ಖರ್ಗೆ, ಡಿಕೆಶಿ, ಸಿದ್ದು ಭವಿಷ್ಯ ಏನು?

ದಾವಣಗೆರೆ, ಬಾಗಲಕೋಟೆಗಳ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್‌ನ ಮೂರು ಅಧಿಕಾರ ಕೇಂದ್ರಗಳಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳಲ್ಲಿ ವಿಚಿತ್ರ ಬಗೆಯ ತಲ್ಲಣಗಳಾಗುತ್ತಿವೆ. ಮೇ 21ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಂಪನ-ಸಂಚಲನ.
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದರು. ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯದೇ ಇದ್ದದ್ದು ಕರ್ನಾಟಕ ರಾಜಕೀಯ ಚರಿತ್ರೆಯ ಕರಾಳ ಅಧ್ಯಾಯ. ಈಗಲೂ ಖರ್ಗೆ ಮುಖ್ಯಮಂತ್ರಿಯಾಗಲಿ ಎಂದು ಬಯಸುವ ಒಂದಷ್ಟು ಮಂದಿ ಇದ್ದಾರೆ. ಅವರಿಗೆ ಸಿದ್ದರಾಮಯ್ಯ ಪದತ್ಯಾಗ ಮಾಡಬೇಕಾದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಸುತಾರಾಂ ಇಷ್ಟವಿಲ್ಲ. ಅದರಿಂದಾಗಿ ‘ನೀವೇ ಬಂದುಬಿಡಿ ಸಾರ್’ ಎಂದು ಖರ್ಗೆ ಅವರನ್ನು ಒತ್ತಾಯಿಸುತ್ತಿದ್ದಾರೆ. ಅವರಿಗೆ ಖರ್ಗೆ ಮೇಲಿನ ಪ್ರೀತಿಗಿಂತ ಡಿ.ಕೆ. ಶಿವಕುಮಾರ್ ಮೇಲಿನ ಭಯವೇ ಜಾಸ್ತಿ ಎನ್ನುವುದು ಗುಟ್ಟಲ್ಲ.
ಮುಖ್ಯಮಂತ್ರಿ ಆಗಿಲ್ಲ ಎನ್ನುವ ಕೊರಗು ಮತ್ತು ಮುಖ್ಯಮಂತ್ರಿ ಆಗಲಿ ಎಂಬ ಬೆಂಬಲಿಗರ ಒತ್ತಾಸೆಯಿಂದಾಗಿ ಖರ್ಗೆ ಕೂಡ ಕಡೆ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಹಿಂದಿನಂತೆ ಪರೋಕ್ಷವಾಗಿ ಕೇಳುತ್ತಾರೆ, ಎದೆ ಸೆಟೆಸಿ ಪಟ್ಟು ಹಾಕುವುದಿಲ್ಲ ಎನ್ನುವ ಮಾಹಿತಿ ಇದೆ. ಬಿಗಿಪಟ್ಟು ಹಾಕದಿದ್ದರೆ ಮುಖ್ಯಮಂತ್ರಿ ಪದವಿ ಸಿಗುವ ಯಾವ ಗ್ಯಾರಂಟಿಯೂ ಇಲ್ಲ. ಏಕೆಂದರೆ ಖರ್ಗೆ ಮುಖ್ಯಮಂತ್ರಿಯಾಗಬೇಕಾದರೆ ಸಿದ್ದರಾಮಯ್ಯ ಕೆಳಗಿಳಿಯಬೇಕು. ಅವರು ಕೆಳಗಿಳಿಯಬೇಕು ಎಂದರೆ ರಾಹುಲ್ ಗಾಂಧಿ ಹೇಳಬೇಕು. ಅಷ್ಟೇಯಲ್ಲ, ಡಿ.ಕೆ. ಶಿವಕುಮಾರ್ ಬೇಡ, ಮಲ್ಲಿಕಾರ್ಜುನ ಖರ್ಗೆ ಆಗಲಿ ಎಂದು ಕೂಡ ಹೇಳಬೇಕು. ಸಿದ್ದರಾಮಯ್ಯಗೆ ಕೆಳಗಿಳಿಯಿರಿ ಎಂದು ಹೇಳಲು ಮತ್ತು ಡಿ.ಕೆ.ಶಿವಕುಮಾರ್ ಸುಮ್ಮನಿರಿಸಲು ಸಕಾರಣ ಕೊಡಬೇಕು. ವಾಸ್ತವದಲ್ಲಿ ಇದು ಸಾಧ್ಯವಾ?
