ಒಳಮೀಸಲಾತಿ: ಮದ್ದಿರುವುದು ಖರ್ಗೆ ಬಳಿ!

ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತನ್ನು ಪರಿಶಿಷ್ಟ ಜಾತಿಯ ನಾಯಕರು ನಿಜ ಮಾಡುತ್ತಿದ್ದಾರೆ. ಹಂಚುಣ್ಣಬೇಕಾಗಿದ್ದ ಸಹೋದರರು ಪರಸ್ಪರ ವಿಷಕಾರಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ಮುಲಾಮು ಹಚ್ಚಬೇಕಾದವರೇ ಗಾಯವನ್ನು ಕೆರೆಯುತ್ತಿದ್ದಾರೆ. ಪರಿಣಾಮ ಈಗ ಒಳಮೀಸಲಾತಿ ಜಾರಿಯಾದರೂ, ಆಗದಿದ್ದರೂ ಎಡ-ಬಲದವರ ನಡುವೆ ಮೂಡಿರುವ ಬಿರುಕು ಮಾಯವಾಗುವುದು ಅನುಮಾನಾಸ್ಪದವಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಕಾರಣಕ್ಕೆ ಒಳಮೀಸಲಾತಿ ವಿಷಯ ಜಾರಿಯಾಗುವ ಹಂತಕ್ಕೆ ಬಂದಿದೆ. ಆದರೆ ಯಾವಾಗ ಜಾರಿಯಾಗುತ್ತದೆ ಎನ್ನುವ ಖಾತರಿ ಇಲ್ಲ. ಒಳ ಮೀಸಲಾತಿ ಜಾರಿ ಮಾಡುವುದು ಸರಕಾರದ ಕರ್ತವ್ಯ. ಅದಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಅವರ ಕರ್ತವ್ಯ. ಏಕೆಂದರೆ ಜಾರಿಯಾಗಲೇಬೇಕು ಎಂದು ಒತ್ತಾಯ ಮಾಡುತ್ತಿರುವ ಸಮುದಾಯದ ಜನ ಅವರದೇ ಜಾತಿಯ ನಾಯಕರಿಗಿಂತಲೂ ಅಥವಾ ಅವರ ಹಿರಿಯಣ್ಣನಂತಿರುವ ಜಾತಿಯ ನಾಯಕರಿ
ಗಿಂತಲೂ ಹೆಚ್ಚು ಭರವಸೆ ಹೊಂದಿರುವುದು (ಈಗಲೂ) ಸಿದ್ದರಾಮಯ್ಯ ಮೇಲೆ.
ಸಿದ್ದರಾಮಯ್ಯ ಮೇಲೆ ಇಂಥ ವಿಶ್ವಾಸ ಮೂಡಲು ಅವರ ದಲಿತ ಪರ ನಿಲುವುಗಳು ಕಾರಣ. ದಲಿತ ಮುಖ್ಯಮಂತ್ರಿಯೇ ಇದ್ದರೂ SCSP-TSP ಕಾಯ್ದೆ ತರಲು ಸಾಧ್ಯವಾಗುತ್ತಿರಲಿಲ್ಲ. ಕಾಯ್ದೆ ತರಲು ಪಟ್ಟಭದ್ರ ಹಿತಾಸಕ್ತಿಗಳು ಬಿಟ್ಟುಕೊಡುತ್ತಿರಲಿಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿಗಳ ಒತ್ತಡವನ್ನು ಸಹಿಸಿಕೊಂಡು ಕಾಯ್ದೆ ತರಲು ಸಾಧ್ಯವಾಗಿದ್ದು ಸಿದ್ದರಾಮಯ್ಯ ಕಾರಣಕ್ಕೆ ಎಂದು ದಲಿತ ನಾಯಕರೇ ಮಾತನಾಡಿಕೊಳ್ಳುತ್ತಾರೆ. ರೋಹಿತ್ ವೇಮುಲಾ ಕಾಯ್ದೆ ಬಗೆಗೂ ಇದೇ ಅಭಿಪ್ರಾಯವಿದೆ. ಇವೇ ಕಾರಣಗಳಿಗೆ ಸಿದ್ದರಾಮಯ್ಯ ಬಗ್ಗೆ ನಿರೀಕ್ಷೆಗಳಿವೆ. ಆದರೆ ಒಳಮೀಸಲಾತಿ ಸಮಸ್ಯೆಗೆ ಸಿದ್ದರಾಮಯ್ಯ ಬಳಿ ಪರಿಹಾರ ಇಲ್ಲ; ಅದಿರುವುದು ಮಲ್ಲಿಕಾರ್ಜುನ ಖರ್ಗೆ ಬಳಿ.
