ಬಿ.ಎಲ್. ಸಂತೋಷ್ ಕೂಡ ದೇವೇಗೌಡರಂತೆ!

ಎಚ್.ಡಿ. ದೇವೇಗೌಡರು ಗೊತ್ತಲ್ವಾ? ಅವರಿಗೆ ರಾಜಕಾರಣವೇ ಉಸಿರಾಟ. ಅವರು ಸಂದರ್ಭಕ್ಕಾಗಿ ಕಾಯುತ್ತಾರೆ. ಅಥವಾ ಒದಗಿ ಬಂದ ಸಂದರ್ಭಕ್ಕೆ ತಕ್ಕಂಥ ದಾಳ ಉರುಳಿಸುತ್ತಾರೆ. ಇದು ಕೂಡ ಅಂಥದ್ದೇ ಒಂದು ಉದಾಹರಣೆ. ಒಮ್ಮೆ ದೇವೇಗೌಡ, ಎಂ.ಪಿ. ಪ್ರಕಾಶ್ ಮತ್ತು ಪಿ.ಜಿ.ಆರ್. ಸಿಂಧ್ಯಾ ವಿಧಾನಸೌಧದ ಲಿಫ್ಟ್ ನಲ್ಲಿ ಮೇಲೆ ಹೋಗುತ್ತಿದ್ದರು. ವಿಶೇಷ ಎಂದರೆ ರಾಮಕೃಷ್ಣ ಹೆಗಡೆ ಕ್ಯಾಂಪಿನ ನೀಲಿಗಣ್ಣಿನ ಹುಡುಗ ಜೀವರಾಜ ಆಳ್ವಾ ಕೂಡ ಇದ್ದರು. ಇದೇ ಸರಿಯಾದ ಸಮಯ ಎಂದೆಣಿಸಿದ ದೇವೇಗೌಡರು ಮಾತು ಶುರು ಮಾಡಿದರು. ‘ಆಳ್ವಾ, ನೀನು ನಮ್ಮ ಒಕ್ಕಲಿಗರ ಹುಡುಗ, ಮುಂದೆ ಒಕ್ಕಲಿಗರ ನಾಯಕ ಆಗಬೇಕು. ಸಿಎಂ ಆಗಬೇಕು’ ಎಂದರು. ಯಾರೂ ಏನನ್ನೂ ಮಾತನಾಡಲಿಲ್ಲ. ದೇವೇಗೌಡರು ಮತ್ತೆ ‘ಆಳ್ವಾ ನೀನು ಬೆಳೀಬೇಕಪ್ಪ? ನಿನಗೆ ನನ್ನ ಮೇಲೆ ವಿಶ್ವಾಸನೇ ಇಲ್ಲ’ ಎಂದರು. ಆಗಲೂ ಮೌನ. ಇಷ್ಟು ಹೇಳಿದರೂ ಯಾರೊಬ್ಬರೂ ಕಮಕ್ ಗಿಮಕ್ ಎನ್ನುತ್ತಿಲ್ಲ ಎಂದರೆ ಈ ಆರ್ಡಿನರಿ ಬಾಣ ಕೆಲಸ ಮಾಡುತ್ತಿಲ್ಲ ಎಂದರಿತ ದೇವೇಗೌಡರು ತಮ್ಮ ಬತ್ತಳಿಕೆಯಲ್ಲಿ ಸದಾ ಸನ್ನದ್ಧವಾಗಿರುವ ಭಾವನಾತ್ಮಕ ಬಾಣ ಕೈಗೆತ್ತಿಕೊಂಡರು. ‘ಈ ಲಿಫ್ಟ್ ಮೇಲೆ ಆಣೆ?’ ಎಂದರು. ಹಾಗಂದಿದ್ದೇ ತಡ, ‘ಸಾರ್ ದಯವಿಟ್ಟು ಲಿಫ್ಟ್ ಮೇಲೆ ಮಾತ್ರ ಆಣೆ ಮಾಡಬೇಡಿ. ಮೂರನೇ ಮಹಡಿಗೆ ಬಂದಿದ್ದೇವೆ, ಈಗೇನಾದ್ರೂ ಲಿಫ್ಟ್ ಕೈಕೊಟ್ಟರೆ ಕೆಳಗೆ ಬಿದ್ದು ಎಲ್ಲರೂ ಒಟ್ಟಿಗೆ ಸತ್ತೋಗ್ತೀವಿ’ ಎಂದು ಕೈಹಿಡಿದುಕೊಂಡರಂತೆ ಜೀವರಾಜ್ ಆಳ್ವಾ. ಅಷ್ಟರಲ್ಲಿ ಲಿಫ್ಟ್ ಬಾಗಿಲು ತೆರೆದಿದೆ.
