ಈ ಹೋಲಿಕೆ ಎಷ್ಟು ಸರಿ?

ದೇಶದ ಚೊಚ್ಚಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂಗೆ ಹಾಲಿ ಪ್ರಧಾನಿ ನರೇಂದ್ರ ದಾಮೋದರ ಮೋದಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಆದರೆ ನೆಹರೂ ಮತ್ತು ಮೋದಿ ನಡುವೆ ಹೋಲಿಕೆಗಳೇ ಇಲ್ಲ. ಇರುವುದೆಲ್ಲಾ ವೈರುಧ್ಯಗಳು. ಬಹಳ ದೊಡ್ಡ ವೈರುಧ್ಯವೆಂದರೆ ಸಿರಿವಂತರ ಮನೆಯಲ್ಲಿ ಜನಿಸಿದ ನೆಹರೂ ಅತಿ ಹೆಚ್ಚು ಕೆಲಸ ಮಾಡಿದ್ದು ಬಡವರಿಗಾಗಿ. ಬಡವರ ಮನೆಯಲ್ಲಿ ಹುಟ್ಟಿದ, ತಾನು ಫಕೀರ ಎಂದು ಹೇಳಿಕೊಳ್ಳುವ ಮೋದಿ ಕೆಲಸ ಮಾಡಿದ್ದು, ಮಾಡುತ್ತಿರುವುದು ಕೆಲವೇ ಕೆಲವು ಸಿರಿವಂತರಿಗಾಗಿ.
2ನೇ ವೈರುಧ್ಯ: ಬ್ರಿಟಿಷರು ಬಿಟ್ಟುಕೊಟ್ಟ ಭಾರತ ಬರಡು ಭೂಮಿಯಾಗಿತ್ತು. ಸಾಮಾಜಿಕವಾದ ಅಸಮಾನತೆ, ಅಸಾಕ್ಷರತೆ, ವೈಜ್ಞಾನಿಕ ದೃಷ್ಟಿಕೋನದ ಕೊರತೆಗಳಿಂದ ಕುರುಡು ಭೂಮಿಯಾಗಿತ್ತು. ದೇಶದ ಆರ್ಥಿಕತೆ ಮುರುಡು ಗಟ್ಟಿತ್ತು. ಅನ್ನ-ಅಕ್ಷರವಿಲ್ಲದ ಜನಜೀವನ ಕೊರಡಾಗಿತ್ತು. ಇದೇ ಕಾರಣಕ್ಕೆ ಬ್ರಿಟಿಷರಿಗೇ ಭಾರತ ಬೇಡವಾಗಿತ್ತು. ಇಂಥ ರೋಗಿಷ್ಟ ದೇಶದ ನೊಗ ಹೊರಲು ಹೆಗಲುಕೊಟ್ಟವರು ನೆಹರೂ. ಅಂಥ ಕಡುಕಷ್ಟದ ಪರಿಸ್ಥಿತಿಯಲ್ಲಿ ದೇಶಕ್ಕೆ ದಿಕ್ಕು ದೆಸೆ ತೋರಿದರೂ ಇವತ್ತಿಗೂ ಹತ್ತು ಹಲವು ಕಾರಣಕ್ಕೆ ನಿಂದನೆಗೆ ಗುರಿಯಾಗುತ್ತಿರುವ ನೆಹರೂ ನತದೃಷ್ಟ.
ಆದರೆ ಮೋದಿ? ಸಂಘ ಪರಿವಾರದ ನೂರು ವರ್ಷಗಳ ನಿರಂತರ ಪರಿಶ್ರಮ, ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ ಮತ್ತಿತರರ ದಣಿವರಿಯದ ಹೋರಾಟ ಮತ್ತು ಕೋಮುವಾದದ ರಾಜಕಾರಣ ಫಲ ಉಣ್ಣುತ್ತಿರುವ ಅದೃಷ್ಟವಂತ.