ಒಳಮೀಸಲಾತಿ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಾಗ ಬಲಗೈ ಸಮುದಾಯದ ಸಚಿವರಾದ ಡಾ. ಜಿ. ಪರಮೇಶ್ವರ್,
ಎಚ್.ಸಿ. ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅತ್ಯಂತ ಸ್ಪಷ್ಟವಾಗಿ ಮತ್ತು ಜೋರುದನಿಯಲ್ಲಿ ‘ಶೇ. 15ರಿಂದ ಶೇ. 17ಕ್ಕೆ ಏರಿಸಲಾಗಿರುವ ಪರಿಶಿಷ್ಟ ಜಾತಿಯವರ ಮೀಸಲಾತಿ ಬಗ್ಗೆ ರಾಜ್ಯ ಹೈಕೋರ್ಟ್ ತೀರ್ಪು ಬರುವವರೆಗೆ ಜಾರಿ ಬೇಡ’ ಎಂದು ಒಳಮೀಸಲಾತಿಯನ್ನು ವಿರೋಧಿಸಿದ್ದಾರೆ. ಎಡಗೈ ಸಮುದಾಯದ ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ಮಾಮೂಲಿ ದನಿಯಲ್ಲಿ ‘ಒಳಮೀಸಲಾತಿ ಜಾರಿ ಮಾಡಿ’ ಎಂದು ಹೇಳಿದ್ದಾರಷ್ಟೇ. ಮುನಿಯಪ್ಪ ಮತ್ತು ತಿಮ್ಮಾಪುರ ಅಧಿಕಾರಯುತವಾಗಿ ಮಾತನಾಡದ ಕಾರಣಕ್ಕೆ ಒಳಮೀಸಲಾತಿ ಇಲ್ಲದೆ 56,432 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕಡೆಯ ಪಕ್ಷ ಮುನಿಯಪ್ಪ ಮತ್ತು ತಿಮ್ಮಾಪುರ ‘ಸಂಪುಟ ಸಭೆಯ ತೀರ್ಮಾನಕ್ಕೆ ತಮ್ಮ ವಿರೋಧವಿದೆ’ ಎಂಬ dissent ಬರೆಯಬೇಕಾಗಿತ್ತು.
ಈಗ ‘ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ ಅದರಂತೆ ಕ್ರಮ ಕೈಗೊಳ್ಳಿ’ ಎಂದು ಬಲಗೈ ಸಚಿವರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದರಿಂದಾಗಿ ಅವರ ಬಳಿ ಪರಿಹಾರವಿಲ್ಲ. ಆದರೂ ಸಿದ್ದರಾಮಯ್ಯ ಮುಂಬರುವ ವಿಶೇಷ ಸಂಪುಟ ಸಭೆಯ ವೇಳೆಗೆ ಪರಮೇಶ್ವರ್, ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರ ಮನವೊಲಿಸಿ ನ್ಯಾಯಬದ್ಧವಾದ ತೀರ್ಮಾನ ಕೈಗೊಳ್ಳಬೇಕಾಗಿದೆ.
