ಆರೆಸ್ಸೆಸ್ ಮುಂದಿನ ಟಾರ್ಗೆಟ್ ಯುಪಿ!

ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್ ಮತಗಳ್ಳತನದ ಆರೋಪ ಹೊರಿಸಿ ತನ್ನ ಮೈಗಳ್ಳತನವನ್ನು ಮರೆಸಲು ಪ್ರಯತ್ನಿಸುತ್ತಿದೆ. ಮತದಾರರಿಗೆ ಮತಗಳ್ಳತನಕ್ಕಿಂತಲೂ ಮಿಗಿಲಾದ ವಿಷಯಗಳು ಬಹಳಷ್ಟಿವೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೆ ಮುನ್ನವೂ ಅರ್ಥವಾಗಿರಲಿಲ್ಲ, ನಂತರವೂ ಅರ್ಥವಾದಂತೆ ಕಾಣುತ್ತಿಲ್ಲ. ಸೋಲಿಗೆ ಕಾರಣ ಹುಡುಕುವ ಕೆಲಸವಂತೂ ಅದಕ್ಕೆ ಗೊತ್ತೇ ಇಲ್ಲ. ತನ್ನ ವೈಫಲ್ಯದಿಂದ ಸೋತರೆ ಗೆಲುವು ತನ್ನದೇ ಎಂದು ನಂಬಿಕೊಂಡು ಕುಳಿತಿದೆ. ಸ್ವತಃ ಗೆಲ್ಲಲು ಪ್ರಯತ್ನಿಸುವುದಕ್ಕೂ ಎದುರಾಳಿ ಸೋಲಲಿ ಎಂದುಕೊಂಡು ಕಾಯುತ್ತಾ ಕುಳಿತುಕೊಳ್ಳುವುದಕ್ಕೂ ಇರುವ ವ್ಯತ್ಯಾಸವಂತೂ ಕಾಂಗ್ರೆಸಿಗೆ ತಿಳಿದೇ ಇಲ್ಲ.
ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು ಕಾಂಗ್ರೆಸ್ ಸೋಲಲೆಂದೇ ಕಾಯುತ್ತಿದ್ದವೇನೋ ಎನ್ನುವ ಹಾಗೆ ಈಗ ಆಳಿಗೊಂದು ಕಲ್ಲು ಎಸೆಯುತ್ತಿವೆ. ಇಂಡಿಯಾ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ಮುಂದಾಳತ್ವ ನೀಡಬೇಕು ಎಂದು ಟಿಎಂಸಿ ನಾಯಕರು ಮತ್ತು ಅಖಿಲೇಶ್ ಯಾದವ್ ನಾಯಕತ್ವ ವಹಿಸಿಕೊಳ್ಳಲಿ ಎಂದು ಸಮಾಜವಾದಿ ಪಕ್ಷದ ನಾಯಕರು ಬಹುಪರಾಕ್ ಹಾಕಿ ಭಟ್ಟಂಗಿತನದಲ್ಲಿ ಕಾಂಗ್ರೆಸ್ ನಾಯಕ ಮಹಾಶಯರನ್ನು ಮೀರಿಸಲು ಹೊರಟಿದ್ದಾರೆ.
