ಸಿದ್ದು ಪಾಲಿಗೆ ಆರ್‌ಸಿಬಿ ಎಂದರೆ ಬೇರೆ ಅರ್ಥ!

ಕಾಲ್ತುಳಿತ ಪ್ರಕರಣ ರಾಜ್ಯ ಸರಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಸರಕಾರವನ್ನು ಮುನ್ನಡೆಸುತ್ತಿರುವ ರಾಜಕೀಯ ನಾಯಕತ್ವ ಮತ್ತು ಆಡಳಿತ ಬಂಡಿ ಎಳೆಯುತ್ತಿರುವ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲ ಎನ್ನುವುದರ ಸ್ಪಷ್ಟ ಉದಾಹರಣೆ. ಸಿದ್ದರಾಮಯ್ಯ ಆಪ್ತರು, ಅಭಿಮಾನಿಗಳೇ ‘ಈಗ ಸಿದ್ದರಾಮಯ್ಯ ಮೊದಲಿನಂತಿಲ್ಲ’, ‘ಅವರಲ್ಲಿ ಕಳೆದ ಅವಧಿಯ ಕಾರ್ಯವೈಖರಿ ಕಾಣುತ್ತಿಲ್ಲ’ ಎಂಬ ಮಾತುಗಳನ್ನು ಹೇಳುತ್ತಿರುತ್ತಾರೆ. ರಾಜಕಾರಣದಲ್ಲಿ ೪೦ ವರ್ಷಗಳಲ್ಲಿ ಇಲ್ಲದಿದ್ದ ಅದ್ಯಾವ ‘ಯತೀಂದ್ರ ಶಕ್ತಿ’ ಈಗ ಅವರನ್ನು ಕಾಡುತ್ತಿದೆಯೋ? ಎಂಬ ಆಶ್ಚರ್ಯವನ್ನೂ ಆತಂಕವನ್ನೂ ವ್ಯಕ್ತಪಡಿಸುತ್ತಾರೆ.
ಕಾಲ್ತುಳಿತದಲ್ಲಿ ಸಾವುನೋವಾಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದರು. ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದರು. ಮೃತರ ಕುಟುಂಬಗಳಿಗೆ ನೀಡುವ ನೆರವು (ಪ್ರಾಣಕ್ಕೆ ಪರಿಹಾರ ನೀಡಲಾಗದು) ಘೋಷಿಸಿದರು. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದರು. ಇವಿಷ್ಟೂ ಸಾಲದೆಂಬಂತೆ ಮರುದಿನ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದರು. ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಆದೇಶಿಸಿದರು. ಕೆಎಸ್ ಸಿಎ ಮತ್ತು ಆರ್ ಸಿಬಿ ವಿರುದ್ಧ ದೂರು ದಾಖಲಿಸಿ ಆ ಸಂಸ್ಥೆಗಳ ಮುಖ್ಯಸ್ಥರನ್ನು ಕೂಡಲೇ ಬಂಧಿಸುವಂತೆ ಸೂಚಿಸಿದರು. ಮೇಲಾಗಿ ರಾಜ್ಯ ಸರಕಾರ, ಪೊಲೀಸ್ ವ್ಯವಸ್ಥೆ, ಕೆಎಸ್‌ಸಿಎ ಮತ್ತು
ಆರ್‌ಸಿಬಿ ಆಡಳಿತ ಮಂಡಳಿಗಳ ನಡುವೆ ಸಮರ್ಪಕವಾದ ಸಮನ್ವಯ ಸಾಧಿಸಲು ವಿಫಲರಾದರೆಂದು ಗೋವಿಂದರಾಜು ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕಿತ್ತು ಹಾಕಿದರು. ಈ ಪೈಕಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಗೋವಿಂದರಾಜು ಅವರನ್ನು ತೆಗೆದು ಹಾಕಿದ ಬಗ್ಗೆ ಅಷ್ಟೇ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಜನ ಸಿದ್ದರಾಮಯ್ಯ ಅವರಿಂದ ನಿರೀಕ್ಷಿಸುವುದು ಇಂಥ ತ್ವರಿತ ಮತ್ತು ನಿಷ್ಠುರ ನಡೆಗಳನ್ನು.
