ಅಯೋಧ್ಯೆ ಅಕ್ರಮ: ಆರೆಸ್ಸೆಸ್ -ಮೋದಿ ನಿಲುವೇನು?

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಡೆಸಿದ ದೇಣಿಗೆ ಸಂಗ್ರಹದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಕ್ರಮ ವ್ಯವಹಾರದ ಮೊತ್ತ ಲಕ್ಷಗಳಿಂದ 1,400 ಕೋಟಿ ರೂಪಾಯಿವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ. ಇದಲ್ಲದೆ ರಾಮಮಂದಿರ ನಿರ್ವಹಣೆಯಲ್ಲೂ ಅಕ್ರಮವಾಗಿದೆ ಎಂದು ಚರ್ಚೆಯಾಗುತ್ತಿದೆ. ಇದು ರಾಮಮಂದಿರ ನಿರ್ಮಾಣಕ್ಕಾಗಿ ತನು-ಮನ-ಧನ ಧಾರೆ ಎರೆದಿದ್ದ ಕೋಟ್ಯಂತರ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ತಂದಿದೆ. ತನಿಖೆ ನಡೆಯುತ್ತಿದೆಯಾದರೂ ಸತ್ಯ ಹೊರಬರುತ್ತದೆ ಎನ್ನುವ ವಿಶ್ವಾಸ ಯಾರಲ್ಲೂ ಇಲ್ಲ. ಪ್ರಕರಣ ಕುರಿತು ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೇಳಿಕೆಗಳನ್ನು ನಂಬಲು ಸಾಧ್ಯವಿಲ್ಲ. ನಿಜಕ್ಕೂ ಈಗ ಮಾತನಾಡಬೇಕಾಗಿರುವವರು ಮೊದಲನೆಯದಾಗಿ ಆರೆಸ್ಸೆಸ್ ನಾಯಕರು. ಎರಡನೆಯದಾಗಿ ಪ್ರಧಾನಿ ನರೇಂದ್ರ ಮೋದಿ. ಏಕೆಂದರೆ ರಾಮ ಮಂದಿರ ನಿರ್ಮಾಣ ಆರೆಸ್ಸೆಸ್ ಮತ್ತು ಮೋದಿ ಸರಕಾರದ ‘ಜಂಟಿ ಅಜೆಂಡಾ’ವಾಗಿತ್ತು.
ಆರೆಸ್ಸೆಸ್ ನೋಂದಣಿಯನ್ನು ಏಕೆ ಮಾಡಿಕೊಂಡಿಲ್ಲ? ಆರೆಸ್ಸೆಸ್ ಯಾವ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸುತ್ತಿದೆ? ಆರೆಸ್ಸೆಸ್ ತೆರಿಗೆ ಕಟ್ಟುತ್ತಿದೆಯೇ? ಅದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಆರೆಸ್ಸೆಸ್ ನಾಯಕರಿಗೆ ಧೈರ್ಯವೂ ಇಲ್ಲ. ಅವರ ಬಳಿ ಉತ್ತರವೂ ಇಲ್ಲ. ಅವರು ಉತ್ತರಿಸುವುದೂ ಇಲ್ಲ. ಆದರೆ ಅಯೋಧ್ಯೆಯ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಉತ್ತರಿಸಲೇಬೇಕು. ತಾಂತ್ರಿಕವಾಗಿ ಆರೋಪ ಕೇಳಿಬರುತ್ತಿರುವುದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ಟ್ರಸ್ಟಿಗಳು, ಅಧಿಕಾರಿಗಳ ಮೇಲಾದರೂ ನೈತಿಕವಾಗಿ ಉತ್ತರ ನೀಡಬೇಕಾಗಿರುವುದು ಆರೆಸ್ಸೆಸ್.