ಗೆದ್ದಾಗ ಮೈಮರೆಯುವುದು ಸಹಜ, ಸೋತಾಗ ಮೈಯೆಲ್ಲಾ ಕಣ್ಣಾಗಿ ಇರಬೇಕು. ಆದರೆ ಭಾರತದ ರಾಜಕೀಯ ಚರಿತ್ರೆಯಲ್ಲಿ ಈಗ ಈ ಲೆಕ್ಕಾಚಾರ ಕೊನೆಮೊದಲಾಗಿದೆ. ಗೆದ್ದು ಬೀಗುತ್ತಿರುವ ಬಿಜೆಪಿ ಮೈಯೆಲ್ಲಾ ಕಣ್ಣಾಗಿ ಮುಂದಿನ ಗುರಿಯ ಕಡೆ ಗಮನ ಹರಿಸಿದೆ. ತನ್ನ ಪ್ರಧಾನ ಪ್ರಾಶಸ್ತ್ಯ ಯಾವುದು ಎನ್ನುವುದನ್ನೂ ನಿಗದಿ ಮಾಡಿಕೊಂಡಿದೆ. ಮುಂದಿನ ಎರಡು ವರ್ಷದಲ್ಲಿ ನಡೆಯುವ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಗುಜರಾತ್ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಬಿಜೆಪಿಗೆ ಬಹಳ ಮುಖ್ಯವಾದವು. ಆದರೆ ಉತ್ತರ ಪ್ರದೇಶದ ಚುನಾವಣೆ ನಿರ್ಣಾಯಕ.
ಅಸ್ಸಾಮಿನಲ್ಲಿ ಇರುವ ಅಧಿಕಾರವನ್ನು ಉಳಿಸಿಕೊಂಡು ನೈಋತ್ಯ ಭಾರತದಲ್ಲೂ ಬಿಜೆಪಿ ಇದೆ ಎನ್ನುವುದನ್ನು ಇಡೀ ದೇಶಕ್ಕೆ ಹೇಳಬೇಕಿದೆ. 2016ರಿಂದಲೂ ಪಶ್ಚಿಮ ಬಂಗಾಳ ಗೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ಸೋತರೂ ಮತಗಳಿಕೆ ಹೆಚ್ಚಿಸಿಕೊಂಡಿರುವುದರಿಂದ ಈ ಬಾರಿ ಇನ್ನಷ್ಟು ಗಂಭೀರ ಪ್ರಯತ್ನ ನಡೆಸಬೇಕಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಮಾನ್ಯತೆಯೇ ಇಲ್ಲದಿರುವ ತಮಿಳುನಾಡಿನಲ್ಲಿ ಕಡೆ ಪಕ್ಷ ಮತಪ್ರಮಾಣವನ್ನು ವೃದ್ಧಿಸಿಕೊಳ್ಳಬೇಕಿದೆ. ಕೇರಳದಲ್ಲಿ ನೆಲೆ ಕಂಡುಕೊಳ್ಳಬೇಕಿದೆ. ಗುಜರಾತ್‌ನಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಆದರೆ ಇವೆಲ್ಲವನ್ನೂ ಮೀರಿ ಉತ್ತರ ಪ್ರದೇಶದಲ್ಲಿ ಗದ್ದುಗೆಯನ್ನು ಉಳಿಸುವುದು ಆ ಪಕ್ಷಕ್ಕೆ ಅತ್ಯಗತ್ಯವಾಗಿದೆ.
ಉತ್ತರ ಪ್ರದೇಶ ಏಕೆ ಮುಖ್ಯ?
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 36 ಸ್ಥಾನ ಗೆದ್ದರೆ, ಸಮಾಜವಾದಿ ಪಕ್ಷ ನೇತೃತ್ವದ ಇಂಡಿಯಾ ಮೈತ್ರಿಕೂಟ 43 ಕ್ಷೇತ್ರ ಪಡೆದಿತ್ತು.
