ಸಿದ್ದುಗೆ ಅರಸು ದಾಖಲೆ ಮುರಿಯಲು ಸಾಧ್ಯವೇ?

ದಿವಂಗತ ಡಿ. ದೇವರಾಜ ಅರಸು 7 ವರ್ಷ 239 ದಿನ ಮುಖ್ಯಮಂತ್ರಿಯಾಗಿದ್ದರು. ಇದೀಗ ಜನವರಿ 7ನೇ ತಾರೀಕು ಸಿದ್ದರಾಮಯ್ಯ 7 ವರ್ಷ 240 ದಿನ ಪೂರೈಸಿ ‘ರಾಜ್ಯದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ’ ಅರಸು ದಾಖಲೆಯನ್ನು ಮುರಿಯಲು ಹೊರಟಿದ್ದಾರೆ. ದಿನದ ಲೆಕ್ಕದಲ್ಲಿರುವ ದಾಖಲೆ ಮುರಿದ ರೀತಿ ಅರಸು ಅವರಂತೆ ಜನ ಮಾನಸದ ಎದೆಯಲ್ಲಿ ಶಾಶ್ವತವಾಗಿ ನೆಲಸುವರೇ ಸಿದ್ದರಾಮಯ್ಯ? ಅದಲ್ಲವೇ ನಿಜವಾದ ದಾಖಲೆ?
ಅರಸು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರಸು ನೆನಪಿಸಿಕೊಳ್ಳುವವರು, ತಮ್ಮ ನೋವಿಗೆ ಅರಸು ಕಡೆ ನೋಡುವವರು, ಅರಸು ಅವರಲ್ಲಿ ತಮ್ಮ ಭವಿಷ್ಯ ಅರಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಅದು ಎರಡು ಕಾರಣಕ್ಕೆ. ಒಂದು ಅವರು ಮಾಡಿದ ಕೆಲಸಗಳಿಗಾಗಿ. ಇನ್ನೊಂದು ಅವರ ಸಾಮಾಜಿಕ ಬದ್ಧತೆಗಾಗಿ.
ಜಮೀನ್ದಾರನ ಹೊಟ್ಟೆಯಲ್ಲಿ ಹುಟ್ಟಿ ಜೀತಕ್ಕಿರುವವರ ದೈನೇಸಿ ಸ್ಥಿತಿಗೆ ಮರುಗಿದ ಮಹಾ ಮಾನವತಾವಾದಿ ಅರಸು. ಅವರ ಕೆಲಸದ ಬಗ್ಗೆ ಹೇಳಲು ಭೂಸುಧಾರಣೆ ಎಂಬ ಒಂದೇ ಉದಾಹರಣೆ ಸಾಕು. ಭೂಸುಧಾರಣೆ ಕಾಯ್ದೆ ತರಲು ಭೂಮಿಯನ್ನು ಹೊಂದಿರುವ ಮುಂದುವರಿದ ಜಾತಿಗಳು ತೀವ್ರವಾಗಿ ವಿರೋಧಿಸುತ್ತವೆ ಎನ್ನುವುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಹೆಚ್ಚಿನ ಸೀಟುಗಳನ್ನು ಕೊಟ್ಟು ಅವರನ್ನು ಗೆಲ್ಲಿಸಿಕೊಂಡಿದ್ದರು. ಪ್ರಬಲವಾಗಿ ವಿರೋಧಿಸುವ ಒಕ್ಕಲಿಗ ಸಮುದಾಯದ ಹುಚ್ಚುಮಾಸ್ತಿಗೌಡರಿಗೆ ಕಂದಾಯ ಖಾತೆ ಮತ್ತು ಬಂಟ ಸಮುದಾಯದ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ ಭೂಸುಧಾರಣೆ ಮಾಡಲೆಂದೇ ರೂಪಿಸಲಾಗಿದ್ದ ಪ್ರತ್ಯೇಕ ಖಾತೆಯನ್ನು ಕೊಟ್ಟು, ಅವರನ್ನು ಮತ್ತು ಅವರ ಮೂಲಕ ಆ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದವರು ಅರಸು.
