ಸಿದ್ದು ಮಾಡಲೇಬೇಕಾದ 12 ಕೆಲಸಗಳೇನು?

ದಿವಂಗತ ಡಿ. ದೇವರಾಜ ಅರಸು ‘ಕಾಲ’ದ ದಾಖಲೆಯನ್ನು ಸಿದ್ದರಾಮಯ್ಯ ಮುರಿದಾಯಿತು. ಇದೇ ಹಿನ್ನೆಲೆಯಲ್ಲಿ ಮಾಧ್ಯಮಗಳು ಅರಸು ಮತ್ತು ಸಿದ್ದರಾಮಯ್ಯ ಅವರನ್ನು ಎದುರುಬದುರು ನಿಲ್ಲಿಸಿದ್ದಾಯಿತು. ಮೇಲೆ ಕೆಳಗೆ ಮಾಡಿದ್ದಾಯಿತು. ಇಬ್ಬರ ಗುಣಗಾನ ನಡೆಯಿತು. ಸಾಧನೆಗಳನ್ನು ಒರೆಗೆ ಹಚ್ಚಲಾಯಿತು. ಆ ಕಾಲ ಈ ಕಾಲಘಟ್ಟಗಳ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಅವಲೋಕನವೂ ಆಯಿತು. ಈಗ ಸಿದ್ದರಾಮಯ್ಯ ಮುಂದೇನು ಮಾಡಬೇಕು? ಮಾಡುವರು ಎನ್ನುವುದು ಮಾತ್ರವೇ ಉಳಿದಿರುವ ಪ್ರಶ್ನೆ.
ಈ ಏಳೂವರೆ ವರ್ಷದಲ್ಲಿ ಹಲವು ಮಿತಿಗಳ ನಡುವೆ ಸಿದ್ದರಾಮಯ್ಯ ಕೆಲವು ಮಹತ್ಸಾಧನೆಗಳನ್ನು ಮಾಡಿದ್ದಾರೆ. ಆದರೆ ಮಾಡುವುದು ಇನ್ನೂ ಸಾಕಷ್ಟಿದೆ. ಅದರಲ್ಲೂ ಮುಖ್ಯವಾಗಿ ಈ ಒಂದು ಡಝನ್ ಕೆಲಸಗಳನ್ನಂತೂ ಅವರು ಮಾಡಲೇಬೇಕಾಗಿದೆ.
1. ಮೊತ್ತ ಮೊದಲನೆಯದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ಜಾರಿ ಮಾಡಬೇಕು. ಸಿದ್ದರಾಮಯ್ಯ ಮಾಡೇ ಮಾಡುತ್ತಾರೆ ಎನ್ನುವ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು. ಅದರಲ್ಲೂ ಅಂಚಿನ ಜನರ ನಿರೀಕ್ಷೆ ಹೆಚ್ಚಾಗಿತ್ತು. ಇಷ್ಟೊತ್ತಿಗಾಗಲೇ ಮಾಡಿಬಿಡಬೇಕಾಗಿತ್ತು. ಈಗಲಾದರೂ ಮಾಡಬೇಕು. ಯಾರು ಒಪ್ಪಲಿ, ಬಿಡಲಿ, ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಲು ಸಾಧ್ಯವಿಲ್ಲ. ಈಗಿರುವ ಯಾವ ನಾಯಕರು ಅಂಥ ಭರವಸೆಯನ್ನು ಹುಟ್ಟಿಸಿಲ್ಲ. ಇದು ಸಿದ್ದರಾಮಯ್ಯ ಅವರೇ ಮಾಡಬೇಕಾದ ಕೆಲಸ.
