Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಬಿಜೆಪಿಗೆ ಹಂಸ ಕ್ಷೀರ ನ್ಯಾಯ ಗೊತ್ತಾ?

ಬಿಜೆಪಿಗೆ ಹಂಸ ಕ್ಷೀರ ನ್ಯಾಯ ಗೊತ್ತಾ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ15 Dec 2025 11:51 AM IST
share
ಬಿಜೆಪಿಗೆ ಹಂಸ ಕ್ಷೀರ ನ್ಯಾಯ ಗೊತ್ತಾ?

ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಹಲವು ಗಂಭೀರ ವಿಷಯಗಳು ಚರ್ಚೆಯಾಗಬೇಕಿತ್ತು. ಕಡೆಪಕ್ಷ ರೂಪಾಯಿ ಮೌಲ್ಯ ಕುಸಿತ, ಇಂಡಿಗೊ ಅವ್ಯವಸ್ಥೆ ಮತ್ತು ಮತಗಳ್ಳತನದ ಬಗ್ಗೆಯಾದರೂ ಚರ್ಚೆಯಾಗಬೇಕಿತ್ತು. ಆದರೆ ಚಳಿಗಾಲದ ಅಧಿವೇಶನದ ಮೊದಲ ದಿನ ಬಿಸಿಬಿಸಿ ಚರ್ಚೆಯಾಗಿದ್ದು ವಂದೇ ಮಾತರಂ ಬಗ್ಗೆ.

ವಂದೇ ಮಾತರಂ ಗೀತೆ ಕುರಿತ ಇತಿಹಾಸ ಏನು? ಗೀತೆ ಮೊದಲು (1875) ಇದ್ದದ್ದೇ ಎರಡು ಪ್ಯಾರಾ. ಆರು ವರ್ಷಗಳ ತರುವಾಯ (1881) ‘ಆನಂದಮಠ’ ಕಾದಂಬರಿಯ ಭಾಗವಾಗಿ ಪ್ರಕಟವಾದಾಗ ದೊಡ್ಡದಾಯಿತು. ಮೊದಲೆರಡು ಪ್ಯಾರಾಗಳಲ್ಲಿ ಇಲ್ಲದ ದೇವಿ ಸ್ತುತಿ ನಂತರದ ಪ್ಯಾರಾಗಳಲ್ಲಿ ಗೋಚರಿಸಿದ್ದವು. ಅದು ಬ್ರಿಟಿಷರ ವಿರುದ್ಧ ಜನಜಾಗೃತಿ ಮೊಳಕೆಯೊಡೆಯುತ್ತಿದ್ದ ಕಾಲ. ‘ಆನಂದಮಠ’ ನವಾಬನ ಆಳ್ವಿಕೆ ವಿರುದ್ಧ ಬರೆಯಲಾಗಿದ್ದ ಕಾದಂಬರಿ. ಇದರಿಂದಾಗಿ ವಂದೇ ಮಾತರಂ ಗೀತೆ ಕ್ರಮೇಣ ಸ್ವಾತಂತ್ರ್ಯದ ಹೋರಾಟ ಗೀತೆಯಾಗಿ, ದೇಶಭಕ್ತಿ ಗೀತೆಯಾಗಿ ಕೂಡ ಪ್ರಖ್ಯಾತಿ ಪಡೆಯಿತು. 1920ರ ಬಳಿಕ ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ಕ್ರಾಂತಿ ಗೀತೆಯಾಗಿ ಹಾಡತೊಡಗಿತು.