ಒಂದೊಮ್ಮೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಅವರ ಆಪ್ತ ಶಾಸಕರು ಮುನಿಯಬಹುದು. ಡಿ.ಕೆ. ಶಿವಕುಮಾರ್ ಮುಖ್ಯಮಂತಿಯಾದರೆ ಬಂಡೇಳಬಹುದು. ಕೆಲವರು ಬಿಜೆಪಿ ಕಡೆ ಮುಖ ಮಾಡಬಹುದು. ಖರ್ಗೆ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ‘ಸದ್ಯ ಡಿ.ಕೆ. ಶಿವಕುಮಾರ್ ಆಗಲಿಲ್ಲ’ ಎಂದು ಸಮಾಧಾನಪಟ್ಟುಕೊಂಡು ಸುಮ್ಮನಾಗಬಹುದು. ಹಿರಿತನ, ಪಕ್ಷ ನಿಷ್ಠೆ ಜೊತೆಗೆ ಇದೊಂದೇ ಖರ್ಗೆ ಮುಖ್ಯಮಂತ್ರಿಯಾಗಲು ಇರುವ ಸಕಾರಾತ್ಮಕ ಅಂಶ. ಆದರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಮರುಕ್ಷಣದಿಂದ ಸಿದ್ದರಾಮಯ್ಯ ಪಾತ್ರ ಏನು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಕಂಡುಕೊಂಡರೆ ಅವರು ಖರ್ಗೆ ಅವರನ್ನು ಮುಖ್ಯಮಂತ್ರಿ ಕುರ್ಚಿ ಕಡೆಗೆ ಕೈಹಿಡಿದು ನಡೆಸಬಹುದು. ಇಲ್ಲದಿದ್ದರೆ ಅವರು ಬಯಸಿದರೂ ಅದು ಸಾಧ್ಯವಾಗದು.
ಖರ್ಗೆ ವಿಷಯ ಇನ್ನೂ ಸಂಕೀರ್ಣ. ಅವರೀಗ ಎಐಸಿಸಿ ಅಧ್ಯಕ್ಷರಾಗಿ, ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರಾಗಿ ಮತ್ತು ರಾಜ್ಯಸಭೆ ಪ್ರತಿಪಕ್ಷದ ನಾಯಕನಾಗಿ ಮೂರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರನ್ನು ರಾಜ್ಯ ರಾಜಕಾರಣಕ್ಕೆ ಕಳಿಸಿದರೆ ಆ ಸ್ಥಾನಗಳಿಗೆ ಯಾರನ್ನು ತರಬೇಕೆಂಬ ಸಮಸ್ಯೆ ಉದ್ಭವಿಸುತ್ತದೆ. ಖರ್ಗೆ ಇಚ್ಛೆಗೆ ತಕ್ಕಂತೆಯೇ ಕಳುಹಿಸಿದರೂ ಅದನ್ನು ಹಿಂಭಡ್ತಿ ಎಂದು ಬಿಜೆಪಿ, ಆರೆಸ್ಸೆಸ್ ಹಾಗೂ ಇನ್ನಿತರ ಶಕ್ತಿಗಳು ಬಿಂಬಿಸುತ್ತವೆ. ಪ್ರಿಯಾಂಕಾ ಗಾಂಧಿ ಅವರನ್ನೇನಾದರೂ ಎಐಸಿಸಿ ಕಾರ್ಯಾಧ್ಯೆಕ್ಷೆಯನ್ನಾಗಿ ಮಾಡಿದರೆ ಅದಕ್ಕೋಸ್ಕರವೇ ಖರ್ಗೆ ಅವರನ್ನು ಒಕ್ಕಲೆಬ್ಬಿಸಿದರು ಎಂಬ ಗುಲ್ಲೆಬ್ಬಿಸುತ್ತವೆ ಎನ್ನುವ ಆತಂಕವಿದೆ.
ಸದ್ಯದ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷಗಾದಿ ಮತ್ತು ರಾಜ್ಯಸಭೆ ಪ್ರತಿಪಕ್ಷದ ಸ್ಥಾನಕ್ಕೆ ಸಮರ್ಥರಿಲ್ಲ. ಇಂಡಿಯಾ ಮೈತ್ರಿಕೂಟ ಮುನ್ನಡೆಸಲು ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸಮ್ಮತಿಸುವುದಿಲ್ಲ. ರಾಹುಲ್ ಗಾಂಧಿ ಅವರನ್ನು ಮೈತ್ರಿಕೂಟದ ಇತರ ಪಕ್ಷಗಳು ಒಪ್ಪುತ್ತಿಲ್ಲ. ಮೇಲಾಗಿ ದಿನದಿಂದ ದಿನಕ್ಕೆ ಮಾಯಾವತಿ ವರ್ಚಸ್ಸು ಕುಗ್ಗುತ್ತಿರುವುದರಿಂದ 2029ರ ಲೋಕಸಭಾ ಚುನಾವಣೆವರೆಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಮುಂಚೂಣಿಯಲ್ಲಿದ್ದರೆ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚು ಲಾಭ ಎಂದು ಅವರನ್ನು ಕರ್ನಾಟಕಕ್ಕೆ ಕಳುಹಿಸಲು ದಿಲ್ಲಿಗೆ ಬಿಲ್ ಕುಲ್ ಇಷ್ಟವಿಲ್ಲ.
ಇಷ್ಟಕ್ಕೂ ಮೀರಿ ಖರ್ಗೆ ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ಎನ್ನುವುದು ಗೊತ್ತಾಗಲು ಬಹಳ ದಿನ ಬೇಕಾಗಿಲ್ಲ. ಜೂನ್ 12ಕ್ಕೆ ಅವರ ರಾಜ್ಯಸಭಾ ಅವಧಿ ಮುಕ್ತಾಯ. ಮತ್ತೆ ರಾಜ್ಯಸಭೆಗೆ ಕಳಿಸಿದರೆ ಅವರಿಗಿದ್ದ ಮುಖ್ಯಮಂತ್ರಿ ಆಗುವ ಕಡೆಯ ಅವಕಾಶ ಕೈತಪ್ಪಿತು ಎಂದೇ ಅರ್ಥ.
ಅಡಕತ್ತರಿಯಲ್ಲಿ ಡಿಕೆಶಿ
ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಅವರಿಂದ ಪಡೆದುಕೊಳ್ಳಬೇಕೇ ಹೊರತು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಗೊತ್ತಿದೆ. ಜೊತೆಯಲ್ಲಿ ಕಿತ್ತುಕೊಳ್ಳಲು ಪ್ರಯತ್ನಿಸದಿದ್ದರೆ ಅದು ಸಿಗುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವುದೂ ಗೊತ್ತಿದೆ. ಇದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಶಾಸಕರನ್ನು ಒಟ್ಟುಗೂಡಿಸಲು, ಅವರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿಸಲು ಪ್ರಯತ್ನ ನಡೆಸಿದರು. ಆದರೀಗ ಶಾಸಕರನ್ನು ತಮ್ಮೆಡೆಗೆ ಸೆಳೆದು ಆ ಮೂಲಕ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ ಎನ್ನುವುದು ಮೊದಲಿಗಿಂತ ಚೆನ್ನಾಗಿ ಮನವರಿಕೆ ಯಾದಂತಿದೆ. ಅದರಿಂದಾಗಿ ‘ಕಡೆಯ ಅವಕಾಶ’ ಎಂಬ ದಾಳ ಉರುಳಿಸುತ್ತಿದ್ದಾರೆ.
ಎರಡು ವರ್ಷ ಇರುವಾಗ ಅಧಿಕಾರ ಕೊಟ್ಟರೆ ಮೊದಲ ಮೂರ್ನಾಲ್ಕು ತಿಂಗಳು ಸರಕಾರ ಮತ್ತು ಆಡಳಿತ ವ್ಯವಸ್ಥೆ ಮೇಲೆ ಹಿಡಿತ ಸಾಧಿಸಬಹುದು. ಕಡೆಯ ಆರು ತಿಂಗಳಲ್ಲಿ ಹೇಳಿಕೊಳ್ಳುವಂಥ ಕೆಲಸಗಳಾಗದು. ಹೆಚ್ಚೆಂದರೆ ಒಂದರಿಂದ ಒಂದು ಕಾಲು ವರ್ಷ ಮಾತ್ರ ಕೆಲಸ ಮಾಡಬಹುದು. ಮತ್ತೆ ಅಧಿಕಾರಕ್ಕೆ ಬರುವಂಥ ಕೆಲಸ ಮಾಡಬಹುದು. ಅದರಿಂದಾಗಿ ಸರಕಾರ ಮೂರು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲೇ ನಾಯಕತ್ವ ಬದಲಾವಣೆ ಮಾಡಿ ಎನ್ನುವುದು ಡಿ.ಕೆ. ಶಿವಕುಮಾರ್ ಪಟ್ಟು. ಒಂದು ರೀತಿಯಲ್ಲಿ ಸರಿಯಾದ ಬೇಡಿ.ಕೆ..
2023ರಲ್ಲಿ ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಏನೇನು ಮಾಡಿದ್ದೇನೆ ಎನ್ನುವುದರಿಂದ ಹಿಡಿದು ಈಗ ಅಸ್ಸಾಂ, ತಮಿಳುನಾಡು ಮತ್ತೆ ಕೇರಳ ಚುನಾವಣೆಗೆ ತನ್ನ ‘ಕೊಡುಗೆ’ ಏನು ಎಂಬ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಿವರವಾದ ವರದಿ ಒಪ್ಪಿಸಿದ್ದಾರೆ. ಇದೇ ವರದಿಯನ್ನು ರಾಹುಲ್ ಗಾಂಧಿ ಮುಂದೆ ಮಂಡಿಸಲು ಸಮಯ ನಿಗದಿ ಮಾಡಿ.ಕೆ.ೂಡಿ ಎಂಬ ಬೇಡಿ.ಕೆ. ಇಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಧ್ಯಸ್ಥಿಕೆ ವಹಿಸುತ್ತಾರಾ? ಭೇಟಿಗೆ ಅವಕಾಶ ಕೊಟ್ಟು ಡಿ.ಕೆ. ಶಿವಕುಮಾರ್ ಮಂಡಿಸುವ ವರದಿಯನ್ನು ರಾಹುಲ್ ಗಾಂಧಿ ಒಪ್ಪುತ್ತಾರಾ? ಆ ವರದಿಯಾಚೆಗೆ ಅಂಬಾನಿ ಮನೆಯ ಮದುವೆ, ಹೈಕಮಾಂಡ್‌ಗೆ ಮಾಹಿತಿ ನೀಡದೆ ಮೋದಿ ಭೇಟಿ, ಕುಂಭಮೇಳದಲ್ಲಿ ಸ್ನಾನ, ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡದ್ದರಿಂದ ಹಿಡಿದು ಸದನದಲ್ಲಿ ಸದಾ ವತ್ಸಲೆ ಹಾಡಿದ್ದ ಡಿ.ಕೆ. ಶಿವಕುಮಾರ್ ಸೈದ್ಧಾಂತಿಕ ನಿಲುವುಗಳನ್ನು ಒಪ್ಪುತ್ತಾರಾ? ಒಪ್ಪಿ ಮುಖ್ಯಮಂತ್ರಿ ಹುದ್ದೆ ಕೊಡಲು ಮನಸ್ಸು ಮಾಡುತ್ತಾರಾ ಎನ್ನುವ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರ ಲಭಿಸಿದರೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯೂ ಲಭಿಸಬಹುದು.
ಸಿದ್ದುಗಿಲ್ಲ ರಾಹುಲ್ ಶಬಾಸ್ ಗಿರಿ!
ಮಲ್ಲಿಕಾರ್ಜುನ್ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪದವಿಯ ಸನಿಹಕ್ಕೆ ಬರಲು ನೂರು ಅಡೆತಡೆಗಳಿರಬಹುದು. ಹಾಗಂತಾ ರಾಹುಲ್ ಗಾಂಧಿ ಸಂಪೂರ್ಣವಾಗಿ ಸಿದ್ದರಾಮಯ್ಯ ಪರ ಇದ್ದಾರೆ ಎನ್ನುವ ಖಾತರಿ ಇಲ್ಲ. ಖಾತರಿ ಇಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಘೋಷಣೆಯಾಗಲು ರಾಹುಲ್ ಗಾಂಧಿ ಪ್ರಮುಖ ಕಾರಣ. ಖ್ಯಾತ ಅರ್ಥಶಾಸ್ತ್ರಜ್ಞರಾದ ಡಾ. ಮನೋಹನ್ ಸಿಂಗ್, ರಘುರಾಮ್ ರಾಜನ್, ಅಭಿಜಿತ್ ಬ್ಯಾನರ್ಜಿ ಮತ್ತಿತರ ಜೊತೆ ಚರ್ಚಿಸಿ ‘ಜನರ ದುಡ್ಡನ್ನು ಜನರಿಗೆ ಮರಳಿಸುವ ರಾಜಕಾರಣದ ಮಾದರಿ’ಯನ್ನು ಪರಿಚಯಿಸಿದರು. ಅದಕ್ಕೆ ಗ್ಯಾರಂಟಿ ಎಂಬ ಹೆಸರಿಟ್ಟರು. ಮೊದಲ ಬಾರಿಗೆ ಕರ್ನಾಟಕದಲ್ಲಿ ಪ್ರಯೋಗಕ್ಕೆ ಮುಂದಾದರು. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಹುಲ್ ಗಾಂಧಿ ಪ್ರಯೋಗವನ್ನು ಯಶಸ್ವಿಗೊಳಿಸಿದ್ದು ಸಿದ್ದರಾಮಯ್ಯ. ಆದರೆ ರಾಹುಲ್ ಗಾಂಧಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆಯೇ ವಿನಃ ‘ಸಿದ್ದರಾಮಯ್ಯ ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ’ ಎಂದು ಹೇಳಿಲ್ಲ.
ಇದೇ ರೀತಿ ರಾಹುಲ್ ಗಾಂಧಿ ದೇಶಾದ್ಯಂತ ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಬೆಂಬಲಿಗರು ‘ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರ ಜಾತಿ ಗಣತಿ ಮಾಡುತ್ತಿದೆ’ ಎಂದು ಹೇಳುತ್ತಿದ್ದಾರೆ. ಆದರೆ ಇಡೀ ದೇಶದಲ್ಲಿ ಜಾತಿಗಣತಿ ಬಗ್ಗೆ ಮೊದಲು ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ. ಮಾತನಾಡಿದ್ದು ಮಾತ್ರವಲ್ಲ, ಇಡೀ ದೇಶದಲ್ಲಿ ಮೊದಲು ಜಾತಿ ಗಣತಿಯನ್ನು ಘೋಷಣೆ ಮಾಡಿದ್ದು ಕೂಡ ಸಿದ್ದರಾಮಯ್ಯ. ಈ ವಿಷಯದಲ್ಲೂ ರಾಹುಲ್ ಗಾಂಧಿ ಈವರೆಗೆ ಒಮ್ಮೆಯೂ ಮಾತನಾಡಿಲ್ಲ. ಬದಲಿಗೆ ಸಿದ್ದರಾಮಯ್ಯ ಮಾಡಿಸಿದ್ದ ಜಾತಿಗಣತಿಯನ್ನು ಹಳೆಯದು ಎಂಬ ನೆಪವೊಡ್ಡಿ ಮೂಲೆಗೆಸೆಯಲು ಕಾರಣರಾದರು.
ಕಳೆದ ವರ್ಷ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ಎಐಸಿಸಿಯ ಒಬಿಸಿ ಸಮಾವೇಶ ನಡೆದಿತ್ತು. ನಂತರ ದಿಲ್ಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ಎಐಸಿಸಿಯೇ ಖುದ್ದಾಗಿ ದೊಡ್ಡ ಪ್ರಮಾಣದಲ್ಲಿ ಸಮಾವೇಶವನ್ನು ಆಯೋಜಿಸಿತ್ತು. ಬಿ.ಕೆ. ಹರಿಪ್ರಸಾದ್ ತುಂಬಾ ಕೆಲಸ ಮಾಡಿದ್ದರು. ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ‘ಕಾಂಗ್ರೆಸ್ ಹಿಂದುಳಿದವರ ವಿಷಯದಲ್ಲಿ ತಪ್ಪು ಮಾಡಿದೆ, ಹಿಂದುಳಿದ ಜಾತಿಯ ನಾಯಕರನ್ನು ಬೆಳೆಸಬೇಕಿತ್ತು’ ಎಂದು ತಪ್ಪೊಪ್ಪಿಕೊಂಡಿದ್ದರು. ಸಿದ್ದರಾಮಯ್ಯ ಅವರೇ ಮಾದರಿ ಎಂದಿದ್ದರು. ಆದರೆ ಅಂಥ ಸಮಾವೇಶಗಳು ಮುಂದುವರಿಯಲಿಲ್ಲ. ಮಾತ್ರವಲ್ಲ, ಸಿದ್ದರಾಮಯ್ಯ ಅವರನ್ನೂ ಬೆನ್ನುತಟ್ಟಲಿಲ್ಲ.
ನಾಯಕತ್ವ ಬದಲಾವಣೆ ಗೊಂ ದಲವನ್ನು ಪರಿಹರಿಸಿ ಎಂದು ಸಿದ್ದರಾಮಯ್ಯ ನೇರವಾಗಿ ರಾಹುಲ್ ಗಾಂಧಿ ಬಳಿ ಹೇಳಿದ್ದಾರೆ.
ಕೆ.ಸಿ. ವೇಣುಗೋಪಾಲ್ ಕಡೆಯಿಂದಲೂ ಹೇಳಿಸಿದ್ದಾರೆ. ಸಚಿವ ಸಂಪುಟ ಪುನರ್ ರಚನೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದ್ಯಾವುದಕ್ಕೂ ರಾಹುಲ್ ಗಾಂಧಿ ಸ್ಪಂದಿಸಿಲ್ಲ ಎಂದರೆ ಅವರು ಸಂಪೂರ್ಣವಾಗಿ ಸಿದ್ದರಾಮಯ್ಯ ಪರ ಇಲ್ಲ ಎಂದೇ ತಾನೇ ಅರ್ಥ?
ಮೊನ್ನೆ ಮೊನ್ನೆ ಸಿದ್ದರಾಮಯ್ಯ ಬೆಂಬಲಿಗ ಸಚಿವರು ಒಂದು ರಹಸ್ಯ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿದ್ದಾರೆ. ಬಹಳಷ್ಟು ವಿಷಯಗಳನ್ನು ಚರ್ಚಿಸಿದ್ದಾರೆ. ಎಲ್ಲರೂ ಸಿದ್ದರಾಮಯ್ಯಗೆ ಕೊಟ್ಟಿರುವ ಒಂದೇ ಒಂದು ಸಲಹೆ ‘ನೀವು ಮೊದಲಿನಂತೆ ಆಕ್ರಮಣಶೀಲರಾಗಿರಬೇಕು’ ಎಂದು. ದಿಲ್ಲಿ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರಿಗೂ ಸಿದ್ದರಾಮಯ್ಯ ಮೊದಲಿನಂತೆ ಆಕ್ರಮಣಶೀಲರಾಗಿಲ್ಲ ಎನ್ನುವ ತಕರಾರಿದೆಯಂತೆ. ಅದೇ ಕಾರಣಕ್ಕೆ ಅವರು ಕರ್ನಾಟಕದ ವಿಷಯದಲ್ಲಿ ತಲೆ ಹಾಕುತ್ತಿಲ್ಲವಂತೆ!
ಆಫ್ ದಿ ರೆಕಾರ್ಡ್!
ಇನ್ನೂ ಒಂದಂಶ ಬಹಳ ಸ್ಪಷ್ಟ; ಐದು ರಾಜ್ಯಗಳ ಚುನಾವಣಾ ಫಲಿತಾಂಶ ಏನೇ ಬರಲಿ, ಸರಕಾರ ಮೂರು ವರ್ಷ ಪೂರೈಸುತ್ತಿದ್ದಂತೆ ಬದಲಾವಣೆ ತರಬೇಕು ಎಂದು ಯಾರು, ಎಷ್ಟೇ ಒತ್ತಡ ಹೇರಲಿ, ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆವರೆಗೆ (ಜುಲೈವರೆಗೆ) ಏನೂ ಆಗಲ್ಲ, ಸಂಪುಟ ಪುನರ್ ರಚನೆ ಕೂಡ.






