾತ್ರವೇ ಇರಬಹುದು. ದೇಶವಾಸಿಗಳಿಗೆ ನರೇಂದ್ರ ದಾಮೋದರ ಮೋದಿ ಎನ್ನುವ ವ್ಯಕ್ತಿ ಮುಖ್ಯವಲ್ಲವೇ ಅಲ್ಲ. ನೀವು ಪ್ರಧಾನಿ ಕುರ್ಚಿಯಲ್ಲಿ ಕೂತಿಲ್ಲದಿದ್ದರೆ ನಿಮ್ಮನ್ನು ಯಾರೂ ಕೇಳುತ್ತಲೂ ಇರಲಿಲ್ಲ. ನಿಮ್ಮ ಬಗ್ಗೆ ಆಸಕ್ತಿ ವಹಿಸುವ ಅಗತ್ಯವೂ ಇರಲಿಲ್ಲ. ಆದರೆ ನೀವು ನಮ್ಮೆಲ್ಲರ ಗೌರವಾನ್ವಿತ, ಆದರಣೀಯ ಪ್ರಧಾನ ಮಂತ್ರಿ. ಹಾಗಾಗಿ ಈ ಪ್ರಶ್ನೆಗಳು, ಮನವಿಗಳು ಅದಕ್ಕೂ ಮಿಗಿಲಾಗಿ ಇನ್ನಿಲ್ಲದ ಕಾಳಜಿ.
ತನ್ನನ್ನು, ನಿಧನರಾಗಿರುವ ತನ್ನ ತಾಯಿಯನ್ನು ವಿದ್ಯಾರ್ಥಿಗಳು ನಿಂದಿಸಿದರೆಂದು ನೀವು ಬಹಳ ನೊಂದುಕೊಂಡಂತೆ ಮಾತನಾಡಿದ್ದೀರಿ. ನಿಮ್ಮ ಮಾತುಗಳು ನಿಜವೋ ನಾಟಕವೋ ಎನ್ನುವ ಅನುಮಾನ ಇದೆ. ಏಕೆಂದರೆ ನಿಮ್ಮ ಮನಸ್ಸು ಮತ್ತು ಹೃದಯಗಳು ಎಂದೂ ಕರಗದ ಬಂಡೆಯಂತೆ. ಎಂಥೆಂಥಾ ಸಂದರ್ಭಗಲ್ಲೂ ಅವು ಕರಗಿಲ್ಲ. ಮರುಗಿಲ್ಲ.
ಉದಾಹರಣೆಗೆ ನಿಮ್ಮದೇ ತವರು ರಾಜ್ಯದಲ್ಲಿ, ಅಹಿಂಸಾ ತತ್ವವನ್ನು, ಸತ್ಯದ ಮಹತ್ವವನ್ನು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸಾರಿ ಹೇಳಿದ ಮಹಾತ್ಮ್ಮಾಗಾಂಧೀಜಿ ಹುಟ್ಟಿದ ಗುಜರಾತಿನಲ್ಲಿ 2002ರಲ್ಲಿ ನೀವೇ ಮುಖ್ಯಮಂತ್ರಿಯಾಗಿದ್ದಾಗ ನರಮೇಧ ನಡೆಯಿತು. ಸಾವಿರಾರು ಜನ ಸತ್ತರು. ಈಗ ವಿದ್ಯಾರ್ಥಿಗಳ ಆಕ್ರೋಶದ ಮಾತುಗಳು ಸಾಂಸ್ಕೃತಿಕ ಆಘಾತದಂತೆ ಭಾಸವಾದ ನಿಮಗೆ ನೀವೇ ಮುಖ್ಯಮಂತ್ರಿಯಾಗಿದ್ದಾಗ ನಡೆದ ನರಮೇಧಕ್ಕೆ ನೈತಿಕ ಹೊಣೆ ಹೊರಬೇಕು ಎನಿಸಿತ್ತಾ?
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮುಂಬೈನ ವಿಶೇಷ ನ್ಯಾಯಾಲಯ ಅಮಾಯಕ ಮಹಿಳೆಯರ ಅತ್ಯಾಚಾರ ಮತ್ತು ಕೊಲೆಯಾಗಿದೆ ಎಂದು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ದಾರಿಯಲ್ಲಿ ಹೋಗುವವರನ್ನು ಬಿಟ್ಟು ಬಿಡಿ, ನ್ಯಾಯಾಲಯ ಹೇಳಿದ ನಂತರವಾದರೂ ಕ್ಷಮೆ ಕೇಳಿದ್ದೀರಾ?
