ಆಪರೇಷನ್ ಸಿಂಧು: ಇರಾನ್ ನಿಂದ 110 ವಿದ್ಯಾರ್ಥಿಗಳು ಸ್ವದೇಶಕ್ಕೆ

PC: x.com/TheNewIndian
ಹೊಸದಿಲ್ಲಿ: ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಅತಂತ್ರರಾಗಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಆಪರೇಷನ್ ಸಿಂಧು ಕಾರ್ಯಾಚರಣೆಯ ಮೊದಲ ಹಂತದಲ್ಲಿ, ಯುದ್ಧಪೀಡಿತ ಇರಾನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 110 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ಗುರುವಾರ ಮುಂಜಾನೆ ಅರ್ಮೇನಿಯಾದ ಯೆರೆವಾನ್ ನಿಂದ ದೆಹಲಿಗೆ ಕರೆ ತರಲಾಗಿದೆ.
ಭಾರತೀಯ ರಾಜತಾಂತ್ರಿಕ ಕಚೇರಿಯ ಸಂಘಟಿತ ಪ್ರಯತ್ನದ ಫಲವಾಗಿ ಟೆಹರಾನ್ ನಲ್ಲಿ ವಾಸವಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. "ಭಾರತೀಯ ದೂತಾವಾಸ ಮಾಡಿದ ವ್ಯವಸ್ಥೆಯಿಂದ, ಸುರಕ್ಷತೆ ಉದ್ದೇಶದಿಂದ ಭಾರತೀಯ ವಿದ್ಯಾರ್ಥಿಗಳನ್ನು ಟೆಹರಾನ್ ನಿಂದ ಹೊರಕ್ಕೆ ಕರೆ ತರಲಾಗಿದೆ" ಎಂದು ಅಧಿಕೃತ ಪ್ರಕಟಣೆ ಹೇಳಿದೆ.
ಭಾರತೀಯ ಕಾಲಮಾನದ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ಜೂನ್ 18ರಂದು ಮಧ್ಯಾಹ್ನ 2.55ಕ್ಕೆ ಯೆರೆವಾನ್ ಝೆರ್ಟಾನ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದು, 19ರಂದು ನಸುಕಿನಲ್ಲಿ ದೆಹಲಿ ತಲುಪಿದ್ದಾರೆ.
"ಆಪರೇಷನ್ ಸಿಂಧು ಆರಂಭವಾಗಿದೆ. ಇರಾನ್ ನಿಂದ ಭಾರತೀಯರನ್ನು ಹೊರತರುವ ಕಾರ್ಯಾಚರಣೆಗೆ ಭಾರತ ಚಾಲನೆ ನೀಡಿದೆ. ಇದುವರೆಗೆ 110 ವಿದ್ಯಾರ್ಥಿಗಳನ್ನು ಉತ್ತರ ಇರಾನ್ ನಿಂದ ಕರೆತರಲಾಗಿದ್ದು, ಇವರು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲ್ವಿಚಾರಣೆಯಲ್ಲಿ ಅರ್ಮೇನಿಯಾ ತಲುಪಿದ್ದಾರೆ" ಎಂದು ಎಂಇಎ ವಕ್ತಾರ ರಾಜೇಂದ್ರ ಜೈಸ್ವಾಲ್ ಟ್ವೀಟ್ ಮಾಡಿದ್ದರು. ಭಾರತೀಯರ ಭದ್ರತೆ ಮತ್ತು ಸುರಕ್ಷತೆಗೆ ಭಾರತ ಪ್ರಥಮ ಆದ್ಯತೆ ನೀಡುತ್ತದೆ ಎಂದು ವಿವರಿಸಿದ್ದರು. ಇರಾನ್ ಮತ್ತು ಅರ್ಮೇನಿಯಾ ಸರ್ಕಾರದ ಬೆಂಬಲವನ್ನು ಭಾರತೀಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.