ಈ ಘಟನೆಯನ್ನು ಜೀವರಾಜ್ ಆಳ್ವಾ ಕಿಕ್ಕಿರಿದು ತುಂಬಿದ್ದ ಮೈಸೂರಿನ ಟೌನ್ಹಾಲ್ನಲ್ಲಿ ರಸವತ್ತಾಗಿ ವರ್ಣಿಸುತ್ತಿದ್ದರೆ ಸ್ವತಃ ದೇವೇಗೌಡರ ಕಟ್ಟಾ ಅಭಿಮಾನಿಗಳು ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. ದೇವೇಗೌಡರು ಆಗಾಗ ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಸಿದ್ದರಾಮಯ್ಯ, ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ. ಪ್ರಕಾಶ್ ಮತ್ತು ತನಗೆ ಸಿಎಂ ಆಗುವ ಕನಸುಗಳನ್ನು ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದರು ಎನ್ನುವುದನ್ನು ಆಳ್ವಾ ಹೀಗೆ ವಿವರಿಸಿದ್ದರು.
ಈಗ ರಾಜ್ಯ ಬಿಜೆಪಿ ನಾಯಕರು ದೇವೇಗೌಡರ ಜಾಗದಲ್ಲಿ ಬಿ.ಎಲ್. ಸಂತೋಷ್ ಅವರನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಸಂತೋಷ್ ಕೂಡ ಕಲರ್ ಕಲರ್ ಕನಸು ಬಿತ್ತುತ್ತಿದ್ದಾರೆ. ಕೆಲವರಿಗೆ ರಾಜ್ಯಾಧ್ಯಕ್ಷರ ಪಟ್ಟ ಕಟ್ಟುವ, ಕೆಲವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ, ಕೆಲವರನ್ನು ಜನಾಂಗದ ಜನನಾಯಕರನ್ನಾಗಿ ಬೆಳೆಸುವ ಕನಸುಗಳನ್ನು ಕಟ್ಟಿಕೊಡುತ್ತಿದ್ದಾರೆ. ಸಂತೋಷ್ ಮಾತುಗಳಿಂದ ಭವಿಷ್ಯವನ್ನು ನೆನೆದು ಪುಳಕಿತರಾಗಿರುವ ರಾಜ್ಯ ನಾಯಕರು ಕತ್ತಿ ಹಿಡಿದು ಹೋರಾಟಕ್ಕಿಳಿದಿದ್ದಾರೆ. ಅವರ ಪೈಕಿ ಕೆಲವರಿಗೆ ಶತ್ರುಗಳು ಯಾರೆಂದೇ ಗೊತ್ತಿಲ್ಲ. ಕೆಲವರಿಗೆ ಶತ್ರುಗಳ ಶಕ್ತಿ ಏನೆಂದೇ ಗೊತ್ತಿಲ್ಲ. ಒಟ್ಟಿನಲ್ಲಿ ಜೀ ಉರುಳಿಸುತ್ತಿರುವ ದಾಳಕ್ಕೆ ಕಮಲದ ದಳಗಳು ತಳಮಳಗೊಳ್ಳುತ್ತಿವೆ.
ಬಿಜೆಪಿಯ ತ್ರಿಮೂರ್ತಿಗಳು!
