Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಮೋದಿ ಸಿಂಹ ಇದ್ದಂತೆ... ಜಿರಳೆಗಳು?

ಮೋದಿ ಸಿಂಹ ಇದ್ದಂತೆ... ಜಿರಳೆಗಳು?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ12 Oct 2026 10:45 AM IST
share
ಮೋದಿ ಸಿಂಹ ಇದ್ದಂತೆ... ಜಿರಳೆಗಳು?

ಅದು ಅಂತಿಂಥ ಸಿಂಹವಲ್ಲ; ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನೇ ಬೇಟೆಯಾಡಿಕೊಂಡು ಬದುಕುವ ಸಹಜ ಸಿಂಹವಲ್ಲ. ಇತರ ಪ್ರಾಣಿಗಳನ್ನು ‘ಕಂಡಲ್ಲಿ ಕೊಲ್ಲುವ’ ಕ್ರೂರಿ, ಅರಣ್ಯಕ್ಕೆ ಅಪಾಯಕಾರಿ. ಕಾಡಿನ ರಾಜನಾದ ಅದು ‘ನನ್ನ ಮಾತೇ ಶಾಸನ’ ಎಂದು ಘೋಷಿಸಿತ್ತು. ಇಂಥ ಸಿಂಹದ ಮೂಗಿನ

ಮೇಲೆ ಒಮ್ಮೆ ಇರುವೆ ಸುಳಿದಾಡಿತು. ಸಿಂಹ ಕುಪಿತಗೊಂಡು ಪಂಜದಿಂದ ಹೊಡೆಯಲು ಪ್ರಯತ್ನಿಸಿತು. ಇರುವೆ ಬಳಿ ಬಲ ಇಲ್ಲದಿದ್ದರೂ ಬುದ್ಧಿ ಇತ್ತು. ಅದು ತಪ್ಪಿಸಿಕೊಂಡಿತು. ಜೊತೆಗೆ ಸಿಂಹಕ್ಕೂ ‘ಬುದ್ಧಿ ಕಲಿಸಲು’ ನಿರ್ಧರಿಸಿತು. ಸಿಂಹಕ್ಕೆ ಪ್ರತಿಷ್ಠೆ ಪಾತಾಳಕ್ಕೆ ಬಿದ್ದಂತಾಯಿತು. ಇರುವೆಯನ್ನು ಹಿಡಿದು ಸಾಯಿಸುವಂತೆ ಸೈನ್ಯಕ್ಕೆ ಆದೇಶಿಸಿತು. ಕಾಡಿನ ಆಡಳಿತ ನಡೆಸುವುದನ್ನು ಬಿಟ್ಟು ಇರುವೆ ಬೇಟೆಗೆ ಪಣತೊಟ್ಟಿತು. ಇದು ಕಾಡಿನ ಇತರ ಪ್ರಾಣಿಗಳಿಗೂ ತಿಳಿಯಿತು. ಸಿಂಹದ ದೌರ್ಜನ್ಯದಿಂದ ನೊಂದಿದ್ದ ಅವು ಇದೇ ಸರಿಯಾದ ಸಂದರ್ಭ ಎಂದುಕೊಂಡು ಪ್ರತಿಭಟನೆಗೆ ಇಳಿದವು. ಸಿಂಹಕ್ಕೆ ಒಂದು ಕಡೆ ಇರುವೆ ಸಿಗುತ್ತಿರಲಿಲ್ಲ. ಇನ್ನೊಂದೆಡೆ ಆಡಳಿತ ಕೈ ತಪ್ಪುತ್ತಿತ್ತು. ಕಡೆಗೊಂದು ದಿನ ಎಲ್ಲಾ ಪ್ರಾಣಿಗಳು ಒಟ್ಟಾಗಿ ದಾಳಿ ಮಾಡಿದವು. ಸಿಂಹ ಶರಣಾಯಿತು. ಸಿಂಹದ ಕತೆ ಮುಗಿಯಿತು. ಆದರೆ ಪ್ರಶ್ನೆಗಳು ಉಳಿದುಕೊಂಡವು.

