ರಾಜ್ಯಪಾಲರ ಜತೆಗಿನ ಸಂಘರ್ಷ ಬೇಕಿತ್ತಾ?

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಒಂದು ಪ್ಯಾರಾ ಓದಿ ವಿಧಾನಸಭೆಯಿಂದ ನಿರ್ಗಮಿಸುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕರೊಬ್ಬರು ‘ಇಲ್ಲಿಯವರೆಗೆ ಇವರು ಮಾಡಿದ ಒಳ್ಳೆಯ ಕೆಲಸ ಇದೊಂದೇ’ ಎಂದು ಉದ್ಗರಿಸಿದರು. ರಾಜ್ಯಪಾಲರು ಸರಕಾರದ ಜೊತೆ ಎಲ್ಲಾ ವಿಷಯದಲ್ಲೂ ಹೊಂದಾಣಿಕೆ ಮಾಡಿಕೊಂಡಿದ್ದರು ಎನ್ನುವುದು ಅವರ ಮಾತಿನ ಅರ್ಥವಾಗಿತ್ತು.
ಇದು ಬಹುತೇಕ ನಿಜ. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಅವಸರ ಮಾಡಿದರು ಎನ್ನುವ ಆರೋಪ ಇದೆ. ಆದರೆ ಅವರು ಇನ್ನೂ ಬೇಗ ಕ್ರಮ ಕೈಗೊಳ್ಳಬಹುದಿತ್ತು ಎನ್ನುವುದೂ ವಾಸ್ತವವೇ. ಹಾಗೆಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯದಲ್ಲಿ ಅನಗತ್ಯ ತಡಮಾಡಿದರು ಎನ್ನುವ ಆರೋಪವೂ ಇದೆ. ಮಸೂದೆಗಳ ವಿಷಯಕ್ಕೆ ಬರುವುದಾದರೆ ದ್ವೇಷ ಭಾಷಣ ತಡೆ ಮಸೂದೆ ಮತ್ತು ಒಳಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಮೀನಾ ಮಿಷ ಎಣಿಸುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಪಕ್ಕದ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ, ಕೇರಳದ ಮಾಜಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಈಗಿನ ರಾಜ್ಯಪಾಲ ರಾಜೇಂದ್ರ ಆರ್ಲೆಕರ್, ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್ ಬೋಸ್ ಕಾರ್ಯವೈಖರಿಗೆ ಹೋಲಿಸಿಕೊಂಡರೆ, ಅಷ್ಟೇ ಏಕೆ, ಹಿಂದೆ ಕರ್ನಾಟಕದಲ್ಲೇ ಇದ್ದ ಹಂಸರಾಜ್ ಭಾರದ್ವಾಜ್‌ಗೆ ಹೋಲಿಸಿಕೊಂಡರೂ ಥಾವರ್ ಚಂದ್ ಗೆಹ್ಲೋಟ್ ಹೊಂದಾಣಿಕೆ ಮನೋಭಾವದವರು ಎನ್ನುವುದು ದಿಟವೇ. ಹಿಂದೆ ಕುಲಪತಿಯೊಬ್ಬರ ನೇಮಕ ವಿಷಯ ಸ್ವಲ್ಪ ವಿಷಮ ಪರಿಸ್ಥಿತಿ ತಲುಪುತ್ತಿದ್ದಂತೆ ‘ಇದೊಂದು ವಿಚಾರದಲ್ಲಿ ನನ್ನ ಬಿಟ್ಟುಬಿಡಿ’ ಎಂದು ಎದ್ದುನಿಂತು ಕೈಮುಗಿದು ಕೇಳಿಕೊಂಡಿದ್ದರಂತೆ. ಅವರ ಮೇಲೆ ಅಷ್ಟೊಂದು ಒತ್ತಡವಿತ್ತು; ಇಲ್ಲದಿದ್ದರೆ ಅದಕ್ಕೂ ಸಮ್ಮತಿ ಸೂಚಿಸುತ್ತಿದ್ದರು ಎಂದು ಸರಕಾರದ ಉನ್ನತ ಮೂಲಗಳೇ ಹೇಳುತ್ತವೆ.