ನೀವು ಮುಖ್ಯಮಂತ್ರಿಯಾಗಿದ್ದಾಗ ನರಮೇಧ ನಡೆಯಿತು ಎನ್ನುವ ಕಾರಣಕ್ಕೆ ಸೋನಿಯಾ ಗಾಂಧಿ ಅವರು ನಿಮ್ಮನ್ನು ಮೌತ್ ಕಾ ಸೌದಾಗರ್ (ಸಾವಿನ ವ್ಯಾಪಾರಿ) ಎಂದರು. ಅದೊಂದು ರಾಜಕೀಯ ವಾಗ್ದಾಳಿಯಾಗಿತ್ತು. ಅದಕ್ಕೂ ಮಿಗಿಲಾಗಿ ನಿಮ್ಮನ್ನು ಗುರಿಯಾಗಿರಿಸಿಕೊಂಡು ಮಾತನಾಡಲು ನೀವೇನು ಈಗಿನಂತೆ ಆಗ ಬಹಳ ಪ್ರಭಾವಿ ನಾಯಕ ಆಗಿರಲಿಲ್ಲ. ರಾಷ್ಟ್ರೀಯ ಬಿಜೆಪಿಯಲ್ಲಿ ನಿಮಗೆ ಏನೇನೂ ಮಹತ್ವ ಇರಲಿಲ್ಲ. ಆಗ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿಯಂಥ ಹಿರಿಯರಿದ್ದರು. ಪ್ರಮೋದ್ ಮಹಾಜನ್ ಅವರಂಥ ಚುರುಕುಬುದ್ಧಿಯ ಕಿರಿಯರೂ ಇದ್ದರು. ಆದರೂ ನೀವು ಸೋನಿಯಾ ಗಾಂಧಿ ಅವರನ್ನು ಒಂಚೂರು ಅಳುಕದೆ ಜರ್ಸಿ ಹಸು, ಬಾರ್ ಡ್ಯಾನ್ಸರ್ ಎಂದೆಲ್ಲಾ ಹೀಯಾಳಿಸಿದಿರಿ. ಇದು ಪುಢಾರಿಗಳು ಬಳಸುವ ಭಾಷೆ. ರಾಜಕೀಯದಲ್ಲಿ ನಾಯಕ ಎನಿಸಿಕೊಳ್ಳುವವನು, ಮುಖ್ಯಮಂತ್ರಿಯಾಗಿ ಒಂದು ರಾಜ್ಯವನ್ನು ಮುನ್ನಡೆಸುವ ವ್ಯಕ್ತಿ ಆಡುವ ಮಾತುಗಳಾಗಿರಲಿಲ್ಲ. ಇದರ ಬಗ್ಗೆ ಕ್ಷಮೆ ಕೇಳುವುದು ಬೇಡ, ವಿಷಾದವನ್ನಾದರೂ ವ್ಯಕ್ತಪಡಿಸಿದಿರಾ?
