ಸತೀಶ್ ಎದೆಗೆ ಈ.ಡಿ. ಈಟಿ ಇಟ್ಟಿರುವುದೇಕೆ?

ಸತೀಶ್ ಜಾರಕಿಹೊಳಿ ಮೇಲೆ ನಡೆದ ಜಾರಿ ನಿರ್ದೇಶನಾಲಯ (ಈ.ಡಿ.)ದ ದಾಳಿ ಚರ್ಚೆಗೆ ಗ್ರಾಸವಾಗಿದೆ. ಸತೀಶ್ ಅವರನ್ನು ಸೆಳೆಯಲೆಂದೇ ಬಿಜೆಪಿ ಈ.ಡಿ. ಅಸ್ತ್ರ ಕೈಗೆತ್ತಿಕೊಂಡಿದೆ ಎನ್ನಲಾಗುತ್ತಿದೆ. ಆದರಿದು ಹೊಸ ವಿದ್ಯಮಾನವಲ್ಲ. ಹಿಂದೆಯೇ ಬಿಜೆಪಿ ಗಾಳ ಹಾಕಿತ್ತು. ಸತೀಶ್ ಗಾಳಕ್ಕೆ ಸಿಕ್ಕಿರಲಿಲ್ಲ. ಅವರದು ಮೀನಿನ ಹೆಜ್ಜೆಯಾಗಿದ್ದರಿಂದ ಬಹಳ ಜನರಿಗೆ ಅದು ಗೊತ್ತೂ ಆಗಿರಲಿಲ್ಲ. ಆದರೆ ಬಿಜೆಪಿ ಅಷ್ಟಕ್ಕೇ ಸುಮ್ಮನಾಗಿಲ್ಲ.
ಬಿಜೆಪಿ ಕಾರ್ಯಶೈಲಿಯೇ ಹಾಗೆ; ಸಾಮ-ದಾನ-ಭೇದ-ದಂಡ. ಸತೀಶ್ ಸೆಳೆಯಲು ಬಿಜೆಪಿ ಮೊದಲು ತುಳಿದದ್ದು ‘ಸಾಮ’ದ ದಾರಿಯನ್ನೇ. ಸತೀಶ್ ಉದ್ಯಮದ ಕಾರಣಕ್ಕೆ ಮಹಾರಾಷ್ಟ್ರ ಮತ್ತು ಗೋವಾ ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವುದರಿಂದ ಅಲ್ಲಿನವರ ಮೂಲಕ ಆಹ್ವಾನ ನೀಡಿತ್ತು. 2028ರ ನಂತರ ಕಾಂಗ್ರೆಸ್ನಲ್ಲೇ ಉಜ್ವಲ ಭವಿಷ್ಯವಿದೆ ಎಂದು ನಿರೀಕ್ಷಿಸಿದ್ದ (ಈಗ ನಿರೀಕ್ಷೆಗಳು ಬದಲಾಗಿರಬಹುದು) ಸತೀಶ್ ಒಪ್ಪಿರಲಿಲ್ಲ. ನಂತರ ಬಿಜೆಪಿಗೆ ‘ದಾನ’ (ಆಮಿಷ) ಮತ್ತು ‘ಭೇದ’ (ಒಡೆದು ಆಳುವ)ದ ಅಸ್ತ್ರ ಬಳಸುವ ಪರಿಸ್ಥಿತಿ ಬಂದಿರಲಿಲ್ಲ. ಈಗ ಈ.ಡಿ. ಮೂಲಕ ಬೆದರಿಸಿ ಒಲಿಸಿಕೊಳ್ಳುವ ‘ದಂಡ’ದ ಪ್ರಯೋಗ ಮಾಡುತ್ತಿದೆ.
