ದಲಿತ ಸಿಎಂ ಆಗುವುದು ಯಾವಾಗ?

ಅತ್ಯಂತ ಕೆಟ್ಟ ಜಾತಿವ್ಯವಸ್ಥೆ ಇರುವ, ಪ್ರಗತಿಪರ ಚಳವಳಿಗಳೇ ಇಲ್ಲದ, ಶಿಕ್ಷಣವೇ ಇಲ್ಲದ ಉತ್ತರಪ್ರದೇಶದಲ್ಲಿ ದಲಿತರ ಪಕ್ಷವೊಂದನ್ನು ಕಟ್ಟಲಾಗಿದೆ.
ದಲಿತ ನಾಯಕಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರಬಲ ಸಮುದಾಯದ ಜೊತೆ ಸೇರಿ ಪ್ರಯೋಗ ಮಾಡಲಾಗಿದೆ. ಆದರೆ ಬಸವಣ್ಣ 12ನೇ ಶತಮಾನದಲ್ಲೇ ದಲಿತೋದ್ಧಾರಕ್ಕೆ ದೀವಿಗೆ ನೀಡಿದ್ದರೂ, ನಾಲ್ವಡಿ ಕೃಷ್ಟರಾಜ ಒಡೆಯರ್ ದಲಿತರಿಗೆ ಶಿಕ್ಷಣ ಮತ್ತು ಭೂಮಿ ನೀಡಿದ್ದರೂ ಕರ್ನಾಟಕದಲ್ಲಿ ಈವರೆಗೆ ದಲಿತ ನಾಯಕ ಮುಖ್ಯಮಂತ್ರಿ ಆಗಲು ಏಕೆ ಸಾಧ್ಯವಾಗಿಲ್ಲ?
ಇದು ಪಂಜಾಬ್‌ನಲ್ಲಿ ಹುಟ್ಟಿ ಉತ್ತರ ಪ್ರದೇಶದಲ್ಲಿ ದಲಿತ ರಾಜಕಾರಣದ ಪ್ರಯೋಗ ಮಾಡಿ ಯಶಸ್ವಿಯಾದ ಕಾನ್ಷಿರಾಮ್ 90ರ ದಶಕದಲ್ಲಿ ಕರ್ನಾಟಕದ ಬಗ್ಗೆ ಕೇಳಿದ್ದ ಪ್ರಶ್ನೆ. ಕರ್ನಾಟಕದ ದಲಿತ ನಾಯಕರನ್ನೇ ಕೇಳಿದ್ದ ಪ್ರಶ್ನೆ. ಆಗ ಯಾರೊಬ್ಬರೂ ಉತ್ತರಿಸಿರಲಿಲ್ಲ. ಈಗ ಮೂರು ದಶಕದ ಬಳಿಕವಾದರೂ ಉತ್ತರಿಸಬಲ್ಲರೆ?
ಯಾರೂ ಉತ್ತರಿಸುತ್ತಿಲ್ಲ ಎಂದರೆ ಉತ್ತರವೇ ಇಲ್ಲ ಎಂದು ಅರ್ಥವಲ್ಲ. ಉತ್ತರ ಇದೆ. ‘ಕರ್ನಾಟಕದಲ್ಲಿ ಇಲ್ಲಿಯವರೆಗೆ ದಲಿತ ನಾಯಕನೊಬ್ಬ ಮುಖ್ಯಮಂತ್ರಿಯಾಗಲು ಏಕೆ ಸಾಧ್ಯವಾಗಿಲ್ಲ?’ ಎಂಬ ಪ್ರಶ್ನೆಯನ್ನು ಸ್ವಲ್ಪ ಬದಲಾಯಿಸಿ ‘ಕರ್ನಾಟಕದಲ್ಲಿ ಇಲ್ಲಿಯವರೆಗೆ ದಲಿತ ನಾಯಕನೊಬ್ಬ ಮುಖ್ಯಮಂತ್ರಿಯಾಗದಿರಲು ಯಾರು ಕಾರಣ? ಎಂದು ಕೇಳಿಕೊಂಡರೆ ಉತ್ತರ ಸಿಕ್ಕಿಬಿಡುತ್ತದೆ. ಯಾರನ್ನೆಲ್ಲಾ ಕಟಕಟೆಯಲ್ಲಿ ನಿಲ್ಲಿಸಬೇಕೆಂದರೆ?