3ನೇ ವೈರುಧ್ಯ: ನೆಹರೂ ಹೃದಯ ವೈಶಾಲ್ಯದ ವ್ಯಕ್ತಿತ್ವ ಹೊಂದಿದ್ದರು. ಸ್ವಾತಂತ್ರ್ಯದ ಹೋರಾಟಕ್ಕೆ ವಿರೋಧ ಮಾಡಿದ್ದ ಜನಸಂಘದ ಶ್ಯಾಮ್ ಪ್ರಸಾದ್ ಮುಖರ್ಜಿಯನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಭಿನ್ನ ಅಭಿಪ್ರಾಯ ಹೊಂದಿರುವವರು ಕೂಡ ಸ್ವತಂತ್ರ ಭಾರತದ ಮೊದಲ ಸರಕಾರದ ಭಾಗವಾಗಿರಬೇಕು ಎನ್ನುವ ಉದಾರ ನಡೆ ಅವರದ್ದಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ನೆಹರೂ ಪ್ರಚಾರ ಮಾಡಲಿಲ್ಲ. ವಾಜಪೇಯಿಯಂಥವರು ಯಾವುದೇ ಪಕ್ಷದವರಾದರೂ, ಯಾವುದೇ ವಿಚಾರಧಾರೆ ಹೊಂದಿದ್ದರೂ ಲೋಕಸಭೆಯಲ್ಲಿ ಇರಬೇಕು ಎಂದು ನೆಹರೂ ಬಯಸುತ್ತಿದ್ದರು.
ಆದರೆ ಮೋದಿ? ನೆಹರೂ ಟೀಕೆಯನ್ನೇ ಬಂಡವಾಳ ಮಾಡಿಕೊಂಡಿರುವವರು. ವಿರೋಧಿಗಳೇ ಇರಬಾರದೆಂಬ ಧೋರಣೆಯುಳ್ಳವರು. ಚುನಾವಣೆ ಮೂಲಕ ಸೋಲಿಸಲಾಗದಿದ್ದರೆ, ಪಕ್ಷಗಳನ್ನು ಒಡೆದು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ವಿರೋಧಿ ಪಾಳಯವನ್ನು ದುರ್ಬಲಗೊಳಿಸುತ್ತಿರುವವರು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ, ಮುಸ್ಲಿಮರ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ತೊಟ್ಟಿರುವವರು.
4ನೇ ವೈರುಧ್ಯ: ಅಂತರ್‌ರಾಷ್ಟ್ರೀಯ ಸಂಪರ್ಕ ಮತ್ತು ದೂರದೃಷ್ಟಿ ಹೊಂದಿದ್ದ ನೆಹರೂ ಮಾತ್ರ ದೇಶವನ್ನು ಕಟ್ಟಲು ಸಾಧ್ಯ ಎನ್ನುವುದು ಮಹಾತ್ಮಾ ಗಾಂಧೀಜಿಯವರ ಖಚಿತ ನಿಲುವಾಗಿತ್ತು. ಇದಕ್ಕೆ ಸರ್ದಾರ್ ವಲ್ಲಭಭಾಯ್ ಪಟೇಲರ ಅನುಮೋದನೆ ಇತ್ತು. ಅದರಿಂದಾಗಿ ನೆಹರೂಗೆ ಪ್ರಧಾನಿ ಸ್ಥಾನ ಒಲಿದಿತ್ತು. ಆದರೆ ನೆಹರೂಗೆ ತನ್ನೊಬ್ಬನಿಂದ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎನ್ನುವ ಅರಿವಿತ್ತು. ಆಗ ದೇಶ ಒಗ್ಗೂಡಿಸುವ ಜರೂರತ್ತು ಇದ್ದುದರಿಂದ ಪಟೇಲರನ್ನು ಗೃಹ ಮಂತ್ರಿ ಮಾಡಿದ್ದರು. ಸಂವಿಧಾನ ರಚಿಸುವ ಮಹತ್ವದ ಹೊಣೆಗಾರಿಕೆಯನ್ನು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನೀಡಿದ್ದರು. ನೆಹರೂ ಚಿಂತನೆಯಂತೆ ಪಟೇಲರು ದೇಶವನ್ನು ಒಗ್ಗೂಡಿಸಿದರು. ಅಂಬೇಡ್ಕರ್ ಜಗತ್ತಿನಲ್ಲೇ ಅತ್ಯುತ್ತಮವಾದ ಸಂವಿಧಾನ ರಚಿಸಿದರು. ಹೀಗೆ ಆದ್ಯತೆ, ಅರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಮಂತ್ರಿ ಮಂಡಲ ರೂಪಿಸಿದ್ದರು.
