ಈರುಳ್ಳಿ ಬೆಲೆ ಮತ್ತೆ ಗಗನಕ್ಕೆ: ಅಗ್ಗದ ದರದಲ್ಲಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

ಹೊಸದಿಲ್ಲಿ: ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಪ್ರತಿ ಕೆ.ಜಿ.ಗೆ 25 ರೂಪಾಯಿ ಬೆಲೆಯಲ್ಲಿ ಈರುಳ್ಳಿ ಮಾರಾಟ ಮಾಡುವ ವ್ಯವಸ್ಥೆಯನ್ನು ಹಲವು ನಗರಗಳಲ್ಲಿ ಆರಂಭಿಸಿದೆ.
ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಬೆಲೆ ಇಳಿಸುವ ಪ್ರಯತ್ನ ಇದಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಈರುಳ್ಳಿ ಕಟಾವು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಪೂರೈಕೆ ಕಡಿಮೆಯಾಗಿರುವುದು, ಜನಸಾಮಾನ್ಯರು ಅಧಿಕ ಪ್ರಮಾಣದಲ್ಲಿ ಬಳಸುವ ಈ ತರಕಾರಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಆರು ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆ ಗಗನಕ್ಕೇರಿದ್ದು, ಇದನ್ನು ನಿಯಂತ್ರಿಸುವ ಕ್ರಮವಾಗಿ ಸರ್ಕಾರ ಈರುಳ್ಳಿಯ ಕನಿಷ್ಠ ರಫ್ತು ಬೆಲೆಯಲ್ಲಿ ಟನ್ ಗೆ 800 ಡಾಲರ್ ಗೆ ನಿಗದಿಪಡಿಸಿದೆ. ಈ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಜಾಗತಿಕ ಖರೀದಿದಾರರಿಗೆ ಈರುಳ್ಳಿ ರಫ್ತು ಮಾಡುವಂತಿಲ್ಲ. ಇದು ಸಹಜವಾಗಿಯೇ ರಫ್ತು ಪ್ರಮಾಣ ಕುಸಿಯಲು ಕಾರಣವಾಗಿದೆ.
ಈರುಳ್ಳಿ ಚಿಲ್ಲರೆ ಮಾರಾಟ ದರ ಕೆಲ ನಗರಗಳಲ್ಲಿ ಪ್ರತಿ ಕೆ.ಜಿಗೆ 70-80 ರೂಪಾಯಿಗೆ ಏರಿದ್ದು, ಕೆಲ ವಾರದ ಹಿಂದೆ ಇದ್ದ 30 ರೂಪಾಯಿಗೆ ಹೋಲಿಸಿದರೆ ದುಪ್ಪಟ್ಟಾಗಿದೆ. ಭಾರತೀಯ ಖಾದ್ಯಗಳಲ್ಲಿ ಈರುಳ್ಳಿ ಬಳಕೆ ಅಧಿಕ ಇರುವುದರಿಂದ ಕಿರಾಣಿ ವಸ್ತುಗಳ ಬೆಲೆ ಏರಿಕೆಗಿಂತಲೂ ಹೆಚ್ಚಾಗಿ ಜನಸಾಮಾನ್ಯರು ಈರುಳ್ಳಿ ಬೆಲೆ ಏರಿಕೆಯಿಂದ ಸಂತ್ರಸ್ತರಾಗುತ್ತಿದ್ದಾರೆ.
ಬುಧವಾರ ಎರಡು ಸರ್ಕಾರಿ ಏಜೆನ್ಸಿಗಳು ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟವನ್ನು ಆರಂಭಿಸಿದ್ದು, ದೆಹಲಿ, ಜೈಪುರ, ಬಿಕನೇರ್, ಕೋಟಾ, ಚಂಡೀಗಢ, ಜಲಂಧರ್, ಭೋಪಾಲ್, ರಾಯಪುರ ಮತ್ತು ಹೈದರಾಬಾದ್ ನಲ್ಲಿ ಆಹಾರ ವ್ಯಾನ್ ಗಳ ಮೂಲಕ 5 ಲಕ್ಷ ಟನ್ ಈರುಳ್ಳಿಯನ್ನು ನೀಡಲು ಕ್ರಮ ಕೈಗೊಂಡಿವೆ.







