ಉತ್ತರದಾಯಿತ್ವಕ್ಕೆ ಎಳ್ಳುನೀರು; ‘ಅಥಾರಿಟಿ’ ಆಡಳಿತ ಮಾದರಿ

ಇಂಡಿಗೊ ಪ್ರಕರಣದಲ್ಲಿ ನಾಗರಿಕರಿಗೆ ಆಗಿರುವ ಅನ್ಯಾಯಕ್ಕೆ ಕಾರಣರು ಯಾರೆಂಬ ಪ್ರಶ್ನೆ ಎದ್ದಾಗ, ಹರಕೆಯ ಕುರಿ ಹುಡುಕುವ ಆಟ ಬಿಟ್ಟು, ಸರಕಾರದ ಈ ಶಾಸನಬದ್ಧ ಪ್ರಾಧಿಕಾರಗಳ ಸ್ವರೂಪ, ಅವುಗಳ ಸ್ವಾಯತ್ತೆಯ ವಿನ್ಯಾಸ, ಅಲ್ಲಿ ನೇಮಕಾತಿಗಳಲ್ಲಿರುವ ಸಡಿಲು, ಪ್ರಾಧಿಕಾರಗಳ ಉತ್ತರದಾಯಿತ್ವದ ಮಿತಿಗಳು... ಇತ್ಯಾದಿಗಳನ್ನೆಲ್ಲ ಮರುಪರಿಶೀಲಿಸುವ ತುರ್ತು ಇದೆ.
ಭಾರತದಲ್ಲಿ ಇಂಡಿಗೊ ವಿಮಾನಗಳ ಯಾನ ವ್ಯವಸ್ಥೆಯಲ್ಲಿ ಆಗಿರುವ ಅಡಚಣೆ ಭರಪೂರ ಚರ್ಚೆಯಲ್ಲಿದೆ. ಈ ಚರ್ಚೆ ಯಾಕೆ ನಡೆಯುತ್ತಿದೆ ಎಂದರೆ, ಹಾಲಿ ಭಾರತ ಸರಕಾರದ ಕೃಪಾಕಟಾಕ್ಷ ಸಂಪೂರ್ಣವಾಗಿ ಕೇಂದ್ರೀಕೃತಗೊಂಡಿರುವ ‘ಮೇಲು ಮಧ್ಯಮ ವರ್ಗ’ಕ್ಕೆ ಈ ಅಡಚಣೆಯ ಬಿಸಿ ತಟ್ಟಿದೆ. ಈ ಬಿಸಿ ಆರುವ ಮುನ್ನ, ನಮ್ಮ ಉದಾರೀಕರಣದ 35 ವರ್ಷಗಳ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡುವುದಕ್ಕೆ ಇದು ಸಕಾಲ.
ಉದಾರೀಕರಣದ ಮೂಲಮಂತ್ರ ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’’. 2021ರ ಆದಿಯಲ್ಲಿ, ಕೋವಿಡ್ ಸಂಕಷ್ಟವನ್ನು ತನಗೆ ದೊರೆತ ಸದವಕಾಶ ಎಂದು ಬಗೆದುಕೊಂಡ ಭಾರತ ಸರಕಾರವು, ತನ್ನ ಉದಾರೀಕರಣದ ಓಟಕ್ಕೆ ‘ಆನಿ ವೇಗ’ ನೀಡತೊಡಗಿತು. ಆ ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ವೆಬಿನಾರ್‌ನಲ್ಲಿ ‘‘government has no business to be in business’’ ಎಂದು ಘೋಷಿಸಿದ್ದರು. ಅಲ್ಲಿಂದೀಚೆಗೆ, ಉದಾರೀಕರಣ ಎಂಬುದು ಕಾರ್ಪೊರೇಟ್ ಶಕ್ತಿಗಳಿಗೆ ಕಾನೂನು-ನಿಯಮಗಳ ಜಟಿಲ ಕಗ್ಗಾಡಿನಲ್ಲಿ ಸಲೀಸಾದ ಹಾದಿ ತೆರೆದುಕೊಡುವ ವ್ಯವಸ್ಥೆ ಆಗಿಬಿಟ್ಟಿದೆ.