ಆದರೆ ಮೋದಿ? ತಾವು ಪ್ರಧಾನಿಯಾಗಲು ಕಾರಣವಾದ ಪಕ್ಷವನ್ನು ಕೋಮುವಾದ ಎಂಬ ಗೊಬ್ಬರ ಹಾಕಿ ನೀರೆರದು ಬೆಳೆಸಿದ್ದ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಗೆ ‘ಮಾರ್ಗದರ್ಶಕ ಮಂಡಲ’ದ ದಾರಿ ತೋರಿದರು. ವಾಜಪೇಯಿ ಮತ್ತು ಅಡ್ವಾಣಿ ಬೆಂಬಲಿಗರೆನ್ನುವ ಕಾರಣಕ್ಕೆ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಉಮಾಭಾರತಿ, ರಾಜನಾಥ್ ಸಿಂಗ್, ಅನಂತಕುಮಾರ್ ಮತ್ತಿತರರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂಥ ಖಾತೆಗಳನ್ನು ಕೊಡಲಿಲ್ಲ.
5ನೇ ವೈರುಧ್ಯ: ನೆಹರೂ ಮೇರುನಾಯಕ ಮಾತ್ರ ಆಗಿರಲಿಲ್ಲ, ನಿರಂತರ ಓದು, ಓಡಾಟ ಮತ್ತು ಸ್ವಾತಂತ್ರ್ಯ ಹೋರಾಟಗಳಿಂದಾಗಿ ಮಾಗಿದ್ದರು. ಮುತ್ಸದ್ದಿಯಾಗಿದ್ದರು. ವಿದ್ವತ್ತನ್ನೇ ಸ್ವತ್ತಾಗಿಸಿಕೊಂಡಿದ್ದರು.
ಆದರೆ ಮೋದಿ? ಅವರ ವಿದ್ಯಾರ್ಹತೆ ಬಗ್ಗೆಯೇ ಅನುಮಾನಗಳಿವೆ. ಆ ಅನುಮಾನವನ್ನು ಹೋಗಲಾಡಿಸಬೇಕೆಂಬ ದೊಡ್ಡ ಮನಸ್ಸನ್ನು ಅವರೆಂದೂ ಮಾಡಿಲ್ಲ. ಅಷ್ಟೇಯಲ್ಲ, ಪ್ರಧಾನಿಯಂಥ ಘನತೆವೆತ್ತ ಹುದ್ದೆಯಲ್ಲಿ ಕುಳಿತು ಇತಿಹಾಸದ ಕನಿಷ್ಠ ಜ್ಞಾನ ಇಲ್ಲದವರಂತೆ ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುವ ಹವ್ಯಾಸ ಹೊಂದಿದ್ದಾರೆ. ತಮ್ಮ ಹಾಗೆಯೇ ಧೈರ್ಯದಿಂದ ಸುಳ್ಳು ಹೇಳುವ ದೊಡ್ಡ ಪಡೆಯನ್ನೇ ಸೃಷ್ಟಿಸಿಕೊಂಡಿದ್ದಾರೆ.
6ನೇ ವೈರುಧ್ಯ: ನೆಹರೂ ಅವರನ್ನು ಸಿರಿವಂತರ ಮನೆಯಲ್ಲಿ ಹುಟ್ಟಿ ಬಡವರಿಗಾಗಿ ಮರುಗಿದ ಮಾನವತಾವಾದಿ, ಕಾಂಗ್ರೆಸ್ ಪಕ್ಷದಲ್ಲಿದ್ದರೂ ಸಮಾಜವಾದಿ, ಕಾಶ್ಮೀರ ಪಂಡಿತರ ಕುಟುಂಬದ ಕುಡಿಯಾಗಿದ್ದರೂ ಜಾತ್ಯತೀತವಾದಿ, ಸಮಕಾಲೀನರನ್ನು ಸರಿಯಾಗಿ ನಡೆಸಿಕೊಂಡ ಉದಾರವಾದಿ, ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದ ಪ್ರಜಾಪ್ರಭುತ್ವವಾದಿ, ವೈವಿಧ್ಯದ ಸಮಾಜವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ ಬಹುತ್ವವಾದಿ, ಗಾಂಧೀಜಿಯವರನ್ನು ಗುರು ಸಮಾನರಾಗಿ ಕಂಡ ಗಾಂಧಿವಾದಿ ಎಂದು ಕಿಂಚಿತ್ತೂ ಅಂಜಿಕೆಯಿಲ್ಲದೆ ಕರೆಯಬಹುದು.
