ಅಶೋಕ್ ಮತ್ತು ವಿಜಯೇಂದ್ರ ಎಲ್ಲಿದ್ದೀರಪ್ಪ?

ರಾಜ್ಯದಲ್ಲಿ ಮಳೆ ಇಲ್ಲ. ಅಣೆಕಟ್ಟೆಗಳಲ್ಲಿ ನೀರಿಲ್ಲ. ಕೃಷಿ ಚಟುವಟಿಕೆ ಇಲ್ಲ. ರಸಗೊಬ್ಬರ ಇಲ್ಲ. ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಮಂತ್ರಿ ಮಂಡಲವಿಲ್ಲ. ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುವವರಿಲ್ಲ. ಇಂಥ ಹತ್ತಾರು ‘ಇಲ್ಲಗಳ’ ಬಗ್ಗೆ ಮಾತನಾಡಬೇಕಾದ ಪ್ರತಿಪಕ್ಷವೂ ಇಲ್ಲ.
2023ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ತಿಂಗಳುಗಟ್ಟಲೆ ಪ್ರತಿಪಕ್ಷದ ನಾಯಕ ಇರಲಿಲ್ಲ. ಈಗ ಆರ್. ಅಶೋಕ್ ಹೆಸರಿಗೆ ಪ್ರತಿಪಕ್ಷದ ನಾಯಕರಾಗಿದ್ದಾರೆ. ಆದರೆ ಉಸಿರಿಲ್ಲ. ಹೆಚ್ಚೆಂದರೆ ಟಿ.ವಿ. ಮಾಧ್ಯಮದವರಿಗೆ ಬೈಟ್ ಕೊಡುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ರಾಜ್ಯ ಪ್ರವಾಸ, ಬರ ಅಧ್ಯಯನ ಮತ್ತಿತರ ವಿಚಾರಗಳು ತಮ್ಮ ವ್ಯಾಪ್ತಿ ಮೀರಿದ್ದು ಎಂದುಕೊಂಡಿದ್ದಾರೆ. ಬರದ ಬಗ್ಗೆ ಒಂದು ಪತ್ರ ಬರೆದು ಸುಸ್ತಾಗಿದ್ದಾರೆ.
ಅಶೋಕ್ ಪ್ರತಿಪಕ್ಷದ ನಾಯಕರಾದಾಗ ಸ್ವತಃ ಬಿಜೆಪಿಯವರೇ ಬೇಜಾರು ಮಾಡಿಕೊಂಡಿದ್ದರು. ಪ್ರಮುಖ ಖಾತೆಗಳು ಸಿಕ್ಕಿದಾಗಲೇ ಮತ್ತು ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಭರವಸೆ ಮೂಡಿಸದ ಅಶೋಕ್ ಸಮರ್ಥ ಪ್ರತಿಪಕ್ಷದ ನಾಯಕನಾಗಲು ಸಾಧ್ಯವೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಬಸವರಾಜ ಬೊಮ್ಮಾಯಿ ಸೂಕ್ತ ಎಂದು ಹೇಳುತ್ತಿದ್ದರು. ಆದರೂ ಅವಕಾಶ ಅಶೋಕ್ ಅವರನ್ನು ಹುಡುಕಿಕೊಂಡು ಬಂದಿತ್ತು. ಜೊತೆಗೆ ಕಳೆದ ಮೂರು ವರ್ಷದಲ್ಲಿ ತಾನೊಬ್ಬ ಸಮರ್ಥ ಪ್ರತಿಪಕ್ಷದ ನಾಯಕ ಎಂದು ಸಾಬೀತು ಪಡಿಸುವ ಸಂದರ್ಭಗಳೂ ಬಂದಿದ್ದವು. ಅಶೋಕ್ ಮಾತ್ರ ಮನಸ್ಸು ಮಾಡಲಿಲ್ಲ. ಒಂದೇ ಒಂದು ಹಗರಣ ಬಯಲಿಗೆಳೆಯಲಿಲ್ಲ.
ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಚಾರಕ್ಕೆ ಬರುವುದಾದರೆ ಅವರಿಗೆ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದು ಅವರೊಬ್ಬ ಅಪ್ರತಿಮ ಶೂರ, ರಣಧೀರ ಅಂತಾ ಅಲ್ಲ, ಯಡಿಯೂರಪ್ಪ ಕೃಪೆ ಇರಲಿ ಅಂತಾ. ಅದಕ್ಕೂ ಮಿಗಿಲಾಗಿ ಬೇರೊಬ್ಬ ಸೂಕ್ತ ಇಲ್ಲ ಅಂತಾ. ಬಿಜೆಪಿಯ ಸಂಘಟನೆ, ಮೋದಿ ವರ್ಚಸ್ಸು, ಯಡಿಯೂರಪ್ಪ ಪ್ರಭಾವ, ಯಥೇಚ್ಛ ಹಣಕಾಸಿನ ಅನುಕೂಲಗಳಿದ್ದರೂ ವಿಜಯೇಂದ್ರ ‘ಕೊಟ್ಟ ಕುದುರೆಯನ್ನು’ ಏರಲೇ ಇಲ್ಲ.
ತಾನು ಯಾರನ್ನು ಎಷ್ಟರ ಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ ಎಂಬ ಪ್ರಶ್ನೆಯನ್ನು ಎಂದೂ ಕೇಳಿಕೊಳ್ಳದ ಅವರು ‘ಬೇರೆಯವರಿಂದ ಸಹಕಾರ’ ಸಿಗುತ್ತಿಲ್ಲ ಎಂಬ ದೂರು ಹೇಳುತ್ತಲೇ ಮೂರು ವರ್ಷ ಪೂರೈಸುತ್ತಿದ್ದಾರೆ. ಅಧಿಕಾರ ಇದ್ದಾಗ ಉಪಚುನಾವಣೆಯನ್ನು ಗೆದ್ದು ಚಾಣಾಕ್ಷ ಎಂದು ಬರೆಸಿಕೊಂಡಿದ್ದ ವಿಜಯೇಂದ್ರ ಈಗ ಅದೇ ಉಪಚುನಾವಣೆಗಳ ವಿಷಯದಲ್ಲೇ ಏದುಸಿರು ಬಿಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಹೈಕಮಾಂಡ್ ಪಾಲಿನ ನೀಲಿಗಣ್ಣಿನ ಹುಡುಗನಾಗಿದ್ದ ವಿಜಯೇಂದ್ರ ಈಗ ಅಡ್ಡಮತದ ಹೊಡೆತಕ್ಕೆ ತತ್ತರಿಸಿಹೋಗಿದ್ದಾರೆ.
ಅಶೋಕ್ ರೀತಿ ವಿಜಯೇಂದ್ರಗೆ ಕೂಡ ಮೂರು ವರ್ಷದಲ್ಲಿ ತಾನೇನು ಅಂತಾ ಸಾಬೀತು ಪಡಿಸಬಹುದಾದ ಅವಕಾಶಗಳು ಒದಗಿಬಂದಿದ್ದವು. ಮಾರ್ಗದರ್ಶನ ಮಾಡಲು ಮನೆಯಲ್ಲೇ ಗುರು ಇದ್ದರು. ಆದರೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿಸಿದ್ದೇ ಸಾಧನೆ, ಹೈಕಮಾಂಡ್ ತನ್ನ ಮೇಲೆ ವಿಶ್ವಾಸ ಇಟ್ಟಿದೆ ಎನ್ನುವುದಕ್ಕೆ ಅದೇ ಪುರಾವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಸಾಗಿದ್ದಾರೆ. ಆದರೆ ಎಲ್ಲಾ ಕಾಲಕ್ಕೂ ಪರಿಸ್ಥಿತಿಗಳು ಅವರಿಗೆ ಪೂರಕವಾಗಿಯೇ ಇರಬೇಕು ಎನ್ನುವ ನಿಯಮವೇನೂ ಇಲ್ಲವಲ್ಲ?