ಕ್ರಮೇಣ ‘ಗೀತೆಯಲ್ಲಿ ದುರ್ಗಾದೇವಿ ಉಲ್ಲೇಖ ಇರುವುದರಿಂದ, ಅದು ಒಂದು ಧರ್ಮಕ್ಕೆ ಸೇರಿದ ಗೀತೆ ಎನಿಸಿಕೊಳ್ಳುತ್ತದೆ, ದೇಶದ ಗೀತೆಯಾಗುವುದಿಲ್ಲ’ ಎನ್ನುವ ಅಪಸ್ವರಗಳೂ ಕೇಳಿಬಂದವು. 1937ರಲ್ಲಿ ನಡೆದ ಮುಸ್ಲಿಮ್ ಲೀಗ್ ಸಮ್ಮೇಳನ ‘ವಂದೇ ಮಾತರಂ ಗೀತೆ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಕವಾಗುವ ಬದಲು ಹಿಂದೂ ರಾಷ್ಟ್ರೀಯವಾದ ಪೊರೆಯುತ್ತಿದೆ’ ಎಂದು ಹೇಳಿತು. ಆಗ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್, ಮೌಲಾನಾ ಆಝಾದ್ ಮತ್ತಿತರರಿದ್ದ ಸಮಿತಿಯು ರವೀಂದ್ರನಾಥ್ ಟಾಗೋರ್ ಬಳಿ ಪರಿಹಾರ ಸೂಚಿಸುವಂತೆ ಕೇಳಿಕೊಂಡಿತು. ಅವರ ಬಳಿಯೇ ಪರಿಹಾರ ಕೇಳಿದ್ದೇಕೆಂದರೆ 1896ರಲ್ಲಿ ಮೊತ್ತ ಮೊದಲ ಬಾರಿಗೆ ಕಾಂಗ್ರೆಸ್ ಸಮಾವೇಶದಲ್ಲಿ ವಂದೇ ಮಾತರಂ ಗೀತೆ ಹಾಡಿದವರು ಇದೇ ರವೀಂದ್ರನಾಥ್ ಟಾಗೋರ್.

‘ದೇಶಕ್ಕಾಗಿ ನಮಿಸುವ, ದೇಶವನ್ನು ಸ್ತುತಿಸುವ ಕೆಲಸ ಮೊದಲೆರಡು ಪ್ಯಾರಾಗಳಲ್ಲಿ ಆಗಿದೆ. ಉಳಿದ ಚರಣಗಳಲ್ಲಿ ದುರ್ಗಾದೇವಿಯ ಬಗ್ಗೆ ಉಲ್ಲೇಖವಿದೆ, ಆಕೆಯ ಶಕ್ತಿ ಮತ್ತು ಶಿಕ್ಷಿಸುವ ಸಂಕೇತಗಳಿವೆ. ಇದು ಜಾತ್ಯತೀತ ಪರಿಕಲ್ಪನೆಗೆ ಮತ್ತು ಅಹಿಂಸಾ ಹೋರಾಟದ ದಾರಿಗೆ ವಿರುದ್ಧವಾದುದು. ಹಾಗಾಗಿ ವಿವಾದವಾಗುವ ಅವಕಾಶವನ್ನು ಲೆಕ್ಕಿಸದೆ ಮೊದಲೆರಡು ಪ್ಯಾರಾವನ್ನು ಉಳಿಸಿಕೊಳ್ಳುವುದು ಉಚಿತವಾದ ಕ್ರಮವಾಗಲಿದೆ’ ಎನ್ನುವುದು ರವೀಂದ್ರನಾಥ್ ಟಾಗೋರ್ ಅವರ ಖಚಿತ ಅಭಿಪ್ರಾಯವಾಗಿತ್ತು. ಆಗ ಸಮಿತಿ ಧರ್ಮ ಸಂಕಟಕ್ಕೆ ಸಿಲುಕಿತು. ರಾಷ್ಟ್ರದ ಏಕತೆಗಾಗಿ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿರುವ ಹೊತ್ತಿನಲ್ಲಿ ಪರಸ್ಪರ ಕಾದಾಟಕ್ಕಿಳಿದರೆ ನಮ್ಮ ಒಡಕು ಬ್ರಿಟಿಷರಿಗೆ ಅಸ್ತ್ರವಾಗುತ್ತದೆ. ಸ್ವಾತಂತ್ರ್ಯ ಲಭಿಸುವುದು ತಡವಾಗುತ್ತದೆ ಎನ್ನುವ ಆತಂಕ ಶುರುವಾಯಿತು. ಈ ಹಿನ್ನೆಲೆಯಲ್ಲಿ ‘ನಮಿಸುವೆ ಮಾತೆಗೆ’ ಎಂಬ ದೇಶಭಕ್ತಿ ಉತ್ತೇಜಿಸುವ ಮೊದಲೆರಡು ಪ್ಯಾರಾಗಳನ್ನು ಮಾತ್ರ ಪರಿಗಣಿಸುವ ತೀರ್ಮಾನಕ್ಕೆ ಬರಲಾಯಿತು. ಅದು ತಾಂತ್ರಿಕವಾಗಿ ಸಮಿತಿಯ ತೀರ್ಮಾನವೇ ಆಗಿದ್ದರೂ ವಾಸ್ತವದಲ್ಲಿ ರವೀಂದ್ರನಾಥ್ ಟಾಗೋರ್ ಅವರ ಸಲಹೆಯನ್ನು ಯಥಾವತ್ತು ಪಾಲಿಸುವುದೇ ಆಗಿತ್ತು.