ಆದರೆ ಮೋದಿ? ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆರೇ ತಿಂಗಳಲ್ಲಿ ಗೋಧ್ರೋತ್ತರ ಎಂಬ ಕೋಮುಗಲಭೆಗೆ ಕುಮ್ಮಕ್ಕು ನೀಡಿದ ಮೋದಿಗೆ ಕೋಮುವಾದಿ ಎನ್ನುವುದನ್ನು ಹೊರತು ಪಡಿಸಿದರೆ ಇನ್ನೊಂದು ವಿಶೇಷಣ ಸಿಗದು. ಹೆಚ್ಚೆಂದರೆ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸುವ ಮೋದಿಯನ್ನು ಅಪ್ರಜಾಪ್ರಭುತ್ವವಾದಿ ಎನ್ನಬಹುದು. ಅಹಿಂಸೆಯ ಪ್ರತಿಪಾದಕ ಗಾಂಧಿ ಹುಟ್ಟಿದ ಗುಜರಾತಿನವರೇ ಆದರೂ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಬಾಯಿ ಮುಚ್ಚಿಕೊಂಡಿರುವ ಮೌನವಾದಿ ಎನ್ನಬಹುದು. 2016ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕೇರಳವನ್ನು ಸೊಮಾಲಿಯಾಕ್ಕೆ ಹೋಲಿಸಿದ ಮೋದಿಗೆ ಈ ದೇಶದ ಬಹುತ್ವದ ಬಗ್ಗೆ ಗೌರವವೇ ಇಲ್ಲ ಎನ್ನಬಹುದು.
7ನೇ ವೈರುಧ್ಯ: ಭಾರತದ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ನೆಹರೂ ದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂದು ಪಣತೊಟ್ಟಿದ್ದರು. ವೈಜ್ಞಾನಿಕ ಮನೋಭಾವ ಮಾತ್ರ ಜನರನ್ನು ಸರಿ ದಾರಿಯಲ್ಲಿ ನಡೆಸಬಹುದೆಂದು ದೃಢವಾಗಿ ನಂಬಿದ್ದರು. ರಾಜಕಾರಣ, ಆಡಳಿತ ಮತ್ತು ಜನಜೀವನದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ನಿರಂತರವಾಗಿ ಶ್ರಮಪಟ್ಟರು.
ಆದರೆ ಮೋದಿ? 2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ‘ನಾನು ಜೈವಿಕವಾಗಿ ಹುಟ್ಟಿಲ್ಲ ಎಂದು ನನಗೆ ಮನವರಿಕೆಯಾಗಿದೆ’ ಎಂದು ಹೇಳುವ ಮೂಲಕ ಮೋದಿ ತಾನು ವೈಜ್ಞಾನಿಕ ಮನೋಭಾವದ ವಿರೋಧಿ ಎಂಬುದನ್ನು ಸ್ವತಃ ಸಾಬೀತುಪಡಿಸಿದರು. ವಿಶ್ವ ಜೈವಿಕ ಇಂಧನ ದಿನದ ಬಗ್ಗೆ ಮಾತನಾಡುತ್ತಾ ‘ಚಹಾ ವ್ಯಾಪಾರಿಯೊಬ್ಬ ಪಾತ್ರೆಯನ್ನು ತಲೆಕೆಳಗಾಗಿ ಗಟಾರದ ಮೇಲೆ ಇಟ್ಟು, ಅದಕ್ಕೆ ಪೈಪ್‌ಲೈನ್ ಜೋಡಿಸಿ ಹೊರಬರುವ ಗ್ಯಾಸ್‌ನಿಂದ ಚಹಾ ತಯಾರಿಸುತ್ತಿದ್ದ’ ಎಂದು ಹೇಳಿ ಅಪಹಾಸ್ಯಕ್ಕೆ ಈಡಾಗಿದ್ದರು.
8ನೇ ವೈರುಧ್ಯ: ನೆಹರೂ ದೇಶವನ್ನು ಕಟ್ಟಲು ಹಲವು ಆಯಾಮದಿಂದ ಆಲೋಚಿಸಿದ್ದರು. ಆಗಿನ ಪರಿಸ್ಥಿತಿಯಲ್ಲಿ ಶಿಕ್ಷಣಕ್ಕೆ ಅದರಲ್ಲೂ ಉನ್ನತ ಶಿಕ್ಷಣಕ್ಕೆ, ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿತ್ತು. ಅದಕ್ಕಾಗಿ IIT, IIM, NID, FTII ಮತ್ತು LBSNAA ಎಂಬ ಸಂಸ್ಥೆಗಳನ್ನು ಕಟ್ಟಿದರು. ರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸಲು DRDO ಎಂಬ ಸಂಸ್ಥೆಯನ್ನು ನಿರ್ಮಾಣ ಮಾಡಿದರು. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಹಲವು ಸಂಸ್ಥೆಗಳನ್ನು ನಿರ್ಮಾಣ ಮಾಡಿದರು.