ಮಲ್ಲಿಕಾರ್ಜುನ ಖರ್ಗೆ ಸಮುದಾಯದ ಹಿರಿಯ ನಾಯಕನಾಗಿ ‘ಎಲ್ಲರೂ ಕೂಡಿ ಬಾಳೋಣ’ ಎಂಬ ಸಲಹೆಯನ್ನು ಕೊಟ್ಟು ವಿರೋಧ ಮಾಡುತ್ತಿರುವ ಸಚಿವರ ವಿಶ್ವಾಸ ಗಳಿಸಬಹುದು. ಅಥವಾ 2023ರ ವಿಧಾನಸಭಾ ಚುನಾವಣೆಯ ಕೆಪಿಸಿಸಿ ಪ್ರಣಾಳಿಕೆ ತೋರಿಸಿ ಎಐಸಿಸಿ ಅಧ್ಯಕ್ಷನಾಗಿ ಇದು ನನ್ನ ಸೂಚನೆ ಎಂದು ವಿರೋಧ ಮಾಡುತ್ತಿರುವ ಸಚಿವರ ಬಾಯಿ ಮುಚ್ಚಿಸಬಹುದು. ಹಾಗೆಯೇ ಪ್ರಣಾಳಿಕೆ ನೆನಪಿಸಿ ಸಿದ್ಧರಾಮಯ್ಯ ಮೂಲಕ ಇಡೀ ಸಂಪುಟಕ್ಕೆ ‘ಒಳಮೀಸಲಾತಿ ಜಾರಿಯಾಗಲೇಬೇಕು’ ಎಂಬ ಫರ್ಮಾನು ಹೊರಡಿಸಬಹುದು. ಮಲ್ಲಿಕಾರ್ಜುನ ಖರ್ಗೆ ಈ ಮೂರರ ಪೈಕಿ ಒಂದನ್ನು ಮಾಡಿದರೂ ಸಾಕು ಒಳಮೀಸಲಾತಿಯ ಸಮಸ್ಯೆ ಬಗೆಹರಿಯುತ್ತದೆ. ಅಗತ್ಯ ಬಿದ್ದರೆ ಮೂರೂ ಪಟ್ಟುಗಳನ್ನು ಹಾಕಿ ಸಮಸ್ಯೆ ಬಗೆಹರಿಸಬೇಕು. ಅದಕ್ಕೆ ಹೇಳಿದ್ದು ಒಳಮೀಸಲಾತಿಯ ಸಮಸ್ಯೆಗೆ ಪರಿಹಾರ ಇರುವುದು ಮಲ್ಲಿಕಾರ್ಜುನ ಖರ್ಗೆ ಬಳಿ ಎಂದು.
ಹಿಂದೆಯೂ ಒಂದಾಗುವ ಅವಕಾಶವಿತ್ತು!
ಸದಾಶಿವ ಆಯೋಗದ ಶಿಫಾರಸುಗಳ ಜಾರಿ ವಿಷಯದಲ್ಲೂ ಇದೇ ರೀತಿಯ ಗೊಂದಲ ಉಂಟಾಗಿತ್ತು. ಆಗಲೂ ಅದು ಮಲ್ಲಿಕಾರ್ಜುನ ಖರ್ಗೆ ಮನೆಬಾಗಿಲಿಗೆ ಹೋಗಿತ್ತು. ಸಿದ್ದರಾಮಯ್ಯ ‘ನೀವು ಎಡ-ಬಲದವರು ಒಮ್ಮತದ ನಿರ್ಧಾರಕ್ಕೆ ಬನ್ನಿ; ಸರಕಾರ ಅದನ್ನು ಜಾರಿ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ ಎರಡೂ ಕಡೆಯವರು ಒಂದೆಡೆ ಸೇರಲೇ ಇಲ್ಲ. ಸದಾಶಿವ ಆಯೋಗದ ಶಿಫಾರಸುಗಳನ್ನು ಒಪ್ಪುವುದು ಅಥವಾ ಬಿಡುವುದು ಬೇರೆ ವಿಷಯ. ಒಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಆಗ ಮನಸ್ಸು ಮಾಡಿದ್ದರೆ ಎಡ-ಬಲದವರು ಒಟ್ಟಿಗೆ ಕೂತು ಚರ್ಚೆ ಮಾಡುವುದಕ್ಕಾದರೂ ಸಾಧ್ಯವಾಗುತ್ತಿತ್ತು.
ಈಗಲೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಡ-ಬಲದವರು ಪ್ರತ್ಯೇಕವಾಗಿ ಹೋಗಿ ಭೇಟಿ ಮಾಡಿದ್ದಾರೆ. ತಮ್ಮ ಬಳಿ ಬಂದವರಿಗೆ ಖರ್ಗೆ ‘ಇದು ರಾಜ್ಯದ ಸಮಸ್ಯೆ, ನನ್ನ ಬಳಿಗೆ ಏಕೆ ತರುತ್ತೀರಿ?, ನೀವೇ ಬಗೆಹರಿಸಿಕೊಳ್ಳಿ’ ಎಂದು ಹೇಳಿದ್ದಾರಂತೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯದವರಲ್ಲವಾ? ಪರಿಶಿಷ್ಟ ಜಾತಿಯವರಲ್ಲವಾ? ಇದರಿಂದ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಕಳಂಕ ಬರುತ್ತಿಲ್ಲವಾ? ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೆ ಕಿವಿ ಹಿಂಡುವುದು ಖರ್ಗೆ ಜವಾಬ್ದಾರಿ ಅಲ್ಲವಾ? ಎಲ್ಲಕ್ಕಿಂತ ಮುಖ್ಯವಾಗಿ ಅವರೇ ಬಗೆಹರಿಸಿಕೊಳ್ಳುವುದಾಗಿದ್ದರೆ ಖರ್ಗೆ ಬಳಿ ಏಕೆ ಹೋಗಬೇಕಿತ್ತು? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮಲ್ಲಿಕಾರ್ಜುನ ಖರ್ಗೆ ಅವರೇ ಉತ್ತರಿಸಬೇಕು.
