Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಮರದ ತಲೆ ಹತ್ತಿ ಬುಡ ಕಡಿಯುವುದೇ ಆಡಳಿತ...

ಮರದ ತಲೆ ಹತ್ತಿ ಬುಡ ಕಡಿಯುವುದೇ ಆಡಳಿತ ನೀತಿ ಆದರೆ?!

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು27 Jun 2026 10:25 AM IST
share
ಮರದ ತಲೆ ಹತ್ತಿ ಬುಡ ಕಡಿಯುವುದೇ ಆಡಳಿತ ನೀತಿ ಆದರೆ?!

ಯೋಜನೆಗಳಲ್ಲಿ, ತಂತ್ರಗಾರಿಕೆಯಲ್ಲಿ ಎಡವುತ್ತಾ, ಅವುಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾ ಸಾಗುವುದು ಹಾಲಿ ಭಾರತ ಸರಕಾರದ ಹಾಲ್‌ಮಾರ್ಕ್ ಆಗಿಬಿಟ್ಟಿದೆ. ಇದು ಇಂಚಿಂಚಾಗಿ ಸರಕಾರವನ್ನು ಬಲಿಷ್ಠ ಕಾರ್ಪೊರೇಟ್‌ಗಳ ಅಡಿಯಾಳು ಮಾಡುತ್ತಿದೆ. ಅಂತಹ ಲೋಪಗಳನ್ನು ಪ್ರಶ್ನಿಸಿದವರನ್ನು ಸರಕಾರದ ಮುಖ್ಯಸ್ಥರು ‘ಕ್ರಾನಿಕ್ ಡಿಸ್‌ಸ್ಯಾಟಿಸ್ಫ್ಯಾಕ್ಷನ್’ ರೋಗಿಗಳು ಎಂದು ಲೇವಡಿ ಮಾಡುವುದು ನಿಜಕ್ಕೂ ದುರಂತ.

ಈವಾರದ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರ್ನವ್ ಗೋಸ್ವಾಮಿ ಅವರ ನೇತೃತ್ವದ ರಿಪಬ್ಲಿಕ್ ಟಿ.ವಿ. ಸಂಘಟಿಸಿದ್ದ ‘ರಿಪಬ್ಲಿಕ್ ಸಮಿಟ್- ಗ್ರೇಟ್ ಪವರ್ ಇಂಡಿಯಾ ನೇಷನ್ ಫರ್ಸ್ಟ್’ನಲ್ಲಿ ಪಾಲ್ಗೊಂಡು ಮಾತನಾಡುತ್ತಾ, ತಮ್ಮ ‘ರಿಫಾರ್ಮ್ ಎಕ್ಸ್‌ಪ್ರೆಸ್’ ಫಲಿತಾಂಶ ಗಳನ್ನು ಈ ತಲೆಮಾರಿನಲ್ಲೇ ದೇಶ ನೋಡಲಿದೆ. ‘ಆಲ್ವೇಸ್ ಅಗೇನ್ಸ್ಟ್ ಟೋಲಿ’ ಪ್ರತಿಯೊಂದಕ್ಕೂ ಕುತರ್ಕ ತೆಗೆಯುತ್ತಿದೆ. ಈ ಕುತರ್ಕಗಳಿಗೆ ದೇಶ ಸತರ್ಕ (ಎಚ್ಚರ) ಇರಬೇಕು ಎಂದು ಹೇಳಿದರು. ಈ ವಿಮರ್ಶಕರ ಗುಂಪಿಗೆ ‘ಕ್ರಾನಿಕ್ ಡಿಸ್‌ಸ್ಯಾಟಿಸ್ಫ್ಯಾಕ್ಷನ್’ ರೋಗ ಇದೆ. ಅವರು ಒಂದೆಡೆ ವಿದ್ಯುತ್ ಬೇಕು ಎನ್ನುತ್ತಾರೆ, ಮರುದಿನವೇ ಸೋಲಾರ್, ನ್ಯೂಕ್ಲಿಯರ್, ಹೈಡ್ರೋ, ವಿಂಡ್ ವಿದ್ಯುತ್ ಯೋಜನೆಗಳ ವಿರುದ್ಧ ಪ್ಲಕಾರ್ಡ್ ಹಿಡಿದು ಪ್ರತಿಭಟನೆಗೆ ಕೂರುತ್ತಾರೆ; ರೇರ್ ಅರ್ಥ್ ಸಪ್ಲೈ ಚೇನ್ ಎಲ್ಲಿದೆ ಎಂದು ಕೇಳುವ ಬಾಯಲ್ಲೇ ಖನಿಜ ಗಣಿಗಾರಿಕೆಗೆ ಪರಿಸರದ ಹೆಸರಲ್ಲಿ ವಿರೋಧ ಮಾಡುತ್ತಾರೆ; ಡೇಟಾ-ಆಟಾ(ಹಿಟ್ಟು) ಬಗ್ಗೆ ಚರ್ಚೆ ಹುಟ್ಟಿಸಿದವರೇ ಡೇಟಾ ಸೆಂಟರ್ ಏಕೆ? ಎಂದು ತಗಾದೆ ತೆಗೆಯುತ್ತಾರೆ ಎಂದೆಲ್ಲ ಪ್ರಧಾನಿ ತಮ್ಮ ನೀತಿ ವಿರೋಧಿಗಳ ರೋಗಲಕ್ಷಣಗಳನ್ನು ವಿವರಿಸಿದರು.