ಹಿಂದಿನ ಕೇಂದ್ರ ಸರಕಾರಗಳು ಸಿಬಿಐ ಅನ್ನು ಅಪಬಳಕೆ ಮಾಡಿಕೊಂಡಂತೆ ಈಗಿನ ಕೇಂದ್ರ ಸರಕಾರ ಈ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಿಂದೆ ದೇಶದ ಸರ್ವೋಚ್ಚ ನ್ಯಾಯಾಲಯವೇ ಸಿಬಿಐ ಅನ್ನು ಪಂಜರದ ಗಿಳಿ ಎಂದಿತ್ತು. 2013ರಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ. ಈಗ ಕೋರ್ಟ್ ಹೇಳದಿದ್ದರೂ ‘ಈ.ಡಿ. ಎನ್ನುವುದು ಈಗ ಕೇಂದ್ರ ಸರಕಾರದ ಸಾಕುನಾಯಿ’. ಈ ಮಾತನ್ನು ಅಲ್ಲಗೆಳೆಯುವ ಧೈರ್ಯ ಅಥವಾ ನೈತಿಕತೆ ಸ್ವತಃ ಈ.ಡಿ.ಗೇ ಇಲ್ಲ. ಇದು ಮುದ್ದು ಮಾಡಲು ಸಾಕಿಕೊಂಡಿರುವ ನಾಯಿಯಲ್ಲ. ತಮ್ಮ ರಾಜಕೀಯ ವೈರಿಗಳ ಮೇಲೆ ಛೂ ಬಿಡಲು ಬಳಸಲ್ಪಡುವ ನಾಯಿ. ಈಗ ಈ ನಾಯಿ ಸತೀಶ್ ಬೆನ್ನುಹತ್ತಿದೆಯಷ್ಟೇ.
► ಸತೀಶ್ ಏಕೆ ಟಾರ್ಗೆಟ್?
ಈಗಲೂ ರಾಜ್ಯ ಕಾಂಗ್ರೆಸ್ನ ಅತ್ಯಂತ ಜನಪ್ರಿಯ ನಾಯಕ ಸಿದ್ದರಾಮಯ್ಯ. ಎರಡನೇ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್. ಅದು ಹುದ್ದೆಯ ಕಾರಣಕ್ಕಿರಬಹುದು. ಮೂರನೇಯವರೇ ಸತೀಶ್ ಜಾರಕಿಹೊಳಿ. ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡ ಸುಮಾರು ಶೇ. 6.5ರಿಂದ 7ರಷ್ಟಿದೆ. ಆ ಸಮಾಜಕ್ಕೀಗ ಸತೀಶ್ ಅಗ್ರ ನಾಯಕ. ಅವರು ಪರಿಶಿಷ್ಟ ಪಂಗಡವೇ ನಿರ್ಣಾಯಕವಾಗಿರುವ ಮೀಸಲಾತಿ ಇಲ್ಲದ ಕೆಲವು ವಿಧಾನಸಭಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿದ್ದಾರೆ. ಸಂಪನ್ಮೂಲ ಕೂಡ ಅವರಿಗೆ ಮಹತ್ವ ತಂದುಕೊಟ್ಟಿದೆ.
ಮೊದಲಿಗೆ The best ಅನ್ನೇ ಬಯಸುವುದು ಜಗದ ನಿಯಮ. ಬಿಜೆಪಿ ಕೂಡ ಹೊರತಲ್ಲ. ಆದರೆ ‘ಸತ್ತರೂ ಬಿಜೆಪಿಗೆ ಹೋಗಲ್ಲ’ ಎನ್ನುವ ಸಿದ್ದರಾಮಯ್ಯ ಅವರನ್ನು ಅದು ನಿರೀಕ್ಷಿಸುವಂತಿಲ್ಲ. ತಾವು ಬಯಸಿದ್ದ ಮುಖ್ಯಮಂತ್ರಿ ಪದವಿ ಕಾಂಗ್ರೆಸಿನಲ್ಲೇ ಸಿಕ್ಕಿರುವುದರಿಂದ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಹೋಗುವ ಪ್ರಮೇಯವಿಲ್ಲ. ಒಂದೊಮ್ಮೆ ಅಕ್ರಮ ಹಣ/ಆಸ್ತಿ ಸಂಪಾದನೆ ಪ್ರಕರಣಗಳಲ್ಲಿ ಕಾನೂನಿನ ಕುಣಿಕೆ ಬಿಗಿಯಾದರಷ್ಟೇ ಅವರ ಪಕ್ಷ ನಿಷ್ಠೆ ಸಡಿಲವಾಗಬಹುದು. ಅದರಿಂದಾಗಿ ಬಿಜೆಪಿ ಮೂರನೇ ಪ್ರಭಾವಿಯನ್ನು ಒಲಿಸಿಕೊಳ್ಳಲು ಅಥವಾ ಮಣಿಸಲು ಹವಣಿಸುತ್ತಿದೆ.
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯತ ಮತ್ತು ಪರಿಶಿಷ್ಟ ಪಂಗಡದ ಮತಗಳು ಧ್ರುವೀಕರಣವಾದರೆ ಬಿಜೆಪಿಗೆ ಒಳ್ಳೆಯ ಫಸಲು ಸಿಗುತ್ತದೆ. ಲಿಂಗಾಯತ ಮತ್ತು ಕುರುಬ ಮತಗಳು ಧ್ರುವೀಕರಣವಾದರೂ ಭರಪೂರ ಲಾಭವಾಗಲಿದೆ. ಆದರೆ ಕುರುಬರನ್ನು ಸೆಳೆಯುವುದು ಕಷ್ಟ. ಸಿದ್ದರಾಮಯ್ಯ ತಮ್ಮ ಪುತ್ರನ ಭವಿಷ್ಯವನ್ನು ಕಾಂಗ್ರೆಸ್ನಲ್ಲೇ ನಿರೀಕ್ಷೆ ಮಾಡುತ್ತಿರುವುದರಿಂದ ಎರಡನೆಯ ಲೆಕ್ಕಾಚಾರ ಕೈಗೂಡದು. ಅದರಿಂದಾಗಿ ಬಿಜೆಪಿಯ ಲಕ್ಷ್ಯ ಪರಿಶಿಷ್ಟ ಪಂಗಡದ ಕಡೆ ಅಂದರೆ ಸತೀಶ್ ಜಾರಕಿಹೊಳಿಯತ್ತ ಹರಿದಿದೆ.
ಇದೇ ಹಿನ್ನೆಲೆಯಲ್ಲಿ ಹಿಂದೆ ಶ್ರೀರಾಮುಲುಗೆ ಮಹತ್ವ ನೀಡಿತ್ತು. ಪರಿಶಿಷ್ಟ ಪಂಗಡದ ಇನ್ನೊಬ್ಬ ಪ್ರಮುಖ ನಾಯಕ ಕೆಎನ್ ರಾಜಣ್ಣಗೂ ಬಲೆ ಬೀಸಿತ್ತು. ದಿಲ್ಲಿಯಲ್ಲಿ ಕೆ.ಎನ್. ರಾಜಣ್ಣ ಪುತ್ರ ಕೆ.