ಎನ್‌ಡಿಎ ಪಡೆದ ಮತಗಳು 3,83,07,930. ಇಂಡಿಯಾ ಮೈತ್ರಿಕೂಟ ಪಡೆದ ಮತಗಳು 3,81,60,235. ಅಂತರ ಕೇವಲ 1,47,695 ಮತಗಳು. ಮತಪ್ರಮಾಣ ಎನ್‌ಡಿಎ ಶೇ. 43.69. ಇಂಡಿಯಾ ಮೈತ್ರಿಕೂಟ 43.52. ಅಂತರ ಕೇವಲ 0.17. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೂ, ಮೋದಿ-ಯೋಗಿಯಂಥ ಜನಪ್ರಿಯ ನಾಯಕರಿದ್ದೂ, ಖುದ್ದು ಅಮಿತ್ ಶಾ ಕಾರ್ಯತಂತ್ರ ರೂಪಿಸಿಯೂ ಬಿಜೆಪಿ ಹೀನಾಯ ಸೋಲು ಅನುಭವಿಸಿತು. ಉತ್ತರ ಪ್ರದೇಶದಲ್ಲಿ ಆದ ಹಿನ್ನಡೆಯಿಂದಾಗಿ ದಿಲ್ಲಿ ಗದ್ದುಗೆ ಉಳಿಸಿಕೊಳ್ಳಲು ಟಿಡಿಪಿ ಮತ್ತು ಜೆಡಿಯು ಮೇಲೆ ಅವಲಂಬನೆಯಾಗಬೇಕಾಯಿತು. ಇದೆಲ್ಲದರ ಪರಿಣಾಮ ಈಗ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ (2027) ಇರುವಾಗಲೇ ಎಚ್ಚೆತ್ತುಕೊಂಡಿದೆ.
ಬಿಜೆಪಿ ಮಾತ್ರವಲ್ಲ, ಅದರ ಮಾತೃಸಂಸ್ಥೆ ಆರೆಸ್ಸೆಸ್ ಕೂಡ ಈಗ ಉತ್ತರ ಪ್ರದೇಶದ ಮೇಲೆ ಕಣ್ಣಿಟ್ಟಿದೆ. 2024ರಲ್ಲಿ ಉತ್ತರ ಪ್ರದೇಶದಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಹಿನ್ನಡೆಯಾಗಲು ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಶೀತಲ ಸಮರವೇ ಕಾರಣ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ಗುಟ್ಟು. ಆದ್ದರಿಂದ 2024ರ ಚುನಾವಣೆ ಬಳಿಕ ತಕ್ಷಣವೇ ಆರೆಸ್ಸೆಸ್ ಮತ್ತೆ ಸಕ್ರಿಯವಾಯಿತು. ಹರ್ಯಾಣದಿಂದ ಬಿಹಾರದವರೆಗೆ ಬಿಜೆಪಿಯನ್ನು ಗೆಲುವಿನ ದಡ ತಲುಪಿಸಿತು. ಈಗ ಉತ್ತರ ಪ್ರದೇಶದಲ್ಲಿ ಅಖಾಡಕ್ಕೆ ಇಳಿದಿದೆ. ನವೆಂಬರ್ 18ರಿಂದ 26ರವರೆಗೆ ಲಕ್ನೊದಲ್ಲಿ ಒಂದು ಡಜನ್‌ಗೂ ಹೆಚ್ಚು ಸಂಘದ ಸಭೆಗಳನ್ನು ನಡೆಸಿದೆ.
ಯೋಗಿ-ಭಾಗವತ್ ಭೇಟಿ!
ಆರೆಸ್ಸೆಸ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಮೋಹನ್ ಭಾಗವತ್ ಮೂರು ದಿನ ನಿರಂತರವಾಗಿ ಮೂರು ಬಾರಿ ಯೋಗಿ ಆದಿತ್ಯನಾಥ್ ಭೇಟಿ ಮಾಡಿ ಚರ್ಚಿಸಿರುವುದೇ ಸಾಕ್ಷಿ. ಭಾಗವತ್
ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.
ಸಂತೋಷ್ ಮತ್ತು ಆರೆಸ್ಸೆಸ್ ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್
ಕೂಡ ಯೋಗಿಯನ್ನು ಭೇಟಿ ಮಾಡಿದ್ದಾರೆ.
