Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ನಾಗೇಂದ್ರ ಪ್ರಕರಣದಲ್ಲಿ ಕಾಂಗ್ರೆಸ್...

ನಾಗೇಂದ್ರ ಪ್ರಕರಣದಲ್ಲಿ ಕಾಂಗ್ರೆಸ್ ಮಾಡಿದ್ದೇನು?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ31 Aug 2026 10:04 AM IST
share
ನಾಗೇಂದ್ರ ಪ್ರಕರಣದಲ್ಲಿ ಕಾಂಗ್ರೆಸ್ ಮಾಡಿದ್ದೇನು?

ಶಿಕ್ಷೆ ಪ್ರಕಟಿಸುವಾಗ ಅಪರಾಧಿಗೆ ರಾಜ ಎರಡು ಆಯ್ಕೆ ನೀಡುತ್ತಾನೆ. ನೂರು ಈರುಳ್ಳಿ ತಿನ್ನು ಅಥವಾ ನೂರು ಛಡಿ (ಚಾವಟಿ) ಏಟು ತಿನ್ನು ಎಂದು. ಅಪರಾಧಿ ಏಟು ತಿನ್ನುವುದು ಕಷ್ಟ ಎಂದುಕೊಂಡು ಈರುಳ್ಳಿ ತಿನ್ನುವುದಾಗಿ ಹೇಳುತ್ತಾನೆ. ಈರುಳ್ಳಿ ತರಿಸಲಾಗುತ್ತದೆ. ತೊಂಭತ್ತೊಂಭತ್ತ್ತು ಈರುಳ್ಳಿ ತಿನ್ನುತ್ತಾನೆ. ಇನ್ನೊಂದು ಈರುಳ್ಳಿ ತಿನ್ನಲು ಸಾಧ್ಯವಾಗುವುದಿಲ್ಲ. ಅದರಿಂದ ಅವನಿಗೆ ವಿಧಿಸಿದ ಶಿಕ್ಷೆಯನ್ನು ಆತ ಪೂರ್ಣ ಪ್ರಮಾಣದಲ್ಲಿ ಅನುಭವಿಸಿರುವುದಿಲ್ಲ. ನಿಯಮದ ಪ್ರಕಾರ ಆತ ಎರಡನೇ ಪ್ರಕಾರದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಂತರ ನೂರು ಛಡಿ ಏಟು ತಿನ್ನುತ್ತಾನೆ.

ಇದು ರಾಜ್ಯ ವಿಧಾನಸಭಾ ಕಲಾಪದಲ್ಲಿ ದಾಖಲಾಗಿರುವ ಕತೆ. ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದ ರಾಮಕೃಷ್ಣ ಹೆಗಡೆಗೆ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸದನಲ್ಲಿ ಹೇಳಿದ್ದ ಕತೆ. ಬಾಟ್ಲಿಂಗ್ ಹಗರಣದಲ್ಲಿ ರಾಜೀನಾಮೆ ಕೊಟ್ಟು ಮತ್ತೆ ವಾಪಸ್ ಪಡೆದಿದ್ದ, ರೇವಜಿತು ಹಗರಣವನ್ನು ಸಮರ್ಥಿಸಿಕೊಂಡಿದ್ದ, ಕಡೆಗೆ ದೂರವಾಣಿ ಕದ್ದಾಲಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಂಡತನದಿಂದ ಮೌಲ್ಯಾಧಾರಿತ ರಾಜಕಾರಣಿ ಎಂದು ಕರೆಸಿಕೊಳ್ಳುತ್ತಿದ್ದ ರಾಮಕೃಷ್ಣ ಹೆಗಡೆಗೆ ‘ಅಧಿಕಾರವೂ ಹೋಯಿತು, ಮಾನವೂ ಹೋಯಿತು’ ಎಂದು ತಿಳಿಸಲು ಹೇಳಿದ್ದ ಕತೆ.