ಅರಸು ಸಮುದಾಯ ಸಾಮಾಜಿಕವಾಗಿ ಅವಮಾನ ಎದುರಿಸಿರಲಿಲ್ಲ. ಅವರ ಕುಟುಂಬಕ್ಕೆ ತುಂಬಾ ಜಮೀನಿತ್ತು. ಆದರೂ ಬಡವರ-ಭೂಹೀನರ ಪರ ಒತ್ತಾಸೆಯಿಂದ ಭೂಸುಧಾರಣೆ ಕಾಯ್ದೆ ತಂದರು. ಅದಕ್ಕಾಗಿ ತಮ್ಮ ಅಧಿಕಾರವನ್ನು ಪಣಕ್ಕಿಟ್ಟಿದ್ದರು. ಚುನಾವಣೆಗೆ ಮುನ್ನವೂ ನಂತರವೂ. ಚುನಾವಣೆಗೆ ಮುನ್ನ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಹೆಚ್ಚಿನ ಸೀಟುಗಳನ್ನು ಕೊಡಬೇಕೆಂದು ಅಧ್ಯಯನ ಮಾಡಿ ಅದನ್ನು ಹೈಕಮಾಂಡ್ ನಾಯಕರ ಮುಂದಿಟ್ಟು ಮನವೊಲಿಸಿದ್ದರು. ಆಗ ಆ ಪ್ರಯೋಗ ಸೋತಿದ್ದರೆ ಅರಸು ಭೂಸುಧಾರಣೆ ಕಾಯ್ದೆ ತರುವುದಿರಲಿ, ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಇದು ಅರಸು ಅವರಿಗೆ ಗೊತ್ತಿದ್ದರೂ ಪ್ರಯೋಗ ಮಾಡಿದರು. ಅಧಿಕಾರ ಬಂದ ನಂತರವೂ ಸ್ವಲ್ಪ ಯಾಮಾರಿದರೆ ಬಲಾಢ್ಯರೆಲ್ಲಾ ಸೇರಿ ನಮ್ಮನ್ನು ಬಲಿ ಹಾಕುತ್ತಾರೆ ಎಂಬ ಆತಂಕವಿದ್ದರೂ ಅಂದುಕೊಂಡಂತೆ ಬಹಳ ಎಚ್ಚರದಿಂದ ಕಾಯ್ದೆ ತಂದರು.
ಇದು ನಿಜವಾದ ಕ್ರಾಂತಿಕಾರಕ ನಡೆ. ಬದ್ಧತೆ, ಬಡವರ-ಭೂಹೀನರ ಬಗೆಗಿನ ಕಾಳಜಿ, ಅಧಿಕಾರ ಪಣಕ್ಕಿಟ್ಟು ಅಂದುಕೊಂಡದ್ದನ್ನು ಮಾಡಿ ತೋರಿಸುವ ಧೈರ್ಯ. ಧೈರ್ಯ, ಬದ್ಧತೆ ಮತ್ತು ಕಾಳಜಿಗಳ ವಿಷಯದಲ್ಲಿ ಅರಸು ದಾಖಲೆ ಮುರಿಯುವುದು ಸಿದ್ದರಾಮಯ್ಯ ಅವರಿಗೆ ಸಾಧ್ಯವೇ? ಅರಸು ಮುಖ್ಯಮಂತ್ರಿಯಾಗುವ ಮುನ್ನ ಹೆಚ್ಚು ಮಾತನಾಡಿದವರಲ್ಲ, ಆದರೆ ಪರಿಣಾಮಕಾರಿ ಹೆಜ್ಜೆಗಳನ್ನು ಇಡಲು ಎಲ್ಲಾ ರೀತಿಯ ತಯಾರಿಗಳನ್ನು ಮೌನಿಯಾಗಿದ್ದುಕೊಂಡೇ ಮಾಡಿಕೊಂಡಿದ್ದರು. ಅದಕ್ಕೆ ಮೇಲೆ ಹೇಳಿರುವ ‘ಚುನಾವಣಾ ತಯಾರಿಯೇ’ ಸೂಕ್ತವಾದ ಉದಾಹರಣೆ. ಇಂಥ ಯೋಜನಾಬದ್ಧ ನಡೆ ಸಿದ್ದರಾಮಯ್ಯ ಅವರಿಂದ ಸಾಧ್ಯವೇ?
