ಸಿಂಧೂ ಜಲ ಒಪ್ಪಂದ ಅಮಾನತು ನಿರ್ಧಾರ ಮರು ಪರಿಶೀಲನೆಗೆ ಪಾಕ್ ಮನವಿ

PC: x.com/firstpost
ಹೊಸದಿಲ್ಲಿ: ಸಿಂಧೂ ಜಲ ಒಪ್ಪಂದ ಅಮಾನತುಗೊಳಿಸುವುದರಿಂದ ಉಂಟಾಗುವ ಪರಿಣಾಮದ ಬಿಸಿ ತಟ್ಟುವ ಭೀತಿಯಿಂದ ಪಾಕಿಸ್ತಾನ, ಅಮಾನತು ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದೆ. 1960ರಿಂದ ಜಾರಿಯಲ್ಲಿದ್ದ ಈ ಒಪ್ಪಂದದ ಅನ್ವಯ ಲಕ್ಷಾಂತರ ಮಂದಿ ಸಿಂಧೂ ನದಿ ನೀರನ್ನು ಅವಲಂಬಿಸಿದ್ದಾರೆ ಎಂದು ಹೇಳಿದೆ.
ಪಾಕಿಸ್ತಾನದ ಜಲಸಂಪನ್ಮೂಲ ಖಾತೆ ಸಚಿವ ಸೈಯ್ಯದ್ ಅಲಿ ಮುರ್ತಝಾ ಈ ಸಂಬಂಧ ಭಾರತದ ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪತ್ರದಲ್ಲಿ ಭಾರತದ ನಿರ್ಧಾರವನ್ನು "ಏಕಪಕ್ಷೀಯ ಮತ್ತು ಕಾನೂನು ಬಾಹಿರ" ಎನ್ನಲಾಗಿದ್ದು, "ಇದು ಪಾಕಿಸ್ತಾನದ ಜನತೆ ಮತ್ತು ಆರ್ಥಿಕತೆಯ ಮೇಲಿನ ದಾಳಿ" ಎಂದು ಆಪಾದಿಸಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಈ ಪತ್ರವನ್ನು ಭಾರತಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಭಾರತ ಈ ಮನವಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಪಹಲ್ಗಾಮ್ ನಲ್ಲಿ ಪ್ರವಾಸಿಗಳನ್ನು ಹತ್ಯೆ ಮಾಡಿದ ಕ್ರಮಕ್ಕೆ ಪ್ರತೀಕಾರವಾಗಿ ಈ ಒಪ್ಪಂದವನ್ನು ಅಮಾನತಿನಲ್ಲಿ ಇಡುವ ನಿರ್ಧಾರವನ್ನು ಭದ್ರತೆ ಕುರಿತ ಸಂಪುಟ ಸಮಿತಿ ಏಪ್ರಿಲ್ 23ರಂದು ಕೈಗೊಂಡಿದ್ದು, ಈ ನಿರ್ಧಾರದ ಮೇಲೆ ಮನವಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಬಗ್ಗೆ ಪ್ರಶ್ನಿಸಿದಾಗ, "ರಕ್ತ ಮತ್ತು ನೀರು ಜತೆಗೆ ಹರಿಯಲಾಗದು" ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಹೇಳಿದ್ದನ್ನು ಮೂಲಗಳು ಉಲ್ಲೇಖಿಸಿವೆ.
ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಟ್ಟಿರುವ ಭಾರತದ ಕ್ರಮ ಕಾನೂನುಬಾಹಿರ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಳ್ಳಿಹಾಕಿದೆ.