ಮುಡಾ ಪ್ರಕರಣದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲಾಯಿತು. ಅದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಪಾದಯಾತ್ರೆಯೇ ಆಗಿದ್ದರೂ ಜೆಡಿಎಸ್ ನೇತೃತ್ವದ ಪಾದಯಾತ್ರೆ ಎಂದು ಬಿಂಬಿತವಾಯಿತು. ಅದಾದ ಮೇಲೆ ವಿಜಯೇಂದ್ರ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡರು. ಆ ಯಾತ್ರೆಗೆ ಗೊತ್ತು ಗುರಿಯೇ ಇಲ್ಲದಿದ್ದರಿಂದ ಯಾವ ಪರಿಣಾಮವನ್ನೂ ಬೀರಲಿಲ್ಲ. ವಿಜಯೇಂದ್ರ ಇಂಥದೊಂದು ಯಾತ್ರೆ ಮಾಡಿದ್ದರು ಎನ್ನುವುದು ಬಿಜೆಪಿಯಲ್ಲೇ ಹಲವರಿಗೆ ನೆನಪಿಲ್ಲ.
ಇವಲ್ಲದೆಯೂ ಬಿಜೆಪಿಯ ಜೋಡೆತ್ತುಗಳಾಗಿ ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಒಂದೇ ಒಂದು ದೊಡ್ಡ ಹೋರಾಟ ಮಾಡಿಲ್ಲ. ರಾಜ್ಯ ಸರಕಾರಕ್ಕೆ ನಡುಕ ಹುಟ್ಟಿಸಿಲ್ಲ. ರಾಜ್ಯ ಸರಕಾರ ತನ್ನ ತೀರ್ಮಾನವನ್ನು ಬದಲಿಸಿಕೊಳ್ಳುವಂತೆ ಬಿಸಿ ಮುಟ್ಟಿಸಿಲ್ಲ. ಸದ್ಯ ‘ರಾಜ್ಯದಲ್ಲಿ ಪ್ರತಿಪಕ್ಷ ಇದೆ, ನಾವು ಎಚ್ಚರದಿಂದ ಇರಬೇಕು, ಬಿಜೆಪಿಯವರು ನಮ್ಮನ್ನು ಬಿಡುವುದಿಲ್ಲ ಎನ್ನುವ ಭಯ’ ಆಡಳಿತ ನಡೆಸುತ್ತಿರುವ ಕಾಂಗ್ರೆಸಿಗೆ ಎಳ್ಳಷ್ಟೂ ಇದ್ದಂತಿಲ್ಲ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರಕ್ಕೆ ಬರುವುದಾದರೆ ಮುಡಾ ಪ್ರಕರಣವೇ ಕಡೆ. ಆ ನಂತರ ಎರಡೂ ಪಕ್ಷಗಳು ಒಂದೇ ಒಂದು ಜಂಟಿ ಹೋರಾಟ ಮಾಡಿಲ್ಲ. ಜಂಟಿ ಪತ್ರಿಕಾಗೋಷ್ಠಿ ನಡೆಸಿಲ್ಲ. ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಜೆಡಿಎಸ್ ನಾಯಕರಿಗೆ ಬಿಡದಿ ಬಿಟ್ಟು ಬೇರೆ ಸಮಸ್ಯೆ ಗೊತ್ತಿಲ್ಲ. ಬಿಜೆಪಿಯವರಿಗೆ ಬಿಡದಿ ಸಮಸ್ಯೆ ಬೇಕಾಗಿಲ್ಲ. ಇದು ಮೈತ್ರಿಪಕ್ಷಗಳ ನಡುವಿನ ‘ಸುಮಧುರ ಬಾಂಧವ್ಯ’ ಹೇಗಿದೆ ಎಂಬುದರ ಚಿಕ್ಕ ಉದಾಹರಣೆ.
ಇದಕ್ಕಿಂತ ಜಾಸ್ತಿ ತಿಳಿದುಕೊಳ್ಳಬೇಕು ಎಂದರೆ ಇತ್ತೀಚೆಗೆ ಹಾಸನದ ಪ್ರೀತಂ ಗೌಡ ಹೇಳಿಕೆಯನ್ನು ಗಮನಿಸಬೇಕು. ‘ಜೆಡಿಎಸ್ ಬಳಿ ಇರುವುದೇ 18 ಶಾಸಕರು, ಅವರಿಗೆ 70ರಿಂದ 80 ಸೀಟು ಬೇಕಂತೆ, ಪ್ರತಿದಿನ ಲಾಟರಿ ಹೊಡೆಯಲ್ಲ’ ಎಂದಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿಯನ್ನು ಹಾಕಿ ಬಿಜೆಪಿಯ ನಿಷ್ಠೆಯನ್ನು ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಹಾಗೂ ಅಡ್ಡಮತದಾನಕ್ಕೆ ವಿಜಯೇಂದ್ರ ನಾಯಕತ್ವದ ವೈಫಲ್ಯವೇ ಕಾರಣ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡಿಗೆ ಮುಟ್ಟಿಸಿದ ಹೊತ್ತಿನಲ್ಲಿ ಪ್ರೀತಂಗೌಡ ಈ ರೀತಿ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಆಪ್ತನ ಹೇಳಿಕೆಗೆ ವಿಶೇಷ ಕಾರಣ ಇಲ್ಲ ಎನ್ನಬಹುದೇ?
ಇನ್ನೊಂದೆಡೆ ಬಿಡದಿ ವಿಷಯದಲ್ಲಿ ಬಿಜೆಪಿ ನಮ್ಮನ್ನು ಬೆಂಬಲಿಸುತ್ತಿಲ್ಲ ಎಂದು ಕುಮಾರಸ್ವಾಮಿ ಬೇಜಾರು ಮಾಡಿಕೊಂಡಿಲ್ಲ ಎಂದು ಹೇಳಬಹುದೇ? ಬಿಡದಿ ಬಿಕ್ಕಟ್ಟು ಕಾಂಗ್ರೆಸ್ ಅನ್ನು ಒಂದು ರೀತಿ ಬಾಧಿಸುತ್ತಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಇನ್ನೊಂದು ರೀತಿಯ ಸಮಸ್ಯೆಯನ್ನು ತಂದೊಡ್ಡಿದೆ.
ಈ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಯುದ್ಧವಾದರೆ ಬಿಜೆಪಿ ಮತ್ತು ಜೆಡಿಎಸ್ ನಡುವಿನದು ಶೀತಲ ಸಮರ.
ಎದುರಿನಿಂದ ಬರುವ ಶತ್ರುವಿನ ಜೊತೆ ಹೋರಾಡುವುದು ಸುಲಭ. ಬೆನ್ನಹಿಂದೆ ಅಥವಾ ಬಗಲಲ್ಲೇ ಇರುವ ವೈರಿಯ ಜೊತೆಗಿನ ಸೆಣೆಸಾಟ ಬಲು ಕಷ್ಟ. ಯಾರು ಯಾರಿಗೆ ಯಾವಾಗ ಹೇಗೆ ಇರಿಯುತ್ತಾರೆ ಎನ್ನುವುದನ್ನು ಅಂದಾಜು ಮಾಡುವುದು ಇನ್ನೂ ಕಷ್ಟ. ವಿಜಯೇಂದ್ರ ಬಿಡದಿ ವಿಷಯದಲ್ಲಿ ಕುಮಾರಸ್ವಾಮಿಗೆ ಬೆಂಬಲ ನೀಡಲಿಲ್ಲ. ಕುಮಾರಸ್ವಾಮಿ ವಿಧಾನ ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಹಾಕಿ ವಿಜಯೇಂದ್ರ ವಿಚಲಿತನಾಗುವಂತೆ ಮಾಡಿದರು. ಡಿ.ಕೆ. ಶಿವಕುಮಾರ್ ಜೊತೆ ವ್ಯವಹಾರಿಕ ಸಂಬಂಧ ಇಲ್ಲ ಎಂದು ಸ್ಪಷ್ಟೀಕರಣ ಕೊಡುವ ವಾತಾವರಣ ಸೃಷ್ಟಿ ಮಾಡಿದರು. ಒಟ್ಟಿನಲ್ಲಿ ಎರಡೂ ಪ್ರತಿಪಕ್ಷಗಳು ಆಡಳಿತ ಪಕ್ಷದ ಎಡೆಮುರಿ ಕಟ್ಟುವ ಬದಲು ತಾವೇ ಬಡಿದಾಡಿಕೊಳ್ಳುತ್ತಿವೆ.