ಸಾಮಾಜಿಕ ಬದ್ಧತೆ ವಿಷಯಕ್ಕೆ ಬರುವುದಾದರೆ ಹಾವನೂರು ಆಯೋಗ ರಚಿಸಿ, ಅದು 3 ವರ್ಷ 3 ತಿಂಗಳಲ್ಲಿ ಸಮೀಕ್ಷೆ ನಡೆಸಿ ಕೊಟ್ಟ ವರದಿಯನ್ನು 1 ವರ್ಷ 9 ತಿಂಗಳ ಅಂತರದಲ್ಲಿ ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ನೀಡಿದ ನಡೆ ಒಂದೇ ಸಾಕು. ಆ ವರದಿ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ‘ಇದು ಹಿಂದುಳಿದ ವರ್ಗಗಳ ಸಮಗ್ರ ಅಧ್ಯಯನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು. ಅರಸು ಅವರು ‘ಇದು ಹಿಂದುಳಿದ ವರ್ಗಗಳ ಬೈಬಲ್’ ಎಂದು ಬಣ್ಣಿಸಿದ್ದರು. 50 ವರ್ಷಗಳ ಬಳಿಕವೂ ಅದೇ ಬೈಬಲ್! ಅದು ಸಾಧ್ಯವಾಗಿದ್ದು ಅಂಚಿನ ಜನರ ಬಗ್ಗೆ ಅಂತಃಕರಣ ಹೊಂದಿದ್ದ ಅರಸು ಅವರಿಂದ. ಅರಸು ಅವರ ಯೋಜನಾಬದ್ಧ ನಡೆಯಿಂದ. ಇಂಥ ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವೇ?
ಸಿದ್ದರಾಮಯ್ಯ ಕೂಡ 2014ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಮಾಡಿಸಲು ಕಾಂತರಾಜು ಆಯೋಗ ರಚಿಸಿದರು. 2018ರವರೆಗೆ ಅವರೇ ಮುಖ್ಯಮಂತ್ರಿಯಾಗಿದ್ದರೂ ವರದಿ ತಯಾರಾಗಲಿಲ್ಲ. ಇದು ಆಯೋಗವನ್ನು ದೂರುವ ವಿಷಯವಲ್ಲ, ಆಯೋಗಕ್ಕೆ ಸರಕಾರ ಕಾಲಮಿತಿ ನಿಗದಿಮಾಡಬಹುದಿತ್ತು. ಹೋಗಲಿ, 2023ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ 32 ತಿಂಗಳಾಗಿವೆ. ವರದಿ ಜಾರಿ ಮಾಡುವುದಿರಲಿ, ಅದನ್ನು ಕಸದ ಬುಟ್ಟಿಗೆ ಹಾಕಲು ಸ್ವತಃ ಸಿದ್ದರಾಮಯ್ಯ ‘ಇದು 10 ವರ್ಷ ಹಿಂದಿನ ವರದಿ’ ಎಂದು ಹೇಳಿದರು. ಅವರ ಮಾತಿನಿಂದ ವರದಿ ಜಾರಿಯಾಗುತ್ತೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಮತ್ತು ಅವರನ್ನೇ ನಂಬಿಕೊಂಡಿದ್ದ ಹಿಂದುಳಿದ, ಅದರಲ್ಲೂ ಸಣ್ಣಪುಟ್ಟ, ಹೇಳ ಹೆಸರಿಲ್ಲದ, ದನಿಯಿಲ್ಲದ ನೂರಾರು ಜಾತಿಗಳಿಗೆ ಬರಸಿಡಿಲು ಬಡಿದಂತಾಗಿತ್ತು.
ಸಿದ್ದರಾಮಯ್ಯಗೆ ಉಳಿದಿರುವುದು 28 ತಿಂಗಳ ಅಧಿಕಾರ (ಅವರ ಪಕ್ಷ ಅವಕಾಶ ಕೊಟ್ಟರೆ). ಅಷ್ಟರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಯಾಗುವುದೇ? ಸಿದ್ದರಾಮಯ್ಯ ಈ ವಿಷಯದಲ್ಲಾದರೂ ಅರಸು ದಾಖಲೆ ಸರಿಗಟ್ಟುವರೇ?