ತೀರಾ ಬೀಸುಮಾತುಗಳ ಆ ಭಾಷಣ, ಅವರ ಉದಾರೀಕರಣದ ಹಾದಿಯನ್ನು ವಿರೋಧಿಸುವವರ ಲೇವಡಿಯನ್ನೇನೋ ಮಾಡುತ್ತದೆ; ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಆದರೆ, ವಿರೋಧಿಸುವವರ ವಾದಗಳಲ್ಲಿರಬಹುದಾದ ಸೂಕ್ಷ್ಮಗಳನ್ನು ಗ್ರಹಿಸುವುದಿಲ್ಲ. ವಿಕಾಸದ ಹೆಸರಿನಲ್ಲಿ ನಡೆದಿರುವ ಅವಾಂತರಗಳ ಮೂಲದಲ್ಲಿರುವ ವಾಸ್ತವಗಳು ಪ್ರಧಾನಿಯವರಿಗೆ ಅರ್ಥ ಆಗುವುದಿಲ್ಲವೋ ಅಥವಾ ಅವರ ಭಾಷಣಗಳನ್ನು ಸಿದ್ಧಪಡಿಸುವವರು ಅವರ ಬಾಯಿಯಿಂದ ಈ ವ್ಯಂಗ್ಯದ ಮಾತುಗಳನ್ನು ಉದ್ದೇಶಪೂರ್ವಕವಾಗಿ ಹೊರಡಿಸುತ್ತಾರೋ ಅಥವಾ ಈ ‘ರಿಫಾರ್ಮ್’ಗಳ ಭರಪೂರ ಲಾಭ ಎತ್ತುತ್ತಿರುವ ‘ಆನಿ’ಗಳು ಸರಕಾರದ ಕಣ್ಣಿಗೆ ಮುಸುಕು ತೊಡಿಸಿದ್ದಾರೋ ಗೊತ್ತಿಲ್ಲ. ರಿಫಾರ್ಮ್ ಎಕ್ಸ್‌ಪ್ರೆಸ್ ಅರೆಬರೆ ಸಿದ್ಧಗೊಂಡ ನೀತಿಗಳ ಹಳಿಯ ಮೇಲೆ ಹೊರಡುವುದು ಅಪಾಯಕಾರಿ ಎಂಬುದು ಪ್ರಧಾನಮಂತ್ರಿಗಳಿಗೂ, ಅವರ ಮಾತುಗಳಿಗೆ ಚಪ್ಪಾಳೆ ತಟ್ಟುವವರಿಗೂ ಇನ್ನೂ ಅರ್ಥ ಆದಂತಿಲ್ಲ. ಕೇವಲ ಕಳೆದೊಂದು ವಾರದಲ್ಲಿಯೇ ನನ್ನ ಗಮನಕ್ಕೆ ಬಂದ, ಸರಕಾರದ ಇಂತಹ ನೀತ್ಯಾತ್ಮಕ ಲೋಪಗಳ ಮೂರು ಉದಾಹರಣೆಗಳನ್ನು ಇಲ್ಲಿ ದಾಖಲಿಸುವುದು ಈ ಬರೆಹದ ಉದ್ದೇಶ. ಇಂತಹ ನೂರಾರು ಉದಾಹರಣೆಗಳನ್ನು ಕಳೆದ 12 ವರ್ಷಗಳಿಂದ ಹೆಕ್ಕಿತೆಗೆಯಬಹುದು.

