ಕಾಕ್ರೋಚ್ ಆಗಬೇಕಿರುವವರು ಯಾರು?

ತಿಗಣೆ, ಸೊಳ್ಳೆ ಮತ್ತು ನೊಣಗಳಂತೆ ಕ್ಷುದ್ರ ಜೀವಿಯಾಗಿದ್ದ ಜಿರಳೆಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ‘ರಾಷ್ಟ್ರೀಯ ಸ್ಥಾನಮಾನ’ ತಂದುಕೊಟ್ಟಿದ್ದಾರೆ. ಇಂಗ್ಲಿಷ್‌ನ ಕಾಕ್ರೋಚ್ ಈಗ ಕನ್ನಡದ ಜಿರಳೆ ಮಾತ್ರವಲ್ಲ; ಅದು ನಮ್ಮ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳ ವಿರುದ್ಧ ಇರುವ ಆಕ್ರೋಶದ ಸಂಕೇತ. ಬದಲಾವಣೆ ಬೇಕು ಎಂಬ ಬಯಕೆಯ ಸಂಕೇತ.
ಈ ಡಿಜಿಟಲ್ ಅಭಿಯಾನವನ್ನು ಜೆನ್ ಜೀಗಳ ಚೀರಾಟ ಎಂದು ಕರೆಯಲಾಗುತ್ತಿದೆ. ಹೀಗೆ ಸಾಗಿದರೆ ಮುಂದೊಂದು ದಿನ ಕಾಕ್ರೋಚ್ ಕ್ರಾಂತಿಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಸಾಧ್ಯವಾಗದ ಮಾತು. ಅದರಲ್ಲೂ ಹಲವು ಬಗೆಯ ಗೊಂದಲದಲ್ಲಿ ಸಿಲುಕಿಕೊಂಡಿರುವ ಜೆನ್ ಜಿಗಳಿಂದಲಂತೂ ಸಾಧ್ಯವೇ ಇಲ್ಲದ ಸಂಗತಿ. ಕಿಡಿ ಹೊತ್ತಿಕೊಂಡಿದೆ ಎಂದ ಮಾತ್ರಕ್ಕೆ ಸ್ಫೋಟವಾಗುತ್ತದೆ ಎಂದು ಹೇಳಲಾಗದು. ಜೆನ್ ಜಿಗಳು ಮಾತ್ರವಲ್ಲ, ವ್ಯವಸ್ಥೆಯ ವಿರುದ್ಧ ಅಸಮಾಧಾನ ಇರುವ ‘ಇನ್ನೂ ಕೆಲವರು’ ಹೆಮ್ಮೆಯಿಂದ ‘ನಾನೂ ಜಿರಳೆ’ ಎಂದು ಹೇಳಿಕೊಳ್ಳುತ್ತಿದ್ದಾರೆ. ನಿಜಕ್ಕೂ ಬದಲಾವಣೆ ಆಗಬೇಕಾದರೆ ಜಿರಳೆಗಳಾಗಿ ಬದಲಾಗಬೇಕಾದವರು ಮಧ್ಯಮ ವರ್ಗದವರು.