ವಿಧಾನಸೌಧದ ಮೆಟ್ಟಿಲ ಮೇಲೆ ನಡೆಯುವ ಕಾರ್ಯಕ್ರಮಕ್ಕೆ ಅದರದೆಯಾದ ಘನತೆ ಇರಬೇಕು. ರಾಜ್ಯಪಾಲರು ಪಾಲ್ಗೊಳ್ಳುವ ಕಾರ್ಯಕ್ರಮದ ತೂಕ ಇನ್ನೂ ಹೆಚ್ಚಿರಬೇಕು. ಅಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಥಳೀಯ ಶಾಸಕ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸನ್ಮಾನ ಸ್ವೀಕರಿಸಲು ಆಹ್ವಾನಿಸಿರುವ ಅತಿಥಿಗಳ ಹೊರತು ಒಬ್ಬರೂ ಹೆಚ್ಚಿರಬಾರದು. ಸಂಬಂಧಪಟ್ಟ ಸಚಿವರ ಹೊರತು ಉಳಿದ ಸಂಪುಟ ಸದಸ್ಯರೂ ಹಾಜರಿರಬಾರದು. ಆದರೆ ಆವತ್ತು ಶಿಷ್ಟಾಚಾರಕ್ಕೆ ಅಪಚಾರವಾಗಿತ್ತು. ಸಿದ್ದರಾಮಯ್ಯ ತಂಡದ ಪಕ್ಕವಾದ್ಯಗಳಂತಿರುವ ಝಮೀರ್ ಅಹಮದ್ ಖಾನ್, ಅಶೋಕ ಪಟ್ಟಣ್ ಮತ್ತಿತರರಿಂದ ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಖುದ್ದು ಸಿದ್ದರಾಮಯ್ಯ ಅವರೇ ಮೊಮ್ಮಗನನ್ನು ಕರೆತಂದು ಪೋಸು ಕೊಡಿಸಿದ್ದರು. ಸಿದ್ದರಾಮಯ್ಯ ಅವರಿಂದ ಖಂಡಿತಕ್ಕೂ ಜನ ಇಂಥವನ್ನು ನಿರೀಕ್ಷಿಸುವುದಿಲ್ಲ.
ಇಡೀ ಘಟನಾವಳಿಯಲ್ಲಿ ಸಿದ್ದರಾಮಯ್ಯ ಅವರಿಗೆ ಹೇಗಿರಬೇಕು? ಮತ್ತು ಹೇಗಿರಬಾರದು? ಎಂಬ ಎರಡೂ ಪಾಠವಿವೆ. ಇತ್ತೀಚೆಗಿನ ಬಿ.ಕೆ. ಹರಿಪ್ರಸಾದ್ ಭೇಟಿಯಿಂದ ಹಿಡಿದು ಎಲ್ಲೆಡೆ ಸಿದ್ದರಾಮಯ್ಯ ಜೊತೆ ಇದೇ ಝಮೀರ್ ಅಹಮದ್ ಖಾನ್, ನಸೀರ್ ಅಹಮದ್, ಗೋವಿಂದರಾಜ್, ಅಶೋಕ ಪಟ್ಟಣ್, ಪ್ರಕಾಶ್ ರಾಥೋಡ್ ಮತ್ತಿತರರಿರುತ್ತಾರೆ. ಈ ಅನಗತ್ಯ ಅತಿಥಿಗಳು ಸಿದ್ದರಾಮಯ್ಯ ವಂದಿ ಮಾಗಧರನ್ನು ಬಿಟ್ಟಿರಲಾರರು ಎಂಬ ಸಂದೇಶವನ್ನು ರವಾನಿಸುತ್ತಿರುತ್ತಾರೆ. ಬೆಂಗಳೂರಿನ ಕಾಲ್ತುಳಿತ ದುರಂತಕ್ಕೂ ವಂದಿ ಮಾಗಧರಿಗೂ ಸಂಬಂಧವಿದೆ.