ಉದಾಹರಣೆ -1

ಎಂಬರ್ (ember) ಸಂಸ್ಥೆ ನವೀಕರಿಸಬಲ್ಲ ಇಂಧನ ಮೂಲಗಳ ಕುರಿತು ಥಿಂಕ್‌ಟ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅದು ಇತ್ತೀಚೆಗೆ ಬಿಡುಗಡೆಗೊಳಿಸಿರುವ ಒಂದು ವರದಿ ‘Bottleneck to the next phase of renewable energy growth in India’ ಒಂದು ಕುತೂಹಲಕರ ಅಂಶವನ್ನು ಹೊರಹಾಕುವ ಮೂಲಕ, ದೇಶದ ಇಂಧನ ನೀತಿಯಲ್ಲಿರುವ ನೀತ್ಯಾತ್ಮಕ ಲೋಪಗಳನ್ನು ಎತ್ತಿ ತೋರಿಸಿದ್ದು, ಮುಂದಿನ ಹಂತಕ್ಕೆ ಸಾಗುವಾಗ ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ. ಬಹಳ ಸರಳವಾಗಿ ಹೇಳಬೇಕೆಂದರೆ, ಸರಕಾರ ವಿದ್ಯುತ್ ಉತ್ಪಾದನೆಗೆ ತಲೆಕೆಡಿಸಿಕೊಂಡಷ್ಟು ಪ್ರಮಾಣದಲ್ಲಿ ವಿದ್ಯುತ್ ಶೇಖರಣೆಗೆ ಒತ್ತು ಕೊಟ್ಟಿಲ್ಲದಿರುವುದರಿಂದ, ಉತ್ಪಾದನೆ ಆಗಿರುವ ವಿದ್ಯುತ್ ದೊಡ್ಡ ಪ್ರಮಾಣದಲ್ಲಿ ವ್ಯರ್ಥ ಆಗುತ್ತಿದೆ!

ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರಗಳು ದೇಶದಲ್ಲಿ ವಿದ್ಯುತ್ ಸರಬರಾಜಿನ ಸಾತತ್ಯವನ್ನು ಕಾಪಾಡಿಕೊಳ್ಳುವಲ್ಲಿ ಸದ್ಯಕ್ಕೆ ಮಹತ್ವದ ಪಾತ್ರ ವಹಿಸುತ್ತಿವೆ. ಬೇಡಿಕೆ-ಸರಬರಾಜುಗಳ ಸಂತುಲನ ಸಾಧಿಸುವುದು ಕೂಡ ಆ ಮೂಲಕವೇ. ನವೀಕರಿಸಬಲ್ಲ ಇಂಧನ ಮೂಲಗಳಾಗಿರುವ ಸೋಲಾರ್ ಹಾಗೂ ವಿಂಡ್ ವಿದ್ಯುತ್ ಸ್ಥಾವರಗಳು ಸದ್ಯ ದೇಶದ ವಿದ್ಯುತ್ ಉತ್ಪಾದನೆಯ ಶೇ. 17ನ್ನು ತಾವು ನಿಭಾಯಿಸುತ್ತಿದ್ದು, ನಡುಮಧ್ಯಾಹ್ನದ ವೇಳೆ, ಅವುಗಳ ಉತ್ಪಾದನಾ ಪ್ರಮಾಣ ಪೀಕ್ ತಲುಪಿ, ಶೇ. 41ರ ತನಕ ಏರುತ್ತದೆ. ಕಲ್ಲಿದ್ದಲು ಮೂಲದ ಸ್ಥಾವರಗಳು ರಾತ್ರಿಯಲ್ಲಿ ತಮ್ಮ ಸಾಮರ್ಥ್ಯ ಶೇ. 90 ಪ್ರಮಾಣದಲ್ಲಿ ಉತ್ಪಾದಿಸಿದರೆ, ಹಗಲಲ್ಲಿ ತಮ್ಮ ಕನಿಷ್ಠ ಟೆಕ್ನಿಕಲ್ ಲೋಡ್ ಪ್ರಮಾಣ ಆಗಿರುವ ಶೇ. 55 ವಿದ್ಯುತ್ತನ್ನು ಮಾತ್ರ ಉತ್ಪಾದಿಸುವುದು ಮತ್ತು ಉಳಿದ ಲೋಡನ್ನು ಸೋಲಾರ್ ಮತ್ತಿತರ ಪರ್ಯಾಯ ಮೂಲಗಳು ನಿಭಾಯಿಸುವುದು ಈಗ ಸಂಪ್ರದಾಯ. ಆದರೆ ಈಗೀಗ, ಸೋಲಾರ್ ಉತ್ಪಾದನೆ ಹೆಚ್ಚಿರುವುದರಿಂದ, ಮಧ್ಯಾಹ್ನದ ವೇಳೆ, ಕಲ್ಲಿದ್ದಲು ಮೂಲದ ವಿದ್ಯುತ್ ತನ್ನ ಕನಿಷ್ಠ ಟೆಕ್ನಿಕಲ್ ಲೋಡಿಗೆ ತನ್ನ ಉತ್ಪಾದನೆಯನ್ನು ಇಳಿಸಿಕೊಂಡ ಬಳಿಕವೂ ಸೋಲಾರ್ ಉತ್ಪಾದನೆ ಅತಿ ಹೆಚ್ಚಿರುವುದರಿಂದ ಹಾಗೂ ಈ ಹೆಚ್ಚುವರಿ ವಿದ್ಯುತ್ತನ್ನು ಸಂಗ್ರಹಿಸಿಡುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ, ಹಣಕಾಸು ವರ್ಷ 2025-26ರಲ್ಲಿ ವ್ಯರ್ಥ ಆಗಿರುವ ವಿದ್ಯುತ್‌ನ ಆರ್ಥಿಕ ನಷ್ಟ 629 ಕೋಟಿ ರೂ.ಗಳೆಂದು ಎಂಬರ್ ಅಂದಾಜಿಸಿದೆ. ಹೆಚ್ಚುವರಿ ವಿದ್ಯುತ್ ಸಂಗ್ರಹಕ್ಕೆ ಸೂಕ್ತ ಬ್ಯಾಟರಿ ಸ್ಟೋರೇಜ್‌ನಂತಹ ವ್ಯವಸ್ಥೆ ಇಲ್ಲದಿದ್ದರೆ, ಇನ್ನಷ್ಟು ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು ಅರ್ಥಹೀನ.

