ಸಿದ್ದು ಮುನಿಸು ನಿಜವೇ? ಡಿಕೆಶಿಗೆ ಹೊಸ ಸವಾಲೇನು?

ಮಾತು ಬೆಳ್ಳಿ ಮೌನ ಬಂಗಾರ ಎನ್ನುವುದು ಸುಲಭ. ಅದು ಒಂದು ರೀತಿಯ ಕವಿಸಮಯದ ಕಲ್ಪನೆಯಂತೆ. ಕವಿಗಳು ಮಾಡುವ ‘ಕಿತಾಪತಿಗಳು’ ಹೀಗೆ ಮಾತನ್ನು ಬೆಳ್ಳಿಯಂತೆ ಬಳಸುವುದು ಮತ್ತು ಮೌನವನ್ನು ಬಂಗಾರದಂತೆ ಅಲಂಕರಿಸುವುದು ಎರಡೂ ಕಷ್ಟ. ರಾಜಕಾರಣಿಗಳಿಗಂತೂ ಇನ್ನೂ ಕಷ್ಟ. ಈಗ ಸಿದ್ದರಾಮಯ್ಯ ವಿಚಾರದಲ್ಲೂ ಅವರ ಮಾತು ಮತ್ತು ಮೌನದ ಬಗ್ಗೆ ವಿಶೇಷ ವ್ಯಾಖ್ಯಾನಗಳಾಗುತ್ತಿವೆ.
ಆಡಳಿತ ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಸದಾ ಸದನದ ಮುಂದಿನ ಸಾಲಿನಲ್ಲೇ ಕಾಣಿಸಿಕೊಳ್ಳುತ್ತಿದ್ದ (ಅವರು ವಿಧಾನಸಭೆಗೆ ಬಂದ ಮೊದಲ ಅವಧಿ ಬಿಟ್ಟು) ಸಿದ್ದರಾಮಯ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ವೇಳೆ ‘ಲಾಸ್ಟ್ ಬೆಂಚ್ ವಿದ್ಯಾರ್ಥಿ’ಯಾಗಿದ್ದರು. ಹಿಂದಿನ ಸಾಲಿನ ವಿದ್ಯಾರ್ಥಿಗಳ ರೀತಿಯಲ್ಲೇ Street Smartness ಬಳಸಿ ಮೈತ್ರಿ ಸರಕಾರದ Monitor ಮತ್ತು ಆ Monitor ಅನ್ನು ಆಯ್ಕೆ ಮಾಡಿದ್ದ ಖಿeಚಿಛಿheಡಿ ಗಳನ್ನು ಕಾಡಿದ್ದರು. ಈಗ ಹಿಂದಿನ ಸಾಲಿಗೆ ತಳ್ಳಲ್ಪಟ್ಟಿರುವ ಸಿದ್ದರಾಮಯ್ಯ ಅವರನ್ನು ಅನ್ನರಾಮಯ್ಯ, ಭಾಗ್ಯಗಳ ರಾಮಯ್ಯ, ಕನ್ನಡ ರಾಮಯ್ಯ, ಲೆಕ್ಕರಾಮಯ್ಯ, ಸದನರಾಮಯ್ಯ ‘ಮತ್ತಿತರ ರಾಮಯ್ಯ’ಗಳಂತೆ ‘ಮೌನರಾಮಯ್ಯ’ ಎಂದು ಬಣ್ಣಿಸಲಾಗುತ್ತಿದೆ. ಮಾತನಾಡುವ ಸಿದ್ದರಾಮಯ್ಯಗಿಂತ ಮೌನಿ ಸಿದ್ದರಾಮಯ್ಯ ಅಪಾಯಕಾರಿ, ಘರ್ಜಿಸುವ ಹುಲಿಗಿಂತ ಬೇಟೆಗಾಗಿ ಕಾಯುವ ಹುಲಿ ಅಪಾಯಕಾರಿ ಎಂದು ವ್ಯಾಖಾನಿಸಲಾಗುತ್ತಿದೆ. ಅವರ ಮೌನವೇ ಅವರ ತಂತ್ರಗಾರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರಿದು ನಿಜವೇ?