ಆರ್‌ಸಿಬಿ ಮ್ಯಾನೇಜ್ಮೆಂಟ್ ಫೈನಲ್ ಪಂದ್ಯಕ್ಕೂ ಮುನ್ನವೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಿಜಯೋತ್ಸವಕ್ಕೆ ಅನುಮತಿ ನೀಡುವಂತೆ ಕೇಳಿತ್ತು. ಅದು ಫೈನಲ್ ಗೆಲುವು ತನ್ನದೇ ಎಂದು ನಿರ್ಧರಿಸಿದ್ದು ಜಂಟಲ್‌ಮ್ಯಾನ್ ಗೇಮ್ ಎಂದೇ ಕರೆಯಲ್ಪಡುತ್ತಿದ್ದ ಕ್ರಿಕೆಟ್ ಅನ್ನು ಬೆಟ್ಟಿಂಗ್ ದಂಧೆಯನ್ನಾಗಿ, ಡ್ರೀಮ್ ಇಲೆವೆನ್ ಎಂಬ ಅಧಿಕೃತ ಜೂಜಾಟದ ವೇದಿಕೆಯಾಗಿ ಬದಲಾಯಿಸಲು ಆವಿಷ್ಕರಿಸಿದ ಐಪಿಎಲ್ ಎಂಬ ಪರಿಕಲ್ಪನೆಯಲ್ಲಿ ಸಹಜವಾಗಿರಬಹುದು. ಆದರೆ ಸಮಯ ಇಲ್ಲವೆಂದು ಪೊಲೀಸರು ಅನುಮತಿ ಕೊಡಲಿಲ್ಲ. ಆಗ ಆರ್‌ಸಿಬಿ ಗೋವಿಂದರಾಜ್ ಅವರನ್ನು ಸಂಪರ್ಕಿಸಿದೆ. ‘ನಮ್ಮ ವಿದೇಶಿ ಆಟಗಾರರು ಮರುದಿನವೇ ಅವರ ದೇಶಗಳಿಗೆ ತೆರಳಬೇಕಿದೆ. ವಿರಾಟ್ ಕೊಹ್ಲಿ ಕೂಡ ವಿದೇಶಕ್ಕೆ ಹೋಗಬೇಕಿದೆ. ಉಳಿಸಿಕೊಂಡರೆ ನಾವೇ ಅವರ ಖರ್ಚು-ವೆಚ್ಚ ಭರಿಸಬೇಕಾಗುತ್ತದೆ. ಜೂನ್ ೫ರಂದೇ ವಿಜಯೋತ್ಸವಕ್ಕೆ ಅನುಮತಿ ಕೊಡಿಸಿ’ ಎಂದು ಕೇಳಿಕೊಂಡಿದೆ. ಗೋವಿಂದರಾಜ್ ನೇರವಾಗಿ ಪೊಲೀಸ್ ಆಯುಕ್ತ ದಯಾನಂದ್ ಜೊತೆ ಮಾತನಾಡಿದರು, ಅವರೂ ನಿರಾಕರಿಸಿದ್ದಾರೆ.
ಇಷ್ಟಾಗುವ ಹೊತ್ತಿಗೆ ಆರ್‌ಸಿಬಿ ಗೆದ್ದಾಗಿತ್ತು. ರಾತ್ರಿ ಕಳೆದಾಗಿತ್ತು. ಮರುದಿನ ಗೋವಿಂದರಾಜ್ ನೇರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿ ‘ಜನರಿಗೆ
ಆರ್‌ಸಿಬಿ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನವಿದೆ. ಆರ್‌ಸಿಬಿ ವಿಜಯೋತ್ಸವಕ್ಕೆ ಸಹಕರಿಸಿದರೆ ಸರಕಾರ ಯುವಜನರ ಜೊತೆ ಕನೆಕ್ಟ್ ಆಗಬಹುದು’ ಎಂದು ಹೇಳಿದ್ದಾರೆ. ಗೋವಿಂದರಾಜ್ ಮಾತಿಗೆ ಡಿ.ಕೆ. ಶಿವಕುಮಾರ್ ಕೂಡ ದನಿಗೂಡಿಸಿದಾಗ ಸಿದ್ದರಾಮಯ್ಯ ತಲೆಯಾಡಿಸಿದ್ದಾರೆ. ಇದೀಗ ಆಪ್ತ ಎನ್ನುವ ಕಾರಣಕ್ಕೆ ಗೋವಿಂದರಾಜ್ ಮಾತು ಕೇಳಿದ್ದರಿಂದ ಮತ್ತು ಡಿಕೆಶಿ ಒತ್ತಡಕ್ಕೆ ಮಣಿದಿದ್ದರಿಂದ ಸಿದ್ದರಾಮಯ್ಯಗೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿದೆ. ಗೋವಿಂದರಾಜ್ ಮತ್ತು ಡಿ.ಕೆ. ಶಿವಕುಮಾರ್ ಸೂಕ್ಷ್ಮವಾಗಿ ವರ್ತಿಸಿದ್ದರೆ, ಅಥವಾ ಅವರಿಬ್ಬರ ಮಾತುಗಳನ್ನು ಸಿದ್ದರಾಮಯ್ಯ ಪರಮಾರ್ಶಿಸಿ ನೋಡಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ ಎನ್ನುತ್ತವೆ ಸರಕಾರದ ಮೂಲಗಳು. ಮುಡಾ ಪ್ರಕರಣದಲ್ಲೂ ಇದೇ ರೀತಿಯಾಗಿತ್ತು. ವಂದಿ ಮಾಗಧಿಗರ ಮಾತು ಕೇಳಿ ಹೆಸರು ಕೆಡಿಸಿಕೊಂಡಿದ್ದರು.