ಮೀಸಲಾತಿಗೇ ವಿರೋಧ!
ಇದೇ ರಾಜ್ಯ ಸರಕಾರ ಒಳಮೀಸಲಾತಿ ಸಂಬಂಧಿಸಿದ ಕಾಯ್ದೆ ರೂಪಿಸಿದೆ. ರಾಜ್ಯಪಾಲರು ಶೇ. 17ರ ಒಳಮೀಸಲಾತಿ ಕಾಯ್ದೆಗೆ ಅಂಕಿತ ಹಾಕಿದ್ದಾರೆ. ಹೈಕೋರ್ಟ್ ‘ಬೇಕಿದ್ದರೆ ಈಗ ಶೇ. 17ರಷ್ಟು ಒಳಮೀಸಲಾತಿ ಅಡಿ ನೇಮಕ ಮಾಡಿ, ಆದರೆ ಅಂತಿಮ ತೀರ್ಪು ಬರುವವರೆಗೆ ಹೆಚ್ಚುವರಿ ಶೇ. 2ರಷ್ಟು ನೇಮಕಾತಿಯನ್ನು ತಡೆಹಿಡಿಯಿರಿ’ ಎಂದು ಹೇಳಿದೆ. ಹಾಗಾಗಿ ಒಳಮೀಸಲಾತಿ ಅಡಿ ನೇಮಕ ಮಾಡಲು ಯಾವ ಅಡ್ಡಿಯೂ ಇಲ್ಲ. ಆದರೂ ‘ಕೆಲವರು’ ಕೋರ್ಟ್ ನೆಪ ಹೇಳಿಕೊಂಡು ಒಳಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಅವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಪರಿಷ್ಕೃತ ಮಾದರಿ. ಅಥವಾ ಮುಂದುವರಿದ ಭಾಗ. ಅದನ್ನು ವಿರೋಧ ಮಾಡುತ್ತಾರೆ ಎಂದರೆ ಮೀಸಲಾತಿಯನ್ನು ವಿರೋಧ ಮಾಡುತ್ತಾರೆ ಎಂದೇ ಅರ್ಥ.
ಇದಾ ಸಹೋದರತ್ವ?
ಹಿಂದೆ ಮಾದಿಗರು ನೀರು ತುಂಬಿಸಿದರೆಂದು ಹೊಲೆಯರು ಬಾವಿ ನೀರು ಮುಟ್ಟದೆ ಹೊಲೆಯರಿಗೆ ಪ್ರತ್ಯೇಕ ಬಾವಿ ತೋಡಿಸಿಕೊಡಲಾಗಿದೆ. ಎಡಗೈ ಮತ್ತು ಬಲಗೈ ಸಮುದಾಯದ ಸಚಿವರಿಗೆ ಅವರವರ ಜಾತಿಯ ಜನ ಪ್ರತ್ಯೇಕವಾಗಿ ಸನ್ಮಾನ ಮಾಡಿದ್ದಾರೆ. ಹೊಲೆಯರು ಬೌದ್ಧ ಮತಕ್ಕೆ ಹೋದರೆಂದು, ಮಾದಿಗರು ಕ್ರಿಶ್ಚಿಯನ್ ಧರ್ಮದತ್ತ ಹೋಗಿದ್ದಾರೆ. ಹೀಗೆ ಬಹಳ ಹಿಂದಿನಿಂದಲೇ ಒಡಕಿತ್ತು. ಬರಬರುತ್ತಾ ಬಿರುಕು ಮಾಯವಾಗಬೇಕಿತ್ತು. ಆದರೆ ಇನ್ನೂ ಜಾಸ್ತಿಯಾಗುತ್ತಿದೆ. ಈಗ ಸದಾ ಸಂವಿಧಾನದ ಬಗ್ಗೆ ಮಾತನಾಡುವ ಸಚಿವರೊಬ್ಬರು ತಮ್ಮ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ಗುಮಾಸ್ತರವರೆಗೆ ಎಲ್ಲರನ್ನೂ ತಮ್ಮ ಒಳಪಂಗಡದವರನ್ನೇ ಸೇರಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನೊಬ್ಬ ಸಚಿವರು ಇತ್ತೀಚೆಗೆ ಕೆಲವು ಆಯ್ದ ವ್ಯಕ್ತಿಗಳ ಜೊತೆ ಚರ್ಚೆ ಮಾಡುತ್ತಿದ್ದರು. ಮಾತಿನ ಮಧ್ಯೆ ಅಲ್ಲಿದ್ದವರ ಪೈಕಿ ಒಬ್ಬರೇ ಒಬ್ಬರು ಎಡಗೈ ಸಮುದಾಯದವರು ಎಂದು ಗೊತ್ತಾಗಿ ತಕ್ಷಣವೇ ಸಭೆಯನ್ನು ಬರ್ಖಾಸ್ತುಗೊಳಿಸಿದರಂತೆ. ಇದಾ ಸಹೋದರತ್ವ?