2. ಹಿಂದೆ ವೀರಪ್ಪ ಮೊಯ್ಲಿ ಕಾಲದಲ್ಲೇ ಮೀಸಲಾತಿ ಮಿತಿಯನ್ನು ಶೇ.73ಕ್ಕೆ ಏರಿಸಿ ಕಾಯ್ದೆ ಮಾಡಲಾಗಿತ್ತು. ಈ ಕಾಯ್ದೆಯನ್ನು ಪ್ರಶ್ನೆ ಮಾಡಿದ್ದಾಗ ಸುಪ್ರೀಂ ಕೋರ್ಟ್ ಅಂದಿನ ಸರಕಾರಕ್ಕೆ ‘ಇದು ಶೇ.50ರಷ್ಟರ ಮೀಸಲಾತಿಯನ್ನು ಮೀರಿದೆ, ಇಂದ್ರಾ ಸಹಾನಿ ಪ್ರಕರಣದ ತೀರ್ಪಿಗೆ ವಿರುದ್ಧವಾಗಿದೆ. ನೀವಾಗಿಯೇ ಇದನ್ನು ಶೇ.50ರಷ್ಟಕ್ಕೆ ಇಳಿಸುತ್ತಿರೋ ಅಥವಾ ನಾವೇ ಕಾಯ್ದೆಯನ್ನು ರದ್ದು ಮಾಡಬೇಕೋ?’ ಎಂದು ಕೇಳಿತ್ತು. ವೀರಾವೇಶದಲ್ಲಿ ಮೀಸಲಾತಿ ಮಿತಿ ಹೆಚ್ಚಳ ಮಾಡಿದ್ದ ವೀರಪ್ಪ ಮೊಯ್ಲಿ ಸರಕಾರದ ಬಳಿ ಯಾವ ಕಾರಣಕ್ಕೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಲು ಸಮರ್ಥನೀಯವಾದ ದಾಖಲೆ ಅಥವಾ ದತ್ತಾಂಶಗಳಿರಲಿಲ್ಲ. ಈಗ ಹೊಸದಾಗಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ದತ್ತಾಂಶಗಳನ್ನು ಆಧಾರವಾಗಿ ಇಟ್ಟುಕೊಂಡು ಮೀಸಲಾತಿ ಮಿತಿಯನ್ನು ಹೆಚ್ಚಿಸಬೇಕು. ಆಗ ಮಾತ್ರ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಸಾಧ್ಯ.
3. ವರ್ಷದಿಂದ ವರ್ಷಕ್ಕೆ ಸರಕಾರಿ ಕೆಲಸಗಳಿಗೆ ನೇಮಕಾತಿ ಆಗುವ ಪ್ರಮಾಣವೇ ಕಡಿಮೆಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೇಮಕಾತಿ ನಡೆದರೂ ಅದು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.2ರಷ್ಟನ್ನು ಮೀರುವುದಿಲ್ಲ. ಆದುದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿ ಮಾಡುವುದು ಅತ್ಯಗತ್ಯವಾಗಿದೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲೂ ಹೇಳಿದೆ. ತಾನು ಬಸವಣ್ಣರ ಅನುಯಾಯಿ, ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅದನ್ನೀಗ ನಿರೂಪಿಸಬೇಕಾಗಿದೆ.
4. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯುದಯಕ್ಕಾಗಿ ತಂದಿರುವ ಅತ್ಯಂತ ದೂರದೃಷ್ಟಿಯ SಅSP ಖಿSP ಕಾಯ್ದೆ ಮಾದರಿಯಲ್ಲಿ ಹಿಂದುಳಿದ ಜಾತಿಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಪ್ರತ್ಯೇಕ ಕಾನೂನುಗಳನ್ನು ತರಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಹಲವು ಬಗೆಯಲ್ಲಿ ಇನ್ನಷ್ಟು ಆಳಕ್ಕೆ ಬೇರೂರಲು ನೀರೆರೆಯಬೇಕು.
5. ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಮ್, ಡಿ.ದೇವರಾಜ ಅರಸು ಸಂಶೋಧನಾ ಕೇಂದ್ರಗಳ ಮಾದರಿಯಲ್ಲಿ ಅಹಿಂದ ಸಮುದಾಯಗಳ ಸರ್ವಾಂಗೀಣ ಅಭ್ಯುದಯ ಕುರಿತು ಅಧ್ಯಯನ ಮಾಡುವುದಕ್ಕಾಗಿ ಅಹಿಂದ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಆ ಮೂಲಕ ಅಹಿಂದ ವರ್ಗಗಳಲ್ಲಿರುವ ಅರಿವಿನ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು.
6. ಇತ್ತೀಚೆಗೆ ಪರಿಶಿಷ್ಟ ಜಾತಿಗೆ ತಂದಿರುವ ಒಳಮೀಸಲಾತಿ ವರ್ಗೀಕರಣದ ಬಗ್ಗೆ ವ್ಯಾಪಕ ವಿರೋಧವಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸಿಗೆ ವಿರುದ್ಧವಾಗಿ ಒಳಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಇದರಿಂದ ಅಲೆಮಾರಿಗಳಿಗೆ ಒಂದೇ ಏಟಿಗೆ ಶತಶತಮಾನಕ್ಕಾಗುವಷ್ಟು ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು.
7. ನಾಮ ನಿರ್ದೇಶನದಲ್ಲಿ ಸಣ್ಣಪುಟ್ಟ ಜಾತಿಗಳಿಗೆ ಪ್ರಾತಿನಿಧ್ಯ ಕೊಡಬೇಕು. ವಿಶೇಷವಾಗಿ ವಿಧಾನ ಪರಿಷತ್‌ಗೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರಿಗೆ ಸಾಂಕೇತಿಕ ಪ್ರಾತಿನಿಧ್ಯ ಕೊಟ್ಟು ಅಂಚಿನ ಜನರಿಗೆ, ಅಬಲರಿಗೆ ಅಗ್ರಪಾಲು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಒಕ್ಕಲಿಗ ಮತ್ತು ಲಿಂಗಾಯತರಿಗೆ ಜಾತಿ ಮತ್ತು ದುಡ್ಡು ಇರುವುದರಿಂದ ಅವರು ಸುಲಭದಲ್ಲಿ ವಿಧಾನಸಭೆ ಪ್ರವೇಶ ಮಾಡಬಲ್ಲರು. ಬ್ರಾಹ್ಮಣರ ಬಳಿ Social Capital ಇರುವುದರಿಂದ ಅವರು ಯಾವಾಗಲೂ ತಮ್ಮ ಜನಸಂಖ್ಯೆಯ ಪ್ರಮಾಣಕ್ಕಿಂತ ಜಾಸ್ತಿಯೇ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಚಾರಿತ್ರಿಕ ಪ್ರಮಾದವನ್ನು ಸರಿಪಡಿಸಬೇಕು.
8. ಬಹುಶಃ ಸಿದ್ದರಾಮಯ್ಯ ಪಂಚೆ ತೊಟ್ಟ ಕಡೆಯ ಮುಖ್ಯಮಂತ್ರಿ ಯಾಗಲಿದ್ದಾರೆ. ಇಂದಿಗೂ ತಮ್ಮ ಊಟ-ನೋಟ, ಭಾಷೆ-ಭಾವನೆಗಳಲ್ಲಿ ಗ್ರಾಮ್ಯ ಸೊಗಡನ್ನು ಉಳಿಸಿಕೊಂಡಿರುವ ಅವರು ತಮ್ಮ ಬಜೆಟ್ ಮತ್ತಿತರ ಕಾರ್ಯಕ್ರಮಗಳಲ್ಲಿ ಹಳ್ಳಿಗಳ ಕಡೆ ಹೆಚ್ಚು ಗಮನಹರಿಸುತ್ತಾರೆ. ಅದು ತಪ್ಪಲ್ಲ, ಹಾಗೆಯೇ ತಿಜೋರಿಗೆ ದೊಡ್ಡ ಪ್ರಮಾಣದ ತೆರಿಗೆ ತರುವ ಬೆಂಗಳೂರನ್ನು ಬರಿಗೈಯಲ್ಲಿ ಮಾತನಾಡಿಸುವುದು ಸರಿಯೂ ಅಲ್ಲ. ಅದರಲ್ಲೂ ಅಂತರ್‌ರಾಷ್ಟ್ರೀಯ ಖ್ಯಾತಿಯ, ಬೃಹತ್ ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿರುವ ಬೆಂಗಳೂರಿಗೆ ಒಂದೆರಡು ಚಮಚ ತುಪ್ಪ ಸುರಿದರೆ ಸೂರು ಹೋಗುವಂಥದ್ದು ಏನೂ ಇಲ್ಲ.
9. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಮಾಡುತ್ತಿರುವ ದ್ರೋಹ ದೊಡ್ಡದು. ತೆರಿಗೆ ವಂಚನೆ, ಮನರೇಗಾ ರದ್ದು (ಬಹುತೇಕ ಅದು ರದ್ದಾದಂತೆ), ವಿವಿಧ ಬಗೆಯ ಸೆಸ್‌ಗಳ ಹೆಚ್ಚಳ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಕಡಿತ, ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ... ಹೀಗೆ ದೊಡ್ಡ ಪಟ್ಟಿಯೇ ಇದೆ. ಸಿದ್ದರಾಮಯ್ಯ ಈ ತಾರತಮ್ಯ ಮತ್ತು ವಂಚನೆಗಳ ಬಗ್ಗೆ ಹೋರಾಟ ಮಾಡಬೇಕು. ಸದ್ಯ ಇಡೀ ದೇಶದಲ್ಲಿ ಕೇಂದ್ರ ಸರಕಾರದ ವಿರುದ್ಧ ಮತ್ತು ಪ್ರಧಾನಿ ಮೋದಿ ವಿರುದ್ಧ ಗಟ್ಟಿ ದನಿಯಲ್ಲಿ ಸ್ಪಷ್ಟವಾಗಿ ಮಾತನಾಡುವ ಮೂರು ಮತ್ತೊಂದು ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ಕೂಡ ಒಬ್ಬರು (ಮಮತಾ ಬ್ಯಾನರ್ಜಿ, ಸ್ಟಾಲಿನ್ ಮತ್ತು ಪಿಣರಾಯಿ). ಹಾಗಾಗಿ ಸಿದ್ದರಾಮಯ್ಯ ದನಿ ಏರಿಸಿಯೇ ಮಾತನಾಡಬೇಕು.
10. ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬುತ್ತಿರುವ, ಗ್ರಾಮೀಣ ಕರ್ನಾಟಕದ ಆರ್ಥಿಕ ಬಲವನ್ನು ಹೆಚ್ಚಿ ಸುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಈಗ ಪುನರ್ ಪರಿಶೀಲನೆ ಮಾಡಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮಾತ್ರ ಸೌಲಭ್ಯ ನೀಡಬೇಕು. ಈ ಪರಿಷ್ಕರಣೆಯಿಂದ ಉಳಿಯುವ ಹಣವನ್ನು ಬೇರೆ ಜನೋಪಯೋಗಿ ಕೆಲಸಕ್ಕೆ ಬಳಸಬಹುದು.
11. ಸಿದ್ದರಾಮಯ್ಯ 16 ಬಾರಿ ರಾಜ್ಯ ಬಜೆಟ್ ಮಂಡಿಸಿ ರಾಜ್ಯದ ಖಜಾನೆಯನ್ನು ಕೂಡಿ ಕಳೆದಿದ್ದರೂ ಗ್ಯಾರಂಟಿಗಳ ಹೊರೆಯಲ್ಲಿ ನಲುಗಿರುವ ಅವರು ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲೇಬೇಕು. ವೆಚ್ಚ ಕಡಿತ ಮಾಡಿ ಆ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುವಂತಾದರೆ ಅವರು ಕೂಡ ಸ್ವಲ್ಪ ಹಗುರವಾಗಬಹುದು.
12. ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿಯಾದ ಮೊದಲ ದಿನವೇ ಅನ್ನಭಾಗ್ಯ ಕೊಟ್ಟಂತೆ ಹತ್ತು ಹಲವು ಕಾರ್ಯಕ್ರಮ ಕೊಟ್ಟಿದ್ದಾರೆ. ಆದರೆ ಕಾರ್ಯಕ್ರಮಗಳ ಬದಲು ಅರಸು ಕೊಟ್ಟಂತೆ ನೀತಿಗಳನ್ನು ಕೊಡಬೇಕು. ಕಾರ್ಯಕ್ರಮಗಳು ಬಜೆಟ್ ಮೇಲೆ ಅವಲಂಬಿತವಾಗುತ್ತವೆ. ನೀತಿಗಳು ಬಜೆಟ್ ಇಲ್ಲದೆಯೂ ಬಹುಕಾಲ ಬದುಕುಳಿಯಬಲ್ಲವು.
ಬೇರೆ ಅಭಿವೃದ್ಧಿ ಕೆಲಸ ಮಾಡುವುದು, ಆಡಳಿತ ಸುಧಾರಣೆ ತರುವುದು ಇದ್ದದ್ದೇ. ಅವುಗಳ ಜೊತೆಗೆ ಮಾಡಬೇಕಾದ ಕೆಲಸಗಳು ಇವು. ಸಿದ್ದರಾಮಯ್ಯ ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕು ಅಂತಾ ಯಾರಿಗಾದರೂ ಅನಿಸಬಹುದು. ಅವರು ಈ ಪಟ್ಟಿಯನ್ನು ಬೆಳಸಬಹುದು. ಹಾಗೆಯೇ ಈ ಪಟ್ಟಿಯಲ್ಲಿ ಕೆಲವು, ಕೆಲವರಿಗೆ, ಕೆಲವು ಕಾರಣಕ್ಕೆ ಅಸಾಧ್ಯ ಎನಿಸಬಹುದು. ಕಡುಕಷ್ಟ ಎನಿಸಬಹುದು. ಕಷ್ಟ ಎನ್ನುವ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರೇ ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲಿ ಎನ್ನುವ ನಿರೀಕ್ಷೆ ಹುಟ್ಟಿಕೊಂಡಿರುವುದು. ಸಿದ್ದರಾಮಯ್ಯ ವಿರುದ್ದ ಏನೇ ದೂರಿದ್ದರೂ ದುಮ್ಮಾನವನ್ನೂ ಅವರ ಬಳಿಯೇ ಹೇಳಿಕೊಳ್ಳಬೇಕಲ್ಲವೇ? ಅರಸು ಎಳೆದು ತಂದಿದ್ದ ಸಾಮಾಜಿಕ ನ್ಯಾಯದ ರಥವನ್ನು ಇನ್ನಷ್ಟು ದೂರ ಎಳೆದೊಯ್ಯಲು ಸಿದ್ದರಾಮಯ್ಯ ಅಲ್ಲದೆ ಇನ್ಯಾರಿದ್ದಾರೆ ಈಗ?
ನ್ಯಾಯಯುತ ನಿರೀಕ್ಷೆಯಲ್ಲವೇ?
ಸಿದ್ದರಾಮಯ್ಯ ಒಬ್ಬ ಉತ್ತಮವಾದ ಸಂಸದೀಯ ಪಟು ಎಂದಷ್ಟೇ ಷರಾ ಬರೆದು ಮುಗಿಸಲಾಗದು, ಅವರಿಗೆ ಹಲವು ಮುಖ; ಸಾಮಾಜಿಕ ನ್ಯಾಯದ ಪ್ರತಿಪಾದಕ, ಅಹಿಂದ ನಾಯಕ, ಉತ್ತಮ ಆಡಳಿತಗಾರ. ಅವರಲ್ಲದೆ ಇನ್ಯಾರು ಮಾಡಬೇಕು? ಅವರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಅಧಿಕಾರವನ್ನು ಪಣಕ್ಕಿಟ್ಟಾದರೂ ಸಾಧಿಸಬೇಕು. ಉಳಿದಿರುವುದು 28 ತಿಂಗಳು. ಕಡೆಯ ದಿನಗಳಲ್ಲಿ ಮಾಡಲು ಬಾಕಿ ಉಳಿಸಿಕೊಳ್ಳಬಾರದು. ವಿಧಾನಸಭಾ ಚುನಾವಣೆಗೆ ಹತ್ತಿರವಿದ್ದಾಗ ಮಾಡಿದರೆ ಚುನಾವಣೆಗೋಸ್ಕರವೇ ಮಾಡಿದರು ಎನ್ನುವ ಕುಖ್ಯಾತಿ ಬರುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಇದೇ ರೀತಿಯ ಎಡವಟ್ಟಾಗಿತ್ತು ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು. ಇವುಗಳನ್ನು ಮಾಡಲಾಗದಿದ್ದರೆ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿದರೂ ಪ್ರಯೋಜನ ಇಲ್ಲ. ಏಕೆಂದರೆ ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ. ಕೆಲವರಿಗೆ ಸಿದ್ದರಾಮಯ್ಯ ಬಗ್ಗೆ ನಿರೀಕ್ಷೆಗಳು ಜಾಸ್ತಿಯಾದವು ಎನಿಸಲೂಬಹುದು. ಹೌದು, ಹಾಲು ಕರೆಯುವ ಹಸುವಿನ ಕೆಚ್ಚಲಿಗೆ ಕೈ ಹಾಕುವುದು ಸಹಜವೇ ಅಲ್ಲವೇ? ಇದು ನ್ಯಾಯಯುತ ನಿರೀಕ್ಷೆಯಲ್ಲವೇ?
ದಾಖಲೆರಾಮಯ್ಯ!
ಇನ್ನೊಂದು ಕಾರಣಕ್ಕೂ ಸಿದ್ದರಾಮಯ್ಯ ಅವರಿಂದ ಜಾಸ್ತಿ ನಿರೀಕ್ಷೆ ಮಾಡುವುದು ತಪ್ಪಾಗುವುದಿಲ್ಲ. 1983ರಲ್ಲಿ ವಿಧಾನಸಭೆ ಪ್ರವೇಶ ಮಾಡಿದ ಸಿದ್ದರಾಮಯ್ಯ 1989ರಿಂದ 1994ರವರೆಗೆ ಹಾಗೂ 1999ರಿಂದ 2004ರವರೆಗೆ ಮಾತ್ರ ಯಾವುದೇ ಅಧಿಕಾರ ಅನುಭವಿಸಿಲ್ಲ. ಈ ಎರಡು ಅವಧಿ ಬಿಟ್ಟು 1983ರಿಂದ 2026ರವರೆಗಿನ ಅವಧಿಯಲ್ಲಿ 33 ವರ್ಷ ಗೂಟದ ಕಾರು ಬಿಟ್ಟು ಇಳಿದಿಲ್ಲ. ಕನ್ನಡ ಕಾವಲು ಸಮಿತಿ ಅಧ್ಯಕ್ಷ, ಎರಡು ಬಾರಿ ಮಂತ್ರಿ, ಎರಡು ಬಾರಿ ಉಪ ಮುಖ್ಯಮಂತ್ರಿ, ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಮುಖ್ಯಮಂತ್ರಿ ಹೀಗೆ ‘ಎರಡರ’ ದಾಖಲೆಯನ್ನೂ ಬರೆದಿದ್ದಾರೆ. ಹೀಗೆ ದಂಡಿ ದಂಡಿ ಅಧಿಕಾರ ಉಂಡಿರುವ ಸಿದ್ದರಾಮಯ್ಯ ಮುಂದೆ ಯಕಶ್ಚಿತ್ ಒಂದು ಡಝನ್ ಬೇಡಿಕೆ ಇಟ್ಟರೆ ತಪ್ಪೇ?
ಆಫ್ ದಿ ರೆಕಾರ್ಡ್!
ಅರಸು ಮಾದರಿಯ ಬಗ್ಗೆ ವಾರಪೂರ್ತಿ ಜಪವಾಗಿದೆ. ಆದರೆ ಅರಸರಿಂದ ಕಲಿಯುವುದಷ್ಟೇ ಅಲ್ಲ, ಕಲಿಯಬಾರದವೂ ಇವೆ. ಅರಸು ಹಳಿ ತಪ್ಪಲು ಹೊಗಳುಭಟ್ಟರು, ಪ್ರೇಯಸಿಯರು ಮತ್ತು ಜ್ಯೋತಿಷಿಗಳು (ಮೂಢನಂಬಿಕೆಗಳು) ಕಾರಣ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಹೊಗಳುಭಟ್ಟರು ಕಿವಿ ಕಚ್ಚದಿದ್ದರೆ ಅವರು ಸಂಜಯ್ ಗಾಂಧಿಗೆ ಡಿಚ್ಚಿ ಹೊಡೆಯುತ್ತಿರಲಿಲ್ಲ. ಇಂದಿರಾ ಗಾಂಧಿಯ ವಿಶ್ವಾಸ ಕಳೆದುಕೊಳ್ಳುತ್ತಿರಲಿಲ್ಲ. ಅಧಿಕಾರ ಅವರಿಂದ ದೂರವಾಗುತ್ತಿರಲಿಲ್ಲ. ಅಧಿಕಾರ ಇದ್ದರೆ ಅವರ ಕನಸುಗಳು ನನೆಗುದಿಗೆ ಬೀಳುತ್ತಿರಲಿಲ್ಲ. ಪ್ರೇಯಸಿಯರ ಪಾಶವಿಲ್ಲದಿದ್ದರೆ ಅವರು ಮೈಮರೆಯುತ್ತಿರಲಿಲ್ಲ. ಜ್ಯೋತಿಷಿಗಳು ಜೋತು ಬೀಳದಿದ್ದರೆ ಅರಸರಿಗೆ ಪ್ರಧಾನಿಯಾಗುವ ಕನಸು ಬೀಳುತ್ತಿರಲಿಲ್ಲ. ಇಂದಿನವರು ಅರಸುವನ್ನು ಈ ಕಾರಣಕ್ಕೂ ಅನುಸರಿಸಬೇಕಲ್ಲವೇ?