ತನ್ನ ನೇರ ಅಧೀನದಲ್ಲಿ ಸಂಭವಿಸುವ ಎಲ್ಲ ಘಟನೆಗಳಿಗೂ ಸರಕಾರ ಸಂಸತ್ತಿನಲ್ಲಿ ಉತ್ತರದಾಯಿ ಆಗಿರಬೇಕಾದುದು ಸಾಂವಿಧಾನಿಕ ಆವಶ್ಯಕತೆ. ಉದಾರೀಕರಣದ ಬಳಿಕ ಸರಕಾರ ತನ್ನ ಅಧೀನದಲ್ಲಿದ್ದ ಬಹುತೇಕ ಎಲ್ಲ ವಾಣಿಜ್ಯ-ಕೈಗಾರಿಕಾ-ವ್ಯಾವಹಾರಿಕ ಕ್ಷೇತ್ರಗಳಲ್ಲೂ ‘ಶಾಸನಬದ್ಧ’ವಾದ, ಸ್ವಾಯತ್ತ ಪ್ರಾಧಿಕಾರಗಳನ್ನು ಸ್ಥಾಪಿಸುತ್ತಾ ಬಂದಿದೆ; ಆ ಮೂಲಕ ಸಂಸತ್ತಿಗೆ ತನ್ನ ನೇರ ಉತ್ತರದಾಯಿತ್ವದ ಹೊರೆಯಿಂದ ಕಳಚಿಕೊಂಡಿದೆ. ಈ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯ ಚಟುವಟಿಕೆಗಳಿಗೆ ಶಾಸನಾತ್ಮಕ ಹೊಣೆ ಹೊತ್ತಿರುವುದರಿಂದ, ಅವು ಸರಕಾರಕ್ಕೆ ಉತ್ತರದಾಯಿ ಆಗಿರಬೇಕು ಎಂಬುದು ನಿರೀಕ್ಷೆ. ಈ ಶಾಸನಬದ್ಧ ಪ್ರಾಧಿಕಾರಗಳ ಮುಖ್ಯಸ್ಥರು ವೃತ್ತಿಪರ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಷ್ಟು ಕಾಲ ಇವೆಲ್ಲ ಸುಸೂತ್ರವಾಗಿ ನಡೆದವು; ತಪ್ಪುಗಳಾದಲ್ಲಿ ತಿದ್ದಿಕೊಂಡು ಬೆಳೆದವು. ಆದರೆ, ಬರಬರುತ್ತಾ ಈ ಪ್ರಾಧಿಕಾರಿಗಳು ರಾಜಕೀಯ ಪ್ರೇರಿತ ಆಗತೊಡಗಿದಂತೆಲ್ಲ, ಸರಕಾರಕ್ಕೆ ಸಂಸತ್ತನ್ನು ಬೈಪಾಸ್ ಮಾಡಲು ಹೊಸ ಹೊಸ ಹಾದಿಗಳು ತೆರೆದುಕೊಳ್ಳತೊಡಗಿವೆ. ಇದಕ್ಕೆ ಹಲವು ಉದಾಹರಣೆಗಳನ್ನು ದೇಶದ ಕಳೆದೊಂದು ದಶಕದ ಚರಿತ್ರೆಯಿಂದಲೇ ಹೆಕ್ಕಿ ತೆಗೆದು ನೀಡಬಹುದು.
ಇಂಡಿಗೊ ಸಂಕಟ
ಪ್ರಾಧಿಕಾರಗಳ ಮೂಲಕ ಸಂಸತ್ತನ್ನು ಬೈಪಾಸ್ ಮಾಡುವ ಪ್ರಕ್ರಿಯೆಯಲ್ಲಿ ಲೇಟೆಸ್ಟ್ ಬೆಳವಣಿಗೆ ಎಂದರೆ, ದೇಶದಲ್ಲಿ ಈಗ ವಿಮಾನಯಾನ ಕ್ಷೇತ್ರದಲ್ಲಿ ಉಂಟಾಗಿರುವ ಸಂಕಟ. ಮೇಲುನೋಟಕ್ಕೆ ಇದು, ದೇಶದ ನಾಗರಿಕ ವಿಮಾನಯಾನದಲ್ಲಿ ಸಿಂಹಪಾಲನ್ನು ಹೊಂದಿರುವ ‘ಇಂಡಿಗೊ’ ಸಂಸ್ಥೆಯ ಯೋಜನಾ ವೈಫಲ್ಯ ಮತ್ತು ಸರಕಾರಿ ಆದೇಶದ ಪಾಲನೆಗೆ ನಿರ್ಲಕ್ಷ್ಯ ಎಂದು ಅನ್ನಿಸುತ್ತದೆ. ಸಂಸತ್ತಿನಲ್ಲಿ ಈ ಬಗ್ಗೆ ಕೇಳಿದಾಗ, ಸರಕಾರವು ತಪ್ಪಿತಸ್ಥ ವಿಮಾನಯಾನ ಸಂಸ್ಥೆಯ ವಿರುದ್ಧ ‘ಕಠಿಣ ಕ್ರಮ’ ತೆಗೆದುಕೊಳ್ಳುತ್ತೇವೆ ಎನ್ನುತ್ತಿದೆಯೇ ಹೊರತು, ತಾನು ನೇಮಿಸಿರುವ ಪ್ರಾಧಿಕಾರದ ನೀತಿಗಳಲ್ಲಿರಬಹುದಾದ ಲೋಪಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.
ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಈಗ ಗದ್ದಲಕ್ಕೆ ಕಾರಣ ಆಗಿರುವ ತನ್ನ CAR ಸುತ್ತೋಲೆಯನ್ನು (File No. DGCA-22024/12/2022-FSD ದಿನಾಂಕ 24 ಎಪ್ರಿಲ್ 2019) ಹೊರಡಿಸಿ, ಈಗ ಆರು ವರ್ಷಗಳಾಗಿವೆ. ಆ ನಿರ್ದೇಶನಗಳ ಪಾಲನೆಗೆ ನಿಗದಿಯಾಗಿದ್ದ ಮೊದಲ ಡೆಡ್‌ಲೈನ್ ಜೂನ್ 1, 2024ಕ್ಕೆ ಮುಗಿದಿದೆ. ಆ ಬಳಿಕ ಅದನ್ನು 2025ರ ನವೆಂಬರ್ 1ರ ತನಕ ವಿಸ್ತರಿಸಲಾಯಿತು; ಈಗ ಮತ್ತೆ ಆ ದಿನಾಂಕವನ್ನು 2026ರ ಫೆಬ್ರವರಿ 10ರ ತನಕ ವಿಸ್ತರಿಸಲಾಗಿದೆ. ಈ ವಿವರಗಳು ಏನನ್ನು ಹೇಳುತ್ತಿವೆ ಎಂದರೆ, DGCAಗೆ ತಳಮಟ್ಟದಲ್ಲಿ ಏನಾಗುತ್ತಿದೆ ಎಂಬ ಅರಿವಿತ್ತು. ಇಂಡಿಗೊ ಆಡಳಿತದಿಂದ ತನ್ನ ಆದೇಶದ ನಿರ್ಲಕ್ಷ್ಯ, ಸೂಚನೆಗಳ ಪಾಲನೆಯಲ್ಲಿ ಲೋಪ ಆಗುತ್ತಿರುವುದು ಗಮನಕ್ಕೆ ಬಂದಾಗಲೇ DGCA ಸಾರ್ವಜನಿಕ ಹಿತಾಸಕ್ತಿಯಿಂದ ವರ್ತಿಸಿ, ತಕ್ಷಣ ಅಗತ್ಯ ಕ್ರಮಕೈಗೊಳ್ಳುತ್ತಿದ್ದರೆ, ಪರಿಸ್ಥಿತಿ ಈ ಹಂತಕ್ಕೆ ತಲುಪುತ್ತಿರಲಿಲ್ಲ.