ಆರೋಪಿ 1: ಕಾಂಗ್ರೆಸ್ ಹೈಕಮಾಂಡ್
ಆರೋಪಿ 2: ರಾಜ್ಯದ ದಲಿತ ನಾಯಕರು
ಆರೋಪಿ 3: ಇತರ ಜಾತಿಯ ರಾಜಕೀಯ ನಾಯಕರು
ಆರೋಪಿ 4: ನಾಗರಿಕ ಸಮಾಜ ಅಥವಾ ಜನ.
ಕಾಂಗ್ರೆಸ್ ಹೈಕಮಾಂಡ್ ಏಕೆ ಮೊದಲ ಆರೋಪಿ ಎಂದರೆ, ಮೊದಲೆಲ್ಲಾ ಶಾಸಕರನ್ನು ಕೇಳಿ ಮುಖ್ಯಮಂತ್ರಿ ಮಾಡುವ ಪರಿಪಾಠ ಆ ಪಕ್ಷದಲ್ಲಿ ಇರಲಿಲ್ಲ. ಹೈಕಮಾಂಡ್ ಸೂಚಿಸಿದವರು ಮುಖ್ಯಮಂತ್ರಿ ಆಗುತ್ತಿದ್ದರು. ಆಗ ಕಾಂಗ್ರೆಸ್ ಹೈಕಮಾಂಡಿಗೆ ಆ ಶಕ್ತಿ ಇತ್ತು. ಹೆಚ್ಚಿನ ಶಾಸಕರು ಆಯ್ಕೆ ಆಗುತ್ತಿದ್ದುದೇ ಇಂದಿರಾ ಗಾಂಧಿ ಹೆಸರು ಹೇಳಿಕೊಂಡು, ಅವರ ಫೋಟೊ ತೋರಿಸಿ. ಅದರಿಂದಾಗಿ ಮುಖ್ಯಮಂತ್ರಿಗಳ ‘ನೇಮಕ’ವಾಗುತ್ತಿತ್ತೇ ವಿನಃ ‘ಆಯ್ಕೆ’ ಆಗುತ್ತಿರಲಿಲ್ಲ. ಆ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್ ಯಾವತ್ತೋ ಕರ್ನಾಟಕಕ್ಕೆ ದಲಿತ ಮುಖ್ಯಮಂತ್ರಿಯನ್ನು ನೀಡಬೇಕಾಗಿತ್ತು.
ಕಾಂಗ್ರೆಸ್ ಪಕ್ಷವನ್ನೇ ಏಕೆ ಹೊಣೆ ಮಾಡಬೇಕು? ಬೇರೆ ಪಕ್ಷಗಳನ್ನು ಏಕೆ ಬಿಡಬೇಕು? ಎಂಬ ಉಪ ಪ್ರಶ್ನೆಗಳಿಗೂ ಉತ್ತರ ಕಂಡುಕೊಂಡೇ ಮುಂದೆ ಹೋಗೋಣ. ಜನತಾ ಪರಿವಾರ ಎಂದೂ ದಲಿತರು ಮತ್ತು ಹಿಂದುಳಿದವರ ಪರವಾಗಿರಲಿಲ್ಲ. ಕಾಂಗ್ರೆಸ್‌ಗೆ ವಿರೋಧಿಯಾಗಿ ಹುಟ್ಟಿಕೊಂಡ ಜನತಾ ಪಕ್ಷ ಕಾಂಗ್ರೆಸ್‌ನ ಅಹಿಂದ ಮತಗಳಿಗೆ ವಿರುದ್ಧ ಇರುವ ಸಮುದಾಯಗಳನ್ನೇ ಆಧರಿಸಿ ರಾಜಕಾರಣ ಮಾಡಿತು. ಜನತಾ ಪರಿವಾರದ ಜಾಗಕ್ಕೆ ಬಂದ ಬಿಜೆಪಿಯ ನಿಲುವು ಕೂಡ ಅದೇ ಆಗಿತ್ತು. ಜೊತೆಗೆ ಬಿಜೆಪಿ ಅಧಿಕಾರಕ್ಕೆ ಬಂದದ್ದು ಇತ್ತೀಚೆಗೆ.