ದಲಿತ ಸಿಎಂ ವಿಷಯದಲ್ಲೂ ಒಡಕು!
ರಾಜ್ಯದಲ್ಲಿ ಆಗಾಗ ದಲಿತ ಸಿಎಂ ಎನ್ನುವ ವಿಷಯ ಚರ್ಚೆ ಹುಟ್ಟಿ, ಹುಟ್ಟಿದ ರಭಸದಲ್ಲೇ ಸತ್ತುಹೋಗುತ್ತದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವ ವಿಷಯದಲ್ಲಿ ರಾಜಕೀಯ ಪಕ್ಷಗಳು ಉದಾರವಾಗಿ ನಡೆದುಕೊಂಡಿಲ್ಲ. ಬೇರೆ ಜಾತಿಯ ರಾಜಕೀಯ ನಾಯಕರೂ ಔದಾರ್ಯ ತೋರಿಲ್ಲ ಎನ್ನುವ ಮಾತುಗಳಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಆದರೆ ದಲಿತ ನಾಯಕರಲ್ಲೇ ಒಮ್ಮತವಿಲ್ಲ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ‘ದಲಿತ ಕೋಟಾದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವುದಿದ್ದರೆ ನನಗೇ ಸಿಗಲಿ, ಇಲ್ಲದಿದ್ದರೆ ದಲಿತರು ಮುಖ್ಯಮಂತ್ರಿ ಆಗುವುದೇ ಬೇಡ’ ಎನ್ನುವವರಿಗೆ ಕಡಿಮೆ ಇಲ್ಲ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇರುವ ಮಲ್ಲಿಕಾರ್ಜುನ ಖರ್ಗೆಗೆ ಆ ಸ್ಥಾನ ಕೊಡುವುದು ಪರಮೇಶ್ವರ್, ಮಹದೇವಪ್ಪ ಮತ್ತು ಮುನಿಯಪ್ಪಗೆ ಬಿಲ್ ಕುಲ್ ಇಷ್ಟವಿಲ್ಲ. ಅದೇ ರೀತಿ ಪರಮೇಶ್ವರ್ ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆ ಒಪ್ಪುವುದು ಅನುಮಾನ. ಮಹದೇವಪ್ಪ ಮತ್ತು ಮುನಿಯಪ್ಪ ಒಳಗೊಳಗೇ ವಿರೋಧಿಸುತ್ತಾರೆ ಎನ್ನುವ ಬಗ್ಗೆ ಅನುಮಾನವೇ ಬೇಡ. ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಬಿಟ್ಟು ಬೇರೊಬ್ಬ ದಲಿತ ನಾಯಕನಿಗೆ ಅವಕಾಶವಿಲ್ಲ. ಆದರೂ ಮಹದೇವಪ್ಪ ಮತ್ತು ಮುನಿಯಪ್ಪ ಸುಮ್ಮನಿರುವವರಲ್ಲ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಇವರ ಕಾದಾಟ ಬೇರೆಯವರಿಗೆ ರಸದೂಟವಾಗುತ್ತಿದೆ.
ಬಿಜೆಪಿಯ ರಾಜಕೀಯ ಲೆಕ್ಕಾಚಾರ!