DGCAಗೆ ಜನಸಾಮಾನ್ಯರ ಹಂಗಾಗಲೀ ಸಂಸತ್ತಿಗೆ ಉತ್ತರದಾಯಿತ್ವವಾಗಲೀ ಇಲ್ಲದ ಕಾರಣ, ಅದು ತನ್ನ ಆದೇಶ ಹೊರಡಿಸಿ ನಿದ್ದೆಗೆ ಜಾರಿತು. ಸರಕಾರದ (ವಿಮಾನಯಾನ ಇಲಾಖೆಯ) ಗಮನಕ್ಕೂ ಈ ಬೆಳವಣಿಗೆಗಳೆಲ್ಲ ಬಂದಂತಿಲ್ಲ, ಬಂದಿದ್ದರೂ ಈ ಬೆಳವಣಿಗೆಯ ಪರಿಣಾಮಗಳ ಕುರಿತು ಸರಕಾರ ಯೋಚಿಸಿದಂತಿಲ್ಲ ಅಥವಾ ಈಗ ವಿಮಾನಯಾನ ಸಚಿವರು ಹೊಸ ವಿಮಾನಯಾನ ಸಂಸ್ಥೆಗಳಿಗೂ ಅವಕಾಶ ನೀಡುತ್ತೇವೆ ಎಂದು ಹೇಳುತ್ತಿರುವುದನ್ನು ಗಮನಿಸಿದರೆ, ಸರಕಾರ ಗೊತ್ತಿದ್ದೂ ತನ್ನದೇ ನಿಗೂಢ ಉದ್ದೇಶಪೂರ್ತಿಗಾಗಿ ಹೊಂಚುಹಾಕಿ ಕುಳಿತಿತ್ತು- ಹೀಗೆ ಈ ಸನ್ನಿವೇಶವನ್ನು ಯಾವ ರೀತಿಯಲ್ಲಿ ಬೇಕಿದ್ದರೂ ಪರಿಭಾವಿಸಬಹುದು. ಒಟ್ಟಿನಲ್ಲಿ ಪ್ರತಿಯೊಬ್ಬರೂ ಉತ್ತರದಾಯಿತ್ವದಿಂದ ಹಿಂದೆ ಸರಿದಿದ್ದರಿಂದಾಗಿ, ಕಳೆದೊಂದು ವಾರದಿಂದ ದೇಶದ ನಾಗರಿಕರು ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ತಮ್ಮದಲ್ಲದ ತಪ್ಪಿಗೆ ಅನಾಥರಾಗಬೇಕಾಯಿತು.
ಇದೆಲ್ಲ ಆರಂಭ ಆದದ್ದು ಎಲ್ಲಿ?
ಮೂಲದಲ್ಲಿ ಸದಾಶಯಗಳೇ ಇದ್ದ ಪರಿಕಲ್ಪನೆಯೊಂದು, ಅದನ್ನು ಆಚರಣೆಗೆ ತರುವವರ ಗುಣಮಟ್ಟದಲ್ಲಿರುವ ಏರಿಳಿತಗಳೊಂದಿಗೆ ಹೇಗೆ ಬದಲಾಗಬಹುದು ಎಂಬುದಕ್ಕೆ ಭಾರತದ ಉದಾರೀಕರಣದ ಚರಿತ್ರೆಯನ್ನು ಗಮನಿಸಬೇಕು. ಉದಾರೀಕರಣದ ಪ್ರಕ್ರಿಯೆಗಳ ಆರಂಭಿಕ ಹಂತದಲ್ಲಿ, ಅರ್ಥಾತ್, ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿ ಮತ್ತು ಡಾ. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ಇದ್ದ ಅವಧಿಯಲ್ಲಿ ಸರಕಾರದ ಹೊಣೆಗಾರಿಕೆಗಳನ್ನು ಸ್ವಾಯತ್ತ ಪ್ರಾಧಿಕಾರಗಳಿಗೆ ವರ್ಗಾಯಿಸುವ ಈ ಪ್ರಕ್ರಿಯೆ ಆರಂಭಗೊಂಡಿತು.
1991ರಲ್ಲಿ, ಆರ್ಥಿಕ ವಲಯಗಳಲ್ಲಿ ಸುಧಾರಣೆಗೆಂದು ರಚಿತವಾಗಿದ್ದ ನರಸಿಂಹಂ ಸಮಿತಿ ನೀಡಿದ ವರದಿಯ ಅನ್ವಯ, ತಮ್ಮ ಚೊಚ್ಚಲ ಬಜೆಟ್‌ನಲ್ಲೇ ಡಾ. ಮನಮೋಹನ್ ಸಿಂಗ್ ಅವರು ಸ್ಟಾಕ್ ಮಾರುಕಟ್ಟೆಯ ನಿಯಂತ್ರಣವನ್ನು ಸ್ವಾಯತ್ತ ಸಂಸ್ಥೆಯೊಂದಕ್ಕೆ ವಹಿಸುವ ಬಗ್ಗೆ ಪ್ರಕಟಿಸಿದ್ದರು. ಅದರಂತೆ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಸ್ಥಾಪನೆಗೊಂಡಿತು. ಈ ಬೆಳವಣಿಗೆಯ ಬೆನ್ನಿಗೇ ಹರ್ಷದ್ ಮೆಹ್ತಾ ಹಗರಣ ಸಂಭವಿಸಿದ್ದು, ಸರಕಾರದ ಕಿವಿ ಹಿಂಡಿದಂತಾಗಿತ್ತು. ಹಾಗಾಗಿ, ಸರಕಾರ ಖಾಸಗೀಕರಣದತ್ತ ತನ್ನ ಹೆಜ್ಜೆಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ಇಡುವುದು ಅನಿವಾರ್ಯ ಆಯಿತು.