ವರ್ತಮಾನದಲ್ಲೇನಾಯಿತು?

ವಂದೇ ಮಾತರಂ ಗೀತೆಗೆ 150 ವರ್ಷವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಸಂಸತ್ ಅಧಿವೇಶನದಲ್ಲಿ ಗೀತೆ ಬಗ್ಗೆ ಚರ್ಚೆ ಮಾಡುವುದು ಮೊದಲ ಆದತ್ಯೆಯಾಯಿತು. ಆದರೆ ಈ ವಿಷಯವನ್ನು ಸುಮಾರು 10 ಗಂಟೆ ಚರ್ಚಿಸಿ ದೇಶದ ಜನತೆಗೆ ಕೊಟ್ಟ ಸಂದೇಶ ಏನು? ಒಬ್ಬನೇ ಒಬ್ಬ ಬಿಜೆಪಿ ನಾಯಕ ಸಂಸತ್ತಿನ ಹೊರಗಾಗಲಿ, ಒಳಗಾಗಲಿ ಪೂರ್ತಿ ಗೀತೆಯನ್ನು ಹಾಡಿ, ಓದಿ ದೇಶದ ಜನರಿಗೆ ಅದರೊಳಗಿನ ಹೂರಣ ಏನು ಎಂದು ತಿಳಿಸಲಿಲ್ಲ. ಗೀತೆಯ ಸಾರ, ಆಳ-ಅಗಲಗಳ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿಯ ಅಷ್ಟೂ ನಾಯಕರು ಚರ್ಚೆಯುದ್ದಕ್ಕೂ ಮಾಡಿದ್ದು ಪಂಡಿತ್ ಜವಾಹರಲಾಲ್ ನೆಹರೂ ಅವರ ನಿಂದನೆ, ಮುಹಮ್ಮದ್ ಅಲಿ ಜಿನ್ನಾ ಅವರ ಜಪ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಕುಹಕವನ್ನು.