ಈಗ ರಾಜ್ಯದ ದಲಿತ ನಾಯಕರ ಸರದಿ. ಹಿಂದಿನಿಂದಲೂ ಬಸವಲಿಂಗಪ್ಪ, ಎನ್. ರಾಚಯ್ಯ, ಬಿ. ರಾಚಯ್ಯ, ಕೆ.ಎಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರು ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದರು. ಆದರೆ ಅದಕ್ಕೆ ಬೇಕಾದ ರಾಜಕೀಯ ತಂತ್ರಗಾರಿಕೆ ಮಾಡುವಲ್ಲಿ ವಿಫಲರಾದರು. ಮಲ್ಲಿಕಾರ್ಜುನ ಖರ್ಗೆ ‘ದಲಿತ ಎನ್ನುವ ಹೆಸರಲ್ಲಿ ಮುಖ್ಯಮಂತ್ರಿ ಆಗುವುದು ಬೇಡ’ ಎಂದು ಹೇಳುತ್ತಾರೆ. ದಲಿತ ರಾಜಕೀಯ ನಾಯಕತ್ವ ಬೆಳೆಯುವ ದೃಷ್ಟಿಯಿಂದ ಇದು ಅತ್ಯಂತ ಮಾರಕ ನಿಲುವು. ಮೊದಲನೆಯದಾಗಿ ಎಲ್ಲಾ ರೀತಿಯ ಅರ್ಹತೆಗಳಿರುವುದರಿಂದ ಅವರು ಯಾವ ಕಾರಣದಿಂದಲಾದರೂ ಸರಿ ಮುಖ್ಯಮಂತ್ರಿಯಾಗಬೇಕು. ಅದಕ್ಕಿಂತ ಮುಖ್ಯವಾಗಿ ದಲಿತ ಎನ್ನುವ ಕಾರಣಕ್ಕಾಗಿಯೇ ಮುಖ್ಯಮಂತ್ರಿಯಾಗಬೇಕು. ಆಗ ಮುಖ್ಯಮಂತ್ರಿ ಆಗುವುದಕ್ಕೂ ‘ದಲಿತ ಖೋಟಾ’ವೊಂದು ನಿರ್ಮಾಣವಾಗುತ್ತದೆ. ಅದು ಅಗತ್ಯವಾಗಿ ಆಗಬೇಕಿರುವ ಕೆಲಸ. ಇಷ್ಟಕ್ಕೂ ದಲಿತ ಸಿಎಂ ಎಂದು ಹೇಳಿಸಿಕೊಳ್ಳುವುದಕ್ಕೆ ಹಿಂಜರಿಯುವುದೇಕೆ? ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸುವ ದೃಷ್ಟಿಯಿಂದ ನೋಡುವುದಾದರೆ ಅದು ಮೇಲರಿಮೆಯೇ ಆಗಬೇಕು.
ರಾಜ್ಯದಲ್ಲಿ ಈಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಚರ್ಚೆ ಶುರುವಾಗಿದೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಮತ್ತು ತುರ್ತಾಗಿ ಆಗಬೇಕಿರುವ ಕೆಲಸ ಏನೆಂದರೆ ದಲಿತರು ಒಗ್ಗಟ್ಟಾಗುವುದು. ಎಡಗೈ ಮತ್ತು ಬಲಗೈ ಎಂದು ಬೇರೆ ಬೇರೆಯಾಗಿದ್ದವರು, ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಭಾಗವಾಗಿದ್ದವರು ಒಳ ಮೀಸಲಾತಿ ಜಾರಿ ಆಗುವ ವೇಳೆಯಲ್ಲಾದರೂ ಒಂದಾಗಬೇಕು. ಮುಖ್ಯಮಂತ್ರಿ ಆಗುವ ಕಾಲ ಯಾವಾಗ ಬರುತ್ತೋ? ಆದರೆ ಈಗ ಭೂಹೀನ ದಲಿತರಿಗೆ ಭೂಮಿ ಕೊಡಿಸುವ, ಅತಂತ್ರ ಸ್ಥಿತಿಯಲಿರುವವರಿಗೆ ಜೀವನ ಭದ್ರತೆ ಒದಗಿಸುವ, ಬ್ಲಾಕ್ ಲಾಗ್ ಹುದ್ದೆಗಳನ್ನು ತುಂಬಿಸುವ ಮತ್ತು ಸಾಮಾನ್ಯ ದಲಿತ ಕುಟುಂಬಗಳ ಸಬಲೀಕರಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ರೂಪಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯದ ಎಲ್ಲಾ ದಲಿತ ನಾಯಕರು ಒಟ್ಟಾಗಿ ಒತ್ತಡ ಹೇರಿದರೆ ಸರಕಾರಕ್ಕೆ ಇಲ್ಲ ಎಂದು ಹೇಳುವ ಬಾಯಿ ಇರುವುದಿಲ್ಲ. ಇದರಿಂದ ರಾಜಕೀಯದಾಚೆಗೆ ನಿಜವಾದ ದಲಿತೋಭ್ಯುದಯ ಕೂಡ ಆಗುತ್ತದೆ. ಆದರೆ ರಾಜ್ಯದ ಯಾವ ದಲಿತ ನಾಯಕರಲ್ಲೂ ಅಂಥ ದೂರದೃಷ್ಟಿ ಕಾಣುತ್ತಿಲ್ಲ. ಅಂಥ ದೂರದೃಷ್ಟಿ ಇದ್ದಿದ್ದರೆ ಅಲೆಮಾರಿಗಳನ್ನು ಅನಾಥರನ್ನಾಗಲು ಬಿಡುತ್ತಿರಲಿಲ್ಲ.
ಇತರ ಜಾತಿಯ ರಾಜಕೀಯ ನಾಯಕರ ವಿಷಯಕ್ಕೆ ಬರುವುದಾದರೆ, ರಾಜ್ಯದಲ್ಲಿ ದಲಿತ ಸಿಎಂ ಆಗದೆ ಇರಲು ದಲಿತ ನಾಯಕತ್ವ ಎಷ್ಟು ಕಾರಣವೋ ಅಷ್ಟೇ ಪ್ರಮಾಣದಲ್ಲಿ ದಲಿತೇತರ ನಾಯಕರೂ ಕಾರಣ. ದಲಿತ ಮತಗಳಿಂದ ಗೆಲ್ಲುವ ದಲಿತರು ಮತ್ತು ದಲಿತೇತರ ನಾಯಕರು ಇತ್ತೀಚೆಗೆ ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಲ್ಲಲಿಲ್ಲ ಎನ್ನುವುದು ಬಹಳ ಸೂಕ್ತವಾದ ಉದಾಹರಣೆ. ದಲಿತನೊಬ್ಬ ಬೆಳೆಯುವ ಸುಳಿವು ನೀಡಿದರೆ ದಲಿತರು ಮತ್ತು ದಲಿತೇತರರು ಇಬ್ಬರೂ ಹೇಗೆ ನಡೆದುಕೊಳ್ಳುತ್ತಾರೆ? ಎನ್ನುವುದಕ್ಕೆ ಉದಾಹರಣೆ. ಇದು ‘ಅವರವರ (ಜಾತಿಯ) ರಾಜಕೀಯವನ್ನು ಅವರವರು ನೋಡಿಕೊಳ್ಳುತ್ತಾರೆ-ನೋಡಿಕೊಳ್ಳಬೇಕು’ ಎಂಬ ದೃಷ್ಟಿಕೋನದಿಂದ ವಿಶ್ಲೇಷಿಸುವ ಸಂಗತಿಯಲ್ಲ. ದಲಿತ ಮುಖ್ಯಮಂತ್ರಿಯೂ ಆಗಬೇಕು ಎನ್ನುವ ಭಾವನೆ ಮತ್ತು ಮನೋಸ್ಥಿತಿ ದಲಿತೇತರರಿಗೂ ಬರಬೇಕು.