ಕಾಂಗ್ರೆಸಿಗರಾದ ವೀರೇಂದ್ರ ಪಾಟೀಲ್ ಜನತಾ ಪಕ್ಷದವರಿಗೆ ಈರುಳ್ಳಿ ಮತ್ತು ಛಡಿ ಏಟಿನ ನೀತಿಕತೆ ಹೇಳಿದ್ದರು. ಆದರೀಗ ಕಾಂಗ್ರೆಸ್ ಪಕ್ಷಕ್ಕೇ ಈ ನೀತಿಕತೆ ಮರೆತು

ಹೋಗಿದೆ. ನಾಗೇಂದ್ರ ಪ್ರಕರಣದಲ್ಲಿ ಕಾಂಗ್ರೆಸ್ ತೊಂಭತ್ತೊಂಭತ್ತು ಈರುಳ್ಳಿ ತಿಂದು ನಂತರ ನೂರು ಛಡಿ ಏಟು ತಿಂದಿದೆ. ನಾಗೇಂದ್ರ ಅವರನ್ನು ಮಂತ್ರಿ ಮಂಡಲದಲ್ಲಿ ಉಳಿಸಿಕೊಳ್ಳಲೂ ಆಗಲಿಲ್ಲ. ಪಕ್ಷ ಮತ್ತು ಸರಕಾರದ ಮಾನ ಹೋಗುವುದನ್ನು ತಪ್ಪಿಸಲೂ ಆಗಲಿಲ್ಲ.

ಒಂದೇ ಪ್ರಕರಣದಲ್ಲಿ ಎರಡು ಬಾರಿ ಶಿಕ್ಷೆಯಾಗಬಾರದು. ಅದು ನ್ಯಾಯವಲ್ಲ. ಹಾಗೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ನಿರ್ದೋಷಿ ಎಂದು ತೀರ್ಪು ನೀಡಬೇಕಾಗಿರುವುದು ಕಾಂಗ್ರೆಸ್ ಪಕ್ಷವಲ್ಲ. ಮಾಡಿದ್ದುಣ್ಣೋ ಮಹಾರಾಯ ಎನ್ನುವಂತೆ ನಾಗೇಂದ್ರ ಅವರನ್ನು ಮಂತ್ರಿ ಮಾಡಿದ್ದಕ್ಕೆ ಕಾಂಗ್ರೆಸ್ ಈಗ ಆರೋಪಿ ಸ್ಥಾನದಲ್ಲಿ ನಿಂತಿದೆ. ನಾಗೇಂದ್ರ ‘ಬೆದರಿಕೆ ಹಾಕಿ’ ಮಂತ್ರಿ ಸ್ಥಾನ ಪಡೆದುಕೊಂಡರು. ಅವರು ಹೈಕಮಾಂಡ್ ಮೂಲಕ ಹೇರಲ್ಪಟ್ಟಿದ್ದರು ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳಲ್ಲಿ ಎಷ್ಟು ಸುಳ್ಳೋ? ಎಷ್ಟು ಸತ್ಯವೋ? ಅದು ಮಂತ್ರಿ ಮಂಡಲ ರಚಿಸುವುದರಲ್ಲಿ ಪಾಲುದಾರರಾಗಿದ್ದ ನಾಯಕರಿಗೆ ಮಾತ್ರ ಗೊತ್ತು. ಆದರೆ ಜನ ಹೀಗೆ ಮಾತನಾಡಲು ಅವಕಾಶ ಮಾಡಿಕೊಟ್ಟದ್ದು ಮಾತ್ರ ಕಾಂಗ್ರೆಸ್.