ನಡೆವವರು ಎಡವದೆ ಕುಳಿತವರು ಎಡವುತ್ತಾರೆಯೇ ಎನ್ನುವ ಮಾತಿನಂತೆ ಆಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದವರು ಅಂದಿನ ಸಂದಿಗ್ಧ ಪರಿಸ್ಥಿತಿ ಗನುಗುಣವಾಗಿ ತೆಗೆದುಕೊಂಡ ನಿರ್ಧಾರಗಳಲ್ಲಿ ತಪ್ಪು-ಒಪ್ಪುಗಳಿರುವುದು ಸಹಜ. ನಾವು ಆ ನಿರ್ಧಾರಗಳನ್ನು ಹೇಗೆ ನೋಡುತ್ತೇವೆ ಎನ್ನುವುದು ಬಹಳ ಮುಖ್ಯ. ಕಾಗೆಗೆ ಎಷ್ಟೇ ಒಳ್ಳೆಯ ಆಹಾರ ಸಿಕ್ಕರೂ ಕಡೆಗದು ಕಸ, ಕಕ್ಕಸ್ಸು, ಕೊಳಕಿಗೆ ಕೊಕ್ಕು ಹಾಕುತ್ತದೆ. ಹಂಸದೆದುರು ಹಾಲುನೀರು ಬರೆಸಿದ ಪಾತ್ರೆಯಿದ್ದರೆ ಅದು ಹಾಲನ್ನು ಕುಡಿದು ನೀರನ್ನು ಹಾಗೇ ಬಿಟ್ಟುಬಿಡುತ್ತದೆ. ಇತಿಹಾಸದಿಂದ ನಾವು ಕಲಿಯಬೇಕಾದದ್ದು ಇದೇ ಹಂಸ ಕ್ಷೀರ ನ್ಯಾಯವನ್ನು ಅಥವಾ ತರ್ಕವನ್ನು.

ವರ್ತಮಾನದ ಸಮಸ್ಯೆಗಳಿಗೆ ಬೆನ್ನು ತೋರಲು ಇತಿಹಾಸ ಮತ್ತು ಪುರಾಣವನ್ನು ಆಶ್ರಯಿಸಿರುವ ಬಿಜೆಪಿ ಇಲ್ಲಿಯವರೆಗೆ ಇತಿಹಾಸದಿಂದ ಹೆಕ್ಕಿರುವ ಧನಾತ್ಮಕ ಸಂಗತಿಗಳು ಯಾವುವು? ಹಾಗೆಯೇ ಈ ದೇಶದ ಭ್ರಾತೃತ್ವಕ್ಕೆ, ಜಾತ್ಯತೀತ ತತ್ವಕ್ಕೆ ಧಕ್ಕೆಯಾಗುವ ವಿಷಯಗಳು ಯಾವುವು ಎನ್ನುವುದನ್ನು ಪಟ್ಟಿ ಮಾಡಿ. ಆಗ ಆ ಪಕ್ಷಕ್ಕೆ ಹಂಸ ಕ್ಷೀರ ನ್ಯಾಯದ ಬಗ್ಗೆ ಗೊತ್ತೇ ಇಲ್ಲ ಅಥವಾ ಬೇಕಾಗಿಲ್ಲ ಎನ್ನುವುದು ಬಹಳ ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಯಾವುದೇ ವಿಷಯವನ್ನು ಅಸ್ಪಷ್ಟವಾಗಿ ಹೇಳುವುದು ಅಥವಾ ಅರ್ಧ ಸತ್ಯವನ್ನು ಹೇಳುವುದು ಕೂಡ ಇತಿಹಾಸಕ್ಕೆ ಬಗೆಯುವ ಅಪಚಾರ. ಇದು ಕೂಡ ಬಿಜೆಪಿಗೆ ಗೊತ್ತೇ ಇಲ್ಲದ ಅಥವಾ ಬೇಕಾಗಿಲ್ಲದ ಸಂಗತಿ.

ಬಂಗಾಳ ಚುನಾವಣೆಗಾಗಿ ಗೀತೆ!

