ಪಾಣಿಪತ್: ನಿಂತಿದ್ದ ರೈಲಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

PC: x.com/HaryanaKesari
ರೋಹ್ಟಕ್: ಪಾಣಿಪತ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಖಾಲಿ ಬೋಗಿಯಲ್ಲಿ ಜೂನ್ 24ರಂದು ರಾತ್ರಿ ತನ್ನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ 34 ವರ್ಷ ವಯಸ್ಸಿನ ಮಹಿಳೆ ದೂರು ನೀಡಿದ್ದಾರೆ. ಆಘಾತದಿಂದ ಇದ್ದ ಸಂದರ್ಭದಲ್ಲಿ ಮತ್ತೊಂದು ರೈಲು ತಮ್ಮ ಪಾದವನ್ನು ಕತ್ತರಿಸಿದ್ದಾಗಿ ಹೇಳಿದ್ದಾರೆ.
ಸೋಮವಾರ ಮಾಧ್ಯಮ ಜತೆ ಮಾತನಾಡಿದ ಅವರು, ಕೌಟುಂಬಿಕ ಜಗಳ ಹೇಗೆ ಆ ರಾತ್ರಿಯನ್ನು ಕರಾಳವಾಗಿ ಪರಿವರ್ತಿಸಿತು ಹಾಗೂ ಜೀವನ್ಮರಣ ಸ್ಥಿತಿಗೆ ತಂದಿತು ಎನ್ನುವುದನ್ನು ವಿವರಿಸಿದ್ದಾರೆ.
"ಲೈಂಗಿಕ ಸಂಬಂಧನ್ನು ತಿರಸ್ಕರಿಸಿದ್ದಕ್ಕಾಗಿ ಪತಿ ಜೂನ್ 24ರಂದು ಥಳಿಸಿದ್ದು, ಇಡೀ ಪ್ರಕರಣಕ್ಕೆ ನಾಂದಿಯಾಯಿತು. ನನ್ನ ಮೂರು ವರ್ಷದ ಮಗ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದ. ಈ ಆಘಾತದಿಂದಾಗಿ ಲೈಂಗಿಕತೆ ಬಗ್ಗೆ ಭಯ ಇತ್ತು. ಆದರೆ ಪತಿ ಅದಕ್ಕಾಗಿ ಒತ್ತಡ ಹೇರುತ್ತಿದ್ದರು. ನಾನು ಪ್ರತಿರೋಧ ತೋರಿದಾಗ, ನನ್ನ ಮೇಲೆ ಹಲ್ಲೆ ನಡೆಸಿ ನನ್ನೊಂದಿಗೆ ಲೈಂಗಿಕತೆಯಲ್ಲಿ ತೊಡಗದೇ ಇದ್ದರೆ, ಹೊರಗಿನವರು ನಿಮ್ಮ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂದು ಬೆದರಿಕೆಯ ಧ್ವನಿಯಲ್ಲಿ ಹೇಳಿದ್ದರು. ಕೈಗೆ ಸಿಕ್ಕಿದ ಕೆಲ ವಸ್ತುಗಳನ್ನು ತೆಗೆದುಕೊಂಡು ರಾತ್ರಿಯೇ ನಾನು ಮನೆಯಿಂದ ಹೊರನಡೆದೆ" ಎಂದು ಇದೀಗ ಪಿಜಿಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಹೇಳಿದರು.
ರಸ್ತೆಮಧ್ಯದಲ್ಲಿ ಯುವಕನೊಬ್ಬ ಬಂದು ನೆರವಿನ ಭರವಸೆ ನೀಡಿದ. ತನ್ನ ಪತ್ನಿಯ ಜತೆಗೆ ಸುರಕ್ಷಿತವಾಗಿ ರಾತ್ರಿ ಕಳೆಯಬಹುದು ಎಂದು ಹೇಳಿದ. ಪಾಣಿಪತ್ ರೈಲು ನಿಲ್ದಾಣದವರೆಗೆ ನಡೆಸಿಕೊಂಡು ಹೋಗಿದ್ದು, ರೈಲಿನ ಒಳಗೆ ಲಗೇಜ್ ಇದೆ ಎಂದು ಹೇಳಿ ನಿಂತಿದ್ದ ರೈಲಿನ ನಿರ್ಜನ ಬೋಗಿಗೆ ಕರೆದೊಯ್ದ. ನಾನು ಹಿಂಜರಿದಾಗ ಮತ್ತೆ ಭರವಸೆ ನೀಡಿದ ಎಂದು ನೆಪಿಸಿಕೊಂಡರು.
ಕಂಪಾರ್ಟ್ಮೆಂಟ್ ನಲ್ಲಿ ಆತ ಅತ್ಯಾಚಾರ ಯತ್ನ ನಡೆಸಿದ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮೂವರು ಅಡ್ಡಗಟ್ಟಿದರು. ದೈನ್ಯದಿಂದ ಬೇಡಿಕೊಂಡರೂ ಪರಿಗಣಿಸದೇ ಎಲ್ಲ ನಾಲ್ಕು ಮಂದಿಯೂ ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರ ಎಸಗಿದರು ಎಂದು ದೂರಿದರು.
ಘಟನೆ ಬಳಿಕ ಆರೋಪಿಗಳು ಹೋದರು. ಆಘಾತಗೊಂಡ ಮಹಿಳೆ ಸೋನಿಪತ್ ರೈಲಿಗಾಗಿ ಹಳಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ರೈಲಿನ ಬಳಿ ರಾಸಾಯನಿಕ ತ್ಯಾಜ್ಯದ ಗುಂಡಿಗೆ ಕಾಲಿಟ್ಟರು. ಕೆಲವೇ ಕ್ಷಣಗಳಲ್ಲಿ ಹಾದುಹೋದ ರೈಲು ಪಾದವನ್ನು ಕತ್ತರಿಸಿತು. ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆಗೆ ಎಚ್ಚರವಾದಾಗ ರೋಹ್ಟಕ್ ಪಿಜಿಐಎಂಏಸ್ ಆಸ್ಪತ್ರೆಯಲ್ಲಿದ್ದರು ಎಂದು ತಿಳಿದುಬಂದಿದೆ.