ಕಾಂಗ್ರೆಸ್ ನಿಮಗೆ ರಾಜಕೀಯ ಎದುರಾಳಿ. ನೀವು ವಿರೋಧಿಸಲೇಬೇಕು. ಆದರೆ ಕಾಂಗ್ರೆಸ್ ನಾಯಕರನ್ನು ದ್ವೇಷಿಸುವ ಅಗತ್ಯವಿಲ್ಲ. ಆದರೆ ನೀವು ಪಂಡಿತ್ ಜವಾಹರಲಾಲ್ ನಹರೂ ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ದ್ವೇಷವನ್ನೇ ಉಸಿರಾಡಿದ್ದೀರಿ. ರಾಹುಲ್ ಗಾಂಧಿ ಹೆಸರು ಹೇಳಲು ನಿಮಗೆ ಮನಸ್ಸಿಲ್ಲ. ಅವರನ್ನು ಶಹಜಾದಾ (ರಾಜಕುಮಾರ), ಬಾಲಕ್ ಬುದ್ಧಿ ಮತ್ತಿತ್ಯಾದಿಯಾಗಿ ಮೂದಲಿಸಿದ್ದೀರಿ. ಒಂದು ಕ್ಷಣಕ್ಕೆ ರಾಹುಲ್ ಗಾಂಧಿ ಬಗೆಗಿನ ನಿಮ್ಮ ಮಾತುಗಳನ್ನು ಒಪ್ಪಿಕೊಂಡರೂ ಪ್ರಿಯಾಂಕಾ ಗಾಂಧಿ ಅವರನ್ನು ‘ಹೈಬ್ರೀಡ್’ ಎನ್ನುವುದು ಸಾರ್ವಜನಿಕ ಜೀವನದಲ್ಲಿರುವ ಯಾರೂ ಆಡುವ ಮಾತುಗಳಲ್ಲ. ನೆಹರೂ-ಗಾಂಧಿ ಕುಟುಂಬದವರನ್ನು ಮಾತ್ರವಲ್ಲ, ದೇಶ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ‘ಮೌನಿ ಬಾಬಾ’ ಎಂದು ಮೂದಲಿಸಿದ್ದೀರಿ. ಅವರು ‘ರೈನ್ ಕೋಟ್ ಹಾಕಿಕೊಂಡು ಸ್ನಾನ ಮಾಡುತ್ತಾರೆ’ ಎಂದು ಲೇವಡಿ ಮಾಡಿದ್ದೀರಿ. ಈ ಕೊಳಕು ಮಾತುಗಳ ಕಾರಣಕ್ಕಾಗಿ ನಿಮ್ಮ ಬಗ್ಗೆ ನೀವು ಎಂದಾದರೂ ಬೇಸರ ಪಟ್ಟುಕೊಂಡಿದ್ದೀರಾ?
ನೀವು ಮಹಿಳೆಯರ ಬಗ್ಗೆ ಕನಿಷ್ಠ ಗೌರವ ತೋರದ ಕಾರಣಕ್ಕೆ, ನಿಮ್ಮನ್ನು ಬೆಂಬಲಿಸುವವರು ಇನ್ನಷ್ಟು ನಿರ್ಲಜ್ಜರಾಗಿ ಹೆಣ್ಣು ಮಕ್ಕಳನ್ನು ತುಚ್ಛವಾಗಿ ಕಾಣುತ್ತಿದ್ದಾರೆ. ನೀವು ಹೆಮ್ಮೆಯಿಂದ ಪ್ರತಿನಿಧಿಸುವ ಬಿಜೆಪಿಯ ನಾಯಕರು ಲಜ್ಜೆ ಇಲ್ಲದೆ ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬೇರೆಯವರನ್ನು ಬಿಡಿ, ಮೊನ್ನೆ ಮೊನ್ನೆ ನೀವೇ ಶಿಕ್ಷಣ ಸಚಿವರಾನ್ನಾಗಿ ನೇಮಿಸಿರುವ ಪ್ರಹ್ಲಾದ್ ಜೋಶಿ ಕೂಡ ಅತ್ಯಾಚಾರಿಗಳನ್ನು ಸಮರ್ಥಿಸಿದ್ದಾರೆ. ಎಂದಾದರೂ ಅವರಿಗೆಲ್ಲಾ ಬುದ್ಧ್ದಿ ಹೇಳಿದ್ದೀರಾ?
ಮಣಿಪುರದಲ್ಲಿ ಮಹಿಳೆಯರ ಮಾರಣಹೋಮ ನಡೆಯಿತು. ಬೆತ್ತಲೆ ಮೆರವಣಿಗೆಯಾಯಿತು. ಉತ್ತರ ಪ್ರದೇಶದ ಉನ್ನಾವೊದಲ್ಲಿ ನಿಮ್ಮದೇ ಪಕ್ಷದ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅಪ್ರಾಪ್ತಾ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದರು. ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದರು. ಯುವತಿಯ ಮೃತದೇಹವನ್ನು ಪೋಷಕರಿಗೆ ನೀಡದೆ ಪೊಲೀಸರೇ ಮಧ್ಯರಾತ್ರಿಯ ವೇಳೆ ಅಂತ್ಯಕ್ರಿಯೆ ಮಾಡಿದರು. ನ್ಯಾಯಾಲಯ ಈ ಎರಡೂ ಪ್ರಕರಣಗಳನ್ನು ಅಪರಾಧ ಎಂದಿತು. ನೀವೇನಾದರೂ ಮರುಗಿದ್ದೀರಾ?
ಕಪ್ಪುಹಣವನ್ನು ತೊಲಗಿಸಿಬಿಡಬೇಕು ಎಂದು ನೋಟು ರದ್ದು ಮಾಡಿದಿರಿ. ಜನ ಬದುಕು ಕಳೆದುಕೊಂಡರು. ಏಕಾಏಕಿ ಲಾಕ್ ಡೌನ್ ಮಾಡಿದಿರಿ. ಜನ ಪ್ರಾಣವನ್ನೇ ಬಿಟ್ಟರು. ತಮ್ಮದಲ್ಲದ ತಪ್ಪಿಗೆ ಜೀವ-ಜೀವನ ಎರಡನ್ನೂ ಕಳೆದುಕೊಂಡ ಈ ಅಮಾಯಕರ ಬಗ್ಗೆ ಎಂದಾದರೂ ಅರೆಕ್ಷಣ ಅತ್ತಿದ್ದೀರಾ?
ರಾಜಕೀಯವಾಗಿ ನೋಡುವುದಾದರೆ ಗುಜರಾತ್ ನರಮೇಧದ ಬಳಿಕ ‘ರಾಜಧರ್ಮವನ್ನು ಪಾಲಿಸಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಿರಿ’ ಎಂಬ ಆದೇಶ ನಿಮ್ಮ ಪಕ್ಷದ ಹೈಕಮಾಂಡಿನಿಂದ ಬಂದಿತ್ತು. ಆಗ ನಿಮ್ಮ ತಲೆ ಕಾದವರು ಲಾಲ್‌ಕೃಷ್ಣ ಅಡ್ವಾಣಿ. ನೀವು ಅವರಿಗೆ ಕೊಟ್ಟ ಗುರುದಕ್ಷಿಣೆ ಎಂಥದ್ದು? ರಾಜಕಾರಣದಲ್ಲಿ ನಾವು ಬೆಳೆಯಬೇಕಾದರೆ ಪರರ ಹಿತವನ್ನು ಕಡೆಗಣಿಸಬೇಕಾಗುತ್ತದೆ. ಅಷ್ಟರ ಮಟ್ಟಗೆ ಮನುಷ್ಯ ಸ್ವಾರ್ಥಿ. ಅವರು ಪ್ರಧಾನ ಮಂತ್ರಿಯಾಗಿದ್ದರೆ ನೀವು ಆ ಸ್ಥಾನ ಏರಲು ಸಾಧ್ಯವಿರಲಿಲ್ಲ. ಅದರಿಂದ ನೀವು ಅವರ ಪರ ನಿಲ್ಲಲಿಲ್ಲ ಎನ್ನುವುದನ್ನು ಒಪ್ಪೋಣ. ಆದರೆ ನೀವಿಂದು ಪ್ರಧಾನ ಮಂತ್ರಿ ಸ್ಥಾನದಲ್ಲಿ ವಿರಾಜಮಾನರಾಗಲು ಜೀವನವಿಡೀ ಹೋರಾಡಿದ ಅಡ್ವಾಣಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಕೃತಜ್ಞತೆ ಸಲ್ಲಿಸಬಹುದಿತ್ತಲ್ಲವೇ?
