ಸಿದ್ದು ಬಾಣ ಬಿಟ್ಟಿದ್ದೇಕೆ? ಎಚ್‌ಡಿಕೆ ಸಾಧಿಸಿದ್ದೇನು?

ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ಸ್ಟಿಂಗ್ (ಕುಟುಕು ಕಾರ್ಯಾಚರಣೆ) ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡಿದ್ದರೂ ಸಿದ್ದರಾಮಯ್ಯ ಮೌನವಾಗಿದ್ದರು. ಮೌನ ಅವರ ಮೇಲೂ ಅನುಮಾನ ಮೂಡಿಸಿತ್ತು. ಸರಕಾರದ ಮೇಲೂ ಅನುಮಾನದ ಗೆರೆ ಎಳೆದಿತ್ತು. ಈಗ ಅವರು ಬಾಯಿ ಬಿಟ್ಟು ಸರಕಾರದ ಮೇಲೆ ಬಾಣ ಹೂಡಿದ್ದಾರೆ.
ಸಿದ್ದರಾಮಯ್ಯ ಮತ್ತು ಈ ಸ್ಟಿಂಗ್ ಪ್ರಕರಣ ಭಿನ್ನ. ಹೇಗೆಂದರೆ, 2006ರಿಂದ ಈಚೆಗೆ ಸ್ಟಿಂಗ್, ಸೀಡಿ, ಪೆನ್ ಡ್ರೈವ್ ಮತ್ತು ಹನಿಟ್ರ್ಯಾಪ್ ಪ್ರಕರಣಗಳು ನಿರಂತರವಾಗಿ ರಾಜ್ಯ ರಾಜಕಾರಣದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಕರ್ನಾಟಕವನ್ನು ಸೀಡಿ ಮತ್ತು ಪೆನ್ ಡ್ರೈವ್ ಕಾರ್ಖಾನೆ ಎಂದು ಕರೆಯಲಾಗುತ್ತಿದೆ ಎನ್ನುವ ಕಳವಳ ರಾಜ್ಯ ವಿಧಾನಸಭೆಯಲ್ಲೇ ವ್ಯಕ್ತವಾಗಿತ್ತು. ಹಾಗೆ ಹೇಳಿದ್ದವರು ಮಾಜಿ ಸಚಿವ ಕೆ.ಎನ್. ರಾಜಣ್ಣ. ಆಗ ಅವರು ಮಾಜಿ ಆಗಿರಲಿಲ್ಲ. ಅವರು ಇನ್ನೂ ಒಂದು ವಿಷಯ ಹೇಳಿದ್ದರು. ತಮ್ಮನ್ನು ಸೇರಿ 48 ಜನರ ವಿರುದ್ಧ ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಲಾಗಿದೆ ಎಂದಿದ್ದರು. ಇದಲ್ಲದೆ 30ರಿಂದ 40 ರಾಜಕಾರಣಿಗಳು (ಬಹುತೇಕ ಬಿಜೆಪಿಯವರು) ತಮ್ಮ ಸ್ಟಿಂಗ್, ಸೀಡಿ ಮತ್ತು ಹನಿಟ್ರ್ಯಾಪ್ ಪ್ರಕರಣಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದೆಂದು ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಆದರೆ ಯಾರೊಬ್ಬರೂ ತಮ್ಮನ್ನು ಖೆಡ್ಡಾಕ್ಕೆ ಕೆಡವಲು ಪ್ರಯತ್ನಿಸಿದವರು ಯಾರು? ಮತ್ತು ಏಕೆ? ಎಂದು ತಿಳಿಯಲು ದೂರು ನೀಡುವ ಧೈರ್ಯ ಮಾಡಿಲ್ಲ. ಸಿದ್ದರಾಮಯ್ಯ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ನೀಡಿರುವ ದೂರು ಕೂಡ ಅವರ ಮೌನದಂತೆ, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅವರದೇ ಪಕ್ಷದ ಸರಕಾರ ಇರುವುದರಿಂದ ಒಂದೇ ಒಂದು ಫೋನ್ ಕರೆಯಲ್ಲಿ ವೀಡಿಯೊವನ್ನು ತೆಗೆಸಬಹುದಿತ್ತು. ಸಂಚು ರೂಪಿಸಿದ ಸೂತ್ರಧಾರಿಯಿಂದ ಹಿಡಿದು ಪಾತ್ರಧಾರಿಗಳವರೆಗೆ ಪ್ರಕರಣದಲ್ಲಿ ಭಾಗಿಯಾದವರೆಲ್ಲರನ್ನೂ ಪತ್ತೆ ಹಚ್ಚಬಹುದಿತ್ತು. ಬೇಕಿದ್ದರೆ ಪ್ರತೀಕಾರವನ್ನು ತೀರಿಸಿಕೊಳ್ಳಬಹುದಿತ್ತು. ಆದರೆ ಸಿದ್ದರಾಮಯ್ಯ ಇದ್ಯಾವುದನ್ನು ಮಾಡದೆ, ದೂರು ನೀಡಿದ್ದಾರೆ.