ಆದರೆ ಮೋದಿ? 12 ವರ್ಷಗಳ ಅವರ ಅವಧಿಯಲ್ಲಿ ಮುಚ್ಚಿದ ಸಾರ್ವಜನಿಕ ಉದ್ದಿಮೆಗಳೆಷ್ಟು? ನಿರ್ಮಾಣವಾದ ಸಂಸ್ಥೆಗಳು, ಸೇತುವೆಗಳು, ಸುರಂಗಗಳು ಎಷ್ಟು? ದೇಶದ ನಿರುದ್ಯೋಗ ಪ್ರಮಾಣ ಎಷ್ಟು? ಹೆಚ್ಚಾದ ಸಾಲ ಎಷ್ಟು? ಎಂಬಿತ್ಯಾದಿ ವಿವರಗಳನ್ನು ಕೇಂದ್ರ ಸರಕಾರ ಸರಿಯಾದ ದಾಖಲೆಗಳೊಂದಿಗೆ ಬಹಿರಂಗ ಪಡಿಸಿದರೆ ಆಗ ಮೋದಿಯ ದೂರದೃಷ್ಟಿ ಬಗ್ಗೆಯೂ ಚರ್ಚೆ ಮಾಡಬಹುದು.
9ನೇ ವೈರುಧ್ಯ: ಈಗ ನೆಹರೂ 1947ರ ಆಗಸ್ಟ್ 15ರಿಂದಲೇ ಪ್ರಧಾನಿಯಾಗಿದ್ದರು ಎನ್ನುವುದನ್ನು ಮರೆತು ಅವರು ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರಿದ 1952ರ ಎಪ್ರಿಲ್ 15ರಿಂದ ಲೆಕ್ಕಹಾಕಲಾಗುತ್ತಿದೆ. ಅದೇನೆ ಇರಲಿ, ನೆಹರೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಜಾರಿ ಇಲ್ಲದ ಸಂದರ್ಭದಲ್ಲಿ ಪ್ರಧಾನಿಯಾಗಿ ಕೂಡ ಅತ್ಯಂತ ಪ್ರಜಾಪ್ರಭುತ್ವವಾದಿಯಾಗಿ ನಡೆದುಕೊಂಡರು.
ಆದರೆ ಮೋದಿ? ಚುನಾವಣೆಯಲ್ಲಿ ಗೆದ್ದೇ ಗದ್ದುಗೆಯಲ್ಲಿ ಕುಳಿತಿದ್ದರೂ ‘ಇದು ಜನ ಆಯ್ಕೆ ಮಾಡಿದ ಸರಕಾರ’ ಎನ್ನುವ ಪ್ರಜಾಪ್ರಭುತ್ವದ ಮೂಲ ಪರಿಕಲ್ಪನೆಯನ್ನೇ ಮರೆತಿದ್ದಾರೆ. ಸರ್ವಾಧಿಕಾರಿಯ ಸಕಲೆಂಟು ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾರೆ.
10ನೇ ವೈರುಧ್ಯ: ತೀವ್ರವಾದ ಬಡತನ, ಭಾರತ ಮತ್ತು ಪಾಕಿಸ್ತಾನ ವಿಭಜನೆ ಹಾಗೂ ರಾಜಾಳ್ವಿಕೆ ಜೀವಂತವಿದ್ದ- ಕೆಲ ರಾಜರು ದೇಶ ಸ್ವತಂತ್ರವಾಗುವುದನ್ನು ವಿರೋಧ ಮಾಡುತ್ತಿದ್ದ ಕಾಲದಲ್ಲಿ ದೇಶದ ಚುಕ್ಕಾಣಿ ಹಿಡಿದಿದ್ದವರು ನೆಹರೂ. ಈ ಮೂರು ಸ್ಥಿತಿಗಳು ಮುಖ್ಯವಾದವಷ್ಟೇ. ಇವುಗಳೊಂದಿಗೆ ಇನ್ನೂ ನೂರಾರು ಸವಾಲುಗಳನ್ನು ಎದುರಿಸಿಯೇ ಮುಂದಡಿ ಇಡಬೇಕಾಗಿತ್ತು ನೆಹರೂ.