ಮಧ್ಯಮ ವರ್ಗ ಒಂದು ರೀತಿಯಲ್ಲಿ ಬಡವರ ಪಾಲಿಗೆ ಮಾಲಕ, ಶ್ರೀಮಂತರ ಪಾಲಿಗೆ ಗ್ರಾಹಕ. ಅದರಿಂದಾಗಿ ವ್ಯವಸ್ಥೆಯ ಮೇಲೆ ಬಡವರು ಮತ್ತು ಶ್ರೀಮಂತರಿ
ಗಿಂತಲೂ ಹೆಚ್ಚು ಪ್ರಭಾವವನ್ನು ಬೀರಬಲ್ಲಂತಹ ಸಾಮರ್ಥ್ಯ ಹೊಂದಿರುವುದೇ ಮಧ್ಯಮ ವರ್ಗ. ಜಗತ್ತಿನ ಹಲವು ಮಹತ್ವದ ಬದಲಾವಣೆಗಳಿಗೆ ಮುನ್ನುಡಿ ಬರೆದಿರುವುದು ಕೂಡ ಮಧ್ಯಮ ವರ್ಗವೇ. ಅದಕ್ಕಿಂತ ಮುಖ್ಯವಾಗಿ ಈಗಿರುವ ವ್ಯವಸ್ಥೆಯೇ ಮಧ್ಯಮ ವರ್ಗದ ಕೊಡುಗೆ. ತಾನೇ ಪೋಷಿಸಿದ ದೋಷಪೂರಿತ ವ್ಯವಸ್ಥೆಯೊಂದನ್ನು ಬದಲಿಸಬೇಕಾದುದು ಕೂಡ ಅದೇ ಮಧ್ಯಮ ವರ್ಗದ ಜವಾಬ್ದಾರಿ.
ಆದರೆ ಮಧ್ಯಮ ವರ್ಗ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರಲ್ಲಿ ನಿಸ್ಸೀಮ. ಅಷ್ಟು ಜವಾಬ್ದಾರಿ ಇದ್ದರೆ ಹತ್ತು ದಿನಗಳ ಅಂತರದಲ್ಲಿ ಮೂರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೂ ಬಾಯಿ ಮುಚ್ಚಿ ಕೊಂಡು ಸುಮ್ಮನಿರುತ್ತಿರಲಿಲ್ಲ. ಪ್ರಧಾನ ಸೇವಕ ಎಂದು ಕರೆದುಕೊಂಡ ವ್ಯಕ್ತಿ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿದಾಗ ಸಹಿಸಿಕೊಳ್ಳುತ್ತಿರಲಿಲ್ಲ. ಅನ್ನ ನೀಡುವ ರೈತರು ಚಳಿ-ಬಿಸಿಲೆನ್ನದೆ ಚಳವಳಿ ನಡೆಸುತ್ತಿದ್ದಾಗ ತಳಮಳಗೊಳ್ಳದೆ ಇರುತ್ತಿರಲಿಲ್ಲ. ಮುಖ್ಯ ನ್ಯಾಯಮೂರ್ತಿಗೆ ಚಪ್ಪಲಿ ತೂರಿದಾಗ ಕೈ ಕಟ್ಟಿ ಕೂರುತ್ತಿರಲಿಲ್ಲ. ನೀಟ್ ಪರೀಕ್ಷೆಯಲ್ಲಿ ಭವಿಷ್ಯ ಹುಡುಕುತ್ತಿದ್ದ ಲಕ್ಷಾಂತರ ಯುವಕರ ಕನಸು ಛಿದ್ರ ಛಿದ್ರವಾದಾಗ ವಿಚಲಿತರಾಗದೆ ಇರುತ್ತಿರಲಿಲ್ಲ. ಇದೇ ನೆಲದಲ್ಲಿ ಹುಟ್ಟಿ-ಬೆಳೆದ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವ ಮೂಲಕ ಕಣ್ಣೆದುರೇ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದ್ದರೂ ತೆಪ್ಪಗಿರುತ್ತಿರಲಿಲ್ಲ. ಮುಸ್ಲಿಮ್ ಎಂಬ ಏಕೈಕ ಕಾರಣಕ್ಕೆ ನೆರೆ ಮನೆಯವನನ್ನು ದ್ವೇಷ ಮಾಡುತ್ತಿರಲಿಲ್ಲ.
