Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಕೇರಳದಿಂದ ಸಿದ್ದುಗೆ ಸಿಹಿ ಸುದ್ದಿ!

ಕೇರಳದಿಂದ ಸಿದ್ದುಗೆ ಸಿಹಿ ಸುದ್ದಿ!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ18 May 2026 9:56 AM IST
share
ಕೇರಳದಿಂದ ಸಿದ್ದುಗೆ ಸಿಹಿ ಸುದ್ದಿ!

ಕೇರಳ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ಎದುಸಿರು ಬಿಟ್ಟ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಸಿದ್ದರಾಮಯ್ಯ ತಂಟೆಗೆ ಬರುವುದು ಅನುಮಾನವಾಗಿದೆ. ಅದು ಮೂರು ಮುಖ್ಯ ಕಾರಣಗಳಿಗಾಗಿ; ಜಾತಿ ಲೆಕ್ಕಾಚಾರ, ಕೆ.ಸಿ.ವೇಣುಗೋಪಾಲ್ ಮತ್ತು ಅನಗತ್ಯವಾಗಿ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಬಾರದು ಎನ್ನುವ ಕಾರಣಗಳಿಗಾಗಿ.

ಜಾತಿ ಲೆಕ್ಕಾಚಾರದ ಕನ್ನಡಕ ತೊಟ್ಟು ನೋಡಿದರೆ ಕೇರಳದಲ್ಲಿ ಕಾಂಗ್ರೆಸ್ ಮತ್ತೆ ಮುಂದುವರಿದ ನಾಯರ್ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆ.ಸಿ.ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಳ ಕೂಡ ನಾಯರ್ ಜಾತಿಯವರೇ. ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಅಲ್ಲೊಬ್ಬ ಪ್ರಬಲ ಈಳವ ನಾಯಕನನ್ನು ಬೆಳೆಸಿಲ್ಲ. ಈಳವ ಸಮುದಾಯದ ಪಿಣರಾಯಿ ವಿಜಯನ್ ನಿರ್ಗಮನದ ಹಾದಿಯಲ್ಲಿದ್ದಾಗಲೂ ಇದರ ಬಗ್ಗೆ ಯೋಚಿಸಿಲ್ಲ. ಕೇರಳದಲ್ಲಿ ಬೇರೂರಲು ಬಿಜೆಪಿ ಈಳವರಿಗೆ ಗಾಳ ಹಾಕುತ್ತಿದೆ ಎನ್ನುವುದನ್ನು ಅರಿತಾದರೂ ಮಾಡಲಿಲ್ಲ. ಬಾಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾ ವಾಸ್ತವದಲ್ಲಿ ಮೈಮರೆಯುವ ಕಾಂಗ್ರೆಸ್ ಕೇರಳದಲ್ಲಿ ಮಾಡಿದ್ದು ಅದನ್ನೇ.

ಕೇರಳದಲ್ಲಿ ಕಾಂಗ್ರೆಸ್ ಮಾಡಿರುವ ಸಕಾರಾತ್ಮಕ ಕೆಲಸವೆಂದರೆ ಹೈಕಮಾಂಡ್ ನಾಯಕರ ಹಿಂದೆ ಓಡಾಡುವವರ ಬದಲು ಜನರ ಬಳಿ ಇರುವವರಿಗೆ ಮನ್ನಣೆ ನೀಡಿರುವುದು. ರಾಜಕಾರಣದಲ್ಲಿ ಜನಬೆಂಬಲವೇ ಮುಖ್ಯ ಎನ್ನುವುದನ್ನು ಕೇರಳದ ಬೆಳವಣಿಗೆ ಸಾಬೀತುಪಡಿಸಿದೆ. ಕಾಂಗ್ರೆಸ್‌ನ 63 ಶಾಸಕರ ಪೈಕಿ 47 ಜನ ಕೆ.ಸಿ.ವೇಣುಗೋಪಾಲ್ ಪರ ಇದ್ದರೂ ಹೈಕಮಾಂಡ್ ಜನರ ಜೊತೆಗಿರುವ ವಿ.ಡಿ. ಸತೀಶನ್ ಬೆಂಬಲಿಸಿದೆ. ಕೇರಳ ಮಾದರಿಯನ್ನು ಕರ್ನಾಟಕದ ನಾಯಕತ್ವ ಬದಲಾವಣೆ ವಿಷಯದಲ್ಲೂ ಅಳವಡಿಸಿಕೊಳ್ಳಬಹುದು. ಹೈಕಮಾಂಡಿಗೆ ನಿಷ್ಠೆ ಮತ್ತು ಶಾಸಕರ ಬೆಂಬಲಕ್ಕಿಂತಲೂ ಜನಬೆಂಬಲವೇ ಮುಖ್ಯವಾಗಬಹುದು. 2028ರ ವಿಧಾನಸಭಾ ಮತ್ತು 2029ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪೈಕಿ ಯಾರ ಪರ ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲು ಜನಬೆಂಬಲವೇ ಮಾನದಂಡವಾಗಬಹುದು.