ಸಿಂಹ ತನ್ನ ಹೊಟ್ಟೆಗೆ ಬೇಕಾದಷ್ಟು ಬೇಟೆಯಾಡಿಕೊಂಡಿದ್ದರೆ ಸಾಕಿತ್ತಲ್ಲವೇ?

ನೈಸರ್ಗಿಕ ನಿಯಮ ಮರೆತು ‘ನನ್ನ ಮಾತೇ ಶಾಸನ’ ಎಂದು ಹೇಳಬಹುದೇ?

ಸಣ್ಣ ಪ್ರಾಣಿ ಇರುವೆ ಮೇಲೆ ಸಿಂಹ ಅಷ್ಟೊಂದು ಕೋಪ ಮಾಡಿಕೊಳ್ಳಬೇಕಿತ್ತೆ?

ರಾಜನ ಸ್ಥಾನದ ಘನತೆ ಎದುರು ಇರುವೆ ವಿರುದ್ಧದ ಪ್ರತಿಷ್ಠೆಯೇ ಮುಖ್ಯವಾಯಿತೇ?

ಇರುವೆ ಹುಡುಕಲು ಹೋಗಿ ಕಾಡಿನ ಆಡಳಿತವನ್ನು ಸಂಪೂರ್ಣ ಮರೆತದ್ದೇಕೆ?

ದೌರ್ಜನ್ಯಗಳು ಮಿತಿ ಮೀರಿದಾಗ ಅವನತಿ ಹತ್ತಿರವಾಗುವುದು ಸಹಜವಲ್ಲವೇ?

ಇನ್ನೂ ಹಲವು ಪ್ರಶ್ನೆಗಳು...

ಉತ್ತರ ಮಾತ್ರ ಒಂದೇ Attitude.

ವರ್ತನೆ, ಧೋರಣೆ, ಪ್ರತಿಷ್ಠೆ ಏನೆಂದು ಕರೆದರೂ ಅಂತಿಮವಾಗಿ ಅದುAttitude.

ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಕೂಡ ಇದೇ;

Attitude. ಸಿಂಹ ಇರುವೆಗಳನ್ನು ಇನ್ನಿಲ್ಲದಂತೆ ಮಾಡಲು ಹೊರಟಿತ್ತು. ಮೋದಿ ‘ಜಿರಳೆ’ಗಳನ್ನು ಹೊಸಕಿಹಾಕಲು ಹೊರಟಿದ್ದಾರೆ. ಏಕೆಂದರೆ ಜಿರಳೆಗಳೆಂಬ Gen Z(ಯುವ ಪೀಳಿಗೆ)ಗಳ ಹೆಸರು ಕೇಳಿದ ತಕ್ಷಣ ಮೋದಿಗೆ ಹೆದರಿಕೆ. ಕಳೆದ 12 ವರ್ಷಗಳಿಂದ ದಂಡಿಗೆ-ದಾಳಿಗೆ ಹೆದರದಿದ್ದ ಮೋದಿಯನ್ನು ಮೊದಲು ಮಣಿಸಿದ್ದೇ ಈ ಯಕಶ್ಚಿತ್ ಜಿರಳೆಗಳು (ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಿಸುವ ಮೂಲಕ). ಆಗ ಜಿರಳೆಗಳು ಈ ಪರಿ ‘ಉಪಟಳ’ ನೀಡಬಲ್ಲವು ಎಂದು ಯಾರಿಗೂ ಅಂದಾಜಿರಲಿಲ್ಲ; ಮೋದಿಗೂ. ಈಗ ಜಿರಳೆಗಳು ಮೋದಿಯ ಮತ್ತೊಬ್ಬ ‘ಭಂಟ’ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ಬಯಸುತ್ತಿವೆ. ಮೋದಿಯನ್ನು ಜನತಾ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲು ಹೊರಟಿವೆ. ಜಂತರ್ ಮಂತರ್ ಪ್ರತಿಭಟನೆಯಲ್ಲಿ ಮೋದಿ ಪ್ರತಿಷ್ಠೆಯನ್ನು ಪ್ರಶ್ನೆ ಮಾಡಲೊರಟಿವೆ. ಮೋದಿಗೆ ಭಯವಾಗುವುದಿಲ್ಲವೇ?