ಸಿದ್ದರಾಮಯ್ಯ ಅಪಾಯಕಾರಿಯೇ?
ಮುಖ್ಯವಾಗಿ ಡಿಕೆಶಿಗೆ ಸಮಸ್ಯೆಯೇ?
ಉತ್ತರ; ಇಲ್ಲ, ಇಲ್ಲ, ಇಲ್ಲ.
ಇವೇ ಪ್ರಶ್ನೆಗಳಿಗೆ ಹಿಂದೆ ನಿಜ, ಹೌದು, ಹೌದು ಎಂದು ಉತ್ತರಿಸಬಹುದಿತ್ತು. ಏಕೆಂದರೆ ಆಗ ಸಿದ್ದರಾಮಯ್ಯಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಹಠ ಇತ್ತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು, ಮುಂದುವರಿಯುವುದು ಅವರಿಗೆ ಇಷ್ಟವಿರಲಿಲ್ಲ. ಇದರಲ್ಲಿ ಮುಚ್ಚು ಮರೆಯೇನಿಲ್ಲ. ಕುಮಾರಸ್ವಾಮಿ ಅವರನ್ನು ಬಿಟ್ಟರೆ ಸಿದ್ದರಾಮಯ್ಯ ಬೇರೆಯವರ ಜೊತೆ ದ್ವೇಷ ಸಾಧಿಸಿದ ಉದಾಹರಣೆಯೂ ಸಿಗುವುದಿಲ್ಲ. ಬೇರೆಯವರೆಲ್ಲರನ್ನು ಬಿಡಿ, ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ರೇವಣ್ಣ ಕೂಡ ಸಿದ್ದರಾಮಯ್ಯಗೆ ಸಮಸ್ಯೆಯಲ್ಲ. ಚೆನ್ನಮ್ಮ ತೀರಿಕೊಂಡಾಗ ಸಿದ್ದರಾಮಯ್ಯ ಅವರು ದೇವೇಗೌಡರ ಕೈ ಹಿಡಿದು ಕುಳಿತಿದ್ದು, ಕಣ್ಣೀರು ಒರೆಸಿದ್ದು ಯಾರಿಗೂ ಕೃತಕ ಎನಿಸಲಿಲ್ಲ. ಇಂಥದೊಂದು ದೃಶ್ಯವನ್ನು ಒಂದೇ ಜಾತಿಯವರಾದರೂ ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಥವಾ ‘ಮೈತ್ರಿ ಮಾಡಿಕೊಂಡಿರುವ’ ದೇವೇಗೌಡ ಮತ್ತು ಯಡಿಯೂರಪ್ಪ ನಡುವೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿರಬಹುದು. ಆದರೆ ಅವರಿಗೆ ‘ಪ್ರಾದೇಶಿಕ ಪಕ್ಷದಿಂದ ಬಂದು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವುದು ಸುಲಭವಲ್ಲ, ಅಸ್ತಿತ್ವಕ್ಕಾಗಿ ಮಾತ್ರವೇ ಕಾಂಗ್ರೆಸ್ ಸೇರಬೇಕು’ ಎನಿಸಿದ್ದಿರಬಹುದು. ಹಾಗೆಯೇ ‘ಜೆಡಿಎಸ್ ಬಿಡುವಂಥ ಸನ್ನಿವೇಶ ಸೃಷ್ಟಿಯಾಗಲು ದೇವೇಗೌಡ ಅಲ್ಲ, ಕುಮಾರಸ್ವಾಮಿ ಕಾರಣ. ಕುಮಾರಸ್ವಾಮಿ ಪ್ರವರ್ಧಮಾನಕ್ಕೆ ಬಂದ ಬಳಿಕವೇ ದೇವೇಗೌಡ ಬದಲಾದದ್ದು’ ಎನಿಸಿರಬಹುದು. ಅದರಿಂದಾಗಿ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಮೇಲೆ ಅಷ್ಟೊಂದು ಸಿಟ್ಟು ಮತ್ತು ಕುಮಾರಸ್ವಾಮಿ ವಿಷಯದಲ್ಲಿ ಅಷ್ಟೊಂದು ಹಠ.