ಈರುಳ್ಳಿ ಮತ್ತು ಛಡಿ ಏಟಿನ ಕತೆ ನಾಗೇಂದ್ರ ಪ್ರಕರಣಕ್ಕೆ ಮಾತ್ರ ಸೀಮಿತವಾದುದಲ್ಲ. ಮಂತ್ರಿ ಮಂಡಲದಲ್ಲಿ ಮಹಿಳೆ ಇಲ್ಲದಿರುವುದಕ್ಕೂ ಅನ್ವಯವಾಗುತ್ತದೆ. ಇವತ್ತಲ್ಲ, ನಾಳೆ ಸಂಪುಟಕ್ಕೆ ಮಹಿಳೆಯನ್ನು ಸೇರಿಸಿಕೊಳ್ಳಲೇಬೇಕು. ಸೇರಿಸಿಕೊಳ್ಳುತ್ತದೆ. ಆದರೆ ಮೊದಲೇ ಸೇರಿಸಿಕೊಳ್ಳದೆ ಸುಖಾಸುಮ್ಮನೆ ಮಹಿಳಾ ವಿರೋಧಿ ಎನ್ನುವ ಕುಖ್ಯಾತಿ ಸಂಪಾದಿಸಿದೆ.

ಅದೇ ರೀತಿ ಬಸವರಾಜ ನೀಲಪ್ಪ ಶಿವಣ್ಣನವರ್ ಮತ್ತು ಎಂ. ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ ಮೊದಲೇ ಸೇರಿಸಿಕೊಳ್ಳದೆ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿಯಿತು ಎನಿಸಿಕೊಳ್ಳುತ್ತದೆ. ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ವಿಷಯದಲ್ಲಿ ಆಗಿದ್ದು ಇದೇ. ಅವರ ಖಾತೆ ಬದಲಾಯಿತು. ಬದಲಿಸುವಷ್ಟೊತ್ತಿಗೆ ಕಾಂಗ್ರೆಸ್ ಪರಿಸ್ಥಿತಿ ಹೈರಾಣಾಗಿತ್ತು. ತೊಂಭತ್ತೊಂಭತ್ತು ಈರುಳ್ಳಿ ತಿಂದು ನಂತರ ನೂರು ಛಡಿ ಏಟು ತಿಂದರೆ ಹೈರಾಣಾಗದೆ ಇನ್ನೇನಾಗಲು ಸಾಧ್ಯ?

ನೀತಿ-ನಿಲುವುಗಳ ವಿಷಯದಲ್ಲೂ ಇದೇ ಸಮಸ್ಯೆ. ರಾಹುಲ್ ಗಾಂಧಿ ಅವರು ಅಂಬಾನಿ-ಅದಾನಿ ಹೆಸರು ಹೇಳಿಕೊಂಡು ಕ್ರೋನಿ ಕ್ಯಾಪಿಟಲಿಸಂ ವಿರುದ್ಧ ಮಾತನಾಡುತ್ತಾರೆ. ಇದರಿಂದ ದೊಡ್ಡ ಉದ್ಯಮಿಗಳು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕ್ರೋನಿ ಕ್ಯಾಪಿಟಲಿಸಂ ವಿರುದ್ಧ ಮಾತನಾಡಿ ಬಡವರು ಮತ್ತು ಮಧ್ಯಮವರ್ಗಕ್ಕೆ ಹತ್ತಿರವಾಗಬೇಕೆಂಬ ರಾಜಕೀಯ ಲೆಕ್ಕಾಚಾರ ರಾಹುಲ್ ಗಾಂಧಿಗೆ ಇದ್ದೇ ಇರುತ್ತದೆ. ಆದರೆ ಡಿ.ಕೆ. ಶಿವಕುಮಾರ್ ತಮ್ಮ ಮನೆಗೆ ಅದಾನಿಯನ್ನು ಬರಮಾಡಿಕೊಳ್ಳುತ್ತಾರೆ. ಇದರಿಂದ ಕಾಂಗ್ರೆಸ್ ಹೇಳುವುದೊಂದು ಮಾಡುವುದೊಂದು ಎಂದು ಬಡವರು ಮತ್ತು ಮಧ್ಯಮವರ್ಗದವರೂ ದೂರವಾಗುತ್ತಾರೆ.