1993ರಲ್ಲಿ, ವಿಮಾ ಕ್ಷೇತ್ರದಲ್ಲಿ ಸುಧಾರಣೆ, ಖಾಸಗೀಕರಣಗಳನ್ನು ಸಾಧಿಸುವ ನಿಟ್ಟಿನಲ್ಲಿ ರಚಿಸಲಾದ ಆರ್.ಎನ್. ಮಲ್ಹೋತ್ರಾ ಸಮಿತಿಯು, ವಿಮಾ ಸಂಸ್ಥೆಗಳನ್ನು ನೇರ ಸರಕಾರಿ ಕಣ್ಗಾವಲಿನಲ್ಲಿ ಇಡುವ ಬದಲು, ಶಾಸನಬದ್ಧ ಸಂಸ್ಥೆಯೊಂದನ್ನು ಸ್ಥಾಪಿಸಿ, ಅದರ ನಿಯಂತ್ರಣದಡಿ ತರಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ, 1996ರಲ್ಲಿ ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಸ್ಥಾಪನೆಗೊಂಡಿತು. 1997ರಲ್ಲಿ, ಪ್ರಧಾನಿ ಎಚ್. ಡಿ. ದೇವೇಗೌಡರ ನೇತೃತ್ವದ ಯುನೈಟೆಡ್ ಫ್ರಂಟ್ ಸರಕಾರವು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಎಂಬ ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಿತು. 2003ರಲ್ಲಿ, ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (CERC) ಸ್ಥಾಪನೆಗೊಂಡಿತು. ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ತಿತ್ವದಲ್ಲಿ ಇದ್ದ ನಾಗರಿಕ ವಿಮಾನಯಾನ ನಿರ್ದೇಶಕರ ಕಚೇರಿಯನ್ನು 2020ರಲ್ಲಿ ಭಾರತ ಸರಕಾರವು ಶಾಸನಬದ್ಧವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಆಗಿ ರೂಪಿಸಿತು.
ಹೀಗೆ ಸರಕಾರವು ತಾನು ಖಾಸಗೀಕರಿಸಬಯಸುವ ಪ್ರತಿಯೊಂದು ರಂಗವನ್ನೂ ಒಂದು ಶಾಸನದ ಮೂಲಕ ಸ್ವಾಯತ್ತ ಸಂಸ್ಥೆಯ ಕೈಗೆ ಒಪ್ಪಿಸುವುದು, ಅದಕ್ಕೆ ಅಧ್ಯಕ್ಷರ ನೇಮಕಾತಿಯನ್ನು ಸರಕಾರ ತನ್ನ ವಶದಲ್ಲಿ ಇಟ್ಟುಕೊಳ್ಳುವುದು ಮತ್ತು ಆ ಪ್ರಾಧಿಕಾರಗಳ ಮೂಲಕವೇ ಆ ರಂಗದ ಆಡಳಿತವನ್ನು ನಿರ್ವಹಿಸುವ ಒಂದು ಪ್ಯಾಟರ್ನ್ ಆರಂಭಗೊಂಡದ್ದು, 90ರ ದಶಕದ ಆದಿಯಲ್ಲಿ. ಹಾಲಿ ಸರಕಾರ ಕೂಡ, ಈ ಪ್ಯಾಟರ್ನ್ ಅನ್ನು ತನ್ನ ಮೂಗಿನ ನೇರಕ್ಕೆ, ತಾನು ಖಾಸಗೀಕರಿಸ ಬಯಸುತ್ತಿರುವ ಎಲ್ಲ ವಲಯಗಳಲ್ಲಿ ಅನುಷ್ಠಾನ ಮಾಡುತ್ತಿದೆ. ಈ ಪ್ಯಾಟರ್ನ್‌ನ ಅನುಕೂಲ ಏನೆಂದರೆ, ಇದು ಶಾಸನಬದ್ಧವೇ ಹೊರತು ಸಂಸತ್ತಿಗೆ ನೇರ ಉತ್ತರದಾಯಿ ಅಲ್ಲ. ಹಾಗಾಗಿ, ಲೋಪಗಳು ಸಂಭವಿಸಿದಾಗಲೆಲ್ಲ ಸರಕಾರಕ್ಕೆ ಹೊಣೆಗಾರಿಕೆ ತಪ್ಪಿಸಿಕೊಂಡು, ಪ್ರಾಧಿಕಾರದತ್ತ ಬೆಟ್ಟುಮಾಡುವುದು ಸುಲಭ. ಜೊತೆಗೆ, ಈ ಪ್ರಾಧಿಕಾರದ ಮುಖ್ಯಸ್ಥರಾಗಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡರೆ, ಅಲ್ಲಿನ ಎಲ್ಲ ಬೆಳವಣಿಗೆಗಳ ಮೇಲೂ ಸರಕಾರಕ್ಕೆ ಪರೋಕ್ಷ ರೂಪದಲ್ಲಿ ಸಂಪೂರ್ಣ ಹತೋಟಿ ಇರುತ್ತದೆ. ಕಾರ್ಪೊರೇಟ್ ಪರ ಎಗ್ಗಿಲ್ಲದೆ ಕೆಲಸ ಮಾಡುವ ಸರಕಾರವೊಂದಕ್ಕೆ ಇದು ವಿನ್-ವಿನ್ ಸನ್ನಿವೇಶ. ಟೆಲಿಕಾಂ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ, ವಿದ್ಯುತ್ ಖಾಸಗೀಕರಣದ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ, ವಿಮಾರಂಗ ಖಾಸಗೀಕರಣದ ಪ್ರಕ್ರಿಯೆಗಳಲ್ಲಿ ಮತ್ತು ಈಗ ಇಂಡಿಗೊ ಪ್ರಕರಣದಲ್ಲಿ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಈಗ ಇಂಡಿಗೊ ಪ್ರಕರಣದಲ್ಲಿ ನಾಗರಿಕರಿಗೆ ಆಗಿರುವ ಅನ್ಯಾಯಕ್ಕೆ ಕಾರಣರು ಯಾರೆಂಬ ಪ್ರಶ್ನೆ ಎದ್ದಾಗ, ಹರಕೆಯ ಕುರಿ ಹುಡುಕುವ ಆಟ ಬಿಟ್ಟು, ಸರಕಾರದ ಈ ಶಾಸನಬದ್ಧ ಪ್ರಾಧಿಕಾರಗಳ ಸ್ವರೂಪ, ಅವುಗಳ ಸ್ವಾಯತ್ತೆಯ ವಿನ್ಯಾಸ, ಅಲ್ಲಿ ನೇಮಕಾತಿಗಳಲ್ಲಿರುವ ಸಡಿಲು, ಪ್ರಾಧಿಕಾರಗಳ ಉತ್ತರದಾಯಿತ್ವದ ಮಿತಿಗಳು... ಇತ್ಯಾದಿಗಳನ್ನೆಲ್ಲ ಮರುಪರಿಶೀಲಿಸುವ ತುರ್ತು ಇದೆ. ಹೇಳುವವರು-ಕೇಳುವವರಿಲ್ಲದ ವ್ಯವಸ್ಥಿತ ಅರಾಜಕತೆಯ ಮೂಲಕ ದೇಶದ ಆಯಕಟ್ಟಿನ ಸಂಗತಿಗಳನ್ನೆಲ್ಲ ‘ಆನಿಪಾಲು’ ಮಾಡುವ ಪ್ರಯತ್ನಗಳನ್ನು ಮತ್ತು ಅದರ ದೂರಗಾಮಿ ಪರಿಣಾಮಗಳನ್ನು ದೇಶ ಸೂಕ್ಷ್ಮವಾಗಿ ಗಮನಿಸಬೇಕಿದೆ.