ಕಡೆಯದಾಗಿ ಕಾಂಗ್ರೆಸ್ ಹೈಕಮಾಂಡ್ ಅಥವಾ ದಲಿತ ನಾಯಕರ ಹೊರತಾಗಿಯೂ ದಲಿತರೊಬ್ಬರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಸಮಚಿತ್ತ ಸಮಾಜದ ಆಶಯ ಆಗಬೇಕು. ಅರ್ಹತೆಯೊಂದಿದ್ದರೆ ದಲಿತನೂ ಮುಖ್ಯಮಂತ್ರಿಯಾಗಲಿ, ಅದಕ್ಕಾಗಿ ನಾವು ಮತ ನೀಡಲು ಸಿದ್ಧ ಎಂಬ ಔದಾರ್ಯವನ್ನು ತೋರಬೇಕು. ದಲಿತ ನಾಯಕತ್ವವನ್ನು ಒಪ್ಪಿಕೊಳ್ಳುವ ವಿಶಾಲ ಹೃದಯ ಇದ್ದಿದ್ದರೆ 2008ರ ವಿಧಾನಸಭಾ ಚುನಾವಣೆಯ ಫಲಿತಾಂಶ ಸ್ವಲ್ಪ ಭಿನ್ನವಾಗಿರುತ್ತಿತ್ತೇನೋ. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಮಲ್ಲಿಕಾರ್ಜುನ ಖರ್ಗೆ. ಕಾಂಗ್ರೆಸ್ ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಸಾಧ್ಯತೆ ದಟ್ಟವಾಗಿತ್ತು. ನಾಗರಿಕ ಸಮಾಜ ಅಥವಾ ಜನರ ಮನಃಪರಿವರ್ತನೆಯಾದರೆ ರಾಜಕೀಯ ನಾಯಕರೂ ಬದಲಾಗುತ್ತಾರೆ. ಅಂತಿಮವಾಗಿ ಇದು ‘ಪ್ರಜಾ’ಪ್ರಭುತ್ವ.
ಒಂದು ಔತಣಕೂಟ ಮಾಡಲು, ಸಮಾವೇಶ ನಡೆಸಲು, ಸಹದ್ಯೋಗಿಯೊಬ್ಬನಿಗೆ ಸಹಕಾರ ನೀಡಲು ಏದುಸಿರು ಬಿಡುತ್ತಿರುವ ಡಾ. ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಈಗ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ನಿಜಕ್ಕೂ ಇವರಿಗೆ ‘ಯಾರಾದರೂ ಸರಿ ನಮ್ಮೊಳಗೊಬ್ಬ ಮುಖ್ಯಮಂತ್ರಿಯಾದರೆ ಸಾಕು’ ಎಂಬ ಉದಾತ್ತತೆ ಇದೆಯಾ? ‘ನಾನೇ ಆಗಬೇಕು’ (ಈಗಲ್ಲದಿದ್ದರೂ) ಎಂಬ ಉದ್ದೇಶ ಇದೆಯಾ? ಅಥವಾ ‘ಸಿದ್ದರಾಮಯ್ಯ ನೆರಳಲ್ಲಿ ನಾವು ತಂಪಾಗಿದ್ದರೆ ಅಷ್ಟೇ ಸಾಕು’ ಎನ್ನುವ ಲೆಕ್ಕಾಚಾರ ಇದೆಯಾ? ಯಾರೂ ಉತ್ತರಿಸುವುದಿಲ್ಲ ಎಂದ ಮಾತ್ರಕ್ಕೆ ಉತ್ತರವೇ ಇಲ್ಲ ಎಂದು ಅರ್ಥವಲ್ಲ!
ಸಿದ್ದರಾಮಯ್ಯ ಏನು ಹೇಳಿದ್ದಾರೆ?
ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿರುವುದರಿಂದ ಬೇಸತ್ತಿದ್ದ ಕೆಲ ಸಚಿವರು ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ‘ಧಮಕಿ’ ಹಾಕಿದ್ದಾರೆ. ‘ನಿಮ್ಮ ಸಂತೆ ಮುಗಿಯುತ್ತದೆ, ನಮ್ಮ ಕತೆ ಏನು? ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಏನು ಮಾತುಕತೆ ನಡೆದಿದೆ? ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಸಿ. ನೀವು ಇವತ್ತು ಉತ್ತರಿಸಲೇಬೇಕು’ ಎಂದು ಮೂರ್ನಾಲ್ಕು ಆಪ್ತ ಸಚಿವರು ಅಧಿಕಾರಯುತವಾಗಿ ಕೇಳಿದ್ದಾರೆ. ಸಿದ್ದರಾಮಯ್ಯ ಕಡೆಯಿಂದ ‘ನನಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಥವಾ ಕೆ.ಸಿ. ವೇಣುಗೋಪಾಲ್ ಪೈಕಿ ಯಾರೊಬ್ಬರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು (ಎರಡೂವರೆ ವರ್ಷದ ಬಳಿಕ) ಎಂದು ಹೇಳಿಲ್ಲ. ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ನೀವು ಅದನ್ನು ಗೌರವಿಸಬೇಕಾಗುತ್ತದೆ ಎಂದಿದ್ದಾರಷ್ಟೇ’ ಎಂಬ ಉತ್ತರ ಬಂದಿದೆ.