ಅಣ್ಣ ತಮ್ಮಂದಿರ ನಡುವೆ ಜಗಳ ನಡೆಯುತ್ತಿದ್ದಾಗ ಆಸ್ತಿಯಲ್ಲಿ ಪಾಲು ಕೇಳು ಎಂದು ಪ್ರಚೋದಿಸುವ ಪಕ್ಕದ ಮನೆಯವರಿಗೆ ಸಹೋದರರು ಕಚ್ಚಾಡಬಾರದು ಎನ್ನುವ ಕಾಳಜಿ ಇರುವುದಿಲ್ಲ. ಬದಲಿಗೆ ಅವರ ಕಿತ್ತಾಟ ಕಂಡು ಸುಖಿಸುವ ವಿಕೃತಭಾವ ಇರುತ್ತದೆ ಅಥವಾ ಒಡಕಿನ ಲಾಭ ಮಾಡಿಕೊಳ್ಳುವ ಸಂಚು ಇರುತ್ತದೆ. ಸದ್ಯ ಎಡಗೈ ಮತ್ತು ಬಲಗೈ ಎಂಬ ಅಣ್ಣ ತಮ್ಮಂದಿರ ವಿಷಯದಲ್ಲಿ ಆಗುತ್ತಿರುವುದು ಇದೇ. ಬಲಗೈ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಎಡಗೈ ಸಮುದಾಯಕ್ಕೆ ‘ಪಾಲು ಕೇಳುವಂತೆ’ ಪ್ರಚೋದಿಸುತ್ತಿದೆ. ಎಡಗೈ ಸಮುದಾಯಕ್ಕೆ ಅರ್ಹ ಪಾಲು ಸಿಗಬೇಕು ಎನ್ನುವುದು ನ್ಯಾಯ. ಆದರೆ ಬಿಜೆಪಿ ಎಡಗೈ ನಾಯಕರನ್ನು ಪ್ರಚೋದಿಸುತ್ತಿರುವುದು ನ್ಯಾಯಕ್ಕಾಗಿ ಅಲ್ಲ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು. ಇವತ್ತು ಎಡಗೈ ಸಮುದಾಯಕ್ಕೆ ಅನ್ಯಾಯವಾಯಿತು ಎಂದು ಬೊಬ್ಬೆಹೊಡೆಯುತ್ತಿರುವ ಬಿಜೆಪಿ ಕಳೆದ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎ. ನಾರಾಯಣಸ್ವಾಮಿಗೆ ಟಿಕೆಟ್ ತಪ್ಪಿಸಿದ್ದೇಕೆ (ಅಲ್ಲಿ ಎಡಗೈಗೆ ಅವಕಾಶ ಕೊಟ್ಟಿದೆ)? ಬಿಜಾಪುರದಲ್ಲಿ ರಮೇಶ್
ಜಿಗಜಿಗಣಿಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದೇಕೆ? ಎಡಗೈ ಸಮುದಾಯಕ್ಕೆ ಇದು ಅರ್ಥವಾಗಬೇಕಿದೆ.
ಆಫ್ ದಿ ರೆಕಾರ್ಡ್!
ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವಿಷಯ ಚರ್ಚೆಗೆ ಬಂದಾಗ ದಲಿತೇತರ ಸಚಿವರು ಸುಮ್ಮನೆ ಕುಳಿತಿದ್ದರಂತೆ. ದಲಿತರ ವಿಷಯವನ್ನು ದಲಿತರೇ ಬಗೆಹರಿಸಿಕೊಳ್ಳಲಿ ಎನ್ನುವುದು ಅವರ ನಿಲುವಾಗಿತ್ತಂತೆ. ಮೇಲ್ನೋಟಕ್ಕೆ ಇದು ಸರಿ ಎನಿಸಬಹುದು. ಆದರೆ ಸಚಿವರು ಯಾವುದು ಸರಿಯೋ ಅದರ ಪರ ಇರಬೇಕಿತ್ತಲ್ಲವೇ? ದಲಿತರು ಅವರಿಗೆ ಮತ ಹಾಕುವುದಿಲ್ಲವೇ? ಇವರೆಲ್ಲ ಸುಮ್ಮನಿದ್ದ ಕಾರಣಕ್ಕೆ ಬಾಯಿ ಇದ್ದವರ ಪರ ನಿರ್ಧಾರವಾಗಿದೆ. ಬಾಯಿ ಇದ್ದವರು ಮಾತ್ರ ಬದುಕಬೇಕು ಎನ್ನುವುದಾದರೆ ಸರಕಾರ ಏಕೆ ಇರಬೇಕು?