ಭಯ, ಅಭದ್ರತೆ ಮತ್ತು ಆತ್ಮವಿಶ್ವಾಸದ ಕೊರತೆಗಳು ಮನುಷ್ಯನನ್ನು ವ್ಯಗ್ರಗೊಳಿಸುತ್ತವೆ. ತಪ್ಪು ಹೆಜ್ಜೆ ತುಳಿಯುವಂತೆ ಮಾಡುತ್ತವೆ. ಮೋದಿ ಸದ್ಯ ಇಡುತ್ತಿರುವ ಒಂದೊಂದು ನಡೆಯಲ್ಲೂ ಆ ನಡುಕ ಕಾಣಿಸುತ್ತಿದೆ. ಸರಿ ದಾರಿ ಏನಾಗಿತ್ತೆಂದರೆ Gen Zಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಲು ಬಿಟ್ಟುಬಿಡಬೇಕಿತ್ತು. ಪ್ರತಿಭಟನೆಯನ್ನು ಅರಗಿಸಿಕೊಂಡಿದ್ದರೆ ಜಿರಳೆಗಳ ವಿರುದ್ಧ ಮೋದಿ ಜಯ ಸಾಧಿಸಿದಂತಾಗುತ್ತಿತ್ತು.

ಜಿರಳೆಗಳ ಜಂತರ್ ಮಂತರ್ ಹೋರಾಟದ ಫಲಶ್ರುತಿ ಹೆಚ್ಚೆಂದರೆ ಜ್ಞಾನೇಶ್ ಕುಮಾರ್ ರಾಜೀನಾಮೆ ಆಗಿರುತ್ತಿತ್ತು. ಬಹುತೇಕ ಅಲ್ಲಿಗೆ ಕತೆ ಮುಗಿದಿರುತ್ತಿತ್ತು. ಏಕೆಂದರೆ ಜಿರಳೆಗಳ ಗುರಿ ಜ್ಞಾನೇಶ್ ಕುಮಾರ್ ಮಾತ್ರವೇ ಆಗಿತ್ತು. ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪರಿಣಾಮ ಈಗ ಗುರಿ ಬದಲಾಗಿದೆ. ಬಾಣಗಳು ಮೋದಿ ಮತ್ತು ಜಿರಳೆಗಳನ್ನು ಹೊಸಕಿ ಹಾಕಲು ಹೊರಟಿರುವ ದಿಲ್ಲಿ ಪೊಲೀಸರ ಅರಸ ಅಮಿತ್ ಶಾ ಕಡೆ ತಿರುಗಿ ಹೊರಟಿವೆ. ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ಕೊಡುವ ಪರಿಸ್ಥಿತಿ ಬರದಿರಬಹುದು. ಆದರೆ ಅವರ ವಿರುದ್ಧದ ದನಿಗಳು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತವೆ. ಹೋರಾಟ ಜಂತರ್ ಮಂತರ್ ದಾಟಿ ಬೇರೆಡೆಯೂ ದಾಖಲಾಗುತ್ತದೆ. ಅವ್ಯಕ್ತವಾಗಿದ್ದ ಹಲವು ಬಗೆಯ ಆಕ್ರೋಶಗಳು ಹೊರಬರಲು ಶುರುವಾಗುತ್ತವೆ. ಇವುಗಳನ್ನು ನಿಭಾಯಿಸುವುದು ಬಿಜೆಪಿ, ಮೋದಿ, ಅಮಿತ್ ಶಾಗೆ ಸಾಧ್ಯವಿಲ್ಲ. ಏಕೆಂದರೆ ಜಿರಳೆಗಳು ಜಂತರ್ ಮಂತರ್‌ನಲ್ಲಿ ಮತ್ತು ಎಲ್ಲೆಂದರಲ್ಲಿ ಪಠಿಸುತ್ತಿರುವುದು ಭಾವನಾತ್ಮಕ ಅಥವಾ ಧಾರ್ಮಿಕ ವಿಷಯಗಳಲ್ಲ.