ಅಷ್ಟಕ್ಕೆ ಆಪ್ತರ ಆತಂಕ ಕೊನೆಯಾಗಿಲ್ಲ. ‘ಹಾಗಾದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದರೆ ಬಿಟ್ಟುಕೊಡುತ್ತೀರಾ? ನಮ್ಮ ಕತೆ ಏನು?’ ಎಂದು ಕೇಳಿದ್ದಾರೆ. ಸಿದ್ದರಾಮಯ್ಯ ‘ಹೈಕಮಾಂಡ್ ನನ್ನ ಪರವಾಗಿದೆ. ನನಗೆ ಅವಕಾಶ ಕೊಟ್ಟಿದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಖಂಡಿತಾ ಬಿಟ್ಟುಕೊಡುವೆ.
ಆದರೆ ದಲಿತ ಮುಖ್ಯಮಂತ್ರಿ ಮಾಡಿ ಎಂದು ತಿಳಿಸುವೆ’ ಎಂದಿದ್ದಾರೆ. ಇದರಿಂದಾಗಿ ಕೆಲವರಿಗೆ ‘ದಲಿತ ಮುಖ್ಯಮಂತ್ರಿ’ ಆಸೆ ಮೂಡಿದೆ. ‘ಜೊತೆಯಲ್ಲಿರುವವರೂ’
ಕೂಡ ‘ಸಿದ್ದರಾಮಯ್ಯ ಹೋದರೆ ಒಳ್ಳೆಯದು, ನಮಗೆ ಅವಕಾಶ ಬರಬಹುದು’ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದನ್ನೇ ರಾಜಕೀಯ ಎನ್ನುವುದು.
ಅವರ ಹೆಗಲ ಮೇಲೆ ಇವರು, ಇವರ ಹೆಗಲ ಮೇಲೆ ಅವರು ಬಂದೂಕು ಇಟ್ಟು ಗುರಿಕಟ್ಟುತ್ತಿದ್ದಾರೆ.
ಆಫ್ ದಿ ರೆಕಾರ್ಡ್!
ಕಾಂಗ್ರೆಸ್ ಪಕ್ಷದ ‘ಚನ್ನಗಿರು’ವ ಶಾಸಕರೊಬ್ಬರು ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕು ಎಂದು ಖಡಕ್ ಆಗಿ ಮಾತನಾಡುತ್ತಿದ್ದರು. ಆದರೆ ಈಗ ಗರಬಡಿದಂತವರಾಗಿದ್ದಾರೆ. ಅವರೀಗ ಅಡ್ರೆಸ್ಸಿಗೇ ಇಲ್ಲ. ಏಕೆಂದರೆ ಮೊನ್ನೆ ಮೊನ್ನೆ ಜೂಜಾಟದಲ್ಲಿ 25 ಕೋಟಿ ಕಳೆದುಕೊಂಡಿದ್ದಾರಂತೆ. ಒಬ್ಬರು ಆಡಿಸಿ ಜೈಲಿಗೆ ಹೋಗಿದ್ದಾರೆ. ಇನ್ನೊಬ್ಬರು ಜೂಜಾಡಿ ದುಡ್ಡು ಕಳೆದುಕೊಂಡು ಕಂಗಾಲಾಗಿದ್ದಾರೆ ಎಂದು ಕುಹಕವಾಡುತ್ತಿರುವವರು ಕಾಂಗ್ರೆಸ್ ಪಕ್ಷದವರೇ.