ದಯಾನಂದ್ ಸಸ್ಪೆಂಡ್ ಆಗಿದ್ದೇಕೆ?
ಘಟನೆಗೆ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಆ ಪೈಕಿ ದಯಾನಂದ್ ಅಮಾನತು ಹೆಚ್ಚು ಚರ್ಚೆಯಾಗುತ್ತಿದೆ ಎಂಬುದನ್ನು ಶನಿವಾರ ಕೆಲ ಆಪ್ತ ಸಚಿವರು ಸಿದ್ದರಾಮಯ್ಯರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ದಯಾನಂದ್ ಎಫಿಶಿಯಂಟ್ ಆಫೀಸರ್ ಎಂದು ನನಗೂ ಗೊತ್ತು. ಆದರೆ ವಿಧಾನಸೌಧದ ಕಾರ್ಯಕ್ರಮ ನಡೆಯುವ ಮುನ್ನವೇ ಒಂದು ಸಾವಾಗಿದ್ದರೂ ನನ್ನ ಗಮನಕ್ಕೆ ತರಲಿಲ್ಲ. ಅವರು ಒಂದು ಮಾತು ಹೇಳಿದ್ದಿದ್ದರೆ ಕಾರ್ಯಕ್ರಮವನ್ನೇ ನಿಲ್ಲಿಸಿಬಿಡುತ್ತಿದ್ದೆ. ಇದಾದ ಮೇಲೆ ಸಾವಿನ ಸಂಖ್ಯೆ ಹೆಚ್ಚಾದಾಗಲೂ ಸರಿಯಾದ ಮಾಹಿತಿ ನೀಡಲಿಲ್ಲ. ಸರಿಯಾದ ಮಾಹಿತಿ ನೀಡಿದ್ದರೆ ನಾನೇ ಖುದ್ದಾಗಿ ಸ್ಥಳಕ್ಕೆ ಹೋಗುತ್ತಿದ್ದೆ. ಅವರಿಂದಾಗಿ ಸರಕಾರ ಮುಜುಗರ ಅನುಭವಿಸಬೇಕಾಗಿದೆ. ಗೋವಿಂದರಾಜ್ ನೇರವಾಗಿ ಪೊಲೀಸರ ಜೊತೆ ವ್ಯವಹರಿಸುವುದಾದರೆ ಗೃಹ ಸಚಿವರು ಯಾಕಿರಬೇಕು? ಎಂದು ಪ್ರಶ್ನಿಸಿದ್ದಾರೆ. ಅಲ್ಲಿಗೆ ಸಚಿವರು ಸುಮ್ಮನಾಗಿದ್ದಾರೆ.
ಸಚಿವರು ಹೇಳುವ ಪ್ರಕಾರ ಸಿದ್ದರಾಮಯ್ಯ ಅವರಿಗೆ ದಯಾನಂದ್ ದಕ್ಷತೆ ಬಗ್ಗೆ ಸದಭಿಪ್ರಾಯವಿತ್ತು. ಭಡ್ತಿ ಬಳಿಕವೂ ಅವರನ್ನೇ ಬೆಂಗಳೂರು ಪೊಲೀಸ್ ಆಯುಕ್ತರ ಸ್ಥಾನದಲ್ಲಿ ಮುಂದುವರಿಸಬೇಕು ಎಂದುಕೊಂಡಿದ್ದರು. ಆದರೆ ಈ ವಿಷಯದಲ್ಲಿ ಸಿಎಂಗೆ ಸರಿಯಾದ ಮಾಹಿತಿ ನೀಡದೆ ದಯಾನಂದ್ ಎಡವಟ್ಟು ಮಾಡಿಕೊಂಡಿದ್ದಾರಂತೆ.