ಭಾವನಾತ್ಮಕ ಅಥವಾ ಧಾರ್ಮಿಕ ವಿಷಯಗಳನ್ನು ನಿಭಾಯಿಸುವುದರಲ್ಲಿ ಬಿಜೆಪಿ, ಮೋದಿ, ಅಮಿತ್ ಶಾ ನಿಷ್ಣಾತರು. ಆ ವಿಷಯಗಳಾಗಿದ್ದರೆ ಇಷ್ಟೊತ್ತಿಗಾಗಲೇ ತಮಗೆ ಬೇಕಾದ ರೀತಿಯ ನಿರೂಪಣೆಯನ್ನು ಹೆಣೆದಿರುತ್ತಿದ್ದರು. ಆದರೆ ಇದು ಯುವಕರ ವಿಷಯ. ಅವರ ಭವಿಷ್ಯದ ವಿಷಯ. ಜಿರಳೆಗಳು ಹುಟ್ಟಿದ್ದೇ ಅದೇ ಕಾರಣಕ್ಕೆ. ಪರೀಕ್ಷಾ ಅಕ್ರಮವೇ ಜಿರಳೆಗಳ ಜನ್ಮರಹಸ್ಯ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದವರನ್ನು ಯುವಕರು ಈಗ ಕೊಡಿ ಎಂದು ಕೇಳುತ್ತಿದ್ದಾರಷ್ಟೇ. ಜಿರಳೆಗಳನ್ನು ನಾಶ ಮಾಡಿಬಿಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡವರ ಬೆವರಿಳಿಸುತ್ತಿದ್ದಾರಷ್ಟೇ.

ಪ್ರತಿಭಟನೆಗೆ ಮುಂದಾಗಿರುವ ತರುಣಿ-ತರುಣರು ಪ್ರತಿಕಾರಕ್ಕೆ ಮುಂದಾಗಿಲ್ಲ. ಮೋದಿ ಮತ್ತವರ ಸರಕಾರದ ವಿರುದ್ಧ ಯುವತಿ-ಯುವಕರ Attitude ಬಹಳ ಸರಳ. ಅವರು ಪ್ರತಿಭಟಿಸುತ್ತಿರುವ ರೀತಿ ಮತ್ತು ಅವರ ಅಭಿವ್ಯಕ್ತಿಗಳು ವಿಶಿಷ್ಟ-ವಿರಳ. ಅದು ಮೋದಿ Attitudeಗೆ ತದ್ವಿರುದ್ಧ. ಅವರು ಬಳಸುತ್ತಿರುವ ಭಾಷೆ, ಹಾಸ್ಯ, ವ್ಯಂಗ್ಯ, ವಿಡಂಬನೆಗಳು ಚುರುಕಾಗಿವೆ. ಚುಟುಕಾಗಿವೆ- ಈಗಿನ ಕಾಲಕ್ಕೆ ಹೇಗೆ ಬೇಕೋ ಹಾಗಿವೆ. ಇವ್ಯಾವೂ ತರಬೇತಿ ಶಿಬಿರಗಳಲ್ಲಿ ಕರಗತ ಮಾಡಿಕೊಂಡ ವಿದ್ಯೆಗಳಲ್ಲ. ಅಲ್ಲೇ ಆ ಕ್ಷಣದಲ್ಲೇ ಕಾಣಸಿಗುವ ಮಿಂಚುಗಳು.