ದಿನದ ವಿಷಯಕ್ಕೆ ಬರುವುದಾದರೂ ಅರಸು ದಾಖಲೆ ಮುರಿಯಲು ಬರೋಬ್ಬರಿ ನಾಲ್ಕೂವರೆ ದಶಕ ಹಿಡಿಯಿತು. ಇದು ರಾಜ್ಯ ರಾಜಕೀಯ ಭೂಪಟದಲ್ಲಿ ಹಿಂದುಳಿದವರ ನಿರ್ವಾತ
ಮತ್ತು ನಿತ್ರಾಣ ಸ್ಥಿತಿಗೆ ಹಿಡಿದ ಕನ್ನಡಿ. ನಡುವೆ ಬಂಗಾರಪ್ಪ ಹಿಂದುಳಿದವರಲ್ಲಿ ಮತ್ತು ಬಡವರಲ್ಲಿ ಭರವಸೆ ಮೂಡಿಸಿದರು. ಆದರವರು ಭೋರ್ಗರೆದು ಸುರಿದ ಮಳೆ. ಭೂಮಿಯಾಳಕ್ಕೆ ಇಳಿದ ನೀರು ಕಮ್ಮಿ. ಬಂಗಾರಪ್ಪ ಆವೇಶ, ಆಕ್ರೋಶಕ್ಕೆ ಬಲಿಯಾಗಿ ಕಳೆದು ಹೋದರು. ನಂತರ ಬಂದ ಹಿಂದುಳಿದ ಜಾತಿಯ ನಾಯಕ ವೀರಪ್ಪ ಮೊಯ್ಲಿ. ಅವರು ಯಾರನ್ನೂ ನಂಬಲಿಲ್ಲ, ಅವರನ್ನೂ ಯಾರೂ ನಂಬಲಿಲ್ಲ. ಪ್ರಕೃತಿಯೇ ಹಾಗಲ್ಲವೇ? ಸಿಇಟಿ, ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಅಧ್ಯಯನ, ಇಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅಡಿಗಲ್ಲು ಸೇರಿದಂತೆ ಹಲವು ಒಳ್ಳೆಯ ಕೆಲಸ ಮಾಡಿಯೂ ಮೊಯ್ಲಿ ಮರೆಯಾದರು. ಅದಾದ ಮೇಲೆ ಧರಂ ಸಿಂಗ್ ಮುಖ್ಯಮಂತ್ರಿಯಾದರು. ಆದರೆ ಹೆಸರಿಗಷ್ಟೇ.
ಈ ಮೂವರೂ ಮುಖ್ಯಮಂತ್ರಿಯಾಗಲು ಅಡಿಗಲ್ಲು ಹಾಕಿದ್ದು ಅರಸು. ಲೋಕೋಪಯೋಗಿ ಖಾತೆ ಕೊಟ್ಟು ಬಂಗಾರಪ್ಪ ಅವರನ್ನು ದಪ್ಪ ಮಾಡಿದ್ದು, ಕಾರ್ಕಳದಲ್ಲಿ ವಕೀಲಿಕೆ ಮಾಡಿಕೊಂಡು ಕಳೆದುಹೋಗುತ್ತಿದ್ದ ಮೊಯ್ಲಿಗೆ ಟಿಕೆಟ್ ಕೊಟ್ಟು, ಗೆಲ್ಲಿಸಿ, ಮಂತ್ರಿ ಸ್ಥಾನ ಕೊಟ್ಟು ನಾಯಕನನ್ನಾಗಿ ರೂಪಿಸಿದ್ದು, ಜೇವರ್ಗಿಯಲ್ಲಿ ಹೇಳ ಹೆಸರಿಲ್ಲದ ಜಾತಿಯ ಧರಂ ಸಿಂಗ್ ಅವರನ್ನು ಬೆಳೆಸಿದ್ದು ಅರಸು. ಕೆ.ಎಚ್. ರಂಗನಾಥ್ ಅವರಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆವರೆಗೆ ಹಲವು ಮುಖ್ಯಮಂತ್ರಿಗಳ ಅಭ್ಯರ್ಥಿಗಳನ್ನು ಹುಟ್ಟುಹಾಕಿದ್ದು ಅರಸು. ಅವರು ಬೆಳೆಸಿದ ನಾಯಕರು ಒಬ್ಬರಾ, ಇಬ್ಬರಾ? ಜನಾರ್ದನ ಪೂಜಾರಿ, ಬಸವಲಿಂಗಪ್ಪ, ಡಿ.