ಗೋವಿಂದರಾಜ್ ಕಿತ್ತಾಕಿದ್ದೇಕೆ?
ಗೋವಿಂದರಾಜ್ ಒಂದೆಡೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಂದ ಡಿಪಿಎಆರ್ ಕಾರ್ಯದರ್ಶಿಗೆ ವಿಧಾನಸೌಧದ ಮೆಟ್ಟಿಲ ಮೇಲಿನ ಕಾರ್ಯಕ್ರಮಕ್ಕೆ ಅನುಮತಿ ಕೊಡುವಂತೆ ಒತ್ತಡ ಹಾಕಿದ್ದಾರೆ. ಇನ್ನೊಂದೆಡೆ ಕೆಎಸ್‌ಸಿಎ ಕಾರ್ಯಕ್ರಮಕ್ಕೆ ಮೌಖಿಕ ಸೂಚನೆ ಕೊಡಿಸಲು ದಯಾನಂದ್ ಅವರಿಗೆ ಡಿ.ಕೆ. ಶಿವಕುಮಾರ್ ಅವರಿಂದ ಕರೆ ಮಾಡಿಸಿ ಒತ್ತಡ ಹೇರಿದ್ದಾರೆ ಎನ್ನುದು ಎಲ್ಲರಿಗೂ ಗೊತ್ತಿರುವ ವಿಚಾರಗಳೇ. ಆದರೆ ಸಿದ್ದರಾಮಯ್ಯ ಅವರಿಗೆ ಜಾಸ್ತಿ ಸಿಟ್ಟು ಬಂದಿರುವುದು ಡಿ.ಕೆ. ಶಿವಕುಮಾರ್ ಜೊತೆ ಸೇರಿಕೊಂಡು ಸೌಜನ್ಯಕ್ಕೂ ಗೃಹ ಸಚಿವ ಪರಮೇಶ್ವರ್ ಜೊತೆ ಮಾತನಾಡಿಲ್ಲ. ಡಿಕೆಶಿ ನನ್ನ ಮಾತು ಕೇಳುತ್ತಾರೆಂದು ಪರಮೇಶ್ವರ್ ಅವರಂಥ ಹಿರಿಯ ಸಚಿವರನ್ನೇ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ವಿಧಾನಸೌಧದ ಕಾರ್ಯಕ್ರಮ ಮಳೆಯಿಂದಾಗಿ ಮೊಟಕುಗೊಂಡು, ಅಷ್ಟೊತ್ತಿಗಾಗಲೇ ಏಳೆಂಟು ಜನ ಸತ್ತಿದ್ದರೂ ಕೆಎಸ್‌ಸಿಎನಲ್ಲಿ ಕಾರ್ಯಕ್ರಮ ನಡೆಸಲು ಒತ್ತಡ ಹೇರಿದರು. ಅಲ್ಲಿಗೆ ಡಿಕೆಶಿಯನ್ನೂ ಕರೆದೊಯ್ದರು. ಆ ಹಂತದಲ್ಲೂ ನನಗೆ ಸಾವಿನ ಮಾಹಿತಿ ನೀಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಿಎಂಗೆ ತಿಳಿಸಿ ಒಪ್ಪಿಗೆ ಪಡೆದಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎನ್ನುವ ಕಾರಣಕ್ಕಂತೆ.