ನಾಯಕತ್ವ ಬದಲಾವಣೆ ವಿಷಯಕ್ಕೆ ಮತ್ತೊಂದು ಆಯಾಮವಿದೆ. ದೇಶದಲ್ಲಿ ಈಗ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಮುಂದುವರಿದ ಜಾತಿಯ ಮುಖ್ಯಮಂತ್ರಿಗಳಿದ್ದಾರೆ. ಸಿದ್ದರಾಮಯ್ಯ ಮಾತ್ರ ಹಿಂದುಳಿದ ಜಾತಿಯ ಮುಖ್ಯಮಂತ್ರಿ. ಜೊತೆಗೆ ಸಿದ್ದರಾಮಯ್ಯ ಅವರನ್ನು ಅಹಿಂದ ಮುಖ್ಯಮಂತ್ರಿ ಎಂದೂ ಕರೆಯಲಾಗುತ್ತದೆ. ಇದರಿಂದಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನ ಆಯಕಟ್ಟಿನ ಜಾಗದಲ್ಲಿ ಇರಬೇಕೆಂದು ಪ್ರತಿಪಾದಿಸುತ್ತಿರುವ, ಹಾಗೆಯೇ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದಿದ್ದ ಒಬಿಸಿ ಸಮಾವೇಶದಲ್ಲಿ ಕಾಂಗ್ರೆಸ್ ಹಿಂದುಳಿದವರನ್ನು ಕಡೆಗಣಿಸಿದೆ ಎಂದು ತಪ್ಪೊಪ್ಪಿಕೊಂಡಿರುವ ರಾಹುಲ್ ಗಾಂಧಿ ಈಗ ಹಿಂದುಳಿದ ಜಾತಿಯ ಮುಖ್ಯಮಂತ್ರಿಯನ್ನು ಬದಲಿಸುವ ಸಾಧ್ಯತೆ ಕಡಿಮೆ.

ಕೆ.ಸಿ. ವೇಣುಗೋಪಾಲ್ ದೃಷ್ಟಿಯಿಂದ ನೋಡಿದರೆ ಸಿದ್ದರಾಮಯ್ಯ ಅದೃಷ್ಟದ ಹಿಂದೆ ಹೋಗದಿದ್ದರೂ ಅದೃಷ್ಟವೇ ಅವರನ್ನು ಹಿಂಬಾಲಿಸುತ್ತಿದೆ. Blessing in disguise ಎನ್ನುವ ಮಾತಿನಂತೆ ವೇಣುಗೋಪಾಲ್ ಕೇರಳ ಮುಖ್ಯಮಂತ್ರಿ ಆಗದೇ ಇದ್ದದ್ದು ಸಿದ್ದರಾಮಯ್ಯಗೆ ವರದಾನವಾಗಿದೆ.