ಯುವ ಪೀಳಿಗೆಯಲ್ಲಿ ಅಂಬೇಡ್ಕರ್ ಕಲಿಸಿದ ಅರಿವು ಕಾಣಿಸುತ್ತಿದೆ. ಗಾಂಧಿ ಪ್ರತಿಪಾದಿಸಿದ ಅಹಿಂಸಾ ವಾದ ಗೋಚರಿಸುತ್ತಿದೆ. ಭಗತ್ ಸಿಂಗ್ ಹೇಳಿದ ಶೌರ್ಯದ ಪ್ರದರ್ಶನವಾಗುತ್ತಿದೆ. ‘ಜಗತ್ತಿನ ಯಾವ ಮೂಲೆಯಲ್ಲಿ ಅನ್ಯಾಯವಾದರೂ ಧ್ವನಿ ಎತ್ತುವವನು ನನ್ನ ಮಿತ್ರ’ ಎಂಬ ಚೆಗುವೆರಾನ ಕೂಗು ಮಾರ್ದನಿಸುತ್ತಿದೆ. ದೇಶದ ಬೇರೆ ಬೇರೆ ಭಾಗಗಳಿಂದ ಯುವ ಪೀಳಿಗೆ ಸಿಜೆಪಿ ಹೋರಾಟಕ್ಕೆ ಜೊತೆಯಾಗಲು ದಿಲ್ಲಿಯತ್ತ ಧಾವಿಸುತ್ತಿದೆ.

ಬೀದಿಗಿಳಿದಿರುವ ಹುಡುಗಿ-ಹುಡುಗರ ಬಳಿ ದೊಡ್ಡ ದೊಡ್ಡ ರಾಜಕೀಯ ಘೋಷಣೆಗಳಿಲ್ಲ. ರಾಜಕೀಯ ಉದ್ದೇಶಗಳಿಲ್ಲ. ಆದರೆ ಸರಳವಾದ ಹಲವಾರು ಪ್ರಶ್ನೆಗಳಿವೆ. ವಿಕಸಿತ ಭಾರತ ಆಗುವವರೆಗೆ, ಅಂದರೆ 2047ರವರೆಗೆ ಉದ್ಯೋಗವಿಲ್ಲದೆ ದಿನದೂಡುವುದು ಹೇಗೆ ಎಂಬ ದುಗುಡ-ದುಮ್ಮಾನಗಳಿವೆ. ಅವುಗಳಿಗೆ ಮೋದಿ ಅಥವಾ ಕೇಂದ್ರ ಸರಕಾರದ ಬಳಿ ಉತ್ತರವಾಗಲಿ, ಪರಿಹಾರವಾಗಲಿ ಇಲ್ಲ.

ಪೊಲೀಸರು ಬೂಟು ಕಾಲಿನಲ್ಲಿ ಒದೆಯುತ್ತಾರೆ, ಅಮಾನುಷ ರೀತಿಯಲ್ಲಿ ವರ್ತಿಸುತ್ತಾರೆಂದು ಗೊತ್ತಿದ್ದರೂ ಯುವಕರು ಬ್ಯಾರಿಕೇಡ್ ಎದುರು ಬಂದು ನಿಂತಿದ್ದಾರೆ. ಸರಕಾರಕ್ಕೆ ಲಾಠಿ ಎತ್ತಬೇಕೋ ಬೇಡವೋ ಎನ್ನುವುದು ಗೊತ್ತಾಗುತ್ತಿಲ್ಲ. ಸರಕಾರ ಪೆಲೆಟ್ ಗನ್ ಪ್ರಯೋಗ ಮಾಡಲು, ಯಾವ ಹಂತಕ್ಕೆ ಬೇಕಾದರೂ ಇಳಿಯಲು ಹೇಸುವುದಿಲ್ಲ ಎನ್ನುವುದು ಗೊತ್ತಿದ್ದರೂ ಬಿಸಿರಕ್ತದ ಯುವತಿ-ಯುವಕರು ಧೈರ್ಯಗುಂದಿಲ್ಲ. ಸರಕಾರಕ್ಕೆ, ಪೊಲೀಸರಿಗೆ ಏನು ಮಾಡಬೇಕೆಂದು ತಲೆ ಓಡುತ್ತಿಲ್ಲ.