ಅಯೋಧ್ಯೆ ರಾಮಜನ್ಮಭೂಮಿ ಹೋರಾಟ ಹುಟ್ಟುಹಾಕಿದ್ದರಿಂದ ಹಿಡಿದು ಪಟ್ಟು ಬಿಡದೆ ಮಂದಿರ ನಿರ್ಮಾಣ ಆಗುವವರೆಗೆ ಹಾಗೂ ಅದರ ನಿರ್ವಹಣೆವರೆಗೆ ಹಲವು ಸಂಘಟನೆಗಳ ಶ್ರಮದಾನವಿದೆ. ಆದರೆ ಸದಾ ಮುಖ್ಯ ಭೂಮಿಕೆಯಲ್ಲಿ ಇದ್ದು ಪ್ರಧಾನ ಪಾತ್ರವಹಿಸಿರುವುದು-
ವಹಿಸುತ್ತಿರುವುದು ಆರೆಸ್ಸೆಸ್ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಈಗ ಅಕ್ರಮ ನಡೆದಿರುವುದು ನಿಜವೇ ಆಗಿದ್ದರೆ ಅದು ಆರೆಸ್ಸೆಸ್ ಅರಿವಿಗೆ ಬಾರದಂತೆ ಆಗಿದೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ.
ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ನಿಯೋಜಿತರಾದವರಾಗಲಿ, ಹಣ ಸಂಗ್ರಹಿಸಿ ಖರ್ಚು ಮಾಡಿದವರಾಗಲಿ ಎಲ್ಲರೂ ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗೆ ಅತ್ಯಂತ ನಿಷ್ಠಾವಂತ ಮತ್ತು ನಂಬಿಕಸ್ತರೇ ಆಗಿರುತ್ತಾರೆ. ಯಾರು, ಯಾವ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಿದ್ದಾರೆ ಎನ್ನುವ ಇಂಚಿಂಚೂ ಮಾಹಿತಿ ಆರೆಸ್ಸೆಸ್ ನಾಯಕರಿಗೆ ಇದ್ದೇ ಇರುತ್ತದೆ. ತಪ್ಪಿತಸ್ಥರು ಯಾರು ಎನ್ನುವುದು ಗೊತ್ತಿರುವುದರಿಂದ ಅದನ್ನು ಹೇಳಬೇಕಾದುದು ಅವರ ನೈತಿಕ ಜವಾಬ್ದಾರಿ.
ಇದೇ ರೀತಿ ನರೇಂದ್ರ ಮೋದಿ ಮೇಲೆಯೂ ನೈತಿಕ ಜವಾಬ್ದಾರಿ ಇದೆ. ತುಂಬಾ ಚೆನ್ನಾಗಿ ಭಾಷಣ ಮಾಡುವ ಮೋದಿ ಬೆಲೆ ಏರಿಕೆ, ನಿರುದ್ಯೋಗ, ನೀಟ್ ಪರೀಕ್ಷೆಯ ಅಕ್ರಮ, ರೂಪಾಯಿ ಮೌಲ್ಯ ಕುಸಿತ, ಚೀನಾದಿಂದ ಭಾರತದ ಭೂಮಿ ಒತ್ತುವರಿ, ಮಣಿಪುರ ಉದ್ವಿಘ್ನ ಮತ್ತಿತರ ವಿಚಾರಗಳ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎನ್ನುವುದು ದೇಶವಾಸಿಗಳಿಗೆ ಚೆನ್ನಾಗಿ ಗೊತ್ತಾಗಿದೆ. ಆದರೂ ‘ನಾನೂ ತಿನ್ನಲ್ಲ, ಬೇರೆಯವರು ತಿನ್ನಲೂ ಬಿಡುವುದಿಲ್ಲ’ ಎಂದು ಹೇಳಿದ್ದ, ರಾಮಮಂದಿರ ಉದ್ಘಾಟನೆ
ವೇಳೆ ತಾವೇ ಪ್ರಧಾನ ಅರ್ಚಕರು ಎನ್ನುವಂತೆ ಕೆಲವು ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದ, ಹಿಂದೂ ಹೃದಯ ಸಾಮ್ರಾಟ ಎಂದು
ಬಿರುದಾಂಕಿತನಾದ ಮೋದಿ ಈಗ ಆರೆಸ್ಸೆಸ್ ಮತ್ತು ಬಿಜೆಪಿಯ ‘ಪೆಟ್ ಪ್ರಾಜೆಕ್ಟ್’ ನಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮದ ಬಗ್ಗೆ ಮಾತನಾಡಬೇಕಾಗಿದೆ.
ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖಾ ವರದಿಯನ್ನು ಪ್ರಧಾನ ಮಂತ್ರಿಗಳ ಕಚೇರಿಗೂ ಕಳುಹಿಸಿಕೊಡಿ ಎಂದು ಸೂಚನೆ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಿದ್ದರೆ ಇದು ನರೇಂದ್ರ ಮೋದಿಗೆ ಸಂಬಂಧಿಸಿದ ವಿಷಯ ಎಂದು ರುಜುವಾತಾಯಿತಲ್ಲವೇ?
ಹಲವು ವಿಷಯಗಳಲ್ಲಿ ನುಣುಚಿಕೊಂಡಿರುವ ಆರೆಸ್ಸೆಸ್ ಮತ್ತು ಮೋದಿ ಈಗ ಉತ್ತರಿಸಲೇಬೇಕು. ಏಕೆಂದರೆ ಪ್ರಶ್ನೆ ಕೇಳುತ್ತಿರುವವರು ರಾಜಕೀಯ ವಿರೋಧಿಗಳಲ್ಲ. ಸೈದ್ಧಾಂತಿಕ ವಿರೋಧಿಗಳೂ ಅಲ್ಲ. ಬದಲಿಗೆ ಅಯೋಧ್ಯೆ ಭೂ ವಿವಾದದ ಮೂಲ ದಾವೆದಾರರ ಪೈಕಿ ಒಂದಾದ ನಿರ್ಮೋಹಿ ಅಖಾಡ ಮತ್ತು ಮಂದಿರ ನಿರ್ಮಾಣದ ಕನಸು ಹೊತ್ತು ಕೈಲಾದಷ್ಟು ಸಹಾಯ ಮಾಡಿರುವ ಕೋಟ್ಯಂತರ ಭಕ್ತರು.
ನಿರ್ಮೋಹಿ ಅಖಾಡ ಮೂರು ಪ್ರಮುಖ ಆರೋಪಗಳನ್ನು ಮಾಡಿದೆ. ಅವುಗಳ ಪೈಕಿ ಮೊದಲನೆಯದು ವಿಶ್ವ ಹಿಂದೂ ಪರಿಷತ್ ಮತ್ತು ರಾಜಕೀಯ ಪಕ್ಷಗಳು ಐತಿಹಾಸಿಕ ನಿಧಿಯಿಂದ ದೊಡ್ಡ ಮಟ್ಟದ ಹಣವನ್ನು ದುರುಪಯೋಗ ಮಾಡಿಕೊಂಡಿವೆ ಎನ್ನುವುದು. ನಿರ್ಮೋಹಿ ಅಖಾಡದ ವಕ್ತಾರ ಮಹಾಂತ್ ಸೀತಾರಾಮ್ ಅವರು ‘1980ರಿಂದ ಇಲ್ಲಿಯವರೆಗೆ ದೇಶ ಮತ್ತು ವಿದೇಶಗಳ ಭಕ್ತರಿಂದ ಸಂಗ್ರಹಿಸಲಾದ ಒಟ್ಟು ಮೊತ್ತದಲ್ಲಿ 1,400 ಕೋಟಿ ರೂಪಾಯಿಗಳಿಗೂ ಹೆಚ್ಚು ದುಡ್ಡನ್ನು ವಂಚನೆ ಮಾಡಲಾಗಿದೆ. ತಮ್ಮ ಸಾಂಸ್ಥಿಕ ಕಟ್ಟಡಗಳನ್ನು ನಿರ್ಮಿಸಲು, ಸರಕಾರಗಳನ್ನು ರಚಿಸಲು ಮತ್ತು ರಾಜಕೀಯ ಪ್ರಚಾರಗಳಿಗೆ ಹಣಕಾಸು ಒದಗಿಸಲು ರಾಮಮಂದಿರದ ನಿಧಿಯನ್ನು ಅಪಹರಿಸಲಾಗಿದೆ. ಇವರು ರಾಮ ಮಂದಿರದ ಹೆಸರಿನಲ್ಲಿ ನೋಟುಗಳು ಮತ್ತು ಮತಗಳನ್ನು ಸಂಗ್ರಹಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಇದಲ್ಲದೆ ಪವಿತ್ರ ಇಟ್ಟಿಗೆ ಅಕ್ರಮದ ಬಗ್ಗೆಯೂ ನಿರ್ಮೋಹಿ ಅಖಾಡ ಬೊಟ್ಟು ಮಾಡಿದೆ. ಮಂದಿರ ನಿರ್ಮಾಣ ಚಳವಳಿ ಉತ್ತುಂಗದಲ್ಲಿದ್ದಾಗ ದೇಶಾದ್ಯಂತ ‘ಜೈ ಶ್ರೀ ರಾಮ್’ ಎಂದು ಕೆತ್ತಿದ ಲಕ್ಷಾಂತರ ಪವಿತ್ರ ಇಟ್ಟಿಗೆಗಳು ಮತ್ತು ಕಾಣಿಕೆಗಳನ್ನು ಸಂಗ್ರಹಿಸಲಾಯಿತು. ಆದರೆ ಈವರೆಗೆ ಅದರ ಲೆಕ್ಕಕೊಟ್ಟಿಲ್ಲ ಎಂದು ದೂರಿದ್ದಾರೆ.