ಕೆ. ನಾಯ್ಕರ್, ದೇವೇಂದ್ರಪ್ಪ ಗಾಳಪ್ಪ, ಎಚ್. ವಿಶ್ವನಾಥ್ ಇನ್ನೂ ಅನೇಕರು. ಅರಸು ಜನರ ಮಧ್ಯೆ ಹುಟ್ಟಿದ ನಾಯಕನಾಗಿರಲಿಲ್ಲ. ಅವರು ಜನರ ಬಳಿ ಹೋಗಿದ್ದೇ ನಾಯಕನಾಗಿ. ಹಾಗೆ ಜನರ ಬಳಿ ಹೋಗಿದ್ದ ಅರಸು ಗುಂಪಿನ ಆಚೆಗಿದ್ದವರನ್ನೂ, ಅಂಚಿನಲ್ಲಿರುವವರನ್ನೂ ಗುರುತಿಸುತ್ತಿದ್ದರು. ಅರಸು ಅವರ ಈ ಅಪರೂಪದ ದಾಖಲೆ ಮುರಿಯುವುದು ಸಿದ್ದರಾಮಯ್ಯ ಅವರಿಂದ ಸಾಧ್ಯವೇ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಅವರಂಥವರನ್ನು ಮಂತ್ರಿ ಮಾಡಿದರು. ಈ ಸಲ ಬೈರತಿ ಸುರೇಶ್‌ಗೂ ಅವಕಾಶ ಕೊಟ್ಟರು. ಇವರೆಲ್ಲಾ ಸಾಮಾಜಿಕ ನ್ಯಾಯ, ಅಹಿಂದ ಬಗ್ಗೆ ಮಾತನಾಡುವ ವಿಚಾರ ಬಿಡಿ, ‘ಹಿಂದುಳಿದ ಜಾತಿಯ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಕೂಡದು’ ಎಂದು ಕೂಡ ಹೇಳುವುದಿಲ್ಲ. ಹಾಗೆ ಮಾತನಾಡುತ್ತಿದ್ದ ಕೆ.ಎನ್. ರಾಜಣ್ಣ ಅವರನ್ನು ಸಿದ್ದರಾಮಯ್ಯ ಅವರೇ ಉಳಿಸಿಕೊಳ್ಳಲಿಲ್ಲ. ಮಾತನಾಡುವ ಧೈರ್ಯ ತೋರಬಲ್ಲ ಬಿ.ಕೆ. ಹರಿಪ್ರಸಾದ್ ಅವರನ್ನು ಮಂತ್ರಿಯೇ ಮಾಡಲಿಲ್ಲ. ಇವತ್ತು ಸಿದ್ದರಾಮಯ್ಯ ಅಕ್ಕಪಕ್ಕದಲ್ಲಿ ಈಡಿಗ, ಗೊಲ್ಲ, ಬಿಲ್ಲವ, ಮಡಿವಾಳ ಮತ್ತಿತರ ಸಮುದಾಯದ ನಾಯಕರು ಕಾಣಿಸುವುದಿಲ್ಲ. ಇದು ಅರಸು ಕಾರ್ಯವೈಖರಿಯೇ? ಅರಸು ಅಂದು ಹಿಂದುಳಿದ ಜಾತಿಗಳಲ್ಲಿ ಬಿತ್ತಿದ್ದ ರಾಜಕೀಯ ಪ್ರಜ್ಞೆಯ ಬೀಜಗಳ ಕಾರಣಕ್ಕಾಗಿ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಬಿತ್ತಿರುವ ಬೀಜ ಎಂಥದ್ದು?
ಸಿದ್ದು-ಅರಸು ಅದೃಷ್ಟವಂತ ಯಾರು?
