ಆಪರೇಷನ್ ಸಿಂಧು: ಸಂಘರ್ಷ ಪೀಡಿತ ಇರಾನ್ನಿಂದ 290 ವಿದ್ಯಾರ್ಥಿಗಳು ದೆಹಲಿಗೆ

PC; csreengrab/x.com/ANI
ಹೊಸದಿಲ್ಲಿ: ಯುದ್ಧಪೀಡಿತ ಇರಾನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ 290 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತುತಂದ ವಿಶೇಷ ವಿಮಾನ ಶುಕ್ರವಾರ ರಾತ್ರಿ ದೆಹಲಿ ತಲುಪಿದೆ. ಬಹುತೇಕ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳನ್ನು ಹೊಂದಿದ್ದ ವಿಮಾನ, ಇರಾನ್ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿದ ಬಳಿಕ ಮಶಾದ್ನಿಂದ ಹೊರಟು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಉದ್ದೇಶದಿಂದ ಭಾರತ ಸರ್ಕಾರ ಆಪರೇಷನ್ ಸಿಂಧು ಕಾರ್ಯಾಚರಣೆ ಆರಂಭಿಸಿತ್ತು.
ದೆಹಲಿಗೆ ಆಗಮಿಸಿದ ಭಾರತೀಯರು, ಸಂಘರ್ಷ ಪೀಡಿತ ಪ್ರದೇಶದಿಂದ ಕರೆತಂದಿದ್ದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. "ನನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸಲು ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ. ನನ್ನ ಕುಟುಂಬಕ್ಕೆ ಆತಂಕವಾಗಿತ್ತು. ಇರಾನ್ ನಲ್ಲಿ ನಾವು ಸುರಕ್ಷಿತವಾಗಿದ್ದೆವು. ನಮಗೆ ಪಂಚತಾರಾ ಹೋಟೆಲ್ ನಲ್ಲಿ ವಸತಿ ಕಲ್ಪಿಸಲಾಗಿತ್ತು ಮತ್ತು ರಕ್ಷಣೆಯನ್ನೂ ನೀಡಲಾಗಿತ್ತು. ಆದರೆ ಇಲ್ಲಿಗೆ ಬಂದ ಬಳಿಕ ಮತ್ತಷ್ಟು ಸುರಕ್ಷಿತ ಭಾವನೆ ಬಂದಿದೆ. ಭಾರತ ಸರ್ಕಾರಕ್ಕೆ ಧನ್ಯವಾದಗಳು. ನಮಗೆ ಭಾರತೀಯ ರಾಯಭಾರ ಕಚೇರಿ ಎಲ್ಲ ಅನುಕೂಲಗಳನ್ನೂ ಕಲ್ಪಿಸಿಕೊಟ್ಟಿದ್ದರಿಂದ ಯಾವ ಸಮಸ್ಯೆಯೂ ಆಗಲಿಲ್ಲ" ಎಂದು ಇರಾನ್ ನಿಂದ ಆಗಮಿಸಿದ ಎಲಿಯಾ ಬತೂಲ್ ತಿಳಿಸಿದರು.
"ನಾವು ಸುರಕ್ಷಿತವಾಗಿ ಮತ್ತು ಚೆನ್ನಾಗಿ ಮನೆಗೆ ಮರಳಲು ಸಾಧ್ಯವಾದ ಬಗ್ಗೆ ಸಂತೋಷ ಮತ್ತು ಕೃತಜ್ಞತಾ ಭಾವ ಇದೆ. ಇರಾನ್ ನಲ್ಲಿ ಪರಿಸ್ಥಿತಿ ಚೆನ್ನಾಗಿ ಇಲ್ಲ ಎನ್ನುವುದು ನಮಗೆ ಗೊತ್ತಿತ್ತು. ಭಾರತೀಯ ರಾಯಭಾರ ಕಚೇರಿ ಮತ್ತು ರಾಯಭಾರಿ ಇಡೀ ಪ್ರಕ್ರಿಯೆಯನ್ನು ಸುಲಲಿತ ಮತ್ತು ಸುರಕ್ಷಿತವಾಗಿಸಿದರು" ಎಂದು ಮೌಲಾನಾ ಮುಹಮ್ಮದ್ ಸಈದ್ ಹೇಳಿದರು.
ತುರ್ಕ್ಮೆನಿಸ್ತಾನದ ಅಶ್ಗಬಾತ್ ನಿಂದ ಮತ್ತೊಂದು ವಿಮಾನ ಆಗಮಿಸುವ ನಿರೀಕ್ಷೆ ಇದ್ದು, ಸುಮಾರು 1000 ಮಂದಿ ಭಾರತೀಯರು ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸ್ಸಾದಂತಾಗಿದೆ.
"ಸಕಾಲಿಕ ಮಧ್ಯಪ್ರವೇಶ ಮತ್ತು ಬೆಂಬಲಕ್ಕಾಗಿ ಭಾರತ ಸರ್ಕಾರಕ್ಕೆ, ವಿದೇಶಾಂಗ ಸಚಿವಾಲಯಕ್ಕೆ ಮತ್ತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರ ಬರುವಿಕೆಯನ್ನು ಆತಂಕ ಹಾಗೂ ಕುತೂಹಲದಿಂದ ಕಾಯುತ್ತಿದ್ದ ಕುಟುಂಬಗಳಿಗೆ ನೆಮ್ಮದಿ ಸಿಕ್ಕಿದಂತಾಗಿದೆ" ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ ಪ್ರಕಟಣೆಯಲ್ಲಿ ಹೇಳಿದೆ.
#WATCH | Delhi: #OperationSindhu flight carrying 290 Indian nationals evacuated from Iran arrives in Delhi. People raise slogans of 'Hindustan zindabad' and 'Bharat Mata ki Jai' as they emotionally thank the Indian government for rescuing them and bringing them back safely. pic.twitter.com/9GXTiJ64TR
— ANI (@ANI) June 20, 2025







