ಕರಾವಳಿ ಇವರಿಗೆ ಯಾಕೆ ಡಂಪಿಂಗ್ ಯಾರ್ಡ್?

ಕರ್ನಾಟಕದ ಕರಾವಳಿಯಲ್ಲಿ ಇಡಕಿರಿಯುತ್ತಿರುವ ಮಾಲಿನ್ಯಕಾರಕ ಯೋಜನೆಗಳಿಗೆಲ್ಲ ಒಂದು ಅಕೌಂಟೆಬಿಲಿಟಿ ತರುವುದು ಅನಿವಾರ್ಯ ಎನ್ನಿಸುವ ಸ್ಥಿತಿ ಇಂದು ಕರಾವಳಿಯಲ್ಲಿದೆ. ಪೆಟ್ರೋಲಿಯಂ ಮತ್ತದರ ಉತ್ಪನ್ನಗಳ ಕೈಗಾರಿಕೆ, ಉಷ್ಣವಿದ್ಯುತ್ ಸ್ಥಾವರ, ನ್ಯೂಕ್ಲಿಯರ್ ಸ್ಥಾವರಗಳೆಲ್ಲ ಈಗಾಗಲೇ ಇಲ್ಲಿ ಕಾರ್ಯಾಚರಿಸುತ್ತಿದ್ದರೆ, ಇವುಗಳ ಜೊತೆಗೀಗ ವಿದ್ಯುತ್ ಉತ್ಪಾದನೆ, ಸಿಮೆಂಟು, ಪ್ರವಾಸೋದ್ಯಮ, ಡೇಟಾ ಸೆಂಟರ್ ಎಂದೆಲ್ಲ ನವೋದ್ಯಮಗಳೂ ಇಲ್ಲಿಗೆ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಹಾಗಾಗಿ ಇಲ್ಲಿ ಮಾಲಿನ್ಯ ಎಷ್ಟಿದೆ, ನಮಗೆ ಇನ್ನೆಷ್ಟು ಮಾಲಿನ್ಯ ಬೇಕಿದೆ ಮತ್ತು ಕರಾವಳಿಯ ಪರಿಸರ ಮಾಲಿನ್ಯ ಧಾರಣ ಶಕ್ತಿ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಈಗ ವಿಳಂಬವಾಗಿದ್ದರೂ ಅದು ನಡೆಯಬೇಕಾದುದು ಅನಿವಾರ್ಯ.
ಚರಿತ್ರೆಯ ಎಲ್ಲ ಕಾಲಗಳಲ್ಲೂ ದೇಶದ ಕರಾವಳಿಯು ವ್ಯಾಪಾರ ವಹಿವಾಟುಗಳ ಜೀವನಾಡಿಯಾಗಿತ್ತು. ಇಲ್ಲಿನ ಬಂದರುಗಳು ದೇಶದ ವ್ಯಾಪಾರ/ಸಂಪರ್ಕ ಕೇಂದ್ರಗಳು. ಸರಕುಗಳು ಈ ಬಂದರುಗಳನ್ನು ತಲುಪಲು, ರಸ್ತೆ ಮತ್ತಿತರ ಲಾಜಿಸ್ಟಿಕ್ ಮೂಲಸೌಕರ್ಯಗಳ ಪೂರೈಕೆಯನ್ನು ಅರ್ಥ ಮಾಡಿಕೊಳ್ಳಬಹುದು; ಸೂಕ್ಷ್ಮ ಪರಿಸರ ಇರುವ ಕರಾವಳಿ ಪ್ರದೇಶಗಳ ಧಾರಣ ಶಕ್ತಿಯ ಮಿತಿಯೊಳಗೆ ಕೈಗಾರಿಕೆಗಳನ್ನು ಕೂಡ ಅರ್ಥ ಮಾಡಿಕೊಳ್ಳಬಹುದು. ಆದರೆ, ಕಳೆದ ಒಂದು ದಶಕದಿಂದೀಚೆಗೆ ಕರ್ನಾಟಕದಲ್ಲಿ, ನಿಬಿಡವಾದ ಜನವಸತಿ ಇರುವ ಕರಾವಳಿ ತೀರದಲ್ಲಿ, ಜನವಸತಿ ಇರುವಲ್ಲಿ ಇರಬಾರದ ಮತ್ತು ನೆಲ-ಜಲ-ಆಕಾಶಗಳನ್ನೆಲ್ಲ ಕಲುಷಿತಗೊಳಿಸಬಲ್ಲ ಅಪಾಯಕರ ಕೈಗಾರಿಕೆಗಳು, ಸಂಗ್ರಹಾಗಾರಗಳು, ಯೋಜನೆಗಳು ಬಂದು ಇಡಕಿರಿಯುತ್ತಿವೆ. ಈ ರೀತಿಯ ವಿಪರೀತ ಬೆಳವಣಿಗೆಗೆ ನೀತ್ಯಾತ್ಮಕ ಕಾರಣಗಳೇನಾದರೂ ಇವೆಯೇ? (ಉದಾಹರಣೆಗೆ, ಇಲ್ಲಿ ಕೃಷಿ ಹೆಚ್ಚಿಲ್ಲ, ಇಲ್ಲಿನ ಜನ ಉದ್ಯೋಗ ಅರಸಿ ವಲಸೆ ಹೋಗುವುದರಿಂದ, ಕರಾವಳಿ ವೃದ್ಧಾಶ್ರಮ ಆಗಿದೆ, ಹಾಗಾಗಿ, ಇಲ್ಲಿ ಅಪಾಯಕಾರಿ ಕೈಗಾರಿಕೆಗಳು ಬಂದರೂ ತೊಂದರೆಯಾಗದು, ಈಗಾಗಲೇ ಇಲ್ಲಿ ಕೈಗಾರಿಕೆಗಳಿದ್ದು ವಾತಾವರಣ ಕಲುಷಿತಗೊಳ್ಳುತ್ತಿದ್ದರೂ ಜನ ಬಾಯಿಬಿಚ್ಚುವುದಿಲ್ಲ... ಇತ್ಯಾದಿ). ಇದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬತ್ತ ಜನ-ಜನಪ್ರತಿನಿಧಿಗಳು ತುರ್ತಾಗಿ ಗಮನ ಹರಿಸದಿದ್ದರೆ, ಕರ್ನಾಟಕದ ಕರಾವಳಿ ಜನವಸತಿ ಯೋಗ್ಯವಾಗಿ ಉಳಿಯುವುದಿಲ್ಲ. ಇಲ್ಲಿ ಈಗಾಗಲೇ ಮಡುಗಟ್ಟಿರುವ ಕೈಗಾರಿಕೆಗಳು ಜನರಲ್ಲಿ ಕ್ಯಾನ್ಸರ್, ಅಲರ್ಜಿ, ಚರ್ಮ-ಶ್ವಾಸಕೋಶದ ಗಂಭೀರ ಕಾಯಿಲೆಗಳಿಗೆ ಕಾರಣ ಆಗುತ್ತಿವೆ. ಸಕಾಲದಲ್ಲಿ ಎಚ್ಚರಗೊಳ್ಳದಿದ್ದರೆ, ಈ ಸನ್ನಿವೇಶ ಇನ್ನಷ್ಟು ಬಿಗಡಾಯಿಸಲಿದೆ.
ಈ ಪೀಠಿಕೆಗೆ ಒಂದು ಬಲವಾದ ಕಾರಣ ಇದೆ. ಅದೇನೆಂದರೆ, ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ಇದೇ ಮೇ 26, 2026ರಂದು ಒಂದು ಕರಡು ಪ್ರಕಟಣೆ G.S.R. 410(E) ಹೊರಡಿಸಿದ್ದು, ಸಾರ್ವಜನಿಕರ ಆಕ್ಷೇಪಗಳಿದ್ದರೆ 60 ದಿನಗಳ ಒಳಗೆ ತಿಳಿಸಬೇಕು ಎಂದು ಹೇಳಿದೆ. ಈ ಹೊಸ ಕರಡು ಪ್ರಕಟಣೆಯು, 2019ರ ಜನವರಿ 18ರಂದು ಹೊರಡಿಸಲಾಗಿದ್ದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪ್ರಕಟಣೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಕಾರ್ಯಾಚರಣೆ ಹಾಗೂ ಪ್ರಕ್ರಿಯೆಗಳಿಗೆ ವಿಧಿಸಲಾಗಿರುವ ನಿರ್ಬಂಧಗಳಲ್ಲಿ ತಿದ್ದುಪಡಿ ಮಾಡಲು ಉದ್ದೇಶಿಸಿದೆ.
ವಿವಿಧ ರಾಜ್ಯಗಳ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳ (CZMA) ಒತ್ತಾಸೆಯ ಮೇರೆಗೆ ತಾನು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿರುವ ಭಾರತ ಸರಕಾರವು, ಕರಾವಳಿಯಲ್ಲಿ ಸಿಆರ್‌ಝಡ್-1ಎ ವಲಯ ಹೊರತುಪಡಿಸಿ ಉಳಿದೆಲ್ಲ ಸಿಆರ್‌ಝಡ್ ವಲಯಗಳಲ್ಲಿ ಸಂಗ್ರಹಕ್ಕೆ, ಸಂಸ್ಕರಣೆಗೆ ಮತ್ತು ಬಳಕೆಗೆ ಈಗಾಗಲೇ ಅನುಮತಿ ನೀಡಲಾಗಿರುವ ಅಪಾಯಕಾರಿ ರಾಸಾಯನಿಕಗಳ ಉದ್ದದ ಪಟ್ಟಿಗೆ ಹೊಸದಾಗಿ ಲೀನಿಯರ್ ಆಲ್ಕೈಲ್ ಬೆನ್ಜೀನ್ (LAB), ಎನ್-ಪಾರಾಫಿನ್, ಕಾರ್ಬನ್ ಬ್ಲ್ಯಾಕ್ ಫೀಡ್‌ಸ್ಟಾಕ್ (CBFS) ಎಂಬ ಅಪಾಯಕಾರಿ ರಾಸಾಯನಿಕಗಳ ಹೆಸರನ್ನು ಹೊಸದಾಗಿ ಸೇರಿಸಲು ಮೇಲೆ ಹೇಳಿದ ಕರಡು ಪ್ರಕಟಣೆ ಉದ್ದೇಶಿಸಿದೆ.
ಈ ಮೂರೂ ಉತ್ಪನ್ನಗಳು ತೈಲ ಸಂಸ್ಕರಣಾಗಾರಗಳಲ್ಲಿ ಮುಖ್ಯ ಉತ್ಪನ್ನಗಳ ಸಂಸ್ಕರಣೆಯ ವೇಳೆ ಉತ್ಪಾದನೆಗೊಳ್ಳುವ ಉಪ ಉತ್ಪನ್ನಗಳು. ಇವುಗಳಲ್ಲಿ LAB ಮತ್ತು ಎನ್-ಪಾರಾಫಿನ್ ಕೈಗಾರಿಕಾ ಬಳಕೆಯ ಮಾರ್ಜಕಗಳ ಉತ್ಪಾದನೆಯಲ್ಲಿ ಉಪಯುಕ್ತವೆನ್ನಿಸಿದರೆ, CBFS ಕೈಗಾರಿಕಾ ಇಂಧನ ಅಥವಾ ಕಚ್ಚಾವಸ್ತು ಆಗಿ ಬಳಕೆ ಆಗುತ್ತದೆ. ಪಶ್ಚಿಮ ಕರಾವಳಿಯ ಜಾಮ್‌ನಗರ್‌ನಿಂದ ಕೊಚ್ಚಿ ತನಕ ಮತ್ತು ಪೂರ್ವ ಕರಾವಳಿಯ ನಾಗಪಟ್ಟಣಂನಿಂದ ಹಾಲ್ದಿಯಾ ತನಕ ಹತ್ತಾರು ತೈಲಸಂಸ್ಕರಣಾಗಾರಗಳಿದ್ದು, ಇವುಗಳಲ್ಲಿ ಹೆಚ್ಚಿನವು ಈ ರಾಸಾಯನಿಕಗಳನ್ನು ಉತ್ಪಾದಿಸುತ್ತವೆ. ಈಗ ಈ ತಿದ್ದುಪಡಿಯ ಮೂಲಕ, ಸಿಆರ್‌ಝಡ್ ವಲಯದ ಒಳಗೆ ಈ ರಾಸಾಯನಿಕಗಳ ಉತ್ಪಾದನೆ, ಸಂಗ್ರಹ ಕಾನೂನುಬದ್ಧವೆನ್ನಿಸಲಿದೆ.
ಕರ್ನಾಟಕ ಕರಾವಳಿಯ ನಮಗೆ ಇದರ ಪರಿಣಾಮ ಏನು? ಎಂಬುದು ದಾಖಲೆಗಳಲ್ಲಿ ಸ್ಪಷ್ಟವಿಲ್ಲವಾದರೂ, ಇಲ್ಲಿನ MRPL ತೈಲಾಗಾರದಲ್ಲಿ, ಅವರ FY2024-25ನೇ ಸಾಲಿನ ವಾರ್ಷಿಕ ವರದಿಯ ಪ್ರಕಾರ ಅವರು, ಬಿಟುಮನ್, ಸಲ್ಫರ್, ಪೆಟ್ ಕೋಕ್, ವಿಮಾನ ಇಂಧನ (ATF), ಪಾಲಿಪ್ರೊಫೈಲಿನ್, ಕ್ಸೈಲಾಲ್ ಇತ್ಯಾದಿ ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಸದ್ರಿ ಸಾಲಿನಲ್ಲಿ 29.90 ಲಕ್ಷ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಇವನ್ನೆಲ್ಲ ಮಾರಾಟ ಮಾಡಿ, 15,214 ಕೋಟಿ ರೂ.ಗಳ ವ್ಯಾಪಾರ ಗಳಿಕೆ ತೋರಿಸಿದ್ದಾರೆ. ತಮ್ಮಲ್ಲಿ ಉತ್ಪಾದನೆ ಆಗುವ ಅಪಾಯಕಾರಿ-ನಿರಪಾಯಕಾರಿ ಉಪ ಉತ್ಪನ್ನ ರಾಸಾಯನಿಕಗಳಲ್ಲಿ, ಶೇ. 78.54ನ್ನು ರೀಸೈಕ್ಲಿಂಗ್, ಮರುಬಳಕೆ ಮಾಡಲಾಗುತ್ತದೆ. ಕೊನೆಗೆ ಉಳಿಯುವ ಶೇ. 0.15 ನಿರಪಾಯಕಾರಿ ಮತ್ತು ಶೇ. 0.06 ಅಪಾಯಕಾರಿ ರಾಸಾಯನಿಕಗಳನ್ನು ಸಂಸ್ಕರಣೆ, ಸಂಗ್ರಹ ಮಾಡಿ ವಿಸರ್ಜನಾ ಸೌಲಭ್ಯ (TSDF)ದ ಮೂಲಕ ವಿಸರ್ಜಿಸಲು ಹಾಗೂ ನಾಶಗೊಳಿಸಲು (incineration) ವಿಲೇವಾರಿ ಮಾಡಲಾಗುವುದು ಎಂದು ವಾರ್ಷಿಕ ವರದಿ ಹೇಳಿದೆ. ಹೆಚ್ಚಿನಂಶ ಇಲ್ಲಿಯ ತನಕ ‘ಇತ್ಯಾದಿ’ ಪಟ್ಟಿಯಲ್ಲಿ ಬರುತ್ತಿದ್ದ ಈ ಉಪ ಉತ್ಪನ್ನಗಳು ಇನ್ನು ಅಧಿಕೃತವಾಗಿ ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿವೆ.
ಸರಕಾರವು ತನ್ನ 2019, ಜನವರಿ 18ರ ಸಿಆರ್‌ಝಡ್ ನಿಯಮಗಳಲ್ಲೇ G.S.R.37(E) ಹಲವು ಅಪಾಯಕಾರಿ ರಾಸಾಯನಿಕಗಳನ್ನು ಸಿಆರ್‌ಝಡ್ ವಲಯದ ಒಳಗೆ ಸಂಗ್ರಹಿಸಲು, ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಕಚ್ಚಾತೈಲ, LPG, CNG, LNG, ವಾಹನ-ವಿಮಾನ ಇಂಧನಗಳು, ಲ್ಯುಬ್ರಿಕೇಟಿಂಗ್ ಆಯಿಲ್, ಬ್ಯುಟೇನ್, ಪ್ರೊಪೇನ್, ನಾಫ್ತಾ, ಫರ್ನೇಸ್ ಆಯಿಲ್, ರಸಗೊಬ್ಬರಗಳು ಮತ್ತವುಗಳ ಕಚ್ಚಾವಸ್ತುಗಳು, ಅಸೆಟಿಕ್ ಆಮ್ಲ, ಮೊನೊ ಇಥೈಲ್ ಗ್ಲೈಕಾಲ್, ಪಾರಾಕ್ಸಿಲೀನ್, ಇಥೇನ್, LSHS, ಬ್ಯುಟಡೈನ್, ಮೆಥನಾಲ್, ಕಾಸ್ಟಿಕ್ ಮತ್ತು ಬಿಟುಮೆನ್ ಈ ಪಟ್ಟಿಯಲ್ಲಿ ಸೇರಿವೆ. ಇವುಗಳಲ್ಲಿ ಹಲವು ದಹನಶೀಲ, ವಿಷಕಾರಿ, ಅಪಾಯಕಾರಿ.
ಮೂಲದಲ್ಲಿ, ಸಿಆರ್‌ಝಡ್ ನಿಯಮಗಳು ಪರಿಸರ ಸಂರಕ್ಷಣಾ ಕಾಯ್ದೆ 1986ರ ಭಾಗವಾಗಿ ಹೊರಹೊಮ್ಮಿದ್ದೇ ಪರಿಸರ ಸಂರಕ್ಷಣೆಗಾಗಿ. 1986ರ ಈ ಕಾಯ್ದೆ ಈಗ 40 ವರ್ಷಗಳ ಬಳಿಕವೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳುವುದು ಸಾಧ್ಯ ಆಗಿಲ್ಲ ಎಂಬುದೇ ನಮ್ಮ ದೇಶದ ಪರಿಸರ ಸಂರಕ್ಷಣೆಯ ಬೃಹನ್ನಾಟಕಕ್ಕೆ ಹಿಡಿದ ಮುಖಗನ್ನಡಿ. ಕಳೆದ 40 ವರ್ಷಗಳಲ್ಲಿ ಈ ಕಾಯ್ದೆಯನ್ನು ಅಂದಂದಿನ ಆಡಳಿತಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಸಡಿಲಗೊಳಿಸುತ್ತಾ ಬಂದಿವೆ. ಈಗ ನಡೆದಿರುವುದು, ಅದೇ ಪ್ರಕ್ರಿಯೆಯ ಮುಂದುವರಿದ ಭಾಗ. ಸಿಆರ್‌ಝಡ್ ವಲಯದಲ್ಲಿ ಅನುಮತಿ ಇದೆ ಎಂಬ ಕಾರಣಕ್ಕೆ, ಕೇವಲ ಅಕ್ಷರಗಳನ್ನು ಪರಿಗಣನೆಗೆ ತೆಗೆದುಕೊಂಡು, ಆ ಅಕ್ಷರಗಳ ಹಿಂದಿನ ಸ್ಪಿರಿಟ್‌ಅನ್ನು ಕಡೆಗಣಿಸಿದ್ದರ ಫಲವನ್ನು ಕರ್ನಾಟಕ ಕರಾವಳಿ ಈಗ ಹೊಟ್ಟೆ ತುಂಬಾ ಉಣ್ಣತೊಡಗಿದೆ. ಕರಾವಳಿ ಪರಿಸರದ ಧಾರಣಶಕ್ತಿ ಕುರಿತ ಚರ್ಚೆಗಳು ವಿಕಾಸದ ಅಬ್ಬರದಲ್ಲಿ ಮುಚ್ಚಿಹೋಗಿವೆ.
ತಮಾಷೆ ಎಂದರೆ, ಹಾಲಿ ಬಂದಿರುವ ಕರಡು ಪ್ರಕಟಣೆಯಲ್ಲಿ ಈ ವಿಚಾರವನ್ನು ಅಧಿಕೃತವಾಗಿಯೇ ದಾಖಲಿಸಲಾಗಿದೆ! ಅದೇನೆಂದರೆ, ಸದ್ರಿ ಮೂರು ರಾಸಾಯನಿಕಗಳಿಗೆ ಅನುಮತಿ ನಿಡುವ ವಿಚಾರವನ್ನು ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (NCZMA) 48ನೇ ಸಭೆಯಲ್ಲಿ (ದಿನಾಂಕ 26, ಸೆಪ್ಟಂಬರ್ 2025) ಚರ್ಚಿಸಿದಾಗ, ಈಗಾಗಲೇ ಅನುಮತಿಸಲಾಗಿರುವ ವಿಷಕಾರಿ ರಾಸಾಯನಿಕಗಳಿಗೆ ಹೋಲಿಸಿದರೆ ಸದ್ರಿ ರಾಸಾಯನಿಕಗಳು ಕಡಿಮೆ ಅಪಾಯಕಾರಿ ಆಗಿರುವುದರಿಂದ (considering the comparitively lower hazardous chemical charecteristics of these products in relation to those already permitted) ಈ ರಾಸಾಯನಿಕಗಳಿಗೂ ಅನುಮತಿ ನಿಡುವುದಕ್ಕೆ ಸಿಆರ್‌ಝಡ್ ಮೂಲ ಪ್ರಕಟಣೆಯ ಅನುಬಂಧ IIರಲ್ಲಿ ಸೂಕ್ತ ತಿದ್ದುಪಡಿ ಮಾಡಲು ಸರ್ವಾನುಮತದ ಒಪ್ಪಿಗೆ ನೀಡಲಾಯಿತು ಎಂದು ಪ್ರಕಟಣೆ ಹೇಳಿದೆ.
ಯಾರದೂ ಆಕ್ಷೇಪ ಇಲ್ಲ ಎಂದಾದರೆ, ಈ ತಿದ್ದುಪಡಿ ಕೂಡ ನಿಯಮವಾಗಿ ಜಾರಿಗೆ ಬರಲಿದೆ. ಹಾಗಾಗಿ, ಈ ಬಗ್ಗೆ ಆಕ್ಷೇಪ ದಾಖಲಿಸಬಯಸುವವರು diriapolicy-moefcc@gov.inಗೆ ಇಮೇಲ್ ಕಳುಹಿಸಬಹುದು. ಅಂಚೆ ಮೂಲಕ ಆಕ್ಷೇಪ ಕಳುಹಿಸುವವರಿಗೆ ವಿಳಾಸ: The Secretary, Ministry of Environment, Forest and Climate Change, Indira Paryavaran Bhawan, Jor Bagh Road, Aliganj, New Delhi 110 003.
ಕರ್ನಾಟಕದ ಕರಾವಳಿಯಲ್ಲಿ ಇಡಕಿರಿಯುತ್ತಿರುವ ಮಾಲಿನ್ಯಕಾರಕ ಯೋಜನೆಗಳಿಗೆಲ್ಲ ಒಂದು ಅಕೌಂಟೆಬಿಲಿಟಿ ತರುವುದು ಅನಿವಾರ್ಯ ಎನ್ನಿಸುವ ಸ್ಥಿತಿ ಇಂದು ಕರಾವಳಿಯಲ್ಲಿದೆ. ಪೆಟ್ರೋಲಿಯಂ ಮತ್ತದರ ಉತ್ಪನ್ನಗಳ ಕೈಗಾರಿಕೆ, ಉಷ್ಣವಿದ್ಯುತ್ ಸ್ಥಾವರ, ನ್ಯೂಕ್ಲಿಯರ್ ಸ್ಥಾವರಗಳೆಲ್ಲ ಈಗಾಗಲೇ ಇಲ್ಲಿ ಕಾರ್ಯಾಚರಿಸುತ್ತಿದ್ದರೆ, ಇವುಗಳ ಜೊತೆಗೀಗ ವಿದ್ಯುತ್ ಉತ್ಪಾದನೆ, ಸಿಮೆಂಟು, ಪ್ರವಾಸೋದ್ಯಮ, ಡೇಟಾ ಸೆಂಟರ್ ಎಂದೆಲ್ಲ ನವೋದ್ಯಮಗಳೂ ಇಲ್ಲಿಗೆ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಹಾಗಾಗಿ ಇಲ್ಲಿ ಮಾಲಿನ್ಯ ಎಷ್ಟಿದೆ, ನಮಗೆ ಇನ್ನೆಷ್ಟು ಮಾಲಿನ್ಯ ಬೇಕಿದೆ ಮತ್ತು ಕರಾವಳಿಯ ಪರಿಸರ ಮಾಲಿನ್ಯ ಧಾರಣ ಶಕ್ತಿ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಈಗ ವಿಳಂಬವಾಗಿದ್ದರೂ ಅದು ನಡೆಯಬೇಕಾದುದು ಅನಿವಾರ್ಯ.