ಅಷ್ಟೇಯಲ್ಲ, ಮಧ್ಯಮ ವರ್ಗಕ್ಕೆ ನಿಯತ್ತು ಕೂಡ ಇಲ್ಲ. ನಿಯತ್ತಿದ್ದರೆ ಮೀಸಲಾತಿಯ ಫಲ ಉಣ್ಣುತ್ತಾ ಮೀಸಲಾತಿಯ ವಿರುದ್ಧ ಮಸಲತ್ತು ನಡೆಸುವವರ ಆಟಕ್ಕೆ ದಾಳವಾಗುತ್ತಿರಲಿಲ್ಲ. ಇಡೀ ಜಗತ್ತೇ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾಗ ಜನಸಂಖ್ಯೆಯ ಭಾರದ ನಡುವೆಯೂ ಭಾರತವನ್ನು ಕಾಪಾಡಿದ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳೆಂಬ ತ್ರಿಕರಣಗಳನ್ನು ಹದವಾಗಿ ಬೆಸೆದು ಎಲ್ಲರಿಗಿಂತ ಮುಖ್ಯವಾಗಿ ಮಧ್ಯಮ ವರ್ಗದವರನ್ನು ಕೈಹಿಡಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ‘ಮೌನಿ ಬಾಬಾ’ ಎಂದು ಜರಿಯುತ್ತಿರಲಿಲ್ಲ.
ಆಧುನಿಕ ಭಾರತಕ್ಕೆ ಪಿ.ವಿ. ನರಸಿಂಹರಾವ್, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಕೊಡುಗೆ ಕಮ್ಮಿಯಲ್ಲ. ಉನ್ನತವಾದ ವ್ಯವಸ್ಥೆಯನ್ನು ಬಯಸುವುದು ತಪ್ಪಲ್ಲ. ಹೊಸತನ್ನು ಅಪೇಕ್ಷಿಸುವುದು ಅಪರಾಧವಲ್ಲ. ಹಾಗಂತ ಉಂಡ ತಟ್ಟೆಗೆ ಉಗಿಯುವುದು ಶೋಭೆಯಲ್ಲ. ಆದರೆ ಮಧ್ಯಮ ವರ್ಗ ಮಾಡಿದ್ದು ಅದನ್ನೇ; ಆ ವ್ಯವಸ್ಥೆಯನ್ನು ಬದಲಿಸಿ ಈ ವ್ಯವಸ್ಥೆಯನ್ನು ತಂದದ್ದು. ಬಿತ್ತಿದ್ದನ್ನು ಉಣ್ಣುತ್ತಿರುವ ಮಧ್ಯಮ ವರ್ಗ ಈಗ ಈ ವ್ಯವಸ್ಥೆಯನ್ನು ಬದಲಿಸಿ ಮತ್ತೊಂದು ವ್ಯವಸ್ಥೆಯನ್ನು (ಉತ್ತಮವಾದ) ತರಬೇಕು ಎಂದಾದರೆ ಮೊದಲು ಜಿರಳೆಯಾಗಬೇಕು. ಬದಲಾವಣೆಯ ಕೂಗಿಗೆ ಜೊತೆಯಾಗಬೇಕು.
ಜೆನ್ ಜೀಗಳ ಬಗ್ಗೆ?
ನೇಪಾಳದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಆಯಿತು. ಪಕ್ಕದ ತಮಿಳುನಾಡಿನಲ್ಲಿ ಸದ್ದಿಲ್ಲದೆ ಬದಲಾವಣೆಯಾಯಿತು. ಇದಕ್ಕೆ ಜೆನ್ ಜೀಗಳು ಕಾರಣ ಎನ್ನಲಾಗುತ್ತಿದೆ. ಆದರೆ ಇಂಥ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಜೆನ್ ಜೀಗಳು ಮಾತ್ರವೇ ಕಾರಣವಲ್ಲ. ನೇಪಾಳದಲ್ಲಾದ ಬದಲಾವಣೆಗೆ ಅಲ್ಲಿನ ಪ್ರಬಲ ಸಮುದಾಯಗಳ ವಿರುದ್ಧ ದಮನಿತರು ಸಿಡಿದೆದ್ದದ್ದು ಪ್ರಮುಖ ಕಾರಣ. ತಮಿಳುನಾಡಿನಲ್ಲಿ ಯುವಕರು ಮಾತ್ರವಲ್ಲ, ಎಲ್ಲಾ ವರ್ಗದ ಜನರೂ 60 ವರ್ಷಗಳ ವ್ಯವಸ್ಥೆ ಬದಲಾಗಬೇಕು ಎಂದು ಬಯಸಿದ್ದರಿಂದ ಹೊಸ ವ್ಯವಸ್ಥೆಯೊಂದು ಮೊಳಕೆಯೊಡೆಯಲು ಸಾಧ್ಯವಾಯಿತು. ಕೆಲವು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷದ ವಿಷಯದಲ್ಲೂ ಹೀಗೆ ಆಗಿತ್ತು. ಹೆಚ್ಚಿನ ಸಂಖ್ಯೆಯ ಯುವಕರು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದರೂ ಹೆಸರೇ ಹೇಳುವಂತೆ ಜನಸಾಮಾನ್ಯರ ಪಕ್ಷ ಎನಿಸಿದ್ದರಿಂದ, ಜನಕ್ಕೆ ಹೊಸದೊಂದು ಬೇಕು ಎನಿಸಿದ್ದರಿಂದ ಆಮ್ ಆದ್ಮಿ ಪಕ್ಷ ದಿಲ್ಲಿಯಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಲು ಸಾಧ್ಯವಾಯಿತು. ಆದರೀಗ ಗುರಿ ಬಗ್ಗೆ ಅಸ್ಪಷ್ಟತೆ ಇದ್ದ ಕಾರಣಕ್ಕೆ ನೇಪಾಳದಲ್ಲಿ ವ್ಯವಸ್ಥೆ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ ಎನ್ನುವಂತಾಗಿದೆ. ತಮಿಳುನಾಡಿನ ಬೆಳವಣಿಗೆಯನ್ನು ಈಗಲೇ ನಿರ್ಧರಿಸುವುದು ಅಪಚಾರವಾಗುತ್ತದೆ. ಆಮ್ ಆದ್ಮಿ ಪಕ್ಷದ ಹುಟ್ಟು, ಬೆಳವಣಿಗೆ ಮತ್ತು ಅವನತಿಯನ್ನು ಅವಲೋಕಿಸಿದರೆ ಸಿದ್ಧಾಂತದ ನೆಲೆ ಇಲ್ಲದ ಹೋರಾಟ ಮತ್ತು ರಾಜಕೀಯ ಎಷ್ಟು ಅಪಾಯಕಾರಿ ಎನ್ನುವುದು ಸುಲಭದಲ್ಲಿ ಮನದಟ್ಟಾಗುತ್ತದೆ.
ಜೆನ್ ಜೀಗಳ ಮತ್ತೊಂದು ಸಮಸ್ಯೆ ಎಂದರೆ ದಾರಿ ಮತ್ತು ಗುರಿ ಎರಡರ ಬಗೆಗೂ ಅವರಿಗೆ ಸ್ಪಷ್ಟತೆ ಇಲ್ಲ. ಅವರಿಗೆ ಉದ್ಯೋಗ ಬೇಕು. ಉದ್ಯೋಗ ಭದ್ರತೆ ಬೇಕು. ಆದರವರು ಸಾರ್ವಜನಿಕ ವಲಯವನ್ನು ಒಪ್ಪಿಕೊಳ್ಳುವುದಿಲ್ಲ. ಸಾರ್ವಜನಿಕ ವಲಯದ ಉದ್ಯಮಗಳನ್ನು ಸಾಕುವ ಸಾಮರ್ಥ್ಯ ಈಗ ಸರಕಾರಗಳಿಗೂ ಇಲ್ಲ. ಉದ್ಯೋಗದ ದೃಷ್ಟಿಯಿಂದ ಜೆನ್ ಜೀಗಳು ಕಾರ್ಪೊರೇಟ್ ವಲಯವನ್ನು ಬೆಂಬಲಿಸುತ್ತಾರೆ. ಆದರೆ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಸರಕಾರಗಳನ್ನು ವಿರೋಧಿಸುತ್ತಾರೆ. ಬೇಗ ಓದಿ, ಬೇಗ ಕೆಲಸಕ್ಕೆ ಸೇರಿ, ಬೇಗ ದುಡಿದು, ಬೇಗ ವಿರಮಿಸಿಕೊಳ್ಳಬೇಕು ಎಂದು ಅಪೇಕ್ಷಿಸುತ್ತಾರೆ. ಸೂಕ್ತ ಓದು, ಓದಿಗೆ ತಕ್ಕ ಕೌಶಲ್ಯ, ಕಲಿಯಲು ಬೇಕಿರುವ ತಾಳ್ಮೆಗಳ ಕೊರತೆಯಿಂದ ದುಡಿಯಲು ಶುರುಮಾಡುವ ಮುನ್ನವೇ ದಣಿದಿರುತ್ತಾರೆ.
ಅವರು ನೊಂದವರು. ನೊಂದವರನ್ನು ಸಂತೈಸಬೇಕಾದ ನ್ಯಾಯಮೂರ್ತಿಗಳೇ ಜಿರಳೆಗಳೆಂದು ಮೂದಲಿಸಿದ್ದರಿಂದ ಸಿಡಿದೆದ್ದಿರುವುದು ಸಹಜ. ಆದರೆ ಈ ಕಿಡಿ, ಬೆಂಕಿಯಾಗಲು, ಭುಗಿಲೇಳಲು ಇನ್ನು ಕಾಯಬೇಕು. ಹಾಗೆಯೇ ಅವರು ವ್ಯವಸ್ಥೆ ಬದಲಾಗಬೇಕೆಂದು ಬಯಸುವುದು ಕೂಡ ಸಹಜ. ಆದರೆ ಅದು ಅವರಿಂದ ಮಾತ್ರ ಸಾಧ್ಯವಿಲ್ಲ. ಅದು ಸಾಧ್ಯವಾಗುವುದು ಮಧ್ಯಮ ವರ್ಗವೆಂಬ ಜಿರಳೆಗಳು ಜೊತೆಗೂಡಿದಾಗ.
ರಾಜಕಾರಣಿಗಳಿಗೂ ಪಾಠ!
ದಪ್ಪಚರ್ಮದ ನಮ್ಮ ರಾಜಕಾರಣಿಗಳು ತಿಗಣೆ, ಸೊಳ್ಳೆ ಮತ್ತು ನೊಣಗಳಂತೆ ಜಿರಳೆ ಕಾಡುವ ಕೀಟ ಅಲ್ಲ ಎಂದು ಉಪೇಕ್ಷೆ ಮಾಡಬಹುದು. ಆದರೆ ಕಡಿಯದಿದ್ದರೂ, ಕಾಡದಿದ್ದರೂ ಅಥವಾ ಭಯ ಹುಟ್ಟಿಸದಿದ್ದರೂ ಜಿರಳೆ ಮನೆಯಲ್ಲಿದ್ದರೆ ಅದೇನೋ ಒಂಥರಾ ಕಿರಿಕಿರಿ ಎನ್ನುವುದನ್ನು ಮರೆಯಬಾರದು. ಬೆರಳೆಣಿಕೆಯಲ್ಲಿ ಇದ್ದಾಗಲೇ ಗಮನಹರಿಸದಿದ್ದರೆ ನೋಡನೋಡುತ್ತಿದ್ದಂತೆ ಮನೆ ತುಂಬಾ ಕಾಣಿಸಿಕೊಳ್ಳುತ್ತವೆ ಎನ್ನುವ ಸಂಗತಿಯನ್ನು ಕಡೆಗಣಿಸಬಾರದು. ಇದರ ಅರ್ಥ ಜಿರಳೆಗಳನ್ನು ಹೊಸಕಿ ಹಾಕಬೇಕು ಎಂದಲ್ಲ. ಪ್ರಶ್ನೆ ಕೇಳುವವರ ಬಾಯಿ ಮುಚ್ಚಿಸುವುದು ಎಂದಲ್ಲ. ಕಾಕ್ರೋಚ್ ಜನತಾ ಪಾರ್ಟಿಯ ಇನ್‌ಸ್ಟಾಗ್ರಾಮ್ ಮತ್ತು ಖಾತೆಗಳನ್ನು ನಿರ್ಬಂಧಿಸುವುದಲ್ಲ. ಅದರ ಸ್ಥಾಪಕನಿಗೆ ಜೀವ ಬೆದರಿಕೆ ಹಾಕುವುದಲ್ಲ. ಜಿರಳೆಗಳು ಹುಟ್ಟಿಕೊಳ್ಳಲು ಕಾರಣಗಳು ಏನು ಎಂಬುದನ್ನು ಹುಡುಕಬೇಕು, ಅರ್ಥಮಾಡಿಕೊಳ್ಳಬೇಕು. ಮುಖ್ಯವಾಗಿ ಆಳುವವರು ಅರ್ಥಮಾಡಿಕೊಳ್ಳಬೇಕು.
ಕಾಕ್ರೋಚ್ ಪಾರ್ಟಿಯ ಗೆಲುವಿನಲ್ಲಿ ಪ್ರತಿಪಕ್ಷಗಳ ಸೋಲಿದೆ. ಜನರಲ್ಲಿ ವ್ಯವಸ್ಥೆಯ ವಿರುದ್ಧ ಇಷ್ಟು ದೊಡ್ಡ ಮಟ್ಟದ ನಿರಾಸೆ, ಹತಾಶೆ, ಆಕ್ರೋಶ ಇದೆ ಎನ್ನುವುದನ್ನು ಜಿರಳೆಗಳು ಬಹಳ ಸ್ಪಷ್ಟವಾಗಿ ತಿಳಿಸಿಕೊಟ್ಟಿವೆ. ಈಗಿರುವ ಸರಕಾರ ಮತ್ತು ಪಕ್ಷ ಸರಿಯಿಲ್ಲ ಎಂದ ಮಾತ್ರಕ್ಕೆ ಬೇರೊಂದು ಪಕ್ಷದ ಸರಕಾರವನ್ನು ನಿರೀಕ್ಷೆ ಮಾಡುತ್ತಿವೆ ಎಂದು ಅರ್ಥವಲ್ಲ, ಬದಲಾಗಬೇಕಾಗಿರುವುದು ಪಕ್ಷವಲ್ಲ, ಸರಕಾರವಲ್ಲ; ವ್ಯವಸ್ಥೆ ಎಂಬ ಸಂದೇಶವನ್ನು ಕೊಟ್ಟಿವೆ. ಅದರಿಂದಾಗಿ ಪ್ರತಿಪಕ್ಷಗಳು ಕೊಟ್ಟ ಕೆರೆಗಳಿಗೆ ಓಗೊಡದೆ ಪ್ರತ್ಯೇಕವಾದ ಚಳವಳಿಗೆ ಮೈಚಳಿ ಬಿಟ್ಟು ಹೊರಬಂದಿವೆ. ಪ್ರತಿಪಕ್ಷಗಳು ಕೂಡ ಜಿರಳೆಗಳ ನಿರೀಕ್ಷೆ ಏನು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
ಪತ್ರಕರ್ತರಿಗೆ ಜಿರಳೆಗಳೇ ಮಾದರಿ!