ಅರಸು ಕಾಲದ ಪ್ರತಿಪಕ್ಷದ ನಾಯಕ ಎಚ್.ಡಿ. ದೇವೇಗೌಡ. ಸಿದ್ದರಾಮಯ್ಯ ಕಾಲದ ಪ್ರತಿಪಕ್ಷ ನಾಯಕರು ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಆರ್. ಅಶೋಕ್. ಅರಸು ಮತ್ತು ಸಿದ್ದರಾಮಯ್ಯ ನಡುವೆ ಯಾರು ಅದೃಷ್ಟವಂತ ರಾಜಕಾರಣಿ ಎಂದು ನಿರ್ಧರಿಸಲು ಇದೇ ಸಾಕು. ಅರಸು ಅವರನ್ನು ಸ್ವಪಕ್ಷೀಯರೇನೂ ಕಮ್ಮಿ ಕಾಡಲಿಲ್ಲ. ಬಹುಶಃ ಅರಸು ಅಧಿಕಾರದಲ್ಲಿ ಇದ್ದ ಅಷ್ಟೂ ದಿನ ನೆಮ್ಮದಿಯಾಗಿರಲಿಲ್ಲ. ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ರಾಜಕೀಯವಾಗಿ ಮರುಜೀವ ನೀಡಿದರೂ ಕಡೆಕಡೆಗೆ ಇಂದಿರಾ ಗಾಂಧಿ ಕೃಪೆ ಕೂಡ ಸಿಗಲಿಲ್ಲ. ಸಿದ್ದರಾಮಯ್ಯ ಹೊರಗಿನಿಂದ ಬಂದಾಗಿನಿಂದಲೂ ಒಂದಿಲ್ಲೊಂದು ಅಧಿಕಾರದಲ್ಲಿದ್ದಾರೆ ಮತ್ತು ಅರಸುಗೆ ಹೋಲಿಸಿಕೊಂಡರೆ ನಿರಾಳರಾಗಿದ್ದಾರೆ. ನೋವುಂಡು ನಲಿವು ನೀಡಿದ ಅರಸು ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವೇ?
ಹಿಂದಿನ ರಾತ್ರಿ ಅರಸು ಜೊತೆಗಿದ್ದ ಬಂಗಾರಪ್ಪ ನಾನು ನಿಮ್ಮೊಂದಿಗಿರುವೆ ಎಂಬ ಮಾತುಕೊಟ್ಟಿದ್ದರು. ಬೆಳಗ್ಗೆ ಆಲ್ ಇಂಡಿಯಾ ರೇಡಿಯೊದಲ್ಲಿ ಬಂಗಾರಪ್ಪ ಕೆಪಿಸಿಸಿ ಅಧ್ಯಕ್ಷ ಎನ್ನುವ ಸುದ್ದಿ ಬಿತ್ತರವಾಯಿತು. ಅದನ್ನು ಕೇಳಿ ತತ್ತರಿಸಿಹೋದ ಅರಸು ‘ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಮೋಸ ಮಾಡಬಾರದಿತ್ತು’ ಎಂದು ಹೇಳಿದ್ದರಂತೆ. ಹೀಗೆ ಅರಸು ಬೆನ್ನಿಗೆ ಇರಿದವರು ಒಬ್ಬಿಬ್ಬರಲ್ಲ. ಸಿದ್ದರಾಮಯ್ಯ ವಿಷಯದಲ್ಲಿ ಇಷ್ಟೊಂದು ನಿರ್ದಯಿಯಾಗಿ ನಡೆದುಕೊಂಡ ವ್ಯಕ್ತಿ ಕಾಣಿಸುತ್ತಿಲ್ಲ. ತಾನು ಕಹಿ ತಿಂದು ಸಿಹಿ ನೀಡಿದ ಅರಸು ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವೇ?