ಇತಿಹಾಸ ಮತ್ತು ಪುರಾಣಗಳನ್ನು ಬಿಜೆಪಿ ಬಳಸಿಕೊಂಡಿದ್ದು, ಬಳಸಿಕೊಳ್ಳುತ್ತಿರುವುದು ಹೀಗೆ. ಧರ್ಮ, ಸಂಸ್ಕೃತಿ ಮತ್ತು ರಾಜಕಾರಣವನ್ನು ಬೆರಸುತ್ತಿರುವುದು ಕೂಡ ಹೀಗೆಯೇ. ಅಯೋಧ್ಯೆಯಿಂದ ಬಂಗಾಳದವರೆಗೆ ಬಿಜೆಪಿ ಬೇರುಗಳು ಇರುವುದೇ ಹೀಗೆ. ಚರ್ಚೆಯ ವೇಳೆ ಪ್ರಿಯಾಂಕಾ ಗಾಂಧಿ ಅವರು ‘ಮುಂದಿನ ವರ್ಷ ಪಶ್ಚಿಮ ಬಂಗಾಳದ ಚುನಾವಣೆ ಬರುತ್ತಿರುವುದರಿಂದ ಬಿಜೆಪಿಗೆ ಈಗ ವಂದೇ ಮಾತರಂ

ನೆನಪಾಗಿದೆ’ ಎಂದು ಮೂದಲಿಸಿದರು. ಪ್ರಿಯಾಂಕಾ ಗಾಂಧಿ ಅವರ ಮಾತನ್ನು ನರೇಂದ್ರ ಮೋದಿ ‘ಬಂಕಿಮ್ ದಾ’ ಎಂದು ಹೇಳುವ ಮೂಲಕ ಅನುಮೋದಿಸಿದರು.

ಹೇಗೆಂದರೆ? ಬಿಜೆಪಿಯ ಗುರಿ ಚುನಾವಣಾ ರಾಜಕೀಯವೇ ಇರಬಹುದು, ಆದರೆ ಅದರ ಮಾತೃ ಸಂಸ್ಥೆ ಆರೆಸ್ಸೆಸ್ನ ಗುರಿ ಸಾಂಸ್ಕೃತಿಕ ರಾಜಕಾರಣ. ಅದೇ ಕಾರಣಕ್ಕೆ ಸಾಂಸ್ಕೃತಿಕವಾಗಿ ಸಂಪತ್ಭರಿತ ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಳ್ಳಲು ಆರೆಸ್ಸೆಸ್ ಬಹಳ ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ. ಅಲ್ಲಿನ ಸಾಂಸ್ಕೃತಿಕ ನಾಯಕರಾದ ಸ್ವಾಮಿ ವಿವೇಕಾನಂದ, ರವೀಂದ್ರನಾಥ್ ಟಾಗೋರ್ ಮತ್ತಿತರರನ್ನು ತನ್ನವರನ್ನಾಗಿಸಿಕೊಳ್ಳಲು ಹಪಹಪಿಸುತ್ತಿದೆ. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಬಲುಪ್ರೀತಿ ಇದೆ ಎಂದು ತೋರಿಸಿಕೊಳ್ಳಲು ಕಸರತ್ತು ನಡೆಸಿದೆ. 2014ರಲ್ಲಿ ಬಿಜೆಪಿ ದಿಲ್ಲಿ ಗದ್ದುಗೆ ಹಿಡಿದ ಬಳಿಕ ಪ್ರಯತ್ನವನ್ನು ತೀವ್ರಗೊಳಿಸಿದೆ. ಮೋದಿ ಅವರಂತೂ ರವೀಂದ್ರನಾಥ್ ಟಾಗೋರ್ ರೀತಿ ಗಡ್ಡ ಬಿಟ್ಟು ಪೋಸು ಕೊಟ್ಟು ಬಂಗಾಳಿಗಳ ಮನಗೆಲ್ಲುವ ವ್ಯರ್ಥ ಪ್ರಯತವನ್ನೂ ನಡೆಸಿದ್ದರು.