ಕೆಎಸ್‌ಸಿಎ ಸೂಪರ್ ಸೀಡ್ ಚಿಂತನೆ
ಪೊಲೀಸರ ಮೇಲೆ ಒತ್ತಡ ತಂದು ಇಂಥ ಘೋರ ದುರಂತ ಆಗಲು ಕಾರಣವಾದ ಕೆಎಸ್‌ಸಿಎ ಅನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸಬೇಕು ಎನ್ನುವ ಚಿಂತನೆ ಶುರುವಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾಲ್ತುಳಿತ ಘಟನೆ ಆಗುತ್ತಿದ್ದಂತೆ ಸಕ್ರಿಯರಾಗಿದ್ದಾರೆ. ಕೆಎಸ್‌ಸಿಎ ಸೊಸೈಟಿ ಕಾಯ್ದೆಯಡಿ ನೋಂದಣಿಯಾಗಿರುವುದರಿಂದ ಸಹಕಾರ ಇಲಾಖೆ ಕ್ರಮ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಕಾನೂನು ಸಚಿವರು ಮತ್ತು ತಜ್ಞರ ಅಭಿಪ್ರಾಯವನ್ನು ಕೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದಾರೆ. ಎಲ್ಲರೆದುರು ವಿಷಯ ಪ್ರಸ್ತಾಪಿಸಿದ ರಾಜಣ್ಣ ಅವರನ್ನು ಸಿದ್ದರಾಮಯ್ಯ ಒಳಗಡೆ ಕರೆದುಕೊಂಡು ಹೋಗಿ ಮಾತನಾಡಿದ್ದಾರೆ. ಮಾತುಕತೆಯ ವಿವರಗಳು ಗೊತ್ತಿಲ್ಲ. ಆದರೆ ಪ್ರಭಾವಿಗಳ ಮತ್ತು ಪಟ್ಟಭದ್ರರ ಹಿಡಿತದಲ್ಲಿರುವ ಕೆಎಸ್‌ಸಿಎ ಅನ್ನು ಸೂಪರ್ ಸೀಡ್ ಮಾಡುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಿರುವ ವಿಚಾರವೇ.
ಇನ್ನೊಂದು ಶಿಷ್ಟಾಚಾರದ ಕತೆ
ಸರಕಾರ ಬಂದು ಎರಡು ವರ್ಷವಾದರೂ ರಾಜಧಾನಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸ್ ನಿಲ್ದಾಣ, ಉದ್ಯಾನವನ, ಕುಡಿಯುವ ನೀರಿನ ಘಟಕಗಳ ಮೇಲೆ ಮಾಜಿ ಮುಖ್ಯಮಂತ್ರಿ ಭಾವಚಿತ್ರಗಳೇ ಇವೆ. ಶಿಷ್ಟಾಚಾರದ ಪ್ರಕಾರ ಅವುಗಳನ್ನು ಬದಲಿಸಿ ಎಂದು ಬಿಬಿಎಂಪಿ ಮಾಜಿ ಸದಸ್ಯ ಎಂ. ಶಿವರಾಜ್ ಅಧಿಕಾರಿಗಳಿಗೆ ಹೇಳಿದ್ದಾರೆ. ಎರಡು ವರ್ಷದಿಂದ ಅವರು ಅಧಿಕಾರಿಗಳನ್ನು ಕೇಳುವುದು, ಅಧಿಕಾರಿಗಳು ಸಬೂಬು ಹೇಳುವುದು ನಡೆದುಕೊಂಡು ಬಂದಿದೆ. ಅಂತಿಮವಾಗಿ ಇದೇ ಮೇ ೯ರಂದು ಶಿವರಾಜ್ ಅವರ ಪತ್ರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಚುಟುಕು ಸಹಿ ಹಾಕಿ ‘ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ. ಮೇ ೧೨ರಂದು ಜಂಟಿ ಆಯುಕ್ತರು ಸ್ಥಳೀಯ ಅಧಿಕಾರಿಗಳಿಗೆ ಲಿಖಿತವಾಗಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಬೆಂಗಳೂರಿನ ಈ ಎರಡು ಘಟನೆಗಳು ಸರಕಾರದ ಕಾರ್ಯವೈಖರಿಗೆ ನಿದರ್ಶನಗಳು. ಅನ್ನ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು ಅಗುಳೊಂದನ್ನು ಹಿಚುಕಿ ನೋಡಿದರೆ ಸಾಕಲ್ಲವೇ?
ಆಫ್ ದಿ ರೆಕಾರ್ಡ್
ಸರಕಾರದ ನೊಗ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ RCB ಎಂದರೆ Real Challenges are begins ಎಂದು. ಸವಾಲುಗಳನ್ನು ಮೆಟ್ಟಿನಿಲ್ಲಲು ಸಿದ್ದರಾಮಯ್ಯ ಮೊದಲಿನಂತಾಗಬೇಕು. ಮೊದಲಿನಂತಾಗಲು ‘ಯತೀಂದ್ರ ಶಕ್ತಿ’ಯನ್ನು ಮೀರಬೇಕು. ಆಪತ್ಕಾಲದಲ್ಲೇ ಅಲ್ಲವೇ ನಾಯಕನ ಅಸಲಿಯತ್ತು ಗೊತ್ತಾಗುವುದು?