ರಾಜ್ಯ ಬಿಜೆಪಿಯ ಒಳ ಜಗಳ ಎಲ್ಲಾ ಎಲ್ಲೆಗಳನ್ನು ಮೀರಿದೆ. ಪರಿಣಾಮವಾಗಿ ಅಧ್ಯಕ್ಷಗಾದಿಗೆ ಚುನಾವಣೆ ನಡೆದ ನಂತರವೂ ಸಂಘರ್ಷ ನಿಲ್ಲುವ ಸಾಧ್ಯತೆಗಳಿಲ್ಲ. ಸಮಸ್ಯೆಗೆ ರಾಜ್ಯ ನಾಯಕರ ವೈಯಕ್ತಿಕ ದ್ವೇಷ, ದರ್ಪ, ದುರಾಸೆ, ಅಸೂಯೆಗಳು ಮಾತ್ರವೇ ಕಾರಣಗಳಲ್ಲ. ಹೈಕಮಾಂಡಿನ ನಿಲುವು-ನಿರ್ಲ್ಯಕ್ಷಗಳ ಪಾತ್ರವೂ ಇದೆ. ಇವೆಲ್ಲಕ್ಕೂ ಮಿಗಿಲಾದುದು ತೊಡೆ ಚಿವುಟಿ ತೊಟ್ಟಿಲು ತೂಗುವ ಸೂತ್ರಧಾರರ ಪಾತ್ರ. ಅವರು ಯಾರು ಎನ್ನುವುದು ಈಗ ಎಲ್ಲರಿಗೂ ತಿಳಿದಿದೆ. ಅವರೇ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ ಮತ್ತು ಬಸವರಾಜ ಬೊಮ್ಮಾಯಿ. ಇವರನ್ನು ರಾಜ್ಯ ಬಿಜೆಪಿ ನಾಯಕರು ‘ತ್ರಿಮೂರ್ತಿ’ ಗಳೆಂದು ಬಣ್ಣಿಸುತ್ತಾರೆ. ಈ ಪೈಕಿ ಸಂತೋಷ್ ಪಾತ್ರ ಸಿಕ್ಕಾಪಟ್ಟೆಯಂತೆ!
ಹುಲ್ಲಿನ ಮೆದೆಗೆ ಬೆಂಕಿ ಹಚ್ಚುವವರ ರಾಜಕೀಯ
ಒಂದೆಡೆ ವಿಜಯೇಂದ್ರ, ರೇಣುಕಾಚಾರ್ಯ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಇತ್ಯಾದಿ ಇತ್ಯಾದಿ. ಇನ್ನೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಡಾ. ಸುಧಾಕರ್ ವಗೈರೆ ವಗೈರೆ. ಎರಡೂ ಕಡೆಯವರು ಸೇರಿ ಹರಾಜು ಹಾಕುತ್ತಿ ರುವುದು ಮಾತ್ರ ಬಿಜೆಪಿಯ ಮಾನವನ್ನು. ಕೆಲ ಹಳ್ಳಿಗಳಲ್ಲಿ ಇಸ್ಪೀಟ್ ಆಟ ಆಡಿಸುವವರು, ಆಗದವರ ಹುಲ್ಲಿನ ಮೆದೆಗೆ ಬೆಂಕಿ ಹಚ್ಚುವವರು, ಮಾಡಬೇಕಿರುವ ಕೆಲಸವನ್ನು ಬಿಟ್ಟು ಚೋಟು ಗೋಡೆ ಮೇಲೆ ಕೂತು ಮೋಟು ಬೀಡಿ ಸೇದುವವರು ಏನೇನೋ ಕಾರಣಕ್ಕೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಅವರು ಮಾಡುವ ದರ್ಬಾರು, ಕಿತ್ತೋದ ರಾಜಕೀಯ, ರಾಜಿಫಜೀತಿಗಳು, ಅನವಶ್ಯಕ ವಿವಾದಗಳು ಹೇಗಿರುತ್ತವೆ ಎಂದರೆ ಥೇಟು ಈಗ ರಾಜ್ಯ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿವೆಯಲ್ಲ, ಹಾಗೇ ಎನ್ನುತ್ತಾರೆ ಆ ಪಕ್ಷದ ಹಿರಿಯ ನಾಯಕರೊಬ್ಬರು.