ಆದರೆ ಮೋದಿ? ಜಗದ್ವಿಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ ಸಿಂಗ್ ಖುದ್ದಾಗಿ ತಿಜೋರಿಯನ್ನು ಜೋಪಾನ ಮಾಡಿಟ್ಟು ಹೋದ ಭಾರತಕ್ಕೆ ಪ್ರಧಾನಿಯಾದವರು ಮೋದಿ. ಆದರೂ ಹಣದುಬ್ಬರ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಬೆಲೆ ಏರಿಕೆ ತಡೆಯಲು ಸಾಧ್ಯವಾಗಿಲ್ಲ.
ಇವು ನೆಹರೂ ಮತ್ತು ಮೋದಿ ನಡುವಿನ 10 ಪ್ರಮುಖ ವೈರುಧ್ಯಗಳು. ಇನ್ನೂ ಹಲವನ್ನು ಹುಡುಕಬಹುದು. ಆದರೂ ವೈರುಧ್ಯ ತುಂಬಿಕೊಂಡಿರುವ ನಾಯಕರ ನಡುವೆ ಹೋಲಿಕೆ ಮಾಡಲಾಗುತ್ತಿದೆ. ಮೋದಿಯನ್ನು ಆರ್ಥಿಕ ಸುಧಾರಣೆ ಮಾಡಿದ ಮನಮೋಹನ ಸಿಂಗ್ ಅವರಿಗೆ ಹೋಲಿಸುವುದು ಸಾಧ್ಯವಿಲ್ಲ. ಆರ್ಥಿಕ ಸುಧಾರಣೆಗೆ ಮುನ್ನುಡಿ ಬರೆದ
ಪಿ.ವಿ. ನರಸಿಂಹರಾವ್ ಅವರಿಗೂ ಹೋಲಿಸುವುದು ಸೂಕ್ತವಲ್ಲ. ತಂತ್ರಜ್ಞಾನ ಕ್ರಾಂತಿಗೆ ಕಂಕಣಬದ್ಧರಾಗಿದ್ದ ರಾಜೀವ್ ಗಾಂಧಿಗೂ ಮೋದಿ ಸರಿಸಾಟಿಯಲ್ಲ. ಬಡತನ ನಿರ್ಮೂಲನಕ್ಕೆ ಪಣತೊಟ್ಟಿದ್ದ ಇಂದಿರಾ ಗಾಂಧಿ ಹತ್ತಿರವೂ ಮೋದಿ ಸುಳಿಯುವುದಿಲ್ಲ. ಕಾಂಗ್ರೆಸಿಗರೇಕೆ, ಬಿಜೆಪಿಯ ವಾಜಪೇಯಿ ಜೊತೆ ಕೂಡ ಮೋದಿ ಹೋಲಿಕೆ ಸಮಂಜಸವಲ್ಲ. ಅಟಲ್ ಸ್ನೇಹಜೀವಿಯಾಗಿದ್ದರು. ಮಿತ್ರಪಕ್ಷಗಳನ್ನು ಗೌರವದಿಂದ ಕಾಣುತ್ತಿದ್ದರು. ಆದರೂ ನೆಹರೂ ಮತ್ತು ಮೋದಿಯನ್ನು ಹೋಲಿಕೆ ಮಾಡಲಾಗುತ್ತಿದೆ.
ಆಫ್ ದಿ ರೆಕಾರ್ಡ್!
ಹೋಲಿಕೆ ಮಾಡುತ್ತಿರುವವರೆಂದರೆ ಬಲಪಂಥೀಯರು. ಅವರಿಗೆ ಇತಿಹಾಸವನ್ನು ತಿರುಚುವ ಕಲೆ ಚೆನ್ನಾಗಿ ಸಿದ್ಧಿಸಿದೆ. ಅವರಿಗೆ ‘ನಾವು ಯಾವ ಪಂಥದವರೂ ಅಲ್ಲ’ ಎಂದು ಹೇಳಿಕೊಳ್ಳುವ ನಾಜೂಕಯ್ಯರ ಸಹಕಾರವೂ ಇದೆ. ಬಲಪಂಥೀಯರು ವಿಕೃತವಾಗಿ ವರ್ತಿಸಿದರೆ ಈ ನಾಜೂಕಯ್ಯರು ವಿನಮ್ರವಾಗಿಯೇ ವಿಷ ಉಣಿಸುತ್ತಾರೆ.