ವೇಣುಗೋಪಾಲ್ ಮೊದಲಿಂದಲೂ ಸಿದ್ದರಾಮಯ್ಯ ಪರ. ರಾಹುಲ್ ಗಾಂಧಿಗೆ ಆಪ್ತರು. ಅವರು ಮುಖ್ಯಮಂತ್ರಿಯಾಗಿ ಕೇರಳಕ್ಕೆ ಹೋಗದಿರುವುದರಿಂದ ಸಿದ್ದರಾಮಯ್ಯಗೆ ದಿಲ್ಲಿಯಲ್ಲಿ ತಮ್ಮ ಪರ ಲಾಬಿ ಮಾಡಲು ಇದ್ದ ಸೂಕ್ತ ಮತ್ತು ಸಮರ್ಥ ವ್ಯಕ್ತಿಯ ಸಹಕಾರ ಭವಿಷ್ಯದಲ್ಲೂ ಮುಂದುವರಿಯುವಂತಾಗಿದೆ. ವೇಣುಗೋಪಾಲ್ ಮುಖ್ಯಮಂತ್ರಿಯಾಗಿದ್ದರೆ ಕೇರಳ ರಾಜಕೀಯಕ್ಕೆ ಸೀಮಿತರಾಗುತ್ತಿದ್ದರು. ಅವರು ಬಯಸಿದರೂ ಸಿದ್ದರಾಮಯ್ಯಗೆ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ದಿಲ್ಲಿಯಲ್ಲಿ ಇನ್ನೊಂದು ರೀತಿಯ ಚರ್ಚೆ ಶುರುವಾಗಿದೆ. 2029ರ ಲೋಕಸಭಾ ಚುನಾವಣೆವರೆಗೂ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕನಾಗಿ, ಎಐಸಿಸಿ ಅಧ್ಯಕ್ಷರಾಗಿ ಮತ್ತು ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎನ್ನುವ ಮಾತುಗಳ ನಡುವೆಯೂ ಕೇರಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ವೇಳೆ ಕೆ.ಸಿ. ವೇಣುಗೋಪಾಲ್ ಎಐಸಿಸಿ ಅಧ್ಯಕ್ಷರಾಗಬಹುದು ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ. ಹಾಗೇನಾದರೂ ಆದರೆ ಆಗಲೂ ಸಿದ್ದರಾಮಯ್ಯ ಕೈ ಮೇಲಾಗುತ್ತದೆ. ಕಡೆಯದಾಗಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಹೈಕಮಾಂಡ್ ಅನ್ನು ಹಲವು ರೀತಿಯಲ್ಲಿ ಘಾಸಿಗೊಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದದ್ದು, ಟಿಎಂಸಿ ಸೋತು ಇಂಡಿಯಾ ಮೈತ್ರಿಕೂಟದ ಬಲ ಕುಂದಿರುವುದು, ಪ್ರಿಯಾಂಕಾ ಗಾಂಧಿ ಉಸ್ತುವಾರಿಯಲ್ಲಿ ಅಸ್ಸಾಂ ಚುನಾವಣೆಯನ್ನು ಹೀನಾಯವಾಗಿ ಸೋತಿರುವುದು ಕಾಂಗ್ರೆಸ್ ಪಕ್ಷವನ್ನು ಕಂಗಾಲಾಗಿಸಿದೆ. ಚುನಾವಣೆಗೂ ಮುನ್ನ ಟಿವಿಕೆ ಜೊತೆ ಹೋಗಿ ತಮಿಳುನಾಡಿನಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳಲು ಇದ್ದ ಅಪರೂಪದ ಅವಕಾಶವನ್ನು ಕಳೆದುಕೊಂಡಿರುವುದು ಇನ್ನೊಂದು ಆಘಾತವಾಗಿದೆ. ಕೇರಳ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈರಾಣಾಗಿದೆ. ಹೀಗೆ ಸೋತು, ಸುಸ್ತಾಗಿರುವ ಹೈಕಮಾಂಡಿಗೆ ಈಗ ಮತ್ತೊಂದು ಸಮಸ್ಯೆಯನ್ನು ಆಹ್ವಾನಿಸುವ ಆತ್ಮಸ್ಥೈರ್ಯ ಉಳಿದಿಲ್ಲ. ಅದರಿಂದಾಗಿ ಕರ್ನಾಟಕದಲ್ಲಿ ನಾಯಕತ್ವ ಬದಲಾಯಿಸುವ ಬಗ್ಗೆ ಯೋಚನೆ ಮಾಡುವುದು ಕೂಡ ಅನುಮಾನ ಎನ್ನುತ್ತಾರೆ ದಿಲ್ಲಿಯ ನಾಯಕರೊಬ್ಬರು.