ವಿಜಯೇಂದ್ರಗೆ ಪಟ್ಟ ಕಟ್ಟಿಟ್ಟ ಬುತ್ತಿ
ಭಿನ್ನ ಬಣದ ನಾಯಕರು ಎಷ್ಟೇ ಮೈಪರಚಿಕೊಂಡರೂ ವಿಜಯೇಂದ್ರ ಅಧ್ಯಕ್ಷನಾಗುವುದು ಗ್ಯಾರಂಟಿ ಎನ್ನುತ್ತವೆ ದಿಲ್ಲಿ ಮೂಲಗಳು. ಏಕೆಂದರೆ ಅಧ್ಯಕ್ಷಗಾದಿಗೆ ನಡೆಯುವ ಚುನಾವಣೆ ನೆಪಮಾತ್ರ. ಎಲ್ಲವೂ ಪೂರ್ವನಿರ್ಧಾರಿತ. ಮೋದಿಯಿಂದ ಹಿಡಿದು ದಿಲ್ಲಿಯ ಅಷ್ಟೂ ನಾಯಕರಿಗೆ ವಿಜಯೇಂದ್ರ ನಡೆಸುತ್ತಿರುವ ಆಟೋಟಪಗಳು ತಿಳಿದಿವೆ. ಆದರೂ ಯಡಿಯೂರಪ್ಪ ಕಾರಣಕ್ಕೆ ವಿಜಯೇಂದ್ರಗೆ ಪಟ್ಟ ಕಟ್ಟಿಟ್ಟ ಬುತ್ತಿ. ಸದ್ಯಕ್ಕೆ ಅವರನ್ನು ಕಾಡುತ್ತಿರುವುದು ವಿಜಯೇಂದ್ರಗೆ ಅಧ್ಯಕ್ಷಗಾದಿ ಕೊಟ್ಟರೆ ಭಿನ್ನರನ್ನು ಸಮಾಧಾನಪಡಿಸುವುದು ಹೇಗೆ ಎಂಬ ಪ್ರಶ್ನೆ. ಉತ್ತರ ಕಂಡುಕೊಳ್ಳುವ ದೃಷ್ಟಿಯಲ್ಲಿ ಅರವಿಂದ ಲಿಂಬಾವಳಿ ಅವರನ್ನು ದಿಲ್ಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಇನ್ನೂ ಕೆಲವರನ್ನು ಕರೆಸಿ ಮಾತನಾಡಬಹುದು. ವಿಜಯೇಂದ್ರಗೂ ಬುದ್ಧಿವಾದ ಹೇಳಬಹುದು. ಸದ್ಯದ ಮಾಹಿತಿ ಪ್ರಕಾರ ಭಿನ್ನರ ಪೈಕಿ ಒಬ್ಬರಿಗೆ ರಾಷ್ಟ್ರೀಯ ಬಿಜೆಪಿಯಲ್ಲಿ ಪುನರ್ವಸತಿ ದೊರೆತರೂ ಅಚ್ಚರಿಯಿಲ್ಲ.
ವಿರೋಧಿಗಳ ವಿಶ್ವಾಸ ಗಳಿಸದ ವಿಜಯೇಂದ್ರ!
ವಿಜಯೇಂದ್ರರ ಅನನುಭವ, ಅವಸರ, ತಾನು ಮಾಡಿದ್ದೇ ಸರಿ ಎಂಬ ಧೋರಣೆ, ತನ್ನ ಜೊತೆಗಿರುವವರು ಮಾತ್ರ ಪಕ್ಷನಿಷ್ಠರೆಂಬ ಹುಸಿ ನಂಬಿಕೆಗಳು ಕೂಡ ರಾಜ್ಯ ಬಿಜೆಪಿಯ ಇಂದಿನ ಶೋಚನೀಯ ಸ್ಥಿತಿಗೆ ಪ್ರಮುಖ ಕಾರಣಗಳು. ಇವೆಲ್ಲವನ್ನೂ ಮೀರಿ ಅವರು ಮುಂದೆ ಇದೇ ವಿರೋಧಿಗಳ ಜೊತೆ ಕೆಲಸ ಮಾಡಬೇಕಿದೆ. ಆದರೂ ಮಾತಿನಲ್ಲಿ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ ಎನ್ನುವ ಅವರು ವಿರೋಧಿಗಳ ವಿಶ್ವಾಸ ಗಳಿಸಲು ಸಿದ್ಧರಿಲ್ಲ. ಅದಕ್ಕೆ ಅಡ್ಡ ಬರುತ್ತಿರುವುದು ಪ್ರತಿಷ್ಠೆ. ನಾನೇಕೆ ಅವರಿಗೆ ಕಾಲ್ ಮಾಡಲಿ, ಅವರನ್ನೇಕೆ ಕೇಳಲಿ, ನಮ್ಮಪ್ಪನನ್ನು ಬೈದವರ ಮನೆ ಬಾಗಿಲಿಗೆ ಏಕೆ ಹೋಗಲಿ ಎಂಬ ಚಿಲ್ಲರೆ ತಕರಾರುಗಳು. ವಿಪರ್ಯಾಸ ಏನೆಂದರೆ ಇದೇ ಅಪ್ಪನನ್ನು ಅನ್ನಬಾರದ ಪದಗಳಿಂದ ಬೈದ, ಅಧಿಕಾರ ಕೊಡದ ದೇವೇಗೌಡ, ಕುಮಾರಸ್ವಾಮಿ ಜೊತೆಗೆ ಸಮಸ್ಯೆ ಇಲ್ಲ. ಬೇಕಿದ್ದರೆ ಅವರ ಮನೆಗೆ ಹೋಗುತ್ತಾರೆ, ಕೈ-ಕಾಲು ಹಿಡಿಯುತ್ತಾರೆ.