ಪಶ್ಚಿಮ ಬಂಗಾಳದಲ್ಲಿ ‘ದಾ’, ‘ದಾದಾ’ ಎನ್ನುವುದು ಗೌರವ ಸೂಚಕ ವಿಶೇಷಣ. ಅದೇ ಕಾರಣಕ್ಕೆ ಮೋದಿ ‘ಜೀ’ ಬದಲು ‘ದಾ’ ಪದ ಪ್ರಯೋಗ ಮಾಡಿದ್ದಾರೆ. ಆ ಮೂಲಕ ಬಂಗಾಳಿಗಳಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ. ಏಕೆಂದರೆ ಅವರನ್ನು ಬಂಗಾಳಿಗಳು ‘ಹೊರಗಿನವರು’ ಎಂದೇ ಪರಿಗಣಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ರಭಸಕ್ಕೆ ಕೊಚ್ಚಿಹೋಗದಂತೆ ಟಿಎಂಸಿಯನ್ನು ಕಾಪಾಡಿದ್ದು ಇದೇ ‘ಹೊರಗಿನವರು’ ಎಂಬ ತಡೆಗೋಡೆ. ಸಾಮಾನ್ಯವಾಗಿ ಹಿಂದಿ‘ವಾಲಾ’ಗಳು ಮತ್ತು ಗುಜರಾತಿಗಳು ಹೆಸರಿನ ಮುಂದೆ ‘ಜೀ’ ಎಂದು ಹೇಳುತ್ತಾರೆ. ಹಾಗೆ ಹೇಳಿ ತಮ್ಮತನವನ್ನು ಇತರರ ಮೇಲೆ ‘ಹೇರಲು’ ಪ್ರಯತ್ನಿಸುತ್ತಾರೆ. ಮೇಲರಿಮೆ ಅವರ ದೌರ್ಬಲ್ಯ. ಆದರೂ ಮೋದಿ ‘ಜೀ’ ಬದಲು ‘ದಾ’ ಎಂದು ಹೇಳಿದ್ದಾರೆಂದರೆ ಅದರಲ್ಲಿ ಚುನಾವಣೆಯ ಲಾಭದ ಲೆಕ್ಕಾಚಾರ ಮತ್ತು ಆರೆಸ್ಸೆಸ್ನ ಸಾಂಸ್ಕೃತಿಕ ರಾಜಕಾರಣ ಇಲ್ಲ ಹೇಳಲು ಸಾಧ್ಯವೇ?

ಇದು ಕಾಂಗ್ರೆಸಿಗರಿಗೆ ಅರ್ಥವಾಗದೇ ಇರಬಹುದು, ಟಿಎಂಸಿ ನಾಯಕರಿಗಲ್ಲ. ‘‘ಮೋದಿ ಅವರೇ ನೀವು ‘ಬಂಕಿಮ್ ಬಾಬು’ ಎಂದು ಹೇಳಬೇಕು. ಅದೇಕೆ ‘ಬಂಕಿಮ್ ದಾ’ ಎನ್ನುತ್ತಿದ್ದೀರಿ?’’ ಎಂದು ಕಿಚಾಯಿಸಿದರು. ಮಮತಾ ಬ್ಯಾನರ್ಜಿ ಗರಡಿಯಲ್ಲಿ ಪಳಗಿದ ಟಿಎಂಸಿ ಸಂಸದರು ಪಟ್ಟು ಬಿಡುವುದಿಲ್ಲ ಎನ್ನುವ ಕಾರಣಕ್ಕೆ ಮೋದಿ ತಕ್ಷಣವೇ ‘ಬಂಕಿಮ್ ಬಾಬು’ ಎಂದು ಸರಿಮಾಡಿಕೊಂಡರು. ಏನೇ ಹೇಳಿ? ತಮ್ಮ ಭಾಷೆ, ಸಂಸ್ಕೃತಿ, ಊಟ, ಉಪಚಾರಗಳ ತಂಟೆಗೆ ಬಂದರೆ ಟಿಎಂಸಿ ಮತ್ತು ಡಿಎಂಕೆ ಸಂಸದರು ಸುಮ್ಮನೆ ಬಿಡುವವರಲ್ಲ.

ಬಿಜೆಪಿ ಅಸ್ತ್ರಕ್ಕೆ ದೀದಿ ಕೈ!