ಆರ್. ರಾಜೇಂದ್ರ ಮತ್ತು ಪ್ರಹ್ಲಾದ್ ಜೋಶಿ ಪದೇ ಪದೇ ಭೇಟಿಯಾಗಿದ್ದರು. ಆದರೆ ಬಿಜೆಪಿ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು. ಶ್ರೀರಾಮುಲು ಬಿಜೆಪಿಯನ್ನು ಗೆಲ್ಲಿಸುವುದಿರಲಿ, ತಾವು ಗೆಲ್ಲುವುದಕ್ಕೂ ಏದುಸಿರು ಬಿಡುತ್ತಿದ್ದಾರೆ. ಕ್ಷೇತ್ರಕ್ಕಾಗಿ ಕನವರಿಸುತ್ತಿದ್ದಾರೆ. ಕೆ.ಎನ್. ರಾಜಣ್ಣ ಕಾದುನೋಡುತ್ತಿರಬಹುದು. ಪರಿಣಾಮ ಬಿಜೆಪಿಗೆ ಸತೀಶ್ ಅನಿವಾರ್ಯವಾಗಿ ಕಾಣುತ್ತಿದ್ದಾರೆ. ಅಗತ್ಯ ಇಲ್ಲದಿದ್ದಾಗಲೇ ಆಪರೇಷನ್ ಮಾಡುವ ಬಿಜೆಪಿ ತೀರಾ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾದಾಗ ಸುಮ್ಮನಿರುವುದೇ? ಈ.ಡಿ. ದಾಳಿಯ ಹಿಂದೆ ಈ ಅಂಶಗಳು ಕೆಲಸ ಮಾಡಿರುವುದಿಲ್ಲವೇ? ಅಥವಾ ಸತೀಶ್ ಜಾರಕಿಹೊಳಿ ಮಾತ್ರವೇ ಅಕ್ರಮ ಎಸಗಿದ್ದಾರಾ? ಉಳಿದವರ ಮತ್ತು ಉಳ್ಳವರ ಭ್ರಷ್ಟಾಚಾರ ಈ.ಡಿ.ಗೆ ಕಾಣಿಸುವುದಿಲ್ಲವೇ?
► ಸಂದರ್ಭ ಕೂಡ ಮುಖ್ಯ!
ಕೆಪಿಸಿಸಿ ಅಧ್ಯಕ್ಷಗಾದಿ ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಸತೀಶ್ ಮನೆ ಬಾಗಿಲವರೆಗೆ ಬಂದಿತ್ತು. ಮನೆಯೊಳಗೆ ಸಂಭ್ರಮಾಚರಣೆ ನಡೆದಿತ್ತು. ಅಷ್ಟರಲ್ಲಿ ಹೈಕಮಾಂಡ್ ವರಸೆ ಬದಲಿಸಿತು. ಮಂತ್ರಿ ಪದವಿ ಅಥವಾ ಕೆಪಿಸಿಸಿ ಪಟ್ಟ ಎಂಬ ಷರತ್ತು ವಿಧಿಸಿತು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸತೀಶ್ ಅವರಿಗೆ ಆಘಾತವಾಯಿತು. ನಂತರ ಉಪಮುಖ್ಯಮಂತ್ರಿ ಸ್ಥಾನವಾದರೂ ಸಿಗುತ್ತದೆ ಎಂದುಕೊಂಡಿದ್ದರು. ಅದೂ ಮರೀಚಿಕೆಯಾಯಿತು. ಸಿದ್ದರಾಮಯ್ಯ ಮತ್ತು ಸತೀಶ್ ನಡುವಿನ ಅಂತರ ಹೆಚ್ಚಾಯಿತು. ಕಬ್ಬಿಣವನ್ನು ಬಿಸಿಯಾಗಿರುವಾಗಲೇ ಬಗ್ಗಿಸಬೇಕು ಎನ್ನುವಂತೆ ಇಂಥ ವಿಶಿಷ್ಟ ಸಂದರ್ಭದಲ್ಲಿ ಈ.ಡಿ. ಸತೀಶ್ ಎದೆಗೆ ಈಟಿ ಇಟ್ಟಿದೆ. ಚುಚ್ಚುತ್ತಾ ಎನ್ನುವುದನ್ನು ಕಾದುನೋಡಬೇಕು.
► ಸಿದ್ದುಗೆ ಏಕಿಷ್ಟು ಕೋಪ?