ಪ್ರಾರ್ಥನೆಯೂ ಫಲಿಸದಿರಬಹುದು, ಪ್ರಯತ್ನವೂ ಫಲಿಸದಿರಬಹುದು, ಆದರೆ ಹಠಕ್ಕೆ ಬಿದ್ದಾಗ ಸಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ಸಿದ್ದರಾಮಯ್ಯಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಬರುತ್ತೆ ಎನ್ನುವ ಖಾತರಿ ಇತ್ತು. ಅದಕ್ಕಿಂತಲೂ ಜಾಸ್ತಿ ಮುಖ್ಯಮಂತ್ರಿ ಆಗಬಹುದು ಎನ್ನುವ ವಿಶ್ವಾಸವಿತ್ತು. ಅವರು ಸವಾಲನ್ನು ಸ್ವೀಕರಿಸಿದ್ದರು. ಸಾಧಿಸಿ ತೋರಿದರು.
ಈಗ ಪರಿಸ್ಥಿತಿ ಬದಲಾಗಿದೆ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ. ಶಿವಕುಮಾರ್ ಸ್ವಾಭಾವಿಕವಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ನಂತಹ ಸಾಂಪ್ರದಾಯಿಕ ಪಕ್ಷದಲ್ಲಿ ಇದು ಸಹಜ. 2023ರ ರೀತಿ ಮೊದಲರ್ಧ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್ ಎನ್ನುವುದು ಅವಾಸ್ತವಿಕ. ಇವು ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಹೇಳಲು ಸಾಧ್ಯವೇ? ಸಿದ್ದರಾಮಯ್ಯ ಗೊತ್ತಿದ್ದೂ ತಪ್ಪು ಮಾಡುವ ರಾಜಕಾರಣಿ ಅಲ್ಲ, ಉದಾಹರಣೆಗೆ ಅಧಿಕಾರ ಹಸ್ತಾಂತರ ಬೆಳವಣಿಗೆ.
ಇವತ್ತಿಗೂ ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಶಾಸಕರು ಬೆಂಬಲಿಸುವುದು ಅವರ ಮೇಲಿನ ಪ್ರೀತಿಯಿಂದ ಅಲ್ಲ; ಅದು ಶುದ್ಧ ರಾಜಕೀಯ ಲೆಕ್ಕಾಚಾರ. ಸಿದ್ದರಾಮಯ್ಯ ಅಹಿಂದ ಮತಗಳ ಮೇಲೆ ಪ್ರಭಾವ ಹೊಂದಿದ್ದಾರೆ. ಅವರಿಂದ ಮತಗಳು ಲಭಿಸುತ್ತವೆ ಎನ್ನುವ ಕಾರಣಕ್ಕೆ. ಡಿ.ಕೆ. ಶಿವಕುಮಾರ್ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ. ಶಾಸಕರಿಗೆ ಮತ ತಂದುಕೊಡುವುದು ನಂತರದ ಮಾತು. ಮೊದಲು ಪಕ್ಷ ಟಿಕೆಟ್ ಕೊಡಬೇಕು. ಅದರಿಂದಾಗಿ ಅವರು ಪಕ್ಷದ ಪರ ಇರುತ್ತಾರೆ. ಹೈಕಮಾಂಡ್ ಹೇಳಿದ ಮರು ಘಳಿಗೆಯಲ್ಲಿ ತಮ್ಮ ನಿಷ್ಠೆಯನ್ನು ಮಿಂಚಿನಂತೆ ಬದಲಿಸುತ್ತಾರೆ.
ಸಿದ್ದರಾಮಯ್ಯ ಬಳಿ ಬಂದು ನಾವು ನಿಮ್ಮ ಪರ ಎಂದು ವೀರಾವೇಶದ ಮಾತುಗಳನ್ನಾಡುತ್ತಿದ್ದ ಸಚಿವರು, ಶಾಸಕರು ಹೊರಗೆ ‘ಹೈಕಮಾಂಡ್ ತೀರ್ಮಾನಕ್ಕೆ ಬದ್ಧ’ ಎಂದು ಮಾತು ಬದಲಿಸುತ್ತಿದ್ದರು. ದಿಲ್ಲಿ ಭೇಟಿ ವೇಳೆಯೂ ಅದೇ ವರಸೆ ತೋರುತ್ತಿದ್ದರು. ಇದನ್ನರಿತ ಸಿದ್ದರಾಮಯ್ಯ, ‘ನಿಮಗೆ ನಾನು ಬೇಡ ಎನ್ನುವುದಾದರೆ, ನನಗೆ ನೀವೂ ಬೇಡ, ಹೈಕಮಾಂಡ್ ಹೇಳಿದಂತೆ ಕೇಳಿ ಮತ್ತು ಅನುಭವಿಸಿ’ ಎನ್ನುವ ರೀತಿಯಲ್ಲಿ ಸುಮ್ಮನಾಗಿದ್ದಾರೆ.
ಇದಲ್ಲದೆ ಎರಡನೇ ಸಾಲಿನ ನಾಯಕರು ಕಾಯುತ್ತಿದ್ದಾರೆ. ಮತ್ತೆ ಮೊದಲು ಸಿದ್ದರಾಮಯ್ಯ, ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಾದರೆ ನಾವೇನು ಮಾಡಬೇಕು ಎನ್ನುವ ಸಹಜವಾದ ಅಸಮಾಧಾನ ಅಥವಾ ಅಸೂಯೆ ಅವರದು. ಆ ಸಾಲಿಗೆ ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಮತ್ತಿತರರನ್ನು ಸೇರಿಸಬಹುದು. ಸಿದ್ದರಾಮಯ್ಯ ಇದನ್ನು ಅಂದಾಜು ಮಾಡಲಾರದಷ್ಟು ದಡ್ಡರಂತೂ ಅಲ್ಲವೇ ಅಲ್ಲ. ಅವರು ಆಟ ಬಿಟ್ಟುಕೊಟ್ಟಿದ್ದಾರೆ.
ಮಂತ್ರಿಗಳ ಪದಗ್ರಹಣ ಸಮಾರಂಭಕ್ಕೆ ಗೈರಾಗಿದ್ದರಿಂದ ಸಿದ್ದರಾಮಯ್ಯ ಮೌನದ ಬಗ್ಗೆ ಚರ್ಚೆಯಾಗುತ್ತಿತ್ತು. ಅವರು ಮೊದಲ ದಿನ ಸದನಕ್ಕೆ ಬಾರದಿದ್ದದ್ದು ಚರ್ಚೆಗೆ ಇನ್ನಷ್ಟು ಪುಷ್ಟಿ ಕೊಟ್ಟಿತ್ತು. ಇದರ ಬಗ್ಗೆ ಮಾತನಾಡುತ್ತಿದ್ದ ಹಿರಿಯ ನಾಯಕರೊಬ್ಬರು ‘ಸಿದ್ದರಾಮಯ್ಯ ಇದೇ ರೀತಿ ಮೌನವಾಗಿರಬೇಕು. ತಮ್ಮ ಬೆಂಬಲಿಗ ಬಸವರಾಜ ಶಿವಣ್ಣನವರ್ ಮಂತ್ರಿಯಾದ ಮೇಲೆ ಅವರ ಜೊತೆಯೇ ವಿಧಾನಸೌಧಕ್ಕೆ ಬರಬೇಕಿತ್ತು. ಆಗ ಬೇರೆ ರೀತಿಯ ಸಂದೇಶ ಕೊಡಬಹುದಿತ್ತು’ ಎಂದರು. ಮರುಕ್ಷಣವೇ ‘ನಾವು ಹೇಳಿದ್ದರೂ ಸಿದ್ದರಾಮಯ್ಯ ಹಾಗೆ ಮಾಡುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು. ಇದರಿಂದ ಸಿದ್ದರಾಮಯ್ಯ ಅವರಿಗೆ ಸಾಧ್ಯತೆಗಳಿವೆ (ಸೀಮಿತವಾದ), ಆದರವರು ಜಿದ್ದಿಗೆ ಬಿದ್ದು ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಚಾಲ್ತಿಯಲ್ಲಿ ಇರಬೇಕಾದುದನ್ನು ಬಿಟ್ಟು ಬೇರೇನೂ ಆಗಬೇಕಿಲ್ಲದಿರುವುದರಿಂದ ಇನ್ನು ಮುಂದೆ ಸಿದ್ದರಾಮಯ್ಯ ಅಪಾಯಕಾರಿ ಆಗುವ ಸಾಧ್ಯತೆಗಳಿಲ್ಲ. ಡಿ.ಕೆ. ಶಿವಕುಮಾರ್ ಪಾಲಿಗೆ ಕ್ರೂರಿಯಾಗುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಕುಮಾರಸ್ವಾಮಿ ಬಗ್ಗೆ ಇರುವಂತೆ ಡಿ.ಕೆ.ಶಿವಕುಮಾರ್ ಮೇಲೆ ಸಿಟ್ಟೂ ಇಲ್ಲ. ಡಿ.ಕೆ. ಶಿವಕುಮಾರ್ ವಿಷಯದಲ್ಲಿ ಹಠವೂ ಇಲ್ಲ.
ಸಮಸ್ಯೆ ಅಲ್ಲ, ಸವಾಲು!
ಡಿಕೆಶಿ ಪಾಲಿಗೆ ಸಿದ್ದರಾಮಯ್ಯ ಸಮಸ್ಯೆ ಅಲ್ಲದಿರಬಹುದು, ಆದರೆ ಈಗಲೂ ಸವಾಲು. ಸಿದ್ದರಾಮಯ್ಯ ಅವರಿಂದಾಗಿ ಸಮಸ್ಯೆ ಆಗುವುದಿಲ್ಲ ಎಂದ ಮಾತ್ರಕ್ಕೆ ಅವರು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದುಕೊಳ್ಳುವಂತಿಲ್ಲ. ಹೈಕಮಾಂಡ್ ಹೇಳಿದ ಕೂಡಲೇ ಮರು ಮಾತನಾಡದೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದ ಅವರು ಬೆಂಬಲಿಗರಿಗೆ ಮಂತ್ರಿ ಸ್ಥಾನ ಕೊಡದಿದ್ದಾಗ ಕೆಲವೇ ದಿನಗಳ ಅಂತರದಲ್ಲಿ ಮೈಕೊಡವಿ ಕೊಂಡು ನಿಂತರು. ಸಿದ್ದರಾಮಯ್ಯ ಅವರಿಗೆ ಈಗ ಏನೂ ಆಗಬೇಕಿಲ್ಲ, ಆಗ ಬೇಕಿರುವುದು ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ. ನಿರ್ದಿಷ್ಟವಾದ ಸಮಸ್ಯೆಗಳಿಗೆ ನಿರ್ದಿಷ್ಟವಾದ ಪರಿಹಾರಗಳಿರುತ್ತವೆ. ಆದರೆ ಕೆಲವು ಸವಾಲುಗಳು ಸಂಕೀರ್ಣವಾಗಿರುತ್ತವೆ. ಸಿದ್ದರಾಮಯ್ಯ ಎನ್ನುವ ಸವಾಲು ಕೂಡ ಸಂಕೀರ್ಣವಾದುದು. ಸೂಕ್ಷ್ಮವಾಗಿ ನಿಭಾಯಿಸಿದರೆ ಲಾಭ, ಇಲ್ಲದಿದ್ದರೆ ನಷ್ಟ; ಯಾರಿಗೆಂದರೆ ಮತ್ತದೇ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ.
ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಶ್ರೀನಿವಾಸ್ ಪ್ರಸಾದ್, ಅಂಬರೀಷ್ ಮತ್ತಿತರ ಘಟಾನುಘಟಿ ನಾಯಕರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಜೊತೆಗೆ ಯಾರ ಮನೆಬಾಗಿಲಿಗೂ ಹೋಗದೆ ಪರಿಸ್ಥಿತಿಯನ್ನು ದಕ್ಕಿಸಿಕೊಂಡಿದ್ದರು. ಈ ರೀತಿ ಅರಗಿಸಿಕೊಳ್ಳುವುದು ಡಿ.ಕೆ. ಶಿವಕುಮಾರ್ ಅವರಿಗೆ ಸಾಧ್ಯವಿಲ್ಲ. ಸಂಪುಟ ವಿಸ್ತರಣೆ ನಂತರ ಸ್ಫೋಟಗೊಂಡಿದ್ದ ಅಸಮಾಧಾನ ಈಗ ಮೇಲುನೋಟಕ್ಕೆ ಶಾಂತವಾದಂತಿದೆ. ಆದರದು ಯಾವುದೇ ಸಂದರ್ಭದಲ್ಲಿ, ಹೇಗೆ ಬೇಕಾದರೂ ಸ್ಫೋಟಗೊಳ್ಳಬಹುದು. ಹಾಗೆ ಬಂಡೇಳುವವರು ಮೊದಲು ಸಂಪರ್ಕಿಸುವುದೇ ಸಿದ್ದರಾಮಯ್ಯ ಅವರನ್ನು. ಆದುದರಿಂದ ಡಿ.ಕೆ. ಶಿವಕುಮಾರ್ ಮನೆ ಗೆದ್ದು ಮಾರು ಗೆಲ್ಲು ಎನ್ನುವ ಮಾತಿನಂತೆ ಮೊದಲು ಸಿದ್ದರಾಮಯ್ಯ ವಿಶ್ವಾಸಗಳಿಸಿ ನಂತರ ಉಳಿದವರ ಮನ ಗೆಲ್ಲಬೇಕಾಗಿದೆ.
ಮಹದೇವಪ್ಪಗೆ ಅನ್ಯಾಯವೇ?
ಎಚ್.ಸಿ. ಮಹದೇವಪ್ಪ ಮೂಲ ಕಾಂಗ್ರೆಸಿಗರಲ್ಲ. ಆದರೂ ಕಾಂಗ್ರೆಸ್ 2008ರಲ್ಲಿ ಟಿಕೆಟ್ ಕೊಟ್ಟಿದೆ. 2013ರಿಂದ 2018ರವರೆಗೆ 5 ವರ್ಷ ಮಂತ್ರಿ ಮಾಡಿದೆ. ‘ಪಕ್ಷ ವಹಿಸಿದ್ದ ಜವಾಬ್ದಾರಿ’ಯನ್ನು ನಿರ್ವಹಿಸಲಿಲ್ಲ ಎನ್ನುವ ಆರೋಪಗಳಿದ್ದರೂ 2023ರಲ್ಲಿ ಮತ್ತೆ ಟಿಕೆಟ್ ಕೊಟ್ಟು ಗೆದ್ದ ಮೇಲೆ 3 ವರ್ಷ ಮಂತ್ರಿ ಮಾಡಿದೆ. 2024ರಲ್ಲಿ ಅವರ ಪುತ್ರ ಸುನಿಲ್ ಬೋಸ್ ಅವರಿಗೆ ಲೋಕಸಭಾ ಟಿಕೆಟ್ ಕೊಟ್ಟಿದೆ. ಇವೆಲ್ಲದರ ಹಿಂದೆ ಸಿದ್ದರಾಮಯ್ಯ ಪಾತ್ರ ಇದೆ. ಆದರೂ ಅವರು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಂದ ಅನ್ಯಾಯವಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ನಿಜಕ್ಕೂ ಅವರಿಗೆ ಅನ್ಯಾಯವಾಗಿದೆಯೇ?