ಆರೆಸ್ಸೆಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಲಕ್ನೊದಲ್ಲಿ ಬೃಹತ್ ಸಮ್ಮೇಳನ ಆಯೋಜಿಸುವುದು, ಉತ್ತರ ಪ್ರದೇಶದ ಪ್ರತೀ ಜಿಲ್ಲೆಯಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಯೋಗಿ ಆದಿತ್ಯನಾಥ್ ನೇತೃತ್ವದಲ್ಲೇ ಸಮಾರಂಭಗಳನ್ನು ರೂಪಿಸುವುದು, ಆ ಮೂಲಕ ‘ಯೋಗಿಯೇ ಯೂಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಬಿಂಬಿಸುವುದು ಮೋಹನ್ ಭಾಗವತ್, ಬಿ.ಎಲ್. ಸಂತೋಷ್ ಮತ್ತು ಅರುಣ್ ಕುಮಾರ್ ಅವರ ಕಾರ್ಯಾಚರಣೆಯ ಉದ್ದೇಶಗಳು ಎನ್ನುತ್ತವೆ ದಿಲ್ಲಿ ಮೂಲಗಳು.
ಮುಖ್ಯಮಂತ್ರಿ ವಿಷಯದಲ್ಲಿ ಮಾತ್ರವಲ್ಲ, ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಕೂಡ ಭಾಗವತ್ ಮತ್ತು ಯೋಗಿ ಭೇಟಿಯ ವೇಳೆ ಚರ್ಚೆಯಾಗಿದೆ. ಶತಾಯಗತಾಯ 2024ರ ಲೋಕಸಭಾ ಚುನಾವಣೆಯ ಟ್ರೆಂಡ್ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ರಾಜ್ಯ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಬಿಂಬಿಸಬೇಕು. ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಬೇಕು. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದರೆ ಮಾತ್ರವೇ ಮುಂದೆ ದಿಲ್ಲಿ ಗದ್ದುಗೆ ಹಿಡಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಯುಪಿ ಗೆಲುವಿಗೆ ಬೇಕಾದ ಎಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದರ ಭಾಗವಾಗಿ ದೊಡ್ಡ ಮಟ್ಟದ ಸಚಿವ ಸಂಪುಟ ಪುನರ್‌ರಚನೆಯನ್ನೂ ಮಾಡಬೇಕು ಎಂಬ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದೆ. ಭಾಗವತ್ ಮತ್ತು ಯೋಗಿ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗಲೇ ಇಷ್ಟು ಆಳಕ್ಕಿಳಿದು ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಉಂಟುಮಾಡಿದೆ.
ಶಾ ಭೇಟಿ ಮಾಡಿದ್ರಾ ಕುಮಾರಸ್ವಾಮಿ?
ಕರ್ನಾಟಕ ಬಿಜೆಪಿ ವಿಚಾರದಲ್ಲೂ ಕೆಲವು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ವಾರ ಕೆ.ಎನ್. ರಾಜಣ್ಣ ಪುತ್ರ ಕೆ.ಆರ್. ರಾಜೇಂದ್ರ ದಿಲ್ಲಿಯಲ್ಲಿ ಕೇಂದ್ರ ಸಚಿವರಾದ ಸೋಮಣ್ಣ ಮತ್ತು ಪ್ರಹ್ಲಾದ್ ಜೋಶಿಯನ್ನು ಭೇಟಿ ಮಾಡಿದ ಸುದ್ದಿ ಚರ್ಚೆಯಾಯಿತು. ಆದರೆ ಇನ್ನೂ ಕೆಲ ನಾಯಕರು ಮುಖ್ಯಮಂತ್ರಿ ಬದಲಾವಣೆಯಾದರೆ ಪಕ್ಷ ತೊರೆಯಲು ಸಜ್ಜಾಗಿದ್ದೇವೆ ಎಂದು ಹೇಳಿಕೊಂಡು ದಿಲ್ಲಿ, ಮುಂಬೈಗಳಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿ ಕೆಲವು ಅಚ್ಚರಿಯ ಹೆಸರುಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ‘ನಾವೇ ಹಗ್ಗ ತಿನ್ನುತ್ತಿದ್ದೇವೆ, ಹಪ್ಪಳ ಸಿಗುತ್ತೆ ಎಂದುಕೊಂಡು ಇವರೇಕೆ ಇಲ್ಲಿಗೆ ಬರುತ್ತಿದ್ದಾರೆ?’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರಾ? ಬಿಜೆಪಿ ನಾಯಕರು ಬೇಡಿಕೊಂಡರೂ ಸಮಯ ಕೊಡದ ಅಮಿತ್ ಶಾ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇಕೆ? ರಾಜ್ಯ ಕಾಂಗ್ರೆಸ್ ವಿದ್ಯಮಾನದ ಬಗ್ಗೆ ಕುಮಾರಸ್ವಾಮಿ ಅವರಿಂದ ಮಾಹಿತಿ ಸಂಗ್ರಹ ಪಡೆದಿದ್ದಾರಾ? ಎಂಬ ಪ್ರಶ್ನೆಗಳು-ಅನುಮಾನಗಳು ಯಡಿಯೂರಪ್ಪ-ವಿಜಯೇಂದ್ರ ಬಣವನ್ನು ಕಾಡುತ್ತಿವೆ.
ಬಿಜೆಪಿ ಭಿನ್ನಮತೀಯರ ಬಣ ಚಿಂತೆ ಇನ್ನೊಂದು ಬಗೆಯದು. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಮತ್ತಿತರರು ದಿಲ್ಲಿಗೆ ಹೋಗಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಆದರೆ ತಕ್ಷಣವೇ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಎಂದು ಹೇಳಬೇಕಾ? ಅಥವಾ ವಿಜಯೇಂದ್ರ ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಸಮರ್ಪಕವಾದ ಹೋರಾಟ ಮಾಡುತ್ತಿಲ್ಲ. ಪಕ್ಷ ಸಂಘಟನೆ ಮಾಡುತ್ತಿಲ್ಲ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳನ್ನಷ್ಟೇ ಹೇಳಿ ಸುಮ್ಮನಾಗಬೇಕಾ? ಆ ಮೂಲಕ ಅವಧಿ ಪೂರೈಸಿದ ನಂತರ (ಮುಂದಿನ ವರ್ಷ) ಹೈಕಮಾಂಡೇ ವಿಜಯೇಂದ್ರರನ್ನು ತೆಗೆದುಹಾಕುವಂತೆ ಮಾಡಬೇಕಾ? ಎಂಬ ಗೊಂದಲದಲ್ಲಿದ್ದಾರೆ.
ಆಫ್ ದಿ ರೆಕಾರ್ಡ್!
ಹೈಕಮಾಂಡ್ ದುರ್ಬಲ ಎನ್ನಲಾಗುವ ಕಾಂಗ್ರೆಸ್ ಮತ್ತು ಪ್ರಬಲ ಎನ್ನಲಾಗುವ ಬಿಜೆಪಿ ಎರಡರಲ್ಲೂ ಒಂದೇ ಸ್ಥಿತಿ, ಅದು ಯಥಾಸ್ಥಿತಿ. ಎರಡೂ ಪಕ್ಷಗಳಲ್ಲೂ ಗೊಂದಲ. ಎರಡೂ ಪಾಳೆಯದಲ್ಲೂ ವಿಶ್ವಾಸದ ಕೊರತೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಬ್ಬರು ಸಮಾನ ಸುಖಿಗಳು ಮತ್ತು ಸಮಾನ ದುಃಖಿಗಳು. ರಾಜಕೀಯ ನಿಂತ ನೀರಲ್ಲ ಎನ್ನುತ್ತಾರೆ. ಆದರೀಗ ಅದು ಮಂಜುಗಡ್ಡೆಯಾದಂತಾಗಿದೆ. ಯಾವಾಗ ಬಿಸಿಲು ಬರುತ್ತೋ? ಹಾಗೆಯೇ ಯಾರ ಪಾಲಿಗೆ ಬರಸಿಡಿಲು ಬಡಿಯುತ್ತೋ ಎನ್ನುವುದನ್ನು ಕಾದುನೋಡಬೇಕು.