ಸಿದ್ದರಾಮಯ್ಯಗೆ ತಮ್ಮದೇ ಪಕ್ಷದ ಸರಕಾರದ ಮೇಲೆ ವಿಶ್ವಾಸ ಇರಲಿಲ್ಲವೇ? ಏಕೆ ವಿಶ್ವಾಸ ಇರಲಿಲ್ಲ? ಅದರಿಂದಾಗಿಯೇ ನ್ಯಾಯಾಲಯಕ್ಕೆ ಹೋಗಿ ಸ್ಟಿಂಗ್ ಬಗ್ಗೆ ತಡೆಯಾಜ್ಞೆ ತಂದರೆ? ಈಗ ಅವರು ಮತ್ತು ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಇಬ್ಬರೂ ‘‘ಇದು ನಮ್ಮ ಪಕ್ಷದವರದ್ದೇ ಷಡ್ಯಂತ್ರ. ಬ್ಲ್ಯಾಕ್‌ಮೇಲ್ ಮಾಡಲೆಂದು ಇಂಥದೊಂದು ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ’’ ಎಂಬ ಗುರುತರ ಆರೋಪ ಮಾಡುತ್ತಿದ್ದಾರೆ. ಮನೆಯೊಳಗಿನ ವೈರಿಗಳನ್ನು, ಬಗಲಲ್ಲೇ ನಿಂತಿರುವ ಮಿತ್ರರ ಸೋಗಿನ ಶತ್ರುಗಳನ್ನು, ಅವರು ಹೂಡುವ ಸಂಚುಗಳನ್ನು ಭೇದಿಸುವುದು ಕಷ್ಟ. ಕಡೆಗೆ, ಸತ್ಯ ಗೊತ್ತಾದರೂ ಅದನ್ನು ಬಹಿರಂಗಗೊಳಿಸುವುದು ಕಷ್ಟ. ಅದರಿಂದಾಗಿಯೇ ದೂರು ನೀಡಿ ಸರಕಾರದ ಮೇಲೆ ಒತ್ತಡ ಹೇರಿದರೇ ಸಿದ್ದರಾಮಯ್ಯ?
ಸಿದ್ದರಾಮಯ್ಯ ಎರಡು ರೀತಿಯಲ್ಲಿ ಅಸಲಿ ವರಸೆ ತೋರಿದ್ದಾರೆ. ಮೊದಲನೆಯದು ದೂರು ನೀಡುವ ಮೂಲಕ. ಸರಕಾರ ಏನಾದರೂ ಮಾಡಲಿ ಎಂದು ಸಿದ್ದರಾಮಯ್ಯ ದೂರು ನೀಡಿ ದೂರ ನಿಂತಿದ್ದಾರೆ. ‘ಕೆಲವು’ ಸ್ವಪಕ್ಷೀಯರ ಮೇಲೆ ಅನುಮಾನ ಇರುವುದರಿಂದ ‘ಅವರೇ’ ನಿರ್ಧರಿಸಲಿ ಎಂದು ವಿವಾದದ ಚೆಂಡನ್ನು ಸರಕಾರದ ಅಂಗಳಕ್ಕೆ ಎಸೆದು ಇವರು ದಸರಾ ನೋಡಲು ಮೈಸೂರಿಗೆ ಹೋಗಿದ್ದರು.
ಕೆಲವು ವಿಷಯದಲ್ಲಿ ಸಿದ್ದರಾಮಯ್ಯ ಜಿಗುಟು; ಸುಮ್ಮನಿರುವವರಲ್ಲ. ಇಷ್ಟು ದಿನ ಸುಮ್ಮನಿದ್ದ ಅವರು ಈಗ ಮತ್ತೆ ದೂರಿನ ಬಗ್ಗೆ ಸರಕಾರವನ್ನು ದುರುಗುಟ್ಟಿ ನೋಡುತ್ತಿದ್ದಾರೆ. ‘‘ಷಡ್ಯಂತ್ರ ನಡೆಸಿರುವವರು ಯಾರು ಎನ್ನುವುದು ಗೊತ್ತಾಗಲೇಬೇಕೆಂದು ದೂರು ಕೊಟ್ಟಿದ್ದೇನೆ’’ ಎಂದು ವಿಸ್ತರಿಸಿ ಹೇಳುವ ಮೂಲಕ ‘‘ಸರಕಾರ ತಾವು ನೀಡಿರುವ ದೂರನ್ನು ಆಧರಿಸಿ ಸೂಕ್ತ ರೀತಿಯ ತನಿಖೆ ನಡೆಸುತ್ತಿಲ್ಲ’’ ಎಂಬ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಆ ಮೂಲಕ ‘ತಾನು ತಪ್ಪು ಮಾಡಿಲ್ಲ, ತನಗೆ ಭಯವಿಲ್ಲ’ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ.