ತನಗೆ ಮುಖ್ಯಮಂತ್ರಿ ಆಗುವ ಅರ್ಹತೆಗಳಿವೆ ಎಂದು ಹೇಳಿಕೊಳ್ಳುತ್ತಿರುವ ಮಹದೇವಪ್ಪ ಒಳ ಮೀಸಲಾತಿ ವಿಚಾರವನ್ನು ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲತೆಯಿಂದ ನಿಭಾಯಿಸಬಹುದಾಗಿತ್ತು. ಅಷ್ಟು ದೊಡ್ಡತನ ತೋರಲಿಲ್ಲ. ಸಿದ್ದರಾಮಯ್ಯ SCSP/TSP ಕಾಯ್ದೆ ತಂದಂತೆ ಮಹದೇವಪ್ಪ ಅವರದು ಎಂದು ಹೇಳಬಹುದಾದ ದಲಿತರ ಪರವಾದ ಒಂದೇ ಒಂದು ಕಾನೂನಿಲ್ಲ ಅಥವಾ ಕಾರ್ಯಕ್ರಮ ಇಲ್ಲ. ಈಗವರು ತಮ್ಮನ್ನು ಮಂತ್ರಿ ಮಾಡಿದರೆ ನ್ಯಾಯ, ಬೇರೆಯವರಿಗೆ ಅವಕಾಶ ಕೊಟ್ಟರೆ ಅನ್ಯಾಯ ಎನ್ನುವ ವಾದಕ್ಕಿಳಿದಿದ್ದಾರೆ. ಅಸಮಾಧಾನಿತರ ಸಂಪರ್ಕ ಸಾಧಿಸುತ್ತಿದ್ದಾರೆ ಎನ್ನುವ ವದಂತಿಯಿದೆ. ದಲಿತರಲ್ಲಿ ಬಡವರ ಮಕ್ಕಳು, ಬೇರೆಯವರ ಮಕ್ಕಳು ಬೆಳೆಯುವುದು ಬೇಡವೇ?
ಆಫ್ ದಿ ರೆಕಾರ್ಡ್!
ಎಂಎಲ್ಸಿ ಗೋವಿಂದರಾಜು ವಿಕಾಸಸೌಧದ ಆವರಣದಲ್ಲಿ ಎಸ್.ಎಂ. ಕೃಷ್ಣ ಪ್ರತಿಮೆ ಸ್ಥಾಪಿಸಬೇಕೆಂದು ಮನವಿ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಸಾಧನೆ ಶ್ಲಾಘನೀಯ. ಅದೇ ರೀತಿ ಸಿಇಟಿ ವ್ಯವಸ್ಥೆ ತಂದು ಬಡವರ ಮಕ್ಕಳು ವೈದ್ಯಕೀಯ ಶಿಕ್ಷಣದ ಕನಸು ಕಾಣುವಂತೆ ಮಾಡಿದ ವೀರಪ್ಪ ಮೊಯ್ಲಿ, ಬಡವರ ಪರವಾದ ಹಲವು ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಕೆಲಸಗಳು ಕೂಡ ಸ್ಮರಣೀಯ. ಇಂಥ ಇನ್ನೂ ಹಲವು ಮಹನೀಯರಿದ್ದಾರೆ. ಹಾಗಂತಾ ಅವರ ಪ್ರತಿಮೆಗಳನ್ನು ವಿಕಾಸಸೌಧದ ಆವರಣದಲ್ಲಿ ಸ್ಥಾಪಿಸುವುದು ಸರಿಯೇ? ವಿಧಾನಸೌಧ ಅಥವಾ ವಿಕಾಸಸೌಧಗಳು ಆಡಳಿತಸೌಧಗಳೇ ಹೊರತು ಮ್ಯೂಸಿಯಂ ಅಲ್ಲ. ಇಂತಹ ಬೆಳವಣಿಗೆ ಕೆಟ್ಟ ಪರಂಪರೆಗೆ ದಾರಿ ಮಾಡಿಕೊಡುತ್ತದೆ. ಕೆಲವರಿಗೆ ಮಹತ್ವ ಕೊಡುವ ಮೂಲಕ ಹಲವರ ಸಾಧನೆಗಳನ್ನು ತೆರೆಹಿಂದೆ ಸರಿಸುವ ತಂತ್ರಗಾರಿಕೆ ಎಂಬ ಅನುಮಾನ ಮೂಡಿಸುತ್ತದೆ. ಅನುಮಾನವನ್ನು ನಿಜ ಮಾಡಬೇಡಿ.