ಹೀಗೆ ಸರಕಾರ ಮತ್ತು ರಾಜಭವನದ ನಡುವೆ ಸೌಹಾರ್ದ ವಾತಾವರಣವಿದ್ದಾಗ ಸರಕಾರ ರಾಜ್ಯಪಾಲರ ಬಾಯಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆ ಕುರಿತು 11 ಪ್ಯಾರಾಗಳನ್ನು ಓದಿಸಲೇಬೇಕೆಂದು ನಿರ್ಣಯಿಸಿದ್ದು ಏಕೆ? ಸಾಂಕೇತಿಕವಾಗಿ ಒಂದೇ ಪ್ಯಾರಾ ಸೇರಿಸಿದ್ದರೆ ರಾಜ್ಯಪಾಲರು ಓದಲೇಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದರು. 11 ಪ್ಯಾರಾಗಳನ್ನು ಸೇರಿಸುವ ಮೂಲಕ ಭಾಷಣ ಓದದೇ ಪಲಾಯನ ಮಾಡಲು ಮತ್ತು ತಮ್ಮನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದ ಕೇಂದ್ರ ಸರಕಾರಕ್ಕೆ ಕೃತಜ್ಞರಾಗಿರಲು ರಾಜ್ಯಪಾಲರಿಗೆ ಸರಕಾರವೇ ಅವಕಾಶ ಮಾಡಿಕೊಟ್ಟಿತು.
ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳುವುದು ಸರಕಾರದ ಉದ್ದೇಶವೇ ಆಗಿದ್ದರೆ ರಾಜ್ಯಪಾಲರು ಸಾಂಕೇತಿಕವಾಗಿ ಒಂದು ಪ್ಯಾರಾ ಓದಿದ ಬಳಿಕವೂ ಆ ಕೆಲಸವನ್ನು ಮಾಡಬಹುದಾಗಿತ್ತು. ಅಥವಾ ಆ ಒಂದು ಪ್ಯಾರಾವನ್ನು ಓದದ್ದಿರೆ ಇನ್ನಷ್ಟು ಉಗ್ರವಾಗಿ ವಿರೋಧಿಸಬಹುದಾಗಿತ್ತು. ಮುಖ್ಯಮಂತ್ರಿ, ಮಂತ್ರಿಗಳಿಂದ ಹಿಡಿದು ಕಾಂಗ್ರೆಸ್ ಪಕ್ಷದಲ್ಲಿ ನೀತಿ, ನಿರೂಪಣೆಗಳ ಬಗ್ಗೆ, ಕಾಯ್ದೆ, ಕಟ್ಟಳೆ ಬಗ್ಗೆ ಮಾತನಾಡಲು ದಂಡಿ ದಂಡಿ ನಾಯಕರಿದ್ದಾರೆ. ಅಂಥ ಬರ ಮತ್ತು ಅಜ್ಞಾನ ಇರುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಮಾತ್ರ. ಆದರೂ ಸರಕಾರ, ಅಂದರೆ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಪ್ರಚೋದಿಸಲು ಮುಂದಾಗಿದ್ದೇಕೆ? ಅವರಿಗೆ ತಾವು ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದೇವೆ ಎನ್ನುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿ, ಹೈಕಮಾಂಡ್ ನಾಯಕರಿಗೂ ಗೊತ್ತಾಗಲಿ ಎನ್ನುವ ಅಜೆಂಡಾ ಇದ್ದಿರಬಹುದು. ಒಂದೊಮ್ಮೆ ಅಂಥ ಉದ್ದೇಶವಿದ್ದರೂ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಾಗಿತ್ತು.
ಪ್ರಾದೇಶಿಕ ಅಸ್ಮಿತೆಯ ವಿಚಾರ
ರಾಜ್ಯಪಾಲ ಎನ್ನುವುದು ಆಲಂಕಾರಿಕ ಹುದ್ದೆ, ಅದನ್ನು ರದ್ದು ಪಡಿಸುವುದೇ ಸೂಕ್ತ ಎಂದು ಯಾವ ಆಯೋಗ-ಸಮಿತಿಗಳೂ ಶಿಫಾರಸು ಮಾಡಿಲ್ಲ. ಆದರೂ ರಾಜ್ಯಪಾಲರ ಅಗತ್ಯ ಏನು ಎನ್ನುವ ಚರ್ಚೆ ಇದ್ದೇ ಇದೆ. ಮೊನ್ನೆ ಮೊನ್ನೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇರವಾಗಿಯೇ ರಾಜ್ಯಪಾಲರ ಅಗತ್ಯ ಇಲ್ಲ, ಲೋಕಭವನಗಳ ಜರೂರತ್ತು ಇಲ್ಲ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರೂ ದನಿಗೂಡಿಸಿದ್ದರೆ ರಾಜ್ಯಪಾಲರ ಹುದ್ದೆ ಬೇಡ ಎನ್ನುವ ವಾದಕ್ಕೆ ಇನ್ನಷ್ಟು ಬಲ ಬರುತ್ತಿತ್ತು. ಈ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರು ಪ್ರಾದೇಶಿಕ ಅಸ್ಮಿತೆಯನ್ನೂ ಬಡಿದೆಚ್ಚರಿಸಬಹುದಾಗಿತ್ತು. ರಾಜ್ಯದ ಪ್ರಾದೇಶಿಕ ಪಕ್ಷ ಎಂದೇ ಹೇಳಿಕೊಳ್ಳುವ ಜೆಡಿಎಸ್, ಬಿಜೆಪಿ ಜೊತೆ ಕೈಜೋಡಿಸಿ ರಾಜ್ಯದ ಹಿತ ಕಡೆಗಣಿಸಿರುವ ಈ ಹೊತ್ತಿನಲ್ಲಿ ಅದರ ಅಗತ್ಯ ಕೂಡ ಇತ್ತು.
ವಿಬಿ-ಜಿ ರಾಮ್ ಜಿ ಕಾಯ್ದೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಲಿದೆ. ಅನುದಾನ ಹಂಚಿಕೆಯ ಹೊಸ ಮಾದರಿಯಿಂದ ರಾಜ್ಯ ಸರಕಾರಗಳಿಗೆ ಆರ್ಥಿಕವಾಗಿ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿಯ ನಾಯಕ, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಯಾವ ಸಮಸ್ಯೆಗಳೂ ಕಾಣುತ್ತಿಲ್ಲ. ಅದರ ಬಗ್ಗೆ ಅಪ್ಪ-ಮಕ್ಕಳು ಮಾತನಾಡುತ್ತಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರಾದೇಶಿಕ ಕಾಳಜಿಯನ್ನು ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲೂ ಕಾಂಗ್ರೆಸ್ ನಾಯಕರು ಅದರ ಬಗ್ಗೆ ಮಾತನಾಡಲು ಇದು ಸಕಾಲವಾಗಿತ್ತು.
ರಾಜ್ಯಪಾಲ ಹುದ್ದೆ ಯಾವಾಗೆಲ್ಲಾ ವಿವಾದದ ಸ್ವರೂಪ ಪಡೆದುಕೊಳ್ಳುತ್ತದೆಯೋ ಆಗೆಲ್ಲಾ ರಾಜ್ಯಗಳ ಪ್ರಾದೇಶಿಕ ಅಸ್ಮಿತೆ ಹಾಗೂ ಜನರಿಂದ ಆಯ್ಕೆಯಾದ ಸರಕಾರಗಳ ಮಹತ್ವದ ಬಗ್ಗೆ ಚರ್ಚೆಯಾಗುತ್ತದೆ. ಅಷ್ಟೇ ಏಕೆ? ಸಂವಿಧಾನ ರಚನಾ ಸಮಿತಿಯಲ್ಲಿ ರಾಜ್ಯಪಾಲರ ಹುದ್ದೆಯ ಸೃಷ್ಟಿ ಕುರಿತು ನಿರ್ಧರಿಸುವಾಗಲೂ ಪ್ರಾದೇಶಿಕ ಹಿತದ ಬಗ್ಗೆ ಸಮಾಲೋಚನೆ ಮಾಡಲಾಗಿತ್ತು. 1983ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಬಂಧ ಸುಧಾರಣೆಗಾಗಿ ಶಿಫಾರಸು ಮಾಡುವಂತೆ ರಚಿಸಲಾಗಿದ್ದ ನ್ಯಾಯಮೂರ್ತಿ ಆರ್.ಎಸ್. ಸರ್ಕಾರಿಯಾ ನೇತೃತ್ವದ ಆಯೋಗ ಹಾಗೂ 2000ರಲ್ಲಿ ರಚಿಸಲಾಗಿದ್ದ ನ್ಯಾಯಮೂರ್ತಿ ಎಂಎನ್ ವೆಂಕಟಾಚಲಯ್ಯ ನೇತೃತ್ವದ ಸಂವಿಧಾನದ ಕಾರ್ಯನಿರ್ವಹಣೆಯ ಪುನರ್ ಪರಿಶೀಲನಾ ಆಯೋಗಗಳು ಕೂಡ ರಾಜ್ಯಪಾಲರು ಪ್ರಾದೇಶಿಕ ಹಿತ ಮರೆತು ಕೆಲಸ ಮಾಡಬಾರದು ಎನ್ನುವ ಕಾಳಜಿ ಮೇಲೆ ಬೆಳಕು ಚೆಲ್ಲಿದ್ದವು. ಈಗಲೂ ರಾಜ್ಯಪಾಲರು ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ಇರುವುದು ಒಂದು ಪ್ರಾದೇಶಿಕ ಸರಕಾರಕ್ಕೆ ಮಾಡಿದ ಅಪಮಾನ. ಆದರೂ ರಾಜ್ಯ ಕಾಂಗ್ರೆಸ್ ನಾಯಕರು ‘ರಾಜ್ಯಪಾಲರು ವಿಬಿ-ಜಿ ರಾಮ್ ಜಿ ಕಾಯ್ದೆ ಬಗ್ಗೆ ಭಾಷಣ ಮಾಡಲಿಲ್ಲ’ ಎಂದು ಹೇಳುತ್ತಿದ್ದಾರೆಯೇ ವಿನಃ ‘ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರು’, ‘ರಾಜ್ಯದ ಜನ ಆರಿಸಿದ ಸರಕಾರಕ್ಕೆ’ ಅಪಮಾನ ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಎಲ್ಲಿ, ಯಾವ ವಿಷಯವನ್ನು? ಹೇಗೆ ಒತ್ತಿ ಹೇಳಬೇಕು ಎಂದು, ನಿರೂಪಣೆಯನ್ನು ಸೃಷ್ಟಿಸುವುದು ಕಾಂಗ್ರೆಸ್ ನಾಯಕರಿಗೆ ಗೊತ್ತಾಗುತ್ತಿಲ್ಲ. ಇದನ್ನು lack of political diplomacy ಎನ್ನಬಹುದು.
ತಯಾರಿಯ ಕೊರತೆ!
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ವಿಷಯಗಳಲ್ಲೂ ಹೀಗೆ ಮಾಡುತ್ತದೆ. ಸೂಕ್ತ ತಯಾರಿಯೊಂದಿಗೆ ಯುದ್ಧಕ್ಕಿಳಿಯುವುದು ಕಾಂಗ್ರೆಸ್ ಸೇನಾ ಪಡೆಗೆ ತಿಳಿದೇ ಇಲ್ಲ. ರಾಜ್ಯಪಾಲರು ಒಂದು ದಿನ ಮುಂಚಿತವಾಗಿಯೇ ತಕರಾರು ತೆಗೆಯುವ ಸುಳಿವು ನೀಡಿದ್ದರು. ಅದರಿಂದಾಗಿಯೇ ‘ಅವರು ಅಧಿವೇಶನಕ್ಕೆ ಬಾರದಿದ್ದರೆ ತಕ್ಷಣವೇ ಸುಪ್ರೀಂ ಕೋರ್ಟಿಗೆ ಹೋಗಬೇಕು’ ಎಂದು ಅಡ್ವೊಕೇಟ್ ಜನರಲ್ ಅವರನ್ನು ದಾಖಲೆಗಳ ಸಮೇತ ದಿಲ್ಲಿಗೆ ಕಳುಹಿಸಲಾಗಿತ್ತು. ಅವರೊಂದಿಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸಂಪರ್ಕದಲ್ಲಿದ್ದರು. ಅಂಥ ಸನ್ನಿವೇಶ ಬರಲಿಲ್ಲ. ಆದರೆ ಇದೇ ರೀತಿ ‘ರಾಜ್ಯಪಾಲರು ಬಂದು ಚುಟುಕು ಭಾಷಣ ಮಾಡಿ ಹೋದರೆ ಏನು ಮಾಡಬೇಕು?’ ಎಂಬ ಅಂದಾಜು ಮಾಡಿರಲಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ political diplomacy ಮಾತ್ರವಲ್ಲ, floor management (ಸದನ ನಿರ್ವಹಣೆ) ಕೂಡ ಸರಿಯಾಗಿ ಗೊತ್ತಿಲ್ಲ. ಒಬ್ಬ ತರುಣ ಶಾಸಕ ಸ್ವಯಂ ಪ್ರೇರಿತರಾಗಿ ಪ್ರತಿಭಟನೆ ಮಾಡಲು ಮುಂದೆ ಬಂದಿದ್ದಾರೆ. ಆದರೆ ಅವರ ಪಕ್ಷದ ಇತರ ಹಿರಿಯರು ಸುಮ್ಮನಿದ್ದದ್ದನ್ನು ಕಂಡು ರಾಜ್ಯಪಾಲರ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಾಗದೆ ಕಡೆಗೆ ರಾಜ್ಯಪಾಲರು ಹತ್ತಿರ ಬಂದಾಗ ಕೈಮುಗಿದು ಬೀಳ್ಕೊಟ್ಟಿದ್ದಾರೆ. ಅಂದು ‘ಪರಿಸ್ಥಿತಿ ಬಂದರೆ ಪ್ರತಿಭಟನೆ ಮಾಡಿ’ ಎಂದು ಯುವ ಶಾಸಕರನ್ನು ಸರಕಾರದ ಮುಖ್ಯ ಸಚೇತಕರು ಸಜ್ಜುಗೊಳಿಸಿರಬೇಕಿತ್ತು. ಆದರೆ ಆ ಮುಖ್ಯಸಚೇತಕರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ‘ಮುಖ್ಯಸಚೇತಕರು ಸದಾ ಆಸ್ಥಾನದ ಮುಖ್ಯ ವಿದೂಷಕರ ರೀತಿ ಇರುತ್ತಾರೆ’ ಎಂದು ಕಾಂಗ್ರೆಸ್ ನಾಯಕರೇ ಕುಹಕವಾಡುತ್ತಾರೆ.