ಉದಾಹರಣೆ -2

ಇದೇ ಅಂಕಣದಲ್ಲಿ ಈಗಾಗಲೇ ಹಲವು ಬಾರಿ ಪ್ರಸ್ತಾಪ ಆಗಿರುವ ಭಾರತ್‌ನೆಟ್ (ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯತ್‌ಗಳನ್ನು ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕಿತಗೊಳಿಸುವ ಮಹತ್ವಾಕಾಂಕ್ಷಿ ಯೋಜನೆ) ಕುರಿತು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಕೆಲವು ಮಾಹಿತಿಗಳು ದಂಗುಬಡಿಸುವಂತಿವೆ. ಭಾರತ್‌ನೆಟ್ ಯೋಜನೆಯಡಿ ಮೊದಲ ಹಂತದಲ್ಲಿ 48,462 ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ 1,39,579 ಕೋಟಿ ರೂ.ಗಳನ್ನು ವ್ಯಯಿಸಲು ಸರಕಾರ ಯೋಜಿಸಿತ್ತು. ಬಳಿಕ ಮೂರನೇ ಹಂತ 2023ರ ಆಗಸ್ಟ್‌ನಲ್ಲಿ ಮಂಜೂರಾಗಿದ್ದು, ಈ ಹಂತದಲ್ಲಿ ಕೆಲಸವನ್ನು ಆಃಔಒ ಮಾದರಿಯಲ್ಲಿ ವಹಿಸಿಕೊಡಲಾಗಿದೆ. (ಮಾಹಿತಿ ರಾಜ್ಯಸಭೆಯ ಚುಕ್ಕೆರಹಿತ ಪ್ರಶ್ನೆಸಂಖ್ಯೆ 4344, ದಿ. 02-04-2026).

ಆ ಪತ್ರಿಕೆ ಸಂಗ್ರಹಿಸಿರುವ ಮಾಹಿತಿಗಳ ಪ್ರಕಾರ, 2026ರ ಮಾರ್ಚ್ ಅಂತ್ಯಕ್ಕೆ, 18 ಲಕ್ಷ ಸಂಪರ್ಕಗಳ ಗುರಿಯ ಎದುರು 13.23 ಲಕ್ಷ ಸಂಪರ್ಕಗಳನ್ನು ಸಾಧಿಸಲಾಗಿದೆ, ಆದರೆ ಅವುಗಳ ಪೈಕಿ ಸಕ್ರಿಯವಾಗಿರುವ ಸಂಪರ್ಕಗಳು ಕೇವಲ 8.01 ಲಕ್ಷ; ಬಳಕೆ ಮತ್ತೂ ಕಡಿಮೆ. ಈ ಬಗ್ಗೆ ಪರಿಶೀಲಿಸಿರುವ ಸಂಸದೀಯ ಸ್ಥಾಯೀ ಸಮಿತಿಯು ನೆಟ್‌ವರ್ಕ್ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಕಂಡುಕೊಂಡಿದೆ. ಅರ್ಧಕ್ಕಿಂತಲೂ ಹೆಚ್ಚು ಸಂಪರ್ಕಗಳು ಬಳಕೆ ಆಗುತ್ತಿಲ್ಲ. ಜೊತೆಗೆ ಇದೇ ಯೋಜನೆಯಡಿ ಸ್ಥಾಪಿಸಲಾಗಿರುವ 1.04 ಲಕ್ಷ ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳಲ್ಲಿ ಬಳಕೆಯಲ್ಲಿರುವುದು (2025 ಸೆಪ್ಟಂಬರ್ ಹೊತ್ತಿಗೆ) ಕೇವಲ 766 ಮಾತ್ರ (ಅಂದರೆ ಕೇವಲ ಶೇ. 0.7).

ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ವೆಚ್ಚದ ಈ ಯೋಜನೆ ಸದ್ಯಕ್ಕಂತೂ ನೀರಿನ ಮೇಲೆ ಹೋಮದಂತೆ ಕಾಣಿಸತೊಡಗಿದೆ.