ರೈಲು, ಬಸ್ಸು, ಮೆಟ್ರೋ, ಕಾರು, ಆಟೋ ಸಿಗುವುದಿಲ್ಲ ಎನ್ನುವುದು ಗೊತ್ತು. ನೀರು-ಊಟ ಸಿಗುವುದಿಲ್ಲ ಎನ್ನುವುದು ಗೊತ್ತು. ಜಲಬಾಧೆಯಾದರೆ ನೀಗಿಸಿಕೊಳ್ಳಲು ಜಾಗ ಸಿಗುವುವಿಲ್ಲ ಎನ್ನುವುದೂ ಗೊತ್ತು. ಸಂಭಾವ್ಯ ಸಮಸ್ಯೆಗಳು ಕಣ್ಣೆದುರಿಗಿದ್ದರೂ ಯುವಕರು ಬೀದಿ ಬಿಟ್ಟು ಕದಲುತ್ತಿಲ್ಲ. ಸರಕಾರಕ್ಕೆ ಇವರನ್ನು ನಿಭಾಯಿಸುವ ಬಗೆ ಗೊತ್ತಾಗುತ್ತಿಲ್ಲ.

ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ಸರಕಾರದ ಮಡಿಲಲ್ಲಿ ಮಲಗಿರಬಹುದು. Common sense, Street-smartness ಮತ್ತು ನ್ಯಾಯಪ್ರಜ್ಞೆಯುಳ್ಳ ‘ಸಣ್ಣ ಸಣ್ಣ’ ಯುಟ್ಯೂಬರ್‌ಗಳು, ಪತ್ರಕರ್ತರು, ಯುವತಿ-ಯುವಕರು ಪ್ರತಿಭಟನಾ ಜಾಗದಲ್ಲಿ ಜಾಗರಣೆ ಕೂತಿದ್ದಾರೆ. ಸರಕಾರಕ್ಕೆ ಸತ್ಯ ಹೊರಗೋಗದಂತೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಯುವ ಪೀಳಿಗೆಯ ಪ್ರಶ್ನೆಗಳಿಗೆ ಉತ್ತರವಿಲ್ಲದ ಸರಕಾರ, ಸಮಸ್ಯೆಗಳಿಗೆ ಪರಿಹಾರ ಗೊತ್ತಿಲ್ಲದ ಪ್ರಧಾನಿ, ಪ್ರತಿಭಟನೆ ಎನ್ನುವ ಸಂವಿಧಾನ ಕೊಟ್ಟಿರುವ ಹಕ್ಕನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಗೃಹ ಸಚಿವ, ಪ್ರತಿಭಟಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರು ಬರಿದಾದಂತೆ ಕಾಣುತ್ತಿದ್ದಾರೆ.

ಸಿಂಹವಾದರೂ ಸರಿ, ಮೋದಿಯಾದರೂ ಸರಿ, ಹೊಟ್ಟೆ ಬಿರಿಯುವಂತೆ ತಿಂದರೆ ಅಜೀರ್ಣವಾಗುತ್ತದೆ. ಆಡಳಿತ ಮರೆತು ಶತ್ರು ಸಂಹಾರಕ್ಕೆ ಸಮರ ಸಾರಿದರೆ ಸರಕಾರಕ್ಕೂ ಸಿಂಹದ ಪರಿಸ್ಥಿತಿಯೇ ಬರುತ್ತದೆ. ಪ್ರತಿಷ್ಠೆಗಾಗಿ ಪ್ರತಿಭಟನೆ ಹತ್ತಿಕ್ಕಲು ಮುಂದಾದರೆ ಸಿಂಹಕ್ಕಾದ ಗತಿಯೇ ಪ್ರಾಪ್ತಿಯಾಗುತ್ತದೆ. ಕತೆ

ಮುಗಿದರೂ 15 ವರ್ಷ ಅಧಿಕಾರದಲ್ಲಿದ್ದು ಯಾವ ಸಾಧನೆ ಮಾಡಿದರೆಂಬ ಪ್ರಶ್ನೆ ಹಾಗೆ ಉಳಿದುಬಿಡುತ್ತದೆ.