ಮೋದಿಜಿ ಇವು ಬಹಳ ಪ್ರಮುಖವಾದವು. ಯಾವ ಸಂಶೋಧನೆಯೂ ಇಲ್ಲದೆ ತಕ್ಷಣಕ್ಕೆ ನೆನಪಾಗುವಂಥವು. 2002ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ, 2014ರಿಂದ ಇಲ್ಲಿಯವರೆಗೆ ನೀವು ಎಸಗಿರುವ ತಪ್ಪುಗಳು ಬಹಳ ಇವೆ. ಅವು ‘ನಡೆಯುವವರು ಎಡವುವುದು ಸಹಜ’ ಎಂಬ ಕ್ಷಮಿಸಬಹುದಾದ ತಪ್ಪಲ್ಲ, ಉದಾಸೀನದಿಂದ ಮಾಡಿರುವ ತಪ್ಪುಗಳು. ಉದ್ದೇಶಪೂರ್ವಕವಾಗಿ ಮಾಡಿರುವ ತಪ್ಪುಗಳು. ದುರುದ್ದೇಶದಿಂದ ಮಾಡಿರುವ ತಪ್ಪುಗಳು. 2014ರಿಂದ ಈಚೆಗೆ ಮನೆ ಮನೆಗಳಲ್ಲಿ ಮನಸ್ಸುಗಳು ಒಡೆದು ಹೋಗಿವೆ. ವಾಟ್ಸ್
ಆ್ಯಪ್ ಗ್ರೂಪುಗಳು ವಿಷಮಯವಾಗಿವೆ. ನೀವು ಬಂದ ಮೇಲೆ ಹೀಗಾಯಿತು ಎಂದಾದರೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೀವು ಕಾರಣ ಎಂದೇ ಅರ್ಥ ಅಲ್ಲವೇ? ಎಂದಾದರೂ ಪಶ್ಚಾತ್ತಾಪ ಪಟ್ಟಿದ್ದೀರಾ?
ಇದೆಲ್ಲದಕ್ಕೂ ಮಿಗಿಲಾಗಿ ನೀವು ತಾಯಿಯ ಬಗ್ಗೆ ಮಾತನಾಡಿದ್ದೀರಿ. ತಾಯಿಯನ್ನು ನಿಂದಿಸಿದವರಿಗೆ ಕ್ಷಮೆಯೇ ಇಲ್ಲ ಎಂದು ಮಹಾಭಾರತದ ಅರ್ಜುನ-ಬಬ್ರುವಾಹನನ ಕತೆ ಹೇಳುತ್ತದೆ. ಆ ಕತೆಯಲ್ಲಿ ಬಬ್ರುವಾಹನನ ಶೌರ್ಯಕ್ಕಿಂತಲೂ ಶ್ರೇಷ್ಠವಾದುದು ಆತನ ಮಾತೃಪ್ರೇಮ. ಮಾತೃ ನಿಂದಕರಿಗೇ ಕ್ಷಮೆ ಇಲ್ಲ ಎನ್ನುವುದಾದರೆ ತಾಯಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ಏನು ಮಾಡಬೇಕು? ತಾಯಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ಈ ದೇಶದ ಜನ, ಇತಿಹಾಸ ಎಂದಾದರೂ ಕ್ಷಮಿಸುವುದೇ? ಇಡೀ ದೇಶದಲ್ಲಿ ತಾಯಿಯನ್ನು ಅತಿ ಹೆಚ್ಚು ರಾಜಕೀಯಕ್ಕೆ ಬಳಸಿಕೊಂಡದ್ದು ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವಿರಾ?
ಮನವಿ ವಿಷಯಕ್ಕೆ ಬರುವುದಾದರೆ, ನೀವು ಬಹಳ ಅದೃಷ್ಟವಂತ. ಸಂಘ ಪರಿವಾರದ 100 ವರ್ಷಗಳ ಸೈದ್ಧಾಂತಿಕ ಹೋರಾಟದ ಫಲಾನುಭವಿ. ನಿಮ್ಮ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ಇರುವ ಬೆಂಬಲಿಗರಂತಲ್ಲ, ಕಾಂಗ್ರೆಸ್ ಬೆಂಬಲಿಗರು ಅಥವಾ ಎಡವಿಚಾರಧಾರೆಯನ್ನು ಮೈಗೂಡಿಸಿಕೊಂಡವರು ‘ತಪ್ಪು ಯಾರೇ ಮಾಡಿದರೂ ತಪ್ಪೇ’ ಎನ್ನುತ್ತಾರೆ. ಅಗತ್ಯ ಬಿದ್ದರೆ ವಿರೋಧ ಮಾಡುತ್ತಾರೆ. ಆದರೆ ನಿಮ್ಮ ಬೆಂಬಲಿಗರು ನೀವು ತಪ್ಪು ಮಾಡಿದರೂ ನಿಮ್ಮನ್ನು ಸಮರ್ಥಿಸುತ್ತಾರೆ. ಅಂಥ ಅಂಧ ಭಕ್ತರನ್ನು ಹೊಂದಿರುವುದರಿಂದ ನೀವೇ ಅವರಿಗೆ ಬುದ್ಧ್ದಿ ಹೇಳಿ. ಜೊತೆಗಿರುವವರನ್ನು ಮನುಷ್ಯರಂತೆ ಕಾಣಲು ಹೇಳಿ. ಪ್ರಶ್ನೆ ಮಾಡುವುದು ಪ್ರಜಾಪ್ರಭುತ್ವಕೆ ಭೂಷಣ ಎಂದು ತಿದ್ದಿ. ಮೊದಲು ನಿಮ್ಮ ಬೆಂಬಲಿಗರಿಗೆ ಬುದ್ಧ್ದಿ ಹೇಳಿ. ನಂತರ ವಿದ್ಯಾರ್ಥಿಗಳನ್ನು ದೂರುವಿರಂತೆ, ತಪ್ಪೇ ಮಾಡಿಲ್ಲದ ಅವರನ್ನು ಕ್ಷಮಿಸುವರಂತೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್‌ಗನ್ ಪ್ರಯೋಗ ಮಾಡಿದವರು ಯಾರು ಎನ್ನುವ ಪ್ರಶ್ನೆಗೆ ಸಾಧ್ಯವಾದರೆ ಉತ್ತರಿಸಿ ಅಥವಾ ಮೌನವಾಗಿದ್ದುಕೊಂಡೇ ಅವರನ್ನು ಶಿಕ್ಷಿಸಿ. ಅದೂ ಸಾಧ್ಯವಾಗದಿದ್ದರೆ ಅವರನ್ನು ಶಿಕ್ಷಿಸಲು ನನ್ನಿಂದ ಸಾಧ್ಯವಿಲ್ಲ, ನಾನು ಅಸಹಾಯಕ ಎಂದು ಒಪ್ಪಿಕೊಂಡುಬಿಡಿ. ಇಷ್ಟು ದಿನ ನಿಮ್ಮನ್ನು ಯಾರೂ ಬಗ್ಗಿಸಿರಲಿಲ್ಲ, ಹೇಗೂ ಈಗ ವಿದ್ಯಾರ್ಥಿಗಳ ಮುಂದೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವ ಮೂಲಕ ಶರಣಾಗಿದ್ದೀರಿ. ಈ ವಿಷಯದಲ್ಲೂ ತಪ್ಪೊಪ್ಪಿಕೊಂಡರೆ ವಿದ್ಯಾರ್ಥಿಗಳು ಮನ್ನಿಸುತ್ತಾರೆ. ಅವರು ದೊಡ್ಡವರು.
ಕಾಳಜಿ ಏನೆಂದರೆ, ನಿಮಗೆ ಮರೆವಿನ ಕಾಯಿಲೆ ಮೊದಲಿನಿಂದಲೇ ಇತ್ತೋ ಅಥವಾ ಈಗ ಬಂದಿದೆಯೋ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಏಕೆಂದರೆ ಮೇಲೆ ಕೇಳಲಾದ ಯಾವ ಪ್ರಶ್ನೆಗಳಿಗೂ ನೀವು ಉತ್ತರಿಸಿಲ್ಲ. ಬಹುಶಃ ನೀವು ‘ಮರೆತುಬಿಟ್ಟಿದ್ದೀರಿ’. ಈಗಲೂ ನಿಮ್ಮದೇ ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ, ಅಳಿಸಿದ್ದಾರೆ. ನೀವೇ ಅವರನ್ನು ದಾರಿತಪ್ಪಿದವರೆಂದು ಅವಮಾನಿಸಿದ್ದೀರಿ. ಇದರಿಂದ ನಿಮಗೆ ಏನಾಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ, ಗೊತ್ತಾದರೂ ಅದು ನೆನಪಿನಲ್ಲಿ ಉಳಿಯುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ನಿಜಕ್ಕೂ ನಿಮಗೆ ಮರೆವಿದ್ದರೆ ಕ್ಷಮಿಸಿಬಿಡಬಹುದು, ಮರೆತಂತೆ ನಟಿಸುತ್ತಿದ್ದರೆ?