ಮಧ್ಯಮ ವರ್ಗ ಮಾತ್ರವಲ್ಲ, ಮಾಧ್ಯಮದವರೂ ಜಿರಳೆಗಳಾಗಬೇಕು. ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಪತ್ರಕರ್ತರು ಎಂದೂ ಸಾಯದ ಜಿರಳೆಗಳಾಗಬೇಕು. ಅಣುಬಾಂಬ್ ದಾಳಿಯಲ್ಲಿ ಎಲ್ಲರೂ ಸತ್ತರೂ ಪತ್ರಕರ್ತರು ಜಿರಳೆಗಳಂತೆ ಬದುಕುಳಿದು ಬಾಂಬ್ ದಾಳಿಯ ಬಗ್ಗೆ ಜಗತ್ತಿಗೆ ವರದಿ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಹೌದು, ಪತ್ರಕರ್ತರು ಸಾಯಬಾರದು. ಈಗ ಮೊದಲಿನಷ್ಟು ಸ್ವಾತಂತ್ರ್ಯ ಇಲ್ಲದಿರಬಹುದು. ಸ್ವಾತಂತ್ರ್ಯ ಇಲ್ಲದ ಕಾರಣಕ್ಕೆ ಧೈರ್ಯ ಇಲ್ಲದಿರಬಹುದು. ಹಾಗಂತ ಪತ್ರಕರ್ತನಿಗೆ ಸಾಯುವ ಭಯ ಕಾಡಬಾರದು. ಪತ್ರಕರ್ತರಿಗೆ ಈಗ ಜಿರಳೆಗಳೇ ಮಾದರಿ. ನಾನಾ ರೀತಿಯ ಕೀಟನಾಶಕ ಸಿಂಪಡಿಸಿ ಇನ್ನು ಇದರ ಸಂತತಿ ನಾಶವಾಯಿತು ಎಂದು ನೆಮ್ಮದಿಯಿಂದಿರುವಾಗ ಜಿರಳೆಯೊಂದು ಮೆಲ್ಲನೆ ಇಣುಕಿ ನೋಡುತ್ತಿರುತ್ತದೆ. ಇದು ಮನೆಮನೆಯ ಕತೆ. ಪತ್ರಕರ್ತನ ಮೇಲೂ ನಾನಾ ರೀತಿಯ ಕೀಟನಾಶಕಗಳನ್ನು ಸುರಿಯಲಾಗುತ್ತದೆ. ವಿಷಘಳಿಗೆಯಲ್ಲಿ ವಿಚಲಿತನಾಗದೆ ಕೆಲ ಸಮಯದ ಬಳಿಕ ಮೆಲ್ಲನೆ ಇಣುಕಿ ನೋಡಬೇಕು. ಇಂತಹ ಜಿರಳೆಯಂಥ ಪತ್ರಕರ್ತರ ಸಂಖ್ಯೆ ಹೆಚ್ಚಾದರೆ ಮುಂದೊಂದು ದಿನ ಕಾಕ್ರೋಚ್ ಕ್ರಾಂತಿಗೆ ಒಂದಷ್ಟು ಕೊಡುಗೆ ನೀಡಬಹುದು.
ಆಫ್ ದಿ ರೆಕಾರ್ಡ್!
ಕಾಕ್ರೋಚ್ ಜನತಾ ಪಾರ್ಟಿ ದೇಶಾದ್ಯಂತ ಸಂಚಲನ ಮೂಡಿಸಿರುವುದರ ನಡುವೆಯೂ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗುತ್ತಾ? ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುತ್ತಾ? ಎಚ್.ಡಿ. ದೇವೇಗೌಡ ಈ ಇಳಿವಯಸ್ಸಿನಲ್ಲಿ ಮತ್ತೊಮ್ಮೆ ರಾಜ್ಯಸಭೆಗೆ ಹೋಗಬೇಕಾ? ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಪೈಕಿ ಯಾರು ಸರಿ? ಎಂಬ ಚರ್ಚೆಯಾಗುತ್ತಿದೆ. ಇವುಗಳ ಬಗ್ಗೆ ಕೂಡ ಜಿರಳೆಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ.