ಅರಸು ಕಾಲದಲ್ಲಿ ಈಗಿನಂತ ಹಣದಿಂದ ಆಯ್ಕೆಯಾದ ಶಾಸಕರು ಹೆಚ್ಚಾಗಿರಲಿಲ್ಲ. ಉದ್ಯಮಿಗಳು, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳು ನೇರವಾಗಿ ರಾಜಕಾರಣವನ್ನು ನಿಯಂತ್ರಿಸುತ್ತಿರಲಿಲ್ಲ. ರಿಯಲ್ ಎಸ್ಟೇಟ್ ಉದ್ಯಮದವರಂತೂ ಇರಲೇ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ಅದರ ನಡುವೆಯೇ ಅವರು ಬಹುಕಾಲ ಉಳಿಯುವಂತಹ ಮಾಡಿದ ಕೆಲಸಗಳೆಂದರೆ SCSP-TSP ಕಾಯ್ದೆ, ಗುತ್ತಿಗೆಯಲ್ಲಿ ಮೀಸಲಾತಿ, ಭಡ್ತಿ ಮೀಸಲಾತಿ, ಅನ್ನಭಾಗ್ಯ ಹಾಗೂ ಗ್ಯಾರಂಟಿ ಯೋಜನೆಗಳು. ಈ ಪೈಕಿ ಗ್ಯಾರಂಟಿಗಳು ಹೈಕಮಾಂಡ್ ಯೋಜನೆಗಳು, ಜಾರಿಗೆ ತಂದದ್ದು ಸಿದ್ದರಾಮಯ್ಯ. ಇದೇ ಕಾರಣಕ್ಕೆ ಅವರ ಬಗ್ಗೆ ನಿರೀಕ್ಷೆ, ಅವರಲ್ಲಿ ಅರಸು ಅವರನ್ನು ಕಾಣುವ ಅಪೇಕ್ಷೆ. ಆದರೆ?
ಎಂದೂ ಮುಖಾಮುಖಿಯಾಗದ ಅರಸು-ಸಿದ್ದು!
ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಮೈಸೂರಿನವರು. ಸಿದ್ದರಾಮಯ್ಯ ವಕೀಲಿಕೆಯಿಂದ ರಾಜಕೀಯದ ಕಡೆ ವಾಲಿದ ಸಂದರ್ಭ ಅರಸು ಪ್ರಭಾವ ದಟ್ಟವಾಗಿದ್ದ ಕಾಲ. ಆದರೂ ಈ ಇಬ್ಬರು ಎಂದೂ ಮುಖಾಮುಖಿಯಾಗಲಿಲ್ಲ.
ಪ್ರೊ. ನಂಜುಂಡಸ್ವಾಮಿ ಅವರಿಂದ ಪ್ರಭಾವಿತನಾಗಿ ರಾಜಕಾರಣಕ್ಕೆ ಬಂದೆ ಎಂದು ಸಿದ್ದರಾಮಯ್ಯ ಸಾವಿರ ಬಾರಿ ಹೇಳಿದ್ದಾರೆ. ನಂಜುಂಡಸ್ವಾಮಿ ಬಗ್ಗೆ, ಅದೇ ರೀತಿ ಇನ್ನಿತರ ಸಮಾಜ ಸುಧಾರಕರ ಬಗ್ಗೆ Passionate ಆಗಿ ಮಾತನಾಡುತ್ತಾರೆ. ಆದರೆ ಅರಸು ವಿಚಾರದಲ್ಲಿ, ಅವರ ಜಯಂತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ ಎನ್ನುವುದನ್ನು
ಬಿಟ್ಟರೆ ‘ಅರಸು ಬಗ್ಗೆ ಸಿದ್ದರಾಮಯ್ಯ ಬಾಯಲ್ಲಿ ಕೇಳಲೇಬೇಕು’ ಎನ್ನುವ ರೀತಿಯಲ್ಲಿ ಮಾತನಾಡಿಲ್ಲ ಎನ್ನುವುದು ಕೌತುಕದ ಸಂಗತಿ.
ಆಫ್ ದಿ ರೆಕಾರ್ಡ್!
ಅಹಿಂದ ಸಮಾವೇಶ, ಶೋಷಿತರ ಸಮಾವೇಶ, ಸಾವಿರದ ಸಮಾವೇಶ ಮಾಡುವುದು ಸುಲಭ. ಲಕ್ಷಾಂತರ ಜನರನ್ನು ಸೇರಿಸುವುದು ಸುಲಭ. ಆದರೆ ಅರಸು ಅವರಂತೆ ಅಹಿಂದ ಸಮುದಾಯಗಳ ಸಂಘಟನೆ ಮಾಡಿ ಅವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಆ ಸಮುದಾಯಗಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನೂ ಕೊಡುವುದು??