ಮೊದಲೇ ಮಾಡಬಹುದಾಗಿತ್ತು
ನಿಜಕ್ಕೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಬಗ್ಗೆ, ಮನರೇಗಾ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದ ಕೋಟ್ಯಂತರ ಬಡವರ ಬಗ್ಗೆ ಎಳ್ಳಷ್ಟು ಕಾಳಜಿ ಇದ್ದರೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ಈಗ ರಾಜ್ಯಾದ್ಯಂತ ಹೋರಾಟ, ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕಾರ ಎಂಬ ನಾಟಕವಾಡುತ್ತಿರಲಿಲ್ಲ. ಬದಲಿಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ವಿಬಿ-ಜಿ ರಾಮ್ ಜಿ ಮಸೂದೆ ಮಂಡಿಸಿದಾಗಲೇ ಮುಗಿಬೀಳುತ್ತಿತ್ತು. ಅಂಥ ಅವಕಾಶ ಕೂಡ ಇತ್ತು. ಏಕೆಂದರೆ ಸಂಸತ್ತಿನಲ್ಲಿ ಮಸೂದೆ ಮಂಡನೆಯಾದಾಗ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿತ್ತು. ಆಗಲೇ ‘ವಿಬಿ-ಜಿ ರಾಮ್ ಜಿ ಜನವಿರೋಧಿ’ ಎನ್ನುವ ನಿರ್ಣಯ ಮಾಡಿರುತ್ತಿತ್ತು.
ಆಫ್ ದಿ ರೆಕಾರ್ಡ್
ಈಗ ಜನವರಿ 27ಕ್ಕೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರಂತೆ. ಬಿಜೆಪಿ ನಾಯಕರು ಮನರೇಗಾವನ್ನು ಕೊಂದಿದ್ದಾರೆ, ಜನವರಿ 27ಕ್ಕೆ ಕಾಂಗ್ರೆಸಿಗರು ಸಮಾಧಿ ಕಟ್ಟುತ್ತಾರೆ. ಜನವರಿ 28ಕ್ಕೆ ಮನರೇಗಾವನ್ನು ಮರೆಯುತ್ತಾರೆ. ಕಾಂಗ್ರೆಸ್ ನಾಯಕರ ಮೇಲೆ ಆಣೆ; ಇದಲ್ಲದೆ ಬೇರೇನೂ ಆಗಲ್ಲ. ಪುರಾವೆ ಬೇಕಾ? ಕಾಂಗ್ರೆಸ್ ನಾಯಕರು 2025ರ ಜನವರಿ 21ರಂದು ಬೆಳಗಾವಿಯಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಎಂಬ ಸಮಾವೇಶ ಮಾಡಿದ್ದರು. ವರ್ಷಪೂರ್ತಿ ರಾಜ್ಯಾದ್ಯಂತ ಇಂಥ ಸಮಾವೇಶಗಳನ್ನು ನಡೆಸುತ್ತೇವೆ ಎಂದು ಹೇಳಿದ್ದರು. 2026ರ ಜನವರಿ 22ರಂದೇ ಅದನ್ನು ಮರೆತಿದ್ದರು.