ಸಾರ್ವಜನಿಕ ಜೀವನದಲ್ಲಿ ಮತ್ತು ವಿಶೇಷವಾಗಿ ರಾಜಕಾರಣದಲ್ಲಿ ಕೆಲವೊಮ್ಮೆ ಪ್ರಯತ್ನ ಮಾಡಿಯೂ ಫಲ ಸಿಗದಿರುವ ಸಾಧ್ಯತೆ ಇರುತ್ತದೆ. ಅಂಥ ಪ್ರಯತ್ನಗಳಿಗೆ ಫಲ ಸಿಗದಿದ್ದರೂ ಪ್ರಶಂಸೆಯಾದರೂ ಪ್ರಾಪ್ತಿಯಾಗುತ್ತದೆ. ಆದರೆ ಪ್ರಯತ್ನವನ್ನೇ ಮಾಡದಿದ್ದರೆ? ಅಂಥವರನ್ನು ಆರ್. ಅಶೋಕ್ ಮತ್ತು ಬಿ.ವೈ .ವಿಜಯೆಂದ್ರ ಎನ್ನಬೇಕಾಗುತ್ತದೆ. ಬರ ತೀವ್ರವಾಗುತ್ತಿರುವ ಹೊತ್ತಿನಲ್ಲಾದರೂ ಇವರಿಗೆ ಬಡಿದಿರುವ ಗರ ಬಿಡಬೇಕಾಗಿದೆ.
► ಮಂತ್ರಿಯಿಂದ ಮೇಯರ್!
ಕೃಷಿ-ಕಂದಾಯ ಸಚಿವರಾಗಿ ಕೃಷ್ಣಬೈರೇಗೌಡ ಮೆಚ್ಚುಗೆ ಗಳಿಸಿದ್ದರು. ಹಣಕಾಸು ಖಾತೆ ಕೊಟ್ಟರೂ ನಿಭಾಯಿಸಬಲ್ಲ ನಾಯಕ ಎಂಬ ಭರವಸೆ ಹುಟ್ಟಿಸಿದ್ದರು. ಅಷ್ಟೆಯೇಕೆ, ಭವಿಷ್ಯದ ಒಕ್ಕಲಿಗರ ನಾಯಕ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಅವರಿಗೆ ಸಿಕ್ಕಿದ್ದು ಬೆಂಗಳೂರು ಅಭಿವೃದ್ಧಿ ಖಾತೆ. ಅದೂ ಬೆಂಗಳೂರಿನ ಅಭಿವೃದ್ಧಿಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವ ಬಿಡಿಎ ಹಾಗೂ ಬಿಎಂಆರ್ ಡಿಎ ಹೊರತುಪಡಿಸಿ ಜಿಬಿಎಗಷ್ಟೇ ಸೀಮಿತವಾದ ಖಾತೆ.
ಸಮಗ್ರವಾದ ಖಾತೆ ಸಿಕ್ಕಿಲ್ಲ ಎಂದು ಮುನಿದಿದ್ದ ಕೃಷ್ಣಬೈರೇಗೌಡ ಅವರಿಗೆ ತಡವಾಗಿ ಬಿಡಿಎ ಅಥವಾ ಬಿಎಂಆರ್ ಡಿಎ ಪೈಕಿ ಯಾವುದಾದರೂ ಒಂದು ಸಿಗಬಹುದು ಎನ್ನಲಾಗುತ್ತಿತ್ತು. ಆದರೆ ಈಗಿನ ಮಾಹಿತಿಗಳ ಪ್ರಕಾರ ಅವರು ಜಿಬಿಎಗೆ ಮಾತ್ರ ಸೀಮಿತರಾಗಬೇಕಿದೆ. ಇದರಿಂದಾಗಿ ಮಂತ್ರಿಯಾಗಿದ್ದವರನ್ನು ಮೇಯರ್ ಮಾಡಿದ ಕೀರ್ತಿ ನಮ್ಮವರದ್ದು ಎನ್ನುವ ಮಾತುಗಳು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿಬರುತ್ತಿವೆ.
► ಮುನಿಯಪ್ಪ ಮುನಿಸು
ಇಡೀ ಸಂಪುಟದಲ್ಲಿ ತಾನೇ ಹಿರಿಯ ಸಚಿವ, ಎಡಗೈ ದಲಿತರ ಪೈಕಿ ಮುಂಚೂಣಿ ನಾಯಕ, ಆದರೂ ತಮ್ಮನ್ನು ಕಡೆಗಣಿಸಿದ್ದಾರೆ ಎನ್ನುವುದು ಕೆ.ಎಚ್. ಮುನಿಯಪ್ಪ ಅಳಲು. ಆಹಾರ ಖಾತೆ ಬದಲು ಸಮಾಜ ಕಲ್ಯಾಣ ಖಾತೆ ಕೊಡಿ ಎನ್ನುವ ಹಳೆಯ ಬೇಡಿಕೆಯನ್ನು ಹೊಸದಾಗಿ ಹೈಕಮಾಂಡ್ ಮುಂದಿಟ್ಟಿದ್ದಾರಂತೆ. ಇದರ ನಡುವೆ ಎಡಗೈ ಪಂಗಡದ ಇನ್ನೊಬ್ಬರನ್ನು ಮಂತ್ರಿ ಮಾಡುತ್ತಾರೋ ಇಲ್ಲವೋ ಎನ್ನುವ ಅನುಮಾನ ಶುರುವಾಗಿದೆ. ಏಕೆಂದರೆ ಮೊದಲ ಸಲ ಗೆದ್ದವರನ್ನು ಮಂತ್ರಿ ಮಾಡಲ್ಲ ಎನ್ನುವ ನಿರ್ಧಾರಕ್ಕೆ ಬಂದರೆ ಮಾಯಕೊಂಡದ ಕೆ.ಎಸ್. ಬಸವಂತಪ್ಪ ಮತ್ತು ನೆಲಮಂಗಲದ ಎನ್.ಶ್ರೀನಿವಾಸ್ ಅವರನ್ನು ಪರಿಗಣಿಸಲಾಗದು. ರೂಪಕಲಾ ಎರಡು ಸಲ ಗೆದ್ದಿದ್ದರಾದರೂ ಅವರ ತಂದೆ ಕೆ.ಎಚ್. ಮುನಿಯಪ್ಪ ಮಂತ್ರಿಯಾಗಿರುವುದರಿಂದ ಒಂದೇ ಮನೆಗೆ ಮತ್ತೊಂದು ಮಂತ್ರಿ ಸ್ಥಾನ ಕೊಡಲಾಗದು. ಹಾಗಾದರೆ ಮತ್ತೆ ಆರ್. ಬಿ. ತಿಮ್ಮಾಪುರ್ ಸಂಪುಟ ಸೇರಬಹುದು.
ಆಫ್ ದಿ ರೆಕಾರ್ಡ್!
ಹೊಸದಾಗಿ ವಿಧಾನ ಪರಿಷತ್ ಸದಸ್ಯರಾದ ಒಬ್ಬರು ಪ್ರಮಾಣವಚನ ಸ್ವೀಕರಿಸಲು ಮೂರು ದಿನ ಸಿದ್ಧತೆ ನಡೆಸಿದ್ದಾರಂತೆ. ಮೂರು ದಿನದಲ್ಲಿ ನೂರಾರು ಕೋಟಿ ರೂಪಾಯಿ ವ್ಯವಹಾರವನ್ನು ನೀರು ಕುಡಿದಂತೆ ನಿಭಾಯಿಸುವ ಸಾಮರ್ಥ್ಯವುಳ್ಳ ಅವರು ‘ನಾನು?’ ಎಂದು ಆರಂಭಿಸಿ ವಾಕ್ಯ ಮುಗಿಸುವಷ್ಟರಲ್ಲಿ ಹೈರಾಣಾಗಿಬಿಟ್ಟಿದ್ದರಂತೆ. ಆದರೂ ತಾಳ್ಮೆ ಕಳೆದುಕೊಳ್ಳದೆ ಅಭ್ಯಾಸ ಮಾಡಿದ್ದರಂತೆ. ಅವರ ‘ವಿನಯ’ವನ್ನು ಮೆಚ್ಚಲೇಬೇಕು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.






