ಟ್ರಂಪ್ ಕುಟುಂಬದ ಸಿಂಹಪಾಲು ಇರುವ ಕ್ರಿಪ್ಟೊ ಕರೆನ್ಸಿ ಕಂಪನಿ ಜೊತೆ ಪಾಕಿಸ್ತಾನ ಒಪ್ಪಂದ!

PC: x.com/Cointelegraph
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಶಮನಕ್ಕಾಗಿ ಕದನ ವಿರಾಮ ಒಪ್ಪಂದದ ಮಧ್ಯಸ್ಥಿಕೆ ವಹಿಸಿದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ, ಟ್ರಂಪ್ ಕುಟುಂಬ ಶೇಕಡ 60ರಷ್ಟು ಪಾಲು ಹೊಂದಿರುವ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ (ಡಬ್ಲ್ಯುಎಲ್ಎಫ್) ಜೊತೆ ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಡಬ್ಲ್ಯುಎಲ್ಎಫ್ ಮತ್ತು ತುರಾತುರಿಯಲ್ಲಿ ಆರಂಭಿಸಲಾದ ಪಾಕಿಸ್ತಾನ ಕ್ರಿಪ್ಟೊ ಕೌನ್ಸಿಲ್ ನಡುವೆ ಈ ಒಪ್ಪಂದ ಏರ್ಪಟ್ಟಿದೆ. ಇಸ್ಲಾಮಾಬಾದನ್ನು ದಕ್ಷಿಣ ಏಷ್ಯಾದ ಕ್ರಿಪ್ಟೊ ರಾಜಧಾನಿಯಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯಿಂದ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಬಿನಾನ್ಸ್ ನ ಸಹಸಂಸ್ಥಾಪಕರಾದ ಚಾಂಗ್ ಝೆಪೆಂಗ್ ಝವೊ ಅವರನ್ನು ಮಂಡಳಿಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.
ಕ್ರಿಪ್ಟೊ ಮಂಡಳಿ ಒಂದು ತಿಂಗಳು ಹಳೆಯದಾಗಿದ್ದರೂ, ಡಬ್ಲ್ಯುಎಲ್ಎಫ್ ತನ್ನ ಉನ್ನತ ಅಧಿಕಾರಿ ಮತ್ತು ಟ್ರಂಪ್ ಅವರ ಗಾಲ್ಫ್ ಜತೆಗಾರ ಸ್ಟೀವ್ ಪುತ್ರ ಝಚಾರಿ ವಿಟಾಫ್ ಅವರನ್ನು ಇಸ್ಲಾಮಾಬಾದ್ ಗೆ ಕಳುಹಿಸಿಕೊಟ್ಟಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರಿಂದ ವಿಟಾಫ್ ಗಣ್ಯಾತಿಥ್ಯ ಸ್ವೀಕರಿಸಿದ್ದರು.
ಡಬ್ಲ್ಯುಎಲ್ಎಫ್ ನಲ್ಲಿ ಟ್ರಂಪ್ ಅವರ ಇಬ್ಬರು ಮಕ್ಕಳಾದ ಎರಿಕ್ ಹಾಗೂ ಟ್ರಂಪ್ ಜ್ಯೂನಿಯರ್ ಪಾಲು ಹೊಂದಿದ್ದು, ಅವರ ಜತೆಗೆ ಭಾವ ಜರೇದ್ ಕುಶ್ನೆರ್ ಕೂಡಾ ಷೇರು ಹೊಂದಿದ್ದಾರೆ. ಶ್ವೇತಭವನದ ಜತೆಗಿನ ಸಂಪರ್ಕವನ್ನು ಬಳಸಿಕೊಂಡು ಈ ಆಮಿಷ ವ್ಯವಹಾರಕ್ಕಾಗಿ ವಿಶ್ವದ ವಿವಿಧೆಡೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಟಾಫ್ ಕೂಡಾ ಟ್ರಂಪ್ ಅವರಂತೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕೋಟ್ಯಧಿಪತಿಯಾಗಿದ್ದು, ನ್ಯೂಯಾರ್ಕ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ಇಸ್ರೇಲ್, ಯುಎಇ ಮತ್ತು ಬಹರೈನ್ ಗಳು ಅಬ್ರಹಾಂ ಒಪ್ಪಂದಕ್ಕೆ ಸಹಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂದರ್ಭದಲ್ಲಿ ವಿಟಾಫ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು.