ಅತ್ತ ದರಿ (ಅಮೆರಿಕದ ತಾರಿಫ್); ಇತ್ತ ಪುಲಿ (ಚೀನಾ ಜೊತೆ ಟ್ರೇಡ್ ಡೆಫಿಸಿಟ್)

ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕ ಹುಚ್ಚಾಟದಲ್ಲಿ ತೊಡಗಿದ್ದರೆ, ಎರಡನೇ ದೊಡ್ಡ ಆರ್ಥಿಕತೆಯಾದ ಚೀನಾ ತನ್ನ ಆಂತರಿಕ ಆರ್ಥಿಕ ಸಮತೋಲನಕ್ಕೆ ಬೇರೆ ದೇಶಗಳಿಗೆ ರಫ್ತನ್ನು ಅವಲಂಬಿಸಿಕೊಂಡು ಕುಳಿತಿದೆ. ಈ ಎರಡೂ ಕಡೆಯ ಒತ್ತಡಗಳು ಭಾರತದ ಒಳಗೆ ಆರ್ಥಿಕ ಸಂಕಟಗಳಿಗೆ ಹಾದಿ ತೆರೆಯುತ್ತಿದ್ದು, ಭಾರತ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.
ಬೇರೆಲ್ಲ ಸದ್ದುಗಳನ್ನೂ ಮರೆಸುವಂತೆ ಸ್ವಪ್ರಶಂಸೆಯ ತಮಟೆ ಸದ್ದು ಬಾರಿಸುತ್ತಿರಬೇಕೆಂಬ ಗುತ್ತಿಗೆಯನ್ನು ಮಾಧ್ಯಮಗಳಿಗೆ ಕೊಟ್ಟಿರುವ ಭಾರತ ಸರಕಾರವನ್ನು ‘ವಿಶ್ವಗುರು’ ಎಂದು ಬಿಂಬಿಸುತ್ತಿರುವ ಮಾಧ್ಯಮಗಳು, ವಾಸ್ತವಕ್ಕೆ ಮುಖಾಮುಖಿ ಆಗದೇ ಹೋದರೆ, ಈಗಾಗಲೇ ಕೆಟ್ಟು ಕೆರ ಹಿಡಿದಿರುವ ಮಾಧ್ಯಮಗಳ ವಿಶ್ವಾಸಾರ್ಹತೆ ಸಾರ್ವಜನಿಕರ ಅಸಹನೆಗೆ ತುತ್ತಾಗುವ ದಿನಗಳು ದೂರ ಇಲ್ಲ ಎಂದು ಬಲವಾಗಿ ಅನ್ನಿಸತೊಡಗಿದೆ. ಸರಕಾರದ ಪರ ಮಾಧ್ಯಮಗಳ ವಕೀಲಿಕೆ ಯಾವ ಮಟ್ಟಿಗಿದೆ ಎಂದರೆ, ಅಮೆರಿಕದ ಮುನಿಸಿನ ಬೆನ್ನಲ್ಲೇ ಭಾರತ-ಚೀನಾಗಳ ಸಂಬಂಧ ಹೊಸದಾಗಿ ಚಿಗುರುತ್ತಿದೆ ಡ್ರಾಗನ್-ಆನೆ ಜೋಡಿಯಾಗಿವೆ ಎಂದೆಲ್ಲ ನೆರೇಟಿವ್‌ಗಳನ್ನು ಹೆಣೆಯಲಾಗುತ್ತಿದೆ.
ಈ ಸನ್ನಿವೇಶವನ್ನು ಹೇಗೆ ನೋಡಬೇಕು?
ಅಮೆರಿಕದ ದಂಡಸುಂಕ
ವೈಧಾನಿಕ ಹುಚ್ಚಾಟದಲ್ಲಿ (method in madness) ತೊಡಗಿಕೊಂಡಿರುವ ಅಮೆರಿಕ ಅಧ್ಯಕ್ಷರು ಹೊರನೋಟಕ್ಕೆ ತೀರಾ ಅಸಡ್ಡಾಳ ಅನ್ನಿಸುವ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ತನ್ನ ವಿದೇಶ ನೀತಿ, ಆರ್ಥಿಕ ನೀತಿಗಳಲ್ಲಿ ಆತ್ಮಘಾತಕ ಅನ್ನಿಸುವಷ್ಟು ವಿಪರೀತಕ್ಕೆ ತಲುಪಿದ್ದಾರೆ.
ಮುಕ್ತ ಮಾರುಕಟ್ಟೆಯ ಪ್ರತಿಪಾದಕ ದೇಶವಾಗಿದ್ದೂ, ಎಲ್ಲ ಅಂತರ್‌ರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿ, ಅಧ್ಯಕ್ಷ ಟ್ರಂಪ್ ಅವರ ಮರ್ಜಿಗೆ ತಕ್ಕಂತೆ, ಹಲವು ದೇಶಗಳ ಮೇಲೆ ವಿಧಿಸಲಾಗುತ್ತಿರುವ ಈ ಶಿಕ್ಷಾರೂಪದ ತಾರಿಫ್‌ಗಳು ಅಮೆರಿಕವು ಆಮದು ಮಾಡಿಕೊಳ್ಳುತ್ತಿರುವ ಸರಕಿನ ಮೇಲೆ ಮತ್ತು ಆ ಮೂಲಕ ಅಮೆರಿಕದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿ, ಹಣದುಬ್ಬರ ಮತ್ತು ಆದಾಯ ಕುಸಿತಕ್ಕೆ ಕಾರಣ ಆಗಬಹುದು, ಸರಬರಾಜು ವ್ಯವಸ್ಥೆಯ ಮೇಲೆ ಆಘಾತ (supply shock) ಉಂಟಾಗಿ ಅಮೆರಿಕದ ರಿಸರ್ವ್ ಬ್ಯಾಂಕ್ (US Fedaral reserve) ಅಸಹಾಯಕವಾಗಬಹುದೆಂಬ ನಿರೀಕ್ಷೆ ಅರ್ಥಶಾಸ್ತ್ರಜ್ಞರ ವಲಯಗಳಲ್ಲಿತ್ತು. ಅಂತಹದೇನೂ ಗಂಭೀರವಾದುದು ಸಂಭವಿಸಿದಂತಿಲ್ಲ. ಈಗ ಅದಕ್ಕೆ ಕಾರಣಗಳನ್ನು ಹುಡುಕುವಲ್ಲಿ ಅಮೆರಿಕದ ಅರ್ಥಶಾಸ್ತ್ರಜ್ಞರು ವ್ಯಸ್ತರಿದ್ದಾರೆ. ಅಮೆರಿಕ ಆತ್ಮಘಾತಕ ತೀರ್ಮಾನಗಳನ್ನು ತೆಗೆದುಕೊಂಡೂ, ಅಲ್ಲಿ ಸಮಸ್ಯೆ ಆಗುತ್ತಿಲ್ಲ ಎಂದರೆ ಅದರ ಅರ್ಥ, ಅಮೆರಿಕ ಅಧ್ಯಕ್ಷರ ಹುಚ್ಚಾಟಗಳಲ್ಲಿ ಒಂದು ಸ್ಪಷ್ಟ ಯೋಚನೆ, ತಂತ್ರಗಾರಿಕೆ ಇದೆ ಎಂದೇ ಅಲ್ಲವೆ?
ಅಧ್ಯಕ್ಷ ಟ್ರಂಪ್, ಎಣ್ಣೆಗಾಗಿ ವೆನೆಝುವೆಲಾ, ಎಣ್ಣೆ ಮತ್ತು ನೈಸರ್ಗಿಕ ಅನಿಲ ದಾಸ್ತಾನು ಇರುವ ಗ್ರೀನ್‌ಲ್ಯಾಂಡ್ ತನಗೆ ಬೇಕೇಬೇಕು ಎಂದು ವರಾತ ಹಿಡಿದು ಕುಳಿತಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲಾಗದಿದ್ದರೂ ಅದನ್ನು ಕಾಲಡಿಗೆ ತರಿಸಿಕೊಂಡಿದ್ದಾರೆ. ಹೊಸದೊಂದು ‘ಶಾಂತಿ ಮಂಡಳಿ’ಯ (board of peace) ಮೂಲಕ ಹೊಸ ವರ್ಲ್ಡ್ ಆರ್ಡರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ರಶ್ಯದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತ ಸಹಿತ ಹಲವು ದೇಶಗಳಿಂದ ಅಮೆರಿಕಕ್ಕೆ ಬಂದಿಳಿಯುತ್ತಿರುವ ಆಮದಿನ ಮೇಲೆ ಮುಲಾಜೇ ಇಲ್ಲದೆ ದಂಡಸುಂಕ ವಿಧಿಸುತ್ತಿದ್ದಾರೆ.
ಚೀನಾದ ಟ್ರೇಡ್ ಸರ್‌ಪ್ಲಸ್
ಚೀನಾದ ಸನ್ನಿವೇಶ ಬೇರೆಯದೇ ರೀತಿಯದು. ಜನವರಿ 14ರಂದು ಚೀನಾದ 2025ನೇ ಸಾಲಿನ ಆಮದು-ರಫ್ತಿನ ಅಧಿಕೃತ ಅಂಕಿಅಂಶಗಳನ್ನು ಅಲ್ಲಿನ ಸರಕಾರ ಬಿಡುಗಡೆ ಮಾಡಿದ್ದು, ಅವರ ಆಮದಿಗೆ ಹೋಲಿಸಿದರೆ, ರಫ್ತು 1.19 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು (ಅಂದಾಜು 1,090 ಲಕ್ಷ ಕೋಟಿ ರೂ.ಗಳು) ಹೆಚ್ಚು ದಾಖಲಾಗಿದೆ (ಟ್ರೇಡ್ ಸರ್‌ಪ್ಲಸ್). ಇದು, ಅಮೆರಿಕದ ಕೈಯಲ್ಲಿದ್ದ ಉದಾರೀಕರಣ-ಜಾಗತೀಕರಣ ಪ್ರಕ್ರಿಯೆಯ ಜಾಗತಿಕ ನಾಯಕತ್ವವನ್ನು ಚೀನಾ ವಹಿಸಿಕೊಳ್ಳುತ್ತಿರುವುದರ ಸಂಕೇತ ಎಂದು ಹೊರನೋಟಕ್ಕೆ ಅನಿಸುತ್ತಿದೆಯಾದರೂ, ವಾಸ್ತವ ಬೇರೆಯೇ ಇದೆ. ಈ ಅತಿಯಾದ ಟ್ರೇಡ್ ಸರ್‌ಪ್ಲಸ್ ಕೂಡ ಅಸಮತೋಲನವೇ.
ಯಾವುದೇ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಸರಬರಾಜು ಹೆಚ್ಚಾಗತೊಡಗಿದಾಗ, ಏನಾಗುತ್ತದೆಯೋ ಅದು ಚೀನಾದಲ್ಲೂ ಆಗತೊಡಗಿದೆ. ಬೆಲೆ ಇಳಿತದ ಕಾರಣದಿಂದಾಗಿ ಅಲ್ಲಿ ನಿರುದ್ಯೋಗ, ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿತದಂತಹ ಬೆಳವಣಿಗೆಗಳು ಕಾಣಿಸತೊಡಗಿವೆಯಂತೆ. ಜನ ಹಣ ಖರ್ಚು ಮಾಡುವ, ಚಲಾವಣೆಗೆ ಬಿಡುವ ಬದಲು ಶೇಖರಿಸಿಟ್ಟುಕೊಂಡು ಅವಕಾಶಕ್ಕಾಗಿ ಕಾಯತೊಡಗಿದ್ದಾರೆ. ಈ ಎಲ್ಲ ಒತ್ತಡಗಳನ್ನು ನಿಭಾಯಿಸಲು ಚೀನಾವು ಅಡ್ಡಾದಿಡ್ಡಿ ಬೆಲೆಗೆ ತನ್ನ ಉತ್ಪಾದನೆಗಳನ್ನು ದೇಶದಿಂದ ಹೊರಗೆ ರಫ್ತು ಮಾಡತೊಡಗಿದೆ. ಐರೋಪ್ಯ ಸಮುದಾಯದ ದೇಶಗಳು, ಬ್ರಿಟನ್, ಜಪಾನ್, ಭಾರತ ಮಾತ್ರವಲ್ಲದೆ ಸಣ್ಣ ಮತ್ತು ಮಧ್ಯಮ ಆದಾಯದ ಹಲವು ದೇಶಗಳು ಚೀನೀ ಸರಕುಗಳ ಸುರಿದಾಣ (dumping ground) ಆಗತೊಡಗಿವೆ. ಹೀಗೆ ಸುರಿದಾಣ ಆದಾಗ, ಆ ದೇಶಗಳ ಸ್ಥಳೀಯ ಸಣ್ಣ-ಮಧ್ಯಮ ಗಾತ್ರದ ಉತ್ಪಾದಕ ಸಂಸ್ಥೆಗಳಿಗೆ ಚೀನೀ ಮಾಲಿನ ಜೊತೆ ದರದ ಸ್ಪರ್ಧೆ ಕಷ್ಟವಾಗಿ, ಅವರ ಕತ್ತು ಹಿಸುಕಿದಂತಾಗುತ್ತದೆ. ಬಹುತೇಕ ಎಲ್ಲ ದೇಶಗಳೂ ಈಗ ಈ ಬಗ್ಗೆ ಎಚ್ಚರಗೊಳ್ಳತೊಡಗಿವೆ. ಮೆಕ್ಸಿಕೊ ಚೀನಾದ ಆಮದುಗಳಿಗೆ ದಂಡಸುಂಕ ವಿಧಿಸಲಾರಂಭಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್, ಐರೋಪ್ಯ ಸಮುದಾಯದ ಅಧ್ಯಕ್ಷೆ ಅರ್ಸುಲಾ ವಾಂಡರ್ಲಿನ್ ಮತ್ತಿತರರು ಈ ಬಗ್ಗೆ ಚೀನಾ ಜೊತೆ ಜಾಗತಿಕ ವೇದಿಕೆಗಳಲ್ಲಿ ತಗಾದೆ ಎತ್ತತೊಡಗಿದ್ದಾರೆ.
ಒಟ್ಟಿನಲ್ಲಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕ, ಹುಚ್ಚಾಟದಲ್ಲಿ ತೊಡಗಿದ್ದರೆ, ಎರಡನೇ ದೊಡ್ಡ ಆರ್ಥಿಕತೆಯಾದ ಚೀನಾ ತನ್ನ ಆಂತರಿಕ ಆರ್ಥಿಕ ಸಮತೋಲನಕ್ಕೆ ಬೇರೆ ದೇಶಗಳಿಗೆ ರಫ್ತನ್ನು ಅವಲಂಬಿಸಿಕೊಂಡು ಕುಳಿತಿದೆ. ಈ ಎರಡೂ ಕಡೆಯ ಒತ್ತಡಗಳು ಭಾರತದ ಒಳಗೆ ಆರ್ಥಿಕ ಸಂಕಟಗಳಿಗೆ ಹಾದಿ ತೆರೆಯುತ್ತಿದ್ದು, ಭಾರತ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.
ಭಾರತದ್ದೇನು ಸನ್ನಿವೇಶ?
ಭಾರತದ್ದು ಚೀನಾಕ್ಕೆ ಹೋಲಿಸಿದರೆ ತದ್ವಿರುದ್ಧ ಸ್ಥಿತಿ. ನಮ್ಮ 24-25ನೇ ಸಾಲಿನ (Apr-Oct) ಟ್ರೇಡ್ ಡೆಫಿಸಿಟ್ 5.86 ಲಕ್ಷ ಕೋಟಿ ರೂ. (ಅಂದಾಜು 63.97 ಬಿಲಿಯನ್ ಅಮೆರಿಕನ್ ಡಾಲರ್). ಅಂದರೆ, ನಮ್ಮ ಆಮದು ಪ್ರಮಾಣವು ರಫ್ತಿಗಿಂತ ಅಷ್ಟು ಹೆಚ್ಚು. ನಮ್ಮ ಈ ಟ್ರೇಡ್ ಡೆಫಿಸಿಟ್‌ನಲ್ಲಿ, ಶೇ. 99 ಭಾಗ ಚೀನಾದ್ದೇ ಹೊಂಡ. ಜಗತ್ತಿನ ಯಾವುದೇ ದೇಶಗಳಿಗೆ ಹೋಲಿಸಿದರೆ ಒಂದು ದೇಶದ ಜೊತೆ ಇನ್ನೊಂದು ದೇಶದ ಅತಿದೊಡ್ಡ ವಾಣಿಜ್ಯ ಕಂದರವಂತೆ ಇದು. ಭಾರತ ಇಂದಿಗೂ ಚೀನಾದಿಂದ ಸುಮಾರು 7,000 ಬಗೆಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಟ್ರೇಡ್ ಡೆಫಿಸಿಟ್ ಕಂದರ ವರ್ಷಂಪ್ರತಿ ಹಿಗ್ಗುತ್ತಿದ್ದು, 2023-24ಕ್ಕೆ ಹೋಲಿಸಿದರೆ ಶೇ. 10.1 ಹೆಚ್ಚಿದೆ ಎಂದು ಸರಕಾರವೇ ಸಂಸತ್ತಿನಲ್ಲಿ ಅಂಕಿಅಂಶಗಳನ್ನು ನೀಡಿದೆ (ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 2537, ದಿನಾಂಕ 16/12/2025).
ಈ ಟ್ರೇಡ್ ಡೆಫಿಸಿಟ್ ಕಂದರಕ್ಕೆ ಕಾರಣ, ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಾಹನ ಬಿಡಿಭಾಗಗಳು, ಔಷಧಿ ಕಚ್ಚಾ ಸಾಮಗ್ರಿಗಳು, ಇಲೆಕ್ಟ್ರಾನಿಕ್ ಬಿಡಿ ಭಾಗಗಳು, ಅಸೆಂಬ್ಲಿಗಳು, ಮೊಬೈಲ್ ಫೋನ್ ಭಾಗಗಳು, ಯಂತ್ರೋಪಕರಣಗಳು ಮತ್ತವುಗಳ ಬಿಡಿಭಾಗಗಳಂತಹ ಕಚ್ಚಾ ಸಾಮಗ್ರಿಗಳು, ಮಧ್ಯಂತರಿ ಸರಕುಗಳು ಮತ್ತು ಬಂಡವಾಳ ಸರಕುಗಳು. ಅವನ್ನು ಇಲ್ಲಿ ಮೌಲ್ಯ ವರ್ಧಿಸಿ, ಅಂತಿಮ ಉತ್ಪನ್ನಗಳನ್ನು ತಯಾರಿಸಿ ಮಾರಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿರುವ ವಾಣಿಜ್ಯ ಖಾತೆಯ ರಾಜ್ಯಸಚಿವ ಜಿತಿನ್ ಪ್ರಸಾದ್ ಅವರು, ಈ ಆಮದು-ರಫ್ತು ಸಂತುಲನ ಸಾಧಿಸಲು ಅಂತರ್ ಸಚಿವಾಲಯ ಸಮಿತಿಯೊಂದನ್ನು (ಐಎಂಸಿ) ರಚಿಸಲಾಗಿದೆ ಎಂದೂ ಸಂಸತ್ತಿನಲ್ಲಿ ಹೇಳಿಕೊಂಡಿದ್ದಾರೆ.
ಸರಕಾರ ಏನೇ ಸಮರ್ಥನೆಗೆ ಇಳಿದರೂ, ಇಲ್ಲಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ದರ ಇಲ್ಲಿನ ಸಣ್ಣಪುಟ್ಟ ಉದ್ಯಮಗಳ ಸಹಾಯಕ್ಕೆ ಬರುತ್ತಿಲ್ಲ. ಭಾರತದ ಇಲೆಕ್ಟ್ರಾನಿಕ್ಸ್, ಔಷಧಿ ಉತ್ಪಾದನೆಗಳು, ಯಂತ್ರೋಪಕರಣಗಳ ಉತ್ಪಾದಕರು ತಮ್ಮ ಸಂರಚನೆಯಲ್ಲೇ ಚೀನಾ ಮೇಲೆ ಅವಲಂಬಿತರು. ನಮ್ಮಲ್ಲಿ ಉತ್ಪಾದನೆ ಆಗಬೇಕೆಂದರೆ, ನಾವು ಚೀನಾದಿಂದ ಅಗತ್ಯ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ ಮತ್ತು ರೂಪಾಯಿ ದರವು ಡಾಲರ್ ಎದುರು ಕುಸಿಯುತ್ತಾ ಸಾಗಿದಂತೆಲ್ಲ, ಭಾರತ ಹೆಚ್ಚು ರೂಪಾಯಿಗಳನ್ನು ತೆತ್ತು ತನ್ನ ಆಮದು ಸರಕುಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ದೇಶದ ಆಂತರಿಕ ಸನ್ನಿವೇಶ, ಜಾಗತಿಕ ಆರ್ಥಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಭಾರತದಲ್ಲೀಗ ಡಾಲರ್ ಬೆಲೆ 100ರೂ.ಗಳ ಸನಿಹಕ್ಕೆ ನಾಗಾಲೋಟದಿಂದ ಸಾಗುತ್ತಿದೆ. ಇದು ದೇಸೀ ಉದ್ಯಮಗಳಿಗೆ ನುಂಗಲಾರದ ತುತ್ತು.
ರೂಪಾಯಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ, ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ರಿಸರ್ವ್ ಬ್ಯಾಂಕಿನ ಪ್ರಯತ್ನಗಳೆಲ್ಲದರ ಹೊರತಾಗಿಯೂ ಡಾಲರ್ ಗಗನಕ್ಕೇರುತ್ತಿದೆ. ಚೀನಾದ ಟ್ರೇಡ್ ಡೆಫಿಸಿಟ್ ನಿಯಂತ್ರಿಸುವುದಕ್ಕೆ ಕಳೆದ ವರ್ಷದ ಇಕನಾಮಿಕ್ ಸರ್ವೇಯಲ್ಲಿ ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅನಂತ್ ನಾಗೇಶ್ವರನ್ ಅವರು, ಚೀನಾಕ್ಕೆ ಭಾರತದಲ್ಲಿ ನೇರ ಹೂಡಿಕೆಗೆ ಅವಕಾಶ (FDI) ಮಾಡಿಕೊಡಬಹುದೆಂಬ ಸಲಹೆ ನೀಡಿದ್ದರು. ಆ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಸರಕಾರ ಈ ತನಕ ತೆಗೆದುಕೊಂಡಂತಿಲ್ಲ. ಕಬ್ಬಿಣ, ಸೋಲಾರ್ ಪ್ಯಾನಲ್, ಕೆಲವು ರಾಸಾಯನಿಕಗಳಂತಹ ಪ್ರಬಲ ಲಾಬಿ ಇರುವ ಉದ್ಯಮವಲಯಗಳಲ್ಲಿ ಮಾತ್ರ ಭಾರತ ಸರಕಾರ ದೇಶದೊಳಗಿನ ಉದ್ಯಮಗಳ ಹಿತಾಸಕ್ತಿ ರಕ್ಷಿಸಲು ಮತ್ತು ಚೀನಾದ ಅತಿರಫ್ತನ್ನು ನಿಯಂತ್ರಿಸಲು ಡಂಪಿಂಗ್ ನಿರೋಧಕ ತೆರಿಗೆ ವಿಧಿಸಿ ಕೈತೊಳೆದುಕೊಂಡಿದೆ. ಉಳಿದಂತೆ ಭಾರತದ ಮಾರುಕಟ್ಟೆಯಲ್ಲಿ ಈವತ್ತಿಗೂ ಚೀನಾದ್ದೇ ಆಟ.
ಅತ್ತ ಅಮೆರಿಕದ ತಾರಿಫ್ ಇತ್ತ ಚೀನಾದ ಅನಿವಾರ್ಯ ಅವಲಂಬನೆಗಳ ಕಾರಣದಿಂದಾಗಿ ಅಡಕತ್ತರಿಗೆ ಸಿಲುಕಿರುವ ಭಾರತ, ಅದರಿಂದ ಹೊರಬರಲು ಸನ್ನಿವೇಶವನ್ನು ಒಟ್ಟಂದದಲ್ಲಿ ಅರ್ಥೈಸಿಕೊಳ್ಳುವ ಮತ್ತು ಆರ್ಥಿಕ ಪರಿಣತರ ಸಹಾಯ ಪಡೆಯುವ ಬದಲು, ತನ್ನ ಡಿಯರ್ ಮೀಡಿಯಾಗಳ ಮೂಲಕ ‘ಸಬ್ ಚೆಂಗಾಸಿ’ ಎಂದು ತುತ್ತೂರಿ ಊದಿಸುತ್ತಿರುವುದು, ಬಹಳ ದುಬಾರಿ ತಮಾಷೆ ಆಗಿ ಪರಿಣಮಿಸಲಿದೆ.