ಮೂರನೆಯದಾಗಿ ಮಂದಿರ ನಿರ್ಮಾಣವಾಗುವುದು ಖಚಿತವಾಗುತ್ತಿದ್ದಂತೆ ‘ಕೆಲವರು’ ಅಯೋಧ್ಯೆಯಲ್ಲಿ ಎಕರೆಗೆ 2 ಕೋಟಿ ರೂಪಾಯಿಗೆ ಜಮೀನನ್ನು ಖರೀದಿಸಿ ಕೇವಲ ಐದರಿಂದ ಹತ್ತು ನಿಮಿಷಗಳ ಅಂತರದಲ್ಲಿ ರಾಮ ಮಂದಿರ ಟ್ರಸ್ಟ್‌ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಆರೋಪಿಸಿದ್ದರು. ಇದನ್ನು ಕೂಡ ನಿರ್ಮೋಹಿ ಅಖಾಡ ಅನುಮೋದಿಸಿದೆ.
►► ಯೋಗಿ ಟಾರ್ಗೆಟ್?
ಯೋಗಿ ಆದಿತ್ಯನಾಥ್ ಮತ್ತು ಮೋದಿ-ಅಮಿತ್ ಶಾ ನಡುವಿನ ಸಂಬಂಧ ಮೊದಲಿಂದಲೂ ಚೆನ್ನಾಗಿಲ್ಲ. ಯೋಗಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧ ಹೇಗಿದೆ ಎನ್ನವುದು ನಿಖರವಾಗಿ ಗೊತ್ತಿಲ್ಲ. ಯೋಗಿ ಮತ್ತು ವಿಶ್ವ ಹಿಂದೂ ಪರಿಷತ್ ನಡುವಿನ ಸಂಬಂಧವಂತೂ ಸುಮಧುರವಾಗಿಲ್ಲ. ಜೊತೆಗೆ ಯೋಗಿ ಮತ್ತು ನಿರ್ಮೋಹಿ ಅಖಾಡದ ಸಂಬಂಧ ಕೂಡ ಅಷ್ಟಕ್ಕಷ್ಟೇ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ನಿರ್ಮೋಹಿ ಅಖಾಡದ ಮಧ್ಯೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಯಾರು, ಯಾರ ಹೆಗಲ ಮೇಲೆ ಗುಂಡಿಟ್ಟು, ಯಾರಿಗೆ ಹೊಡೆಯುತ್ತಿದ್ದಾರೆ ಎನ್ನುವುದು ಸುಲಭಕ್ಕೆ ನಿಲುಕಲಾರದ ವಿಚಾರ ಎನ್ನುತ್ತಾರೆ ಆರೆಸ್ಸೆಸ್ ಮತ್ತು ಬಿಜೆಪಿ ಜೊತೆ ನಿಕಟ ಸಂಪರ್ಕ ಹೊಂದಿರುವವರು.
ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದೇ ಸರಿಯಾದ ಸಂದರ್ಭ ಎಂದು ಅಯೋಧ್ಯೆ ಅಕ್ರಮದ ಚರ್ಚೆಯನ್ನು ಮುನ್ನೆಲೆಗೆ ತರಲಾಗಿದೆ. ನಿರ್ಮೋಹಿ ಅಖಾಡವು ವಿಶ್ವ ಹಿಂದೂ ಪರಿಷತ್ ಮೇಲೆ ಆರೋಪಿಸಿರುವುದರಿಂದ ಅವರಿಬ್ಬರು ಕಿತ್ತಾಡಲೆಂದೇ ಯೋಗಿ ವಿಶೇಷ ತನಿಖಾ ತಂಡ ರಚಿಸಿದ್ದಾರೆ ಎನ್ನುವ ವ್ಯಾಖಾನವೂ ಇದೆ. ಆದರೆ ನಿರ್ಮೋಹಿ ಅಖಾಡ ಮತ್ತು ವಿಶ್ವ ಹಿಂದೂ ಪರಿಷತ್ ಕಿತ್ತಾಟದಿಂದ ತಮಗೆ ಮುಜುಗರ ಆಗುತ್ತದೆ, ಬಿಜೆಪಿಗೆ ರಾಜಕೀಯವಾಗಿ ಹಿನ್ನಡೆಯಾಗುತ್ತದೆ ಎನ್ನುವುದನ್ನು ಆರೆಸ್ಸೆಸ್ ಅಂದಾಜು ಮಾಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗಿದ್ದರೆ ನಿರ್ಮೋಹಿ ಅಖಾಡವನ್ನು ಎತ್ತಿಕಟ್ಟಿದವರು ಯಾರು? ಈಗ ಮೋದಿ ಏಕೆ ಮೌನಿಯಾಗಿದ್ದಾರೆ? ಯೋಗಿ ಏಕೆ ತನಿಖಾ ವರದಿಯನ್ನು ಪ್ರಧಾನಿ ಕಚೇರಿಗೆ ಕಳುಹಿಸುವಂತೆ ಸೂಚನೆ ನೀಡಿದ್ದಾರೆ? ವಿವಾದ ಹೊರಗೆ ಬರದಂತೆ ನೋಡಿಕೊಳ್ಳುವ ಶಕ್ತಿ ಆರೆಸ್ಸೆಸ್‌ಗೆ ಇಲ್ಲವೇ? ಉತ್ತರಿಸಲು ಕಷ್ಟವಾದ ನಾನಾ ಪ್ರಶ್ನೆಗಳಿವೆ. ಕೆಲವು ಪ್ರಶ್ನೆಗಳಿಗಾದರೂ ಆರೆಸ್ಸೆಸ್ ನಾಯಕರು ಮತ್ತು ಮೋದಿ ಉತ್ತರಿಸಬೇಕಾಗಿದೆ. ಉತ್ತರಿಸುತ್ತಾರೋ ಅಥವಾ ಸುಮ್ಮನಿರುತ್ತಾರೋ? ಅವರ ನಿಲುವು ಏನು ಎನ್ನುವುದನ್ನು ಕಾದುನೋಡಬೇಕು.
ಆಫ್ ದಿ ರೆಕಾರ್ಡ್!
ಪಕ್ಕದ ಮನೆಗೆ ಬೆಂಕಿ ಹಚ್ಚಿ ಖುಷಿ ಪಟ್ಟವರ ಮನೆಗೆ ನಿಧಾನವಾಗಿ ಬೆಂಕಿಯ ಬಿಸಿ ತಗಲುತ್ತಿದೆ. ಸಮಾಜದಲ್ಲಿ ದೇವರು, ಧರ್ಮ, ಜಾತಿ, ಆಚಾರ, ವಿಚಾರಗಳಿಗೆ ಸಂಬಂಧಿಸಿದಂತೆ ನೂರು ಸಿಕ್ಕುಗಳನ್ನು ನಿರ್ಮಿಸಿದವರು ಕಡೆಗೆ ಅವರವರೇ ಕಿತ್ತಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ಈಗಲೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಮುಂದೆ ಒಂದಲ್ಲಾ ಒಂದು ದಿನ ಸಿಕ್ಕಿಹಾಕಿಕೊಳ್ಳುವುದು ಶತಸಿದ್ಧ.