ಬೆಂಗಳೂರಿನ ಫುಟ್ಪಾತ್ ತೆರವು ಮತ್ತು ಮನೆ ಮುಂದೆ ರಸ್ತೆಯಲ್ಲಿ ನಿಲ್ಲಿಸುವ ಕಾರುಗಳಿಗೆ ತೆರಿಗೆ ವಿಧಿಸುವ ವಿಚಾರವೂ ಭಿನ್ನವಾಗಿಲ್ಲ. ಪಾದಚಾರಿ ರಸ್ತೆ ತೆರವುಗೊಳಿಸುವ ಮೂಲಕ ತಮ್ಮ ಪರ ಇದ್ದ ಬಡವರ ಕೋಪ ಕಟ್ಟಿಕೊಂಡಿತು. ಕಾರುಗಳಿಗೆ ತೆರಿಗೆ ಹಾಕುವ ವಿಚಾರದಲ್ಲಿ ಮಧ್ಯಮ ವರ್ಗದ ಕೆಂಗಣ್ಣಿಗೂ ಗುರಿಯಾಯಿತು. ಅಂತಿಮವಾಗಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ನಿಜ. ಆದರೆ ಕನಿಷ್ಠ ಮಟ್ಟದ ರಾಜಕೀಯ ಲೆಕ್ಕಾಚಾರ ಹಾಕದಿದ್ದರೆ ತೊಂಭತ್ತೊಂಭತ್ತು ಈರುಳ್ಳಿ ತಿಂದರೂ ನೂರು ಛಡಿ ಏಟಿನಿಂದ ಪಾರಾಗಲು ಸಾಧ್ಯವಿಲ್ಲ.

ಎಚ್‌ಡಿಕೆ ಎಂಬ ಮಗ್ಗ್ಗುಲ ಮುಳ್ಳು

ರಾಜ್ಯ ಬಿಜೆಪಿ ನಾಯಕರಿಗೆ ತಮ್ಮ ಪಕ್ಷದೊಳಗಿರುವ ಕಾಲೆಳೆಯುವವರ ಕಾಟ ಒಂದು ಕಡೆಯಾದರೆ ಇನ್ನೊಂದೆಡೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಗ್ಗುಲ ಮುಳ್ಳು. ಅವರು ಪದೇ ಪದೇ ರಾಜ್ಯ ಬಿಜೆಪಿ ನಾಯಕರು ದುರ್ಬಲ ಎನ್ನುವುದನ್ನು ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಕಳೆದ ವಾರ ಕುಮಾರಸ್ವಾಮಿ ಪುತ್ರನ ಸಮೇತ ಮೋದಿಯನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಬಿಜೆಪಿಯ ಇನ್ನೂ ಕೆಲವು ನಾಯಕರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಬಿಡದಿ ಟೌನ್‌ಶಿಪ್ ಮತ್ತು ನೈಸ್ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಕೆಲವು ದಾಖಲೆಗಳನ್ನು ಕೊಟ್ಟಿದ್ದಾರೆ. ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಕೊಟ್ಟಿದ್ದಾರೆ.

ಇದರಿಂದ ತಾವು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ದಾಖಲೆಗಳ ಸಮೇತ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿಲ್ಲ. ಸರಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುತ್ತಿಲ್ಲ ಎನ್ನುವ ಭಾವನೆ ರಾಷ್ಟ್ರೀಯ ಬಿಜೆಪಿಗೆ ಬರುತ್ತದೆ ಎನ್ನುವುದು ರಾಜ್ಯ ಬಿಜೆಪಿ ನಾಯಕರ ಭಯ. ಅದರಲ್ಲೂ ರಾಜ್ಯಾಧ್ಯಕ್ಷ

ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಆತಂಕ.

ಇಲಾಖೆಯ ಕೆಲಸಕ್ಕಿಂತ ರಾಜಕೀಯ ವ್ಯವಹಾರಗಳಲ್ಲೇ ಹೆಚ್ಚು ಸಕ್ರಿಯವಾಗಿರುವ ಕುಮಾರಸ್ವಾಮಿ ಇಷ್ಟಕ್ಕೇ ತೃಪ್ತರಾಗಿಲ್ಲ. ಅವರ ಗುರಿ ಮೋದಿ ಮತ್ತು ಅಮಿತ್ ಶಾ ಮನಸ್ಸು ಗೆಲ್ಲುವುದು ಮಾತ್ರವಲ್ಲ, ಇತ್ತೀಚೆಗೆ ಆರೆಸ್ಸೆಸ್ ನಾಯಕರ ವಿಶ್ವಾಸ ಗಳಿಸುವುದಕ್ಕೂ ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಕಾಲಕ್ಕೂ ಶತ್ರುವಿನ ಶತ್ರು ಮಿತ್ರನೇ ಆಗಬೇಕಿಲ್ಲ. ಕೆಲವೊಮ್ಮೆ ತಮ್ಮ ನಡುವಿನ ಗೆಳೆತನ ಗಟ್ಟಿ ಮಾಡಿಕೊಳ್ಳಲು ಶತ್ರುವಿನ ಶತ್ರು ಮೇಲೆ ಯುದ್ಧ ಘೋಷಿಸಬೇಕಾಗುತ್ತದೆ. ಕುಮಾರಸ್ವಾಮಿ ಮಾಡುತ್ತಿರುವುದು ಅದನ್ನೇ. ಅವರೀಗ ಆರೆಸ್ಸೆಸ್ ವಿರುದ್ಧ ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಸಮರ ಸಾರಿದ್ದಾರೆ. ಇದು ಕೂಡ ರಾಜ್ಯ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯಕ್ಕೆ ಬಂದಾಗಲೆಲ್ಲಾ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಒಕ್ಕಲಿಗ ನಾಯಕತ್ವದ ಹಿನ್ನೆಲೆಯಲ್ಲಿ ಅದು ನಡೆಯುತ್ತಿತ್ತು. ಆದರೆ ದಿಢೀರನೇ ಅವರ ಫೋಕಸ್ ಶಿಫ್ಟ್ ಆಗಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ ಕಹಳೆ ಮೊಳಗಿಸಿದ್ದಾರೆ. ಏಕೆಂದರೆ ಈಗ ಇಡೀ ದೇಶದಲ್ಲಿ ಆರೆಸ್ಸೆಸ್ ಅನ್ನು ಪರಿಪರಿಯಾಗಿ ಕಾಡುತ್ತಿರುವ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ. ಇಂಥ ಹೊತ್ತಿನಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಅಖಾಡಕ್ಕೆ ಇಳಿದರೆ ಆರೆಸ್ಸೆಸ್ ನಾಯಕರಿಗೆ ಹತ್ತಿರ ಆಗಬಹುದೆಂಬ ದೂರದ ಆಲೋಚನೆ ಅವರದು ಎನ್ನುವುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ.

ಕೆಪಿಎಸ್‌ಸಿ ಕರ್ಮಕಾಂಡಕ್ಕೆ ದೊಡ್ಡ ಇತಿಹಾಸವಿದೆ. ಎಚ್.ಎನ್. ಕೃಷ್ಣ ಮತ್ತು ಗೋನಾಳ್ ಭೀಮಪ್ಪ ಕಾಲದಲ್ಲಿ ನಡೆದ ಹಗರಣದ ಬಗ್ಗೆ ವ್ಯಾಪಕ ಚರ್ಚೆಯಾಗಿದೆ. ಮೊನ್ನೆ ಶಿವಶಂಕರಪ್ಪ ಸಾಹುಕಾರ್ ತಮ್ಮ ಪುತ್ರಿಗೆ ಕೆಲಸ ಕೊಡಿಸಲು ಅಕ್ರಮ ಎಸಗಿದ್ದಾರೆ ಎನ್ನುವುದು ಚರ್ಚೆಯಾಗುತ್ತಿದೆ. ಇವುಗಳ ಬಗ್ಗೆ ಮೌನಧಾರಿಯಾಗಿರುವ ಕುಮಾರಸ್ವಾಮಿ ಧಿಡೀರನೇ ಪ್ರಿಯಾಂಕಾ ಖರ್ಗೆ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಅವರಿಗೆ ಕೆಪಿಎಸ್‌ಸಿ ಬಗೆಗಿನ ಕಾಳಜಿಗಿಂತ ಆರೆಸ್ಸೆಸ್ ನಾಯಕರ ಮನಗೆಲ್ಲುವ ಇರಾದೆ ಇರಬಹುದು ಎಂದು ಯಾರಿಗಾದರೂ ಅನಿಸುತ್ತದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಅಷ್ಟೇನೂ ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿ ನಾಯಕರು ಚಿಂತೆಗೀಡಾಗಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ದಾಳಿ ಮಾಡುತ್ತಿರುವುದರಿಂದ ಖುಷಿ ಪಡಬೇಕೋ ಅಥವಾ ಇದು ಕುಮಾರಸ್ವಾಮಿಯ ದೂರದ ಆಲೋಚನೆ ಎಂದು ನೊಂದುಕೊಳ್ಳಬೇಕೋ ಎನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ.

ಇಷ್ಟು ದಿನ ರಾಷ್ಟ್ರೀಯ ನಾಯಕರ ಜೊತೆ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದ ಕುಮಾರಸ್ವಾಮಿ ಈಗ ಆರೆಸ್ಸೆಸ್ ನಾಯಕರ ವಿಶ್ವಾಸ ಗಳಿಸಲು ಮುಂದಾಗಿರುವುದು ಸೇರಿದಂತೆ ಚುನಾವಣೆ ಹತ್ತಿರ ಹತ್ತಿರ ಆಗುತ್ತಿದ್ದಂತೆ ಅವರು ಉರುಳುಸುತ್ತಿರುವ ಪ್ರತಿಯೊಂದು ದಾಳಗಳು ರಾಜ್ಯ ಬಿಜೆಪಿ ನಾಯಕರಿಗೆ ಏದುಸಿರು ಬರುವಂತೆ ಮಾಡಿವೆ.

ಆಫ್ ದಿ ರೆಕಾರ್ಡ್

ಇದೆಲ್ಲದರ ನಡುವೆ ವಿಜಯೇಂದ್ರ ಅವಧಿ ಮುಗಿಯುತ್ತಿದೆ. ಅವರು ‘ನನ್ನನ್ನು ಬಿಟ್ಟು ಬೇರೆ ಯಾರಿದ್ದಾರೆ? ನಾನೇ ಸಮರ್ಥ, ಚುನಾವಣೆವರೆಗೂ ನಾನೇ’ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಸುನೀಲ್ ಕುಮಾರ್ ಮತ್ತಿತರರು ತಮಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ವಿಘ್ನ ಸಂತೋಷಿಗಳು ಶ್ರೀರಾಮುಲುಗೆ ಅಧ್ಯಕ್ಷರಾಗುವ ಆಸೆ ಹುಟ್ಟಿಸಿದ್ದಾರೆ. ರಾಜಕೀಯವಾಗಿ ಮರುಹುಟ್ಟು ಪಡೆದರೆ ಸಾಕು ಎಂದು ಕಾಯುತ್ತಿದ್ದ ರಾಮುಲು ಅಧ್ಯಕ್ಷಗಾದಿಯ ಮಾತು ಕೇಳುತ್ತಿದ್ದಂತೆ ಎದ್ದು ಕುಳಿತಿದ್ದಾರಂತೆ. ಬರಿಗಾಲಲ್ಲೇ ಪಾದಯಾತ್ರೆ (ರಾಯಚೂರಿನಿಂದ ಬಳ್ಳಾರಿವರೆಗೆ) ಹೊರಡುವ ಲೆಕ್ಕಾಚಾರದಲ್ಲಿದ್ದಾರಂತೆ.

Tags

NagendraCongresscase
share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X