ಕಳೆದ ವಾರವೇ ಸಂಪುಟ ವಿಸ್ತರಣೆ ಸಮಸ್ಯೆ ಬಗೆಹರಿಯಬೇಕಿತ್ತು. ಝಮೀರ್ ಅಹ್ಮದ್ ಖಾನ್ ವಿಷಯದಲ್ಲಿ ರಾಜ್ಯ ನಾಯಕರು ಒಮ್ಮತದ ತೀರ್ಮಾನ ಕೈಗೊಂಡು ಆ ಬಳಿಕ ದಿಲ್ಲಿಗೆ ಬನ್ನಿ ಎಂದು ಹುಕುಂ ಹೊರಡಿಸಿದ್ದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಸಿದ್ದರಾಮಯ್ಯ ಅವರ ಇನ್ನೊಬ್ಬ ಬೆಂಬಲಿಗನನ್ನು ಬಿಟ್ಟಿಯಾಗಿ ಬುಟ್ಟಿಗೆ ಹಾಕಿಕೊಳ್ಳಬಹುದೆಂದು ಡಿ.ಕೆ. ಶಿವಕುಮಾರ್ ಗುಣಾಕಾರ-ಭಾಗಾಕಾರ ಹಾಕುತ್ತಿರಬಹುದು. ಮುಂದಿನ ಚುನಾವಣೆ ಎದುರಿಸಲು ಝಮೀರ್ ಮತ್ತು ಸತೀಶ್ ಜಾರಕಿಹೊಳಿ ಜೊತೆಗಿದ್ದರೆ ಚೆಂದ ಎಂದುಕೊಂಡು ಬಿ.ಕೆ.ಹರಿಪ್ರಸಾದ್ ಕೂಡಿ-ಕಳೆಯುತ್ತಿರಬಹುದು. ಆದರೆ ಸಿದ್ದರಾಮಯ್ಯ ಮಾತ್ರ ತಲೆ ಅಲ್ಲಾಡಿಸುತ್ತಿಲ್ಲ.
ಬಗಲಲ್ಲಿ ಇದ್ದುಕೊಂಡೇ ಬೆನ್ನಿಗೆ ಇರಿದವರು, ವಿಶ್ವಾಸ ದ್ರೋಹ ಮಾಡಿದವರು, ಕಡುಕಷ್ಟದಲ್ಲಿ ಕೈ ಎತ್ತಿದವರು ಬಹಳ ಮಂದಿ ಇದ್ದಾರೆ. ಅಂಥವರ ಬಗ್ಗೆೆ ಆಯಾ ಕಾಲಕ್ಕೆ ಸಿಟ್ಟು ಮಾಡಿಕೊಂಡರೂ ಬಹುಕಾಲ ಆ ದ್ವೇಷಕ್ಕೆ ಕಾವು ಕೊಟ್ಟವರಲ್ಲ ಸಿದ್ದರಾಮಯ್ಯ. ಎಚ್.ಡಿ. ಕುಮಾರಸ್ವಾಮಿ ಹೊರತುಪಡಿಸಿ ಜೆಡಿಎಸ್ ಬಿಡಲು ಕಾರಣರಾದ ಎಚ್.ಡಿ. ದೇವೇಗೌಡ ಬಗೆಗೂ ತಲೆಕೆಡಿಸಿಕೊಂಡವರಲ್ಲ. ಸಿದ್ದರಾಮಯ್ಯ ಯಶಸ್ಸಿಗೆ ಈ ಉದಾರ ನಡೆ ಕೂಡ ಕೊಡುಗೆ ಕೊಟ್ಟಿರಬಹುದು. ಬದುಕು ಕೆಲವೊಮ್ಮೆ 'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಎಂಬಂತೆ ನಡೆಸಿಕೊಳ್ಳುತ್ತದೆ. ಉದಾರ ನಡೆಯ ಕಾರಣದಿಂದಲೇ ಡಿ.ಕೆ. ಶಿವಕುಮಾರ್ ಅವರ ಮಡದಿ ಮತ್ತು ಮಗಳು ಸುಸೂತ್ರವಾಗಿ ಅಧಿಕಾರ ಹಸ್ತಾಂತರವಾದಾಗ ಬಹಿರಂಗವಾಗಿಯೇ ಸಿದ್ದರಾಮಯ್ಯ ಪಾದಕ್ಕೆ ಎರಗಿದ್ದಿರಬಹುದು.