ದೂರು ನೀಡುವ ಮೂಲಕ, ದೂರಿನ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸುವ ಮೂಲಕ, ತಮ್ಮ ಪಕ್ಷದವರದ್ದೇ ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ಪಂಚೆಯ ಮೇಲೆ ಬಿದ್ದಿದ್ದ ಸ್ಟಿಂಗ್ ಧೂಳನ್ನು ಕೆಡವಿಕೊಳ್ಳುತ್ತಿದ್ದಾರೆ. ಆದರೆ ಸರಕಾರ?
ಹೈಕಮಾಂಡಿಗೂ ದೂರು?
ಸಿದ್ದರಾಮಯ್ಯ ಸೈಬರ್ ಪೊಲೀಸರಿಗೆ ದೂರು ನೀಡಿದ್ದು ಮಾತ್ರವಲ್ಲ. ಸರಕಾರ ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ ಎಂದು ಹೈಕಮಾಂಡಿಗೂ ವಿಷಯ ಮುಟ್ಟಿಸಿದ್ದಾರೆ. ದಿಲ್ಲಿಯಲ್ಲಿ ದೂರು ದಾಖಲಾಗುತ್ತಿದ್ದಂತೆ ಹೈಕಮಾಂಡ್ ಹೈಪರ್ ಆ್ಯಕ್ಟೀವ್ ಆಗಿದೆ. ರಾಜ್ಯ ನಾಯಕರ ಕಿವಿ ಹಿಂಡಿದೆ. ಅದಾದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಬಂಧನವಾಗಿದೆ. ತಾನೇ ಸ್ಟಿಂಗ್ ಮಾಡಿದ ಭೂಪ ಎಂದು ಘೋಷಿಸಿಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆಗೆ ಕರೆದು ಕಳಿಸುವ ಶಾಸ್ತ್ರ ಮಾಡಿದೆ. ಈ ಮೂಲಕ ‘ನಿಜ ಅರ್ಥದ ತನಿಖೆ’ ಶುರುವಾಗಿದೆ. ಪ್ರಕರಣದ ಪೂರ್ತಿ ರಾಜಕೀಯವೇ ತುಂಬಿಕೊಂಡಿರುವುದರಿಂದ ರಾಜಕೀಯದ ಚೆಸ್ ಆಟ ಕೂಡ ಶುರುವಾಗಿದೆ. ಯಾರನ್ನು? ಯಾರು? ಹೇಗೆ ಚೆಕ್‌ಮೇಟ್ ಮಾಡುತ್ತಾರೆ ಎನ್ನುವುದನ್ನು ಸುಲಭದಲ್ಲಿ ಅಂದಾಜು ಮಾಡಲಾಗದು.
ಎಚ್‌ಡಿಕೆ ಸಾಧಿಸಿದ್ದೇನು?
ಸ್ಟಿಂಗ್ ಬಗ್ಗೆ ಕೆಲವು ದಿನಗಳ ಹಿಂದೆಯೇ ವದಂತಿ ಇತ್ತು. ಈ ಅಂಕಣಕಾರನಿಂದ ಹಿಡಿದು ಕೆಲವು ಪತ್ರಕರ್ತರು ಹಾಗೂ ರಾಜಕಾರಣಿಗಳಿಗೂ ಗೊತ್ತಿತ್ತು. ಆದರೆ ಬಹಿರಂಗಗೊಳಿಸಿದ್ದು ಮಾತ್ರ ಎಚ್.ಡಿ. ಕುಮಾರಸ್ವಾಮಿ. ಇನ್ನೊಂದೆಡೆ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಸ್ಟಿಂಗ್ ಬಗ್ಗೆ ಡಿ.ಕೆ. ಶಿವಕುಮಾರ್ ಸಚಿವರನ್ನು ಎಚ್ಚರಿಸಿದ್ದರು. ಡಿ.ಕೆ. ಶಿವಕುಮಾರ್ ಮಾತನ್ನು ನೆಪ ಮಾಡಿಕೊಂಡು ಪ್ರತಿದಿನವೂ ಪತ್ರಿಕಾಗೋಷ್ಠಿ ನಡೆಸಿ ಸ್ಟಿಂಗ್ ವಿಷಯವನ್ನು ಜೀವಂತವಾಗಿರಿಸಿದ್ದು ಮತ್ತದೇ ಕುಮಾರಸ್ವಾಮಿ.
ಈ ಮೂಲಕ ಕುಮಾರಸ್ವಾಮಿ ಏನನ್ನು ಸಾಧಿಸಿದರು? ತಮ್ಮ ರಾಜಕೀಯ ಎದುರಾಳಿ ಸಿದ್ದರಾಮಯ್ಯ ವರ್ಚಸ್ಸಿಗೆ ಮಸಿ ಬಳಿದರು. ಬೇರೊಬ್ಬರ ವ್ಯಕ್ತಿತ್ವಕ್ಕೆ ಅಥವಾ ವರ್ಚಸ್ಸಿಗೆ ಮಸಿ ಬಳಿಯುವುದೇ ಸಾಧನೆ ಎನ್ನುವುದಾದರೆ ಕುಮಾರಸ್ವಾಮಿ ಅವರದು ಮಹಾನ್ ಸಾಧನೆ. ಏಕೆಂದರೆ ಸಿದ್ದರಾಮಯ್ಯ ನಾಲ್ಕು ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ವರ್ಚಸ್ಸಿಗೆ ಕುಮಾರಸ್ವಾಮಿ ನಾಲ್ಕೇ ವಾರಗಳಲ್ಲಿ ಮಸಿ ಬಳಿದಿದ್ದಾರೆ.
‘ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಅವರೇ ಸ್ಟಿಂಗ್ ಮಾಡಿಸಿದ್ದಾರೆ’ ಎಂದು ಬಿಂಬಿಸಲು ಕುಮಾರಸ್ವಾಮಿ ಮೊದಲ ದಿನದಿಂದಲೂ ಪ್ರಯತ್ನಿಸುತ್ತಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಂಘರ್ಷ ಸೃಷ್ಟಿಸುವ ಸಂಚು ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಆದರೆ ಅವರು ಬಯಸಿದ ಸಂಘರ್ಷ ಉಂಟಾಗಿದೆಯಾ? ಎನ್ನುವ ವಿಷಯದಲ್ಲಿ ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಜೋಡೆತ್ತುಗಳು ಎನ್ನಲಾಗುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಂದಿನ ದಿನಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಕುಮಾರಸ್ವಾಮಿ ಅವರ ಮತ್ತೊಂದು ಸಾಧನೆಯ ಅನಾವರಣವಾಗುತ್ತದೆ.
ಎಚ್‌ಡಿಕೆ ವೈಫಲ್ಯವೇನು?
ಕುಮಾರಸ್ವಾಮಿ ಮತ್ತವರ ತಂದೆ ವಿರುದ್ಧ ತೊಡೆ ತಟ್ಟಿ ಗೆದ್ದವರು ಸಿದ್ದರಾಮಯ್ಯ. ಅಪ್ಪ-ಮಗ ಮಾಡಲಾಗದ ಸಾಧನೆಗಳನ್ನು ಮತ್ತು ದಾಖಲೆಗಳನ್ನು ಮಾಡಿದವರು ಸಿದ್ದರಾಮಯ್ಯ. ಸಿದ್ದರಾಮಯ್ಯ ರಾಜ್ಯವ್ಯಾಪಿ ಪ್ರಭಾವ ಹೊಂದಿರುವವರು. ಜಾತಿಯಾಚೆಗೂ ಸಲ್ಲುವವರು. ಇಂಥ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿಗೆ ಅಸೂಯೆ, ಅಸಮಾಧಾನವಲ್ಲದೆ ಅನುಕಂಪ ಮೂಡಲು ಸಾಧ್ಯವೇ? ಕಾಳಜಿ ತೋರುವಂತೆ ನಟಿಸಿ ಸ್ಟಿಂಗ್ ಜಾಲದಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ ಎಂದು ನಂಬಿಸುವ ತಂತ್ರಗಾರಿಗೆ ಫಲ ನೀಡುವುದೇ?
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಕುರುಬ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಇಡಿಯಾಗಿ ಬರುತ್ತಿದ್ದವು. ಈಗ ಸಿದ್ದರಾಮಯ್ಯ ಸರದಿ ಮುಗಿದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಕುರುಬ ಮತಗಳು ಚದುರಿಹೋಗುತ್ತವೆ ಎನ್ನುವ ಅಂದಾಜು ಬಿಜೆಪಿ ಮತ್ತು ಜೆಡಿಎಸ್ ನಾಯಕರದ್ದು. ಹಾಗೆ ಚದುರುವ ಮತಗಳು ಸ್ವಲ್ಪ ಮಟ್ಟಿಗಾದರೂ ನಮ್ಮ ಬುಟ್ಟಿಗೆ ಬಂದು ಬೀಳಲೆಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಬಗ್ಗೆ ಪ್ರೀತಿ ಉಕ್ಕಿ ಬರುತ್ತಿದೆ ಎನ್ನುವುದು ಕುರುಬ ಸಮುದಾಯಕ್ಕೆ ತಿಳಿದಿಲ್ಲವೇ?
1996ರಲ್ಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದ್ದರು. ಸಿದ್ದರಾಮಯ್ಯ ಪರ ಎಚ್.ಡಿ. ರೇವಣ್ಣ ಶಾಸಕರ ಸಹಿ ಸಂಗ್ರಹ ನಡೆಸಿದ್ದರು. ನಂತರ 2004 ಮತ್ತು 2008ರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಹುದಿತ್ತು. ತಡೆದವರು ಎಚ್.ಡಿ. ಕುಮಾರಸ್ವಾಮಿ. ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ರಾಜಕೀಯದಲ್ಲಿ ಕೇಳಿಬಂದ ಮೊದಲ ಭ್ರಷ್ಟಾಚಾರದ ಆರೋಪದಲ್ಲಿ (ಮುಡಾ) ಪಾದಯಾತ್ರೆ ನಡೆಸಿದ್ದು ಜೆಡಿಎಸ್ (ಹೆಸರಿಗೆ ಮೈತ್ರಿ ಪಕ್ಷ ಬಿಜೆಪಿ ಕೂಡ ಇತ್ತು). ಅದರ ರೂವಾರಿ ಕುಮಾರಸ್ವಾಮಿ. ಈಗ ಸಿದ್ದರಾಮಯ್ಯ ವಿರುದ್ಧ ಚಾರಿತ್ರ್ಯ ಹರಣದ ಬಾಣ ಬಿಟ್ಟರುವುದು ಕುಮಾರಸ್ವಾಮಿ. ಇವೆಲ್ಲವನ್ನು ಮರೆತು ಕುರುಬ ಸಮುದಾಯ ಕುಮಾರಸ್ವಾಮಿಗೆ ಬೆಂಬಲ ನೀಡುತ್ತಾ? ಕುಮಾರಸ್ವಾಮಿ ಅವರದ್ದು ನಿಜವಾದ ಪ್ರೀತಿ ಎಂದು ನಂಬುತ್ತಾ?
ಇದಲ್ಲದೆ ಸ್ಟಿಂಗ್ ಪ್ರಕರಣದಲ್ಲಿ ಸಿದ್ದರಾಮಯ್ಯ ದೂರು ಕೊಡುತ್ತಾರೆ. ಜೆಡಿಎಸ್ ಕಾರ್ಯಕರ್ತರು ಸ್ಟಿಂಗ್ ವೀಡಿಯೊವನ್ನು ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿರುವ ಸಂಗತಿ ತನಿಖೆಯಲ್ಲಿ ಬಹಿರಂಗ ವಾಗುತ್ತದೆ ಎಂಬ ಅಂದಾಜು ಕುಮಾರಸ್ವಾಮಿಗೆ ಇರಲಿಲ್ಲ. ಅವರೀಗ ತಮ್ಮ ಕಾಲಾಳುಗಳ ಕೃತ್ಯವನ್ನು ಬೇರೆಯವರ ಕೊರಳಿಗೆ ಕಟ್ಟಲು ಕಸರತ್ತು ನಡೆಸಬೇಕಾಗಿದೆ. ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಅನುಕಂಪದ ನಾಟಕ ಆಡುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.
ಆಫ್ ದಿ ರೆಕಾರ್ಡ್!
ಚಾಣಾಕ್ಷ ಗುರು ಇದ್ದ ಮಾತ್ರಕ್ಕೆ ಶಿಷ್ಯರೆಲ್ಲಾ ಬುದ್ಧಿವಂತರಾಗಿಬಿಡುವುದಿಲ್ಲ. ಎಚ್.ಡಿ. ದೇವೇಗೌಡರ ಮಕ್ಕಳಾಗಿ ಕೂಡ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಯಶಸ್ವಿ ರಾಜಕಾರಣಿಗಳಾಗಲಿಲ್ಲ.