ಮೋದಿ ಒಂದನ್ನು ಅರ್ಥ ಮಾಡಿಕೊಳ್ಳಲೇಬೇಕು. ‘ಜಿರಳೆ’ಗಳೇ ಭಾರತದ ಭವಿಷ್ಯ. ಕೇಂದ್ರದ ಸಾಂಖ್ಯಿಕ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ 35 ವರ್ಷಕ್ಕಿಂತ ಕಡಿಮೆ

ವಯಸ್ಸಿನ ಯುವಕರ ಪ್ರಮಾಣ ಸುಮಾರು 65ಶೇ. ದಷ್ಟು. ಇಲ್ಲಿಯವರೆಗೆ ಮೋದಿಗೆ ಅತಿ ಹೆಚ್ಚು ಮತ ಕೊಟ್ಟವರು ಜಿರಳೆಗಳೇ.

ಮಾಸ್ಕ್ ಹಾಕಿಕೊಂಡು ಪ್ರತಿಭಟನೆ ಮಾಡುತ್ತಿದ್ದ ಯುವತಿಯನ್ನು ಯೂಟ್ಯೂಬರ್ ಒಬ್ಬರು ‘ನೀವೇಕೆ ಮಾಸ್ಕ್ ಧರಿಸಿದ್ದೀರಿ?’ ಎಂದು ಕೇಳಿದರು. ಆಕೆ ‘ನಾನು ಮೋದಿಗೆ ಮತ ಕೊಟ್ಟಿದ್ದೇನೆ’ ಎಂದು ಮಾತು ನಿಲ್ಲಿಸಿದಳು. ಮಾತಿಗೆ ವಿರಾಮ ಹಾಕಲು ಆಕೆಯಲ್ಲಿದ್ದ ವಿಷಾದವೇ

ಕಾರಣ ಎನ್ನುವುದು ನೋಡುಗರಿಗೆ ಸುಲಭಕ್ಕೆ ಅರ್ಥವಾಗುತ್ತಿತ್ತು. ಮೋದಿಯನ್ನು, ಬಿಜೆಪಿಯನ್ನು ಆಯ್ಕೆ ಮಾಡಿದವರ ವಿಷಾದವೇ ಮುಂದಿನ ಚುನಾವಣೆಗೆ ಆಯುಧವಾದರೆ?

ಆಫ್ ದಿ ರೆಕಾರ್ಡ್

ಸಿಜೆಪಿ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್ ಇತರರ ಬಿಡುಗಡೆಗೆ ಏಕೆ ಸೂಚಿಸಲಿಲ್ಲ? ಈ ಪ್ರಶ್ನೆಗೆ ‘ಜಿರಳೆಗಳ ಜನ್ಮದಾತ’ರಾದ ಸಿಜೆಐ ಉತ್ತರಿಸಬೇಕು. ಸಿಜೆಪಿ ಪ್ರತಿಭಟನೆ ಇದ್ದದ್ದು ಶನಿವಾರ. ಕೇಂದ್ರ ಮತ್ತು ದಿಲ್ಲಿ ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕುವ ಸರ್ವಪ್ರಯತ್ನ ಮಾಡಿದ್ದು ಶುಕ್ರವಾರ. ಇದನ್ನು ಪ್ರಶ್ನಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದು ಶುಕ್ರವಾರ. ಆದರೆ ದಿಲ್ಲಿ ಹೈಕೋರ್ಟ್ ಶನಿವಾರದ ಪ್ರತಿಭಟನೆ ಬಗ್ಗೆ ಸೋಮವಾರ ವಿಚಾರಣೆ ನಡೆಸುವುದಾಗಿ ಹೇಳಿತು. ಯುವಕರನ್ನು ಜಿರಳೆ, ನೊಣ ಎಂದು ಗೊಣಗಾಡುವ ಸಿಜೆಐ ದೇಶದ ನ್ಯಾಯಾಂಗ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದರತ್ತವೂ ಚಿತ್ತ ಹರಿಸಬೇಕು.

Tags

ModiCockroaches
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X