ಇಂಥ ಸಿದ್ದರಾಮಯ್ಯಗೆ ಝಮೀರ್ ವಿರುದ್ಧ ಮುನಿಯಲು ಅಥವಾ ಮುಖ ನೋಡಲು ಒಲ್ಲೆ ಎನ್ನುವುದಕ್ಕೆ ದಾವಣಗೆರೆ ಉಪಚುನಾವಣೆ ವೇಳೆ ನಡೆದ ವಿದ್ಯಮಾನಗಳು ನೆಪವಷ್ಟೇ. ಅದಕ್ಕೂ ಮೀರಿದ ಮಹತ್ವದ ಕಾರಣ ಇರಲೇಬೇಕು. ಅದೇನು ಎನ್ನುವುದೇ ನಿಗೂಢ. ಎಷ್ಟು ನಿಗೂಢ ಎಂದರೆ blood is thicker than water ಎನ್ನುವ ಮಾತನ್ನು ಸುಳ್ಳಾಗಿಸುವ ಮಟ್ಟಕ್ಕೆ. ಏಕೆಂದರೆ ಸಿದ್ದರಾಮಯ್ಯ ಮತ್ತು ಝಮೀರ್ ಅವರನ್ನು ಒಂದು ಮಾಡಲು ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. ಸಿದ್ದರಾಮಯ್ಯ ಸೊಪ್ಪು ಹಾಕಿಲ್ಲ. ರಾಜಕೀಯದಲ್ಲಿ ಇಂಥ ಬಹಳಷ್ಟು ರಹಸ್ಯಗಳಿರುತ್ತವೆ. ಕೆಲವು ತಡವಾಗಿ ಬೆಳಕಿಗೆ ಬರುತ್ತವೆ. ಕೆಲವು ರಹಸ್ಯಗಳಾಗಿಯೇ ಉಳಿದುಬಿಡುತ್ತವೆ.
► ಡಿಕೆಶಿ ಮತ್ತು ದಿಲ್ಲಿ!
ಅನುಭವಿಸುವುದು ಮತ್ತು ಆಸ್ವಾದಿಸುವುದಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಕೆಲವರು ಅಧಿಕಾರವನ್ನು ಅನುಭವಿಸುತ್ತಾರೆ. ಡಿ.ಕೆ.ಶಿವಕುಮಾರ್ ಆಸ್ವ್ವಾದಿಸುತ್ತಿರುವವರಂತೆ ಕಾಣುತ್ತಾರೆ. ಸಣ್ಣಪುಟ್ಟದ್ದನ್ನು ದೊಡ್ಡದಾಗಿ ಸಂಭ್ರಮಿಸುತ್ತಿದ್ದಾರೆ. ಚುನಾವಣೆ ಗೆದ್ದು ಗದ್ದುಗೆ ಹಿಡಿದಾಗ ಪೂರೈಸುವ 100 ದಿನದ ಪುಳಕವೇ ಬೇರೆ. ಅದರ ಎದುರು ಅಧಿಕಾರ ಹಸ್ತಾಂತರವಾದಾಗ ಸಿಗುವ ಸಂತಸ ತೃಣಮಾತ್ರ. ಆದರೂ ಡಿ.ಕೆ.ಶಿವಕುಮಾರ್ ಅವಕಾಶವನ್ನು ಬಿಟ್ಟುಕೊಡಲಿಲ್ಲ. 100ರಲ್ಲಿ ಸುಮಾರು 20 ದಿನ ದಿಲ್ಲಿಯಲ್ಲೇ ಕಾಲ ಕಳೆದರು. ಗುಡಿ ಗುಂಡಾರ ಸುತ್ತಿದರು. ಉಳಿದ ಸೀಮಿತ ಅವಧಿಯಲ್ಲಿ ಇಷ್ಟೆಲ್ಲಾ ಸಾಧನೆಯೇ? ಅದಕ್ಕಾಗಿ ಇಷ್ಟೆಲ್ಲಾ ಸಂಭ್ರಮವೇ? ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಇದು ಪಿಆರ್ ಗಿಮಿಕ್-ಪ್ರಚಾರದ ತಂತ್ರ-ಮೋದಿ ಮಾಡೆಲ್- ಮೋದಿ ಮೀರಿಸುವ ಕಲೆಗಾರಿಕೆ ಎಂದೆಲ್ಲಾ ಕುಹಕವಾಡುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅವರು ಕೆಲಸ ಮಾಡಬೇಕಷ್ಟೇ. ಅವರು ಏನು ಮಾಡುತ್ತಾರೆ ಎನ್ನುವುದನ್ನು ಜನ ಕಾದುನೋಡಬೇಕಷ್ಟೆ.
ಆಫ್ ದಿ ರೆಕಾರ್ಡ್!
ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ದೇಶದಲ್ಲಿ ಇಡೀ ದೇಶವೇ ಬಿಚ್ಚಿ ಬೀಳುವಂತಹ ಬಾಂಬ್ ಸಿಡಿಸುತ್ತೇನೆ ಎಂದು ಹೇಳಿದ್ದರು ಎಚ್.ಡಿ. ಕುಮಾರಸ್ವಾಮಿ. ಅವರೀಗ ವಿದೇಶದಿಂದ ಬಂದಾಗಿದೆ. ಅವರು ಕೊಟ್ಟಿದ್ದ ಡೆಡ್ ಲೈನ್ ಮೀರಿ ಹೋಗಿದೆ. ಅದರಿಂದಾಗಿ ಬಾಂಬ್ ಸಿಡಿಯುವುದು ಯಾವಾಗ? ಯಾವ ರೀತಿಯ ಬಾಂಬ್? ಯಾರ ಮೇಲೆ ದಾಳಿ? ಎನ್ನುವ ಕುತೂಹಲ ಹೆಚ್ಚಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಬಾಂಬ್ ಸಿಡಿಸಬಹುದೆಂಬ ಗುಮಾನಿ ಇತ್ತು. ಸದ್ಯದ ವರ್ತಮಾನದ ಪ್ರಕಾರ ಕುಮಾರಸ್ವಾಮಿ ಎಸೆಯುವ ಬಾಂಬ್ ನೇರವಾಗಿ ದಿಲ್ಲಿಯ ರಾಬರ್ಟ್ ವಾದ್ರಾ ಮನೆ ಮೇಲೆ ಬೀಳಲಿದೆ. ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ಮನೆ ಮೇಲೂ ಸಂಚಲನ ಉಂಟುಮಾಡಲಿದೆ. ಇದು ಬಿಡದಿ ಟೌನ್ ಶಿಪ್ ಮತ್ತು ನೈಸ್ ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಡಿ.ಕೆ. ಶಿವಕುಮಾರ್ ಜೊತೆ ರಾಬರ್ಟ್ ವಾದ್ರಾ ಕೂಡ ಪಾಲುದಾರ. ಮಾಹಿತಿ ಬಹಿರಂಗವಾದರೆ ಡಿ.ಕೆ. ಶಿವಕುಮಾರ್ ಬಚಾವಾದರೂ ವಾದ್ರಾಗೆ ತಪ್ಪದು ಗ್ರಹಚಾರ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಕುಮಾರಸ್ವಾಮಿಯೇ ಕುತೂಹಲವನ್ನು ತಣಿಸಬೇಕು.