2021ರ ವಿಧಾನಸಭಾ ಚುನಾವಣೆಯಲ್ಲಿ ಕೋಮು ಭಾವನೆ ಕೆರಳಿಸಿ, ಬಿಜೆಪಿ ಗೆದ್ದೇ ಬಿಟ್ಟಿತು ಎನ್ನುವಂತೆ ಅಬ್ಬರದ ಪ್ರಚಾರ ನಡೆಸಿ, ಅಪಾರ ಪ್ರಮಾಣದ ಹಣ ವ್ಯಯಿಸಿ, ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ನಾಯಕರ ಖರೀದಿಸಿ ಹಲವು ಬಗೆಯ ತಂತ್ರ-ಕುತಂತ್ರಗಳನ್ನು ಮಾಡಿದ್ದರೂ ಬಿಜೆಪಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಮತಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತ್ತು. ಈ ಸಲ ಮಮತಾ ಬ್ಯಾನರ್ಜಿ ಬಹಳ ಬೇಗ ಬಿಜೆಪಿಯ ಅಸ್ತ್ರಗಳನ್ನು ಕಿತ್ತುಕೊಳ್ಳಲು ಹೊರಟಂತೆ ಕಾಣುತ್ತಿದೆ. ದಿಘಾದಲ್ಲಿ ಜಗನ್ನಾಥ ದೇವಸ್ಥಾನ, ದುರ್ಗಂಗನ್ ದೇವಸ್ಥಾನ ಮತ್ತು ಸಿಲಿಗುರಿಯ ಮತಿಗರಾದಲ್ಲಿ ಮಹಾಕಾಳ್ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಅಲ್ಲದೆ ರಾಜ್ಯಾದ್ಯಂತ ದುರ್ಗಾ ಪೂಜಾ ಸಮಿತಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ತಮ್ಮ ವಿರುದ್ಧ ಹಿಂದೂಗಳು ಧ್ರುವೀಕರಣವಾಗಬಾರದು ಎನ್ನುವ ಕಾರಣಕ್ಕಾಗಿಯೇ ಮಮತಾ ಬ್ಯಾನರ್ಜಿ ಹೀಗೆ ಮಾಡಿದ್ದಾರೆ. ಆದರೆ ಇದನ್ನು ಬಿಜೆಪಿ ವಿರೋಧಿಸುವಂತಿಲ್ಲ. ಸುಮ್ಮನಿದ್ದರೆ ಬಿಜೆಪಿಗೆ ಇದರಿಂದ ಲಾಭವಾಗುವುದಿಲ್ಲ.

ಆಫ್ ದಿ ರೆಕಾರ್ಡ್!

ಬಂಗಾಳದ ವಿಷಯದಲ್ಲಿ ದಾ ಎಂದು ಕರೆಯುವ ಹಿಂದಿ‘ವಾಲ’ಗಳು ಮತ್ತು ಗುಜರಾತಿಗಳು ಕನ್ನಡದ ನಾಯಕರ ಬಗ್ಗೆ ಮಾತನಾಡುವಾಗ ಏಕೆ ಮಲ್ಲಿಕಾರ್ಜುನ ಖರ್ಗೆ ಅವರೇ, ದೇವೇಗೌಡ ಅವರೇ, ಸಿದ್ದರಾಮಯ್ಯ ಅವರೇ ಅಥವಾ ಅಣ್ಣ ಎಂದು ಸಂಬೋಧಿಸುವುದಿಲ್ಲ? ದಾ ಅಥವಾ ದಾದಾ ಎಂದರೆ ಗೌರವ ಸೂಚಕ ಮಾತ್ರವಲ್ಲ, ಅಣ್ಣ ಎನ್ನುವ ಅರ್ಥವೂ ಉಂಟು. ಕನ್ನಡಿಗರಿಗೇಕೆ ಈ ಸೌಭಾಗ್ಯ ಇಲ್ಲ?

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X