ಉದಾಹರಣೆ -3

ಇರಾನ್-ಇಸ್ರೇಲ್-ಅಮೆರಿಕ ಕದನದ ಅವಧಿಯಲ್ಲಿ, ಭಾರತಕ್ಕೆ ತನ್ನ ಇಂಧನ ಮೂಲಗಳಲ್ಲಿ ತಾನು ಸ್ವಾವಲಂಬಿಯಾಗಬೇಕು; ಕೇವಲ ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿರಬಾರದು ಎಂಬ ಜ್ಞಾನೋದಯ ಆದದ್ದು ಸರಿಯಷ್ಟೇ? ಸಮುದ್ರ ತೀರದಲ್ಲಿ, ಆಳ ಸಮುದ್ರದಲ್ಲಿ ತೈಲ ಮತ್ತು ಅನಿಲ ನಿಕ್ಷೇಪಗಳ ಅನ್ವೇಷಣೆಗಾಗಿ ಹತ್ತನೇ ಸುತ್ತಿನ ಹರಾಜಿಗೆ ಬಿಡ್ ಸಲ್ಲಿಕೆ ಆರಂಭ ಆದದ್ದು 2025ರ ಫೆಬ್ರವರಿಯಲ್ಲಿ. ಈಗ ಆರು ಬಾರಿ ಈ ಬಿಡ್ ಸಲ್ಲಿಕೆಗೆ ಅಂತಿಮ ದಿನಾಂಕ ಮುಂದೂಡಿದರೂ, ಇನ್ನೂ ಅದಕ್ಕೆ ಬಿಡ್ಡರ್ ಕುಳುವಾರಿಗಳು ಮುಂದೆ ಬರುತ್ತಿಲ್ಲ. ಬರುವ ಕುಳುವಾರಿಗಳೆಲ್ಲ ತೀರ ಪ್ರದೇಶದ ಯೋಜನೆಗಳಲ್ಲೇ ಆಸಕ್ತರು. ಈಗ ಹೊಸದಾಗಿ ಸೆಪ್ಟಂಬರ್ 17ರ ಕೊನೆಯ ದಿನಾಂಕವನ್ನು ಪ್ರಕಟಿಸಿ, 12 ತೀರಪ್ರದೇಶದ, 1 ಆಳ ಸಮುದ್ರದ ಹಾಗೂ 12 ಅತಿ ಆಳಸಮುದ್ರದ ಬ್ಲಾಕ್‌ಗಳನ್ನು ಹರಾಜಿಗೆ ಇಡಲಾಗಿದೆ. ಇದರ ಜೊತೆ 11ನೇ ಸುತ್ತಿನ ಬಿಡ್ಡಿಂಗನ್ನೂ ಪ್ರಕಟಿಸಲಾಗಿದ್ದು, 1 ಆಳ ಸಮುದ್ರದ, 4 ಅತಿ ಆಳ ಸಮುದ್ರದ ಹಾಗೂ 16 ತೀರ ಪ್ರದೇಶದ ಬ್ಲಾಕ್‌ಗಳನ್ನೂ ಹರಾಜಿಗೆ ಒಡ್ಡಲಾಗಿದ್ದು, ಅದಕ್ಕೂ ಅಂತಿಮ ದಿನಾಂಕವನ್ನು ಸೆಪ್ಟಂಬರ್ 17ಕ್ಕೆ ವಿಸ್ತರಿಸಲಾಗಿದೆ. 1.92 ಲಕ್ಷ ಚದರ ಕಿ.ಮೀ. ಸಾಗರ ಪ್ರದೇಶ ಈಗ ಹರಾಜಿಗೆ ಇದೆ. ಮೊದಲ ಒಂಭತ್ತು ಸುತ್ತುಗಳಲ್ಲಿ ಈಗಾಗಲೇ 3.79 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಸಾಗರ ಕ್ಷೇತ್ರ ಬ್ಲಾಕ್‌ಗಳು ಬಿಡ್ ಆಗಿವೆ.