► ಸಂಪುಟ ಪುನರ್ ರಚನೆ ಏಕಿಲ್ಲ?

ಒಂದರ ಹಿಂದೆ ಒಂದರಂತೆ ತಮಗೆ ಪೂರಕವಾದ ವಾತಾವರಣವೇ ನಿರ್ಮಾಣವಾಗುತ್ತಿದ್ದರೂ ಸಿದ್ದರಾಮಯ್ಯ ಅವರಿಂದ ಸಂಪುಟ ಪುನರ್ ರಚನೆ ಏಕೆ ಸಾಧ್ಯವಾಗುತ್ತಿಲ್ಲ? ಅದು ಹೈಕಮಾಂಡ್ ಕಾರಣಕ್ಕಲ್ಲ; ಕೇರಳದ ಬೆಳವಣಿಗೆ ನೋಡಿಕೊಂಡು ಮುಂದಡಿ ಇಡಬೇಕು ಎಂದು ಸಿದ್ದರಾಮಯ್ಯ ಅವರೇ ಹಿಂಜರಿದ ಕಾರಣಕ್ಕೆ. ಈಗ ಸಿದ್ದರಾಮಯ್ಯ ಮುಂದುವರಿಯಬಹುದು, ದಿಲ್ಲಿಗೆ ಹೋಗಿ ಸಂಪುಟ ಪುನರ್ ರಚನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಬಹುದು. ಆದರೆ ಈಗಾಗಲೇ ಹೇಳಿದಂತೆ ಜರ್ಜರಿತವಾಗಿರುವ ಹೈಕಮಾಂಡ್ ತಕ್ಷಣಕ್ಕೆ ತಥಾಸ್ತು ಎನ್ನುವ ಸಾಧ್ಯತೆ ಕಡಿಮೆ. ‘ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತನಾಡಿ ನಿರ್ಧರಿಸಿ’ ಎಂದೇನಾದರೂ ಹೇಳಿದರೆ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಮುಗಿಯುವವರೆಗೆ ಯಥಾಸ್ಥಿತಿಯೇ ಗತಿ.

► ರಾಜ್ಯಸಭೆಗೆ ಹೋಗಲು ಪೈಪೋಟಿ!

ಮುಂದಿನ ತಿಂಗಳು ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ದೇವೇಗೌಡ, ಈರಣ್ಣ ಕಡಾಡಿ ಮತ್ತು ಕೆ. ನಾರಾಯಣ್ ರಾಜ್ಯಸಭಾ ಅವಧಿ ಮುಗಿಯಲಿದೆ. ಕಳೆದ ಬಾರಿ ಕಾಂಗ್ರೆಸ್ ಕೃಪಾಶೀರ್ವಾದದಿಂದ ರಾಜ್ಯಸಭೆಗೆ ಹೋಗಿದ್ದ ದೇವೇಗೌಡ ಈ ಸಲ ಬಿಜೆಪಿ ಸಹಕಾರದಿಂದ ಹೋಗಲು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರ ವಿರೋಧವಿರುವುದರಿಂದ ಮೋದಿ, ಅಮಿತ್ ಶಾ ಮತ್ತು ನಿತಿನ್ ನಬಿನ್ ಮೂಲಕ ಸೀಟು ಗಿಟ್ಟಿಸಲು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಸಿಗಲಿದ್ದು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಹೋಗುವುದು ನಿರ್ವಿವಾದ. ಉಳಿದಂತೆ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕೊರೋನಾ ಕಾಲದಲ್ಲಿ ‘ಆಕ್ಸಿಜನ್ ಮ್ಯಾನ್’ ಎಂದೇ ಪ್ರಖ್ಯಾತರಾಗಿದ್ದ ಬಿ.ವಿ. ಶ್ರೀನಿವಾಸ್ ಹೆಸರು ಕೇಳಿಬರುತ್ತಿದೆ. ಹೈಕಮಾಂಡ್ ಬೆಂಬಲ ಮತ್ತು ಹಿಂದುಳಿದ ಜಾತಿಯ ಕೋಟಾ ಇರುವುದರಿಂದ ಬಿ.ವಿ . ಶ್ರೀನಿವಾಸ್ ರಾಜ್ಯಸಭೆಗೆ ಹೋಗುವುದು ಕೂಡ ಬಹುತೇಕ ಗ್ಯಾರಂಟಿ. ಇನ್ನೊಂದು ಸ್ಥಾನಕ್ಕೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಡುವೆ ಪೈಪೋಟಿ.

► ಲಿಂಗಾಯತ ಗಿ / ಒಕ್ಕಲಿಗ

ಲಿಂಗಾಯತರ ಪೈಕಿ ರೆಡ್ಡಿ ಲಿಂಗಾಯತ ಸಮುದಾಯದ ವಕೀಲ ಮೋಹನ್ ಕಾತರಕಿ ಹೆಸರು ಕೇಳಿಬರುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಜಲವಿವಾದಗಳನ್ನು ನಡೆಸುವ ವಕೀಲರ ತಂಡದ ಮುಂಚೂಣಿ ಸದಸ್ಯ ಮೋಹನ್ ಕಾತರಕಿ ಮೂಲತಃ ಬೆಳಗಾವಿಯವರು. ಅದರಿಂದಾಗಿ ಮೋಹನ್ ಕಾತರಕಿ ಲಿಂಗಾಯತ ಸಮುದಾಯದ ಜೊತೆಗೆ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. ಸಚಿವ ಸತೀಶ್ ಜಾರಕಿಹೊಳಿ ಬೆಂಬಲ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಡಿ.ಕೆ. ಶಿವಕುಮಾರ್ ಒಕ್ಕಲಿಗರಿಗೆ ರಾಜ್ಯಸಭಾ ಸ್ಥಾನ ಕೇಳುತ್ತಿದ್ದಾರೆ. ಲೋಕಸಭಾ ಚುನಾವಣೆ ಸೋತಿರುವ ಸಹೋದರ ಡಿ.ಕೆ. ಸುರೇಶ್ ಹೆಸರನ್ನು ಹೇಳುತ್ತಿದ್ದಾರೆ. ಕೆಎಂಎಫ್ ಕನಸು ನನಸಾಗದ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಒಕ್ಕಲಿಗರಿಗೆ ಅವಕಾಶ ಕೊಡುವುದಾದರೆ ತಮ್ಮ ಬೆಂಬಲಿಗ ಮೈಸೂರು ಜಿಲ್ಲಾ (ಗ್ರಾಮಾಂತರ) ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕು ಮಾರ್ ಹೆಸರು ಪರಿಗಣಿಸುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈಗಾಗಲೇ ಒಕ್ಕಲಿಗ ಜಿ.ಸಿ. ಚಂದ್ರಶೇಖರ್ ರಾಜ್ಯಸಭೆಯಲ್ಲಿ ಇರುವುದರಿಂದ ಮತ್ತೊಬ್ಬರಿಗೆ ಅವಕಾಶ ಸಿಗುವುದು ಅನುಮಾನ.

► ವಿಫಲವಾದ ಬಿಎಸ್ ವೈ ಉತ್ಸವ!

ಚುನಾವಣಾ ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸುವ ನೆಪದೊಂದಿಗೆ ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಮಾಡಿದ್ದೇ ವಿಜಯೇಂದ್ರ ಶಕ್ತಿಪ್ರದರ್ಶನಕ್ಕಾಗಿ. ಬಿಜೆಪಿ ಆಯೋಜಿಸಿದ ಕಾರ್ಯಕ್ರಮ ಎಂದು ಹೇಳಲಾಯಿತಾದರೂ ಅದು ಯಡಿಯೂರಪ್ಪ ಕುಟುಂಬದವರು, ಕುಟುಂಬದವರ ಮೂಲಕ, ಕುಟುಂಬದವರಿಗೋಸ್ಕರ ಮಾಡಿದ ಉತ್ಸವವಾಗಿತ್ತು. ಸಿದ್ದರಾಮೋತ್ಸವ ಮಾದರಿಯಲ್ಲಿ ಅಪಾರ ಸಂಖ್ಯೆಯ ಜನರನ್ನು ಸೇರಿಸಬೇಕು, ಖುದ್ದು ಮೋದಿಯೇ ಬಂದು ವಿಜಯೇಂದ್ರ ಸಂಘಟನಾ ಸಾಮರ್ಥ್ಯವನ್ನು ಕಣ್ತುಂಬಿಕೊಳ್ಳಬೇಕು, ಬಿಜೆಪಿಯ ನೂತನ ಅಧ್ಯಕ್ಷ ನಿತಿನ್ ನಬಿನ್ ಮೆಚ್ಚಿಕೊಳ್ಳುವಂತೆ ಮಾಡಬೇಕು ಎನ್ನುವ ದೊಡ್ಡ ದೊಡ್ಡ ಕನಸುಗಳೊಂದಿಗೆ ಅಭಿಮಾನೋತ್ಸವವನ್ನು ಆಯೋಜನೆ ಮಾಡಲಾಗಿತ್ತು.

ಆದರೆ ಸಿದ್ದರಾಮೋತ್ಸವ ಮಾದರಿಯಲ್ಲಿ ದೊಡ್ಡ ಪ್ರಮಾಣದ ಜನರೂ ಬರಲಿಲ್ಲ, ಪೊಕ್ಸೋ ಆರೋಪ ಎದುರಿಸುತ್ತಿರುವ ನಾಯಕನಿಗೆ ಬಹಿರಂಗವಾಗಿ ಶಹಬಾಸ್ ಹೇಳಲು ಮೋದಿ ಮತ್ತು ನಿತಿನ್ ನಬಿನ್ ಸಮ್ಮತಿ ನೀಡಲಿಲ್ಲ. ಮೋದಿ ಮತ್ತು ನಿತಿನ್ ನಬಿನ್ ಇರಲಿ, ರಾಜ್ಯದಲ್ಲೇ ಇದ್ದರೂ ಮಿತ್ರಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಕೂಡ ಬರಲಿಲ್ಲ. ಅಂತಿಮವಾಗಿ ಅಮಿತ್ ಶಾ ಬಂದದ್ದರಿಂದ ಮುಖ ಉಳಿಯುವಂತಾಯಿತು.

ಸಂಘಟನಾ ಶಕ್ತಿಯನ್ನು ಸಾಬೀತು ಪಡಿಸಬೇಕು ಎಂದು ವಿಜಯೇಂದ್ರ ಇಷ್ಟೆಲ್ಲಾ ಮಾಡಿದರು. ಆದರೆ ಬಿಜೆಪಿಯ ಹೈಕಮಾಂಡ್ ಇದಕ್ಕೆ ಭಿನ್ನವಾದ, ಮೂರು ವರ್ಷದಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಎಷ್ಟು ಹೋರಾಟ ಮಾಡಿದೆ? ಯಾವ ರೀತಿಯಲ್ಲಿ ಮಾಡಿದೆ? ಅವು ಯಾವ ರೀತಿಯಲ್ಲಿ ಪರಿಣಾಮ ಬೀರಿವೆ ಎನ್ನುವ ಮಾಹಿತಿಯನ್ನು ಸಂಗ್ರಹಿಸುತ್ತಿದೆಯಂತೆ.

ಆಫ್ ದಿ ರೆಕಾರ್ಡ್!

ಕಾಂಗ್ರೆಸ್ ಉನ್ನತ ಮೂಲಗಳ ಪ್ರಕಾರ ಉಪಚುನಾವಣೆ ನಡೆಯುವ ಹಿರಿಯೂರು ಮತ್ತು ಧಾರವಾಡ ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ನಿಗದಿಯಾಗಿದೆಯಂತೆ. ಧಾರವಾಡ ಕ್ಷೇತ್ರಕ್ಕೆ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಅಥವಾ ಪುತ್ರಿ ವೈಶಾಲಿ ಹಾಗೂ ಹಿರಿಯೂರು ಕ್ಷೇತ್ರಕ್ಕೆ ದಿವಂಗತ ಡಿ. ಸುಧಾಕರ್ ಪುತ್ರ ಸುಹಾಸ್ ಅಭ್ಯರ್ಥಿ.

Tags

Siddarmaiahkerala
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X