ಸರಕಾರದ ಉದ್ದೇಶ, ವಿದೇಶೀ ಹೂಡಿಕೆದಾರರನ್ನು ಕಷ್ಟದ ಅತಿ ಆಳ ಸಮುದ್ರದ ತೈಲ ಅನ್ವೇಷಣೆಗೆ ಆಹ್ವಾನಿಸುವುದಾಗಿದ್ದು, ಆ ಕುಳುವಾರಿಗಳು, ದುಬಾರಿ ಹೂಡಿಕೆ, ಕಠಿಣ ತೆರಿಗೆ ನಿಯಮಗಳು, ಅಧಿಕಾರಶಾಹಿಯ ಕೆಂಪುಪಟ್ಟಿ ನಿಯಮಗಳು ಸಂಕೀರ್ಣತೆ ಮತ್ತಿತರ ಕಾರಣಗಳನ್ನು ಮುಂದೊಡ್ಡಿ, ಈ ಗಾಳಕ್ಕೆ ಸಿಲುಕುತ್ತಿಲ್ಲ. ಆ ಹಿನ್ನೆಲೆಯಲ್ಲಿ ಈಗ ಸರಕಾರ ತನ್ನ ನೀತಿಗಳಲ್ಲಿ ಸಾಕಷ್ಟು ಸಡಿಲು ತೋರಿಸಿ ಬಿಡ್ ಕರೆದಿದ್ದು, ಈ ಬಾರಿಯಾದರೂ ವಿದೇಶೀ ಹೂಡಿಕೆದಾರರು ತನ್ನ ಗಾಳಕ್ಕೆ ಸಿಗುವರೇ ಎಂದು ಕಾಯುತ್ತಿದೆ. ದೇಶದ ಒಳಗೆ ಔಓಉಅ, ಆಯಿಲ್ ಇಂಡಿಯಾದಂತಹ ಸಂಸ್ಥೆಗಳ ಸಾಮರ್ಥ್ಯ ವೃದ್ಧಿಗೆ, ಉದ್ಯೋಗಾವಕಾಶ ಸೃಷ್ಟಿಗೆ ಪ್ರಯತ್ನಿಸುವ ಬದಲು, ವಿದೇಶೀ ಸಂಸ್ಥೆಗಳತ್ತಲೇ ಸರಕಾರದ ಗಮನ ಇರುವಂತಿದೆ. ಈಗ ಬ್ರೆಝಿಲ್‌ನ ಪೆಟ್ರೊಬ್ರಾಸ್, ಪ್ರಮುಖ ತೈಲ ನಿಕ್ಷೇಪ ವ್ಯವಹಾರದ ಕಂಪೆನಿಗಳಾದ ಎಕ್ಸಾನ್ ಮೊಬಿಲ್, ಷೆವರಾನ್, ಟೋಟಲ್ ಎನರ್ಜೀಸ್, BP ಮೊದಲಾದವು ಭಾರತೀಯ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿವೆಯಂತೆ.

***

ಈ ಮೂರೂ ಉದಾಹರಣೆಗಳು ಬೊಟ್ಟು ಮಾಡುತ್ತಿರುವುದು ಸರಕಾರದ ನೀತಿಗಳಲ್ಲಿರುವ ಲೋಪಗಳತ್ತ. ಯೋಜನೆಗಳಲ್ಲಿ, ತಂತ್ರಗಾರಿಕೆಯಲ್ಲಿ ಎಡವುತ್ತಾ, ಅವುಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾ ಸಾಗುವುದು ಹಾಲಿ ಭಾರತ ಸರಕಾರದ ಹಾಲ್‌ಮಾರ್ಕ್ ಆಗಿಬಿಟ್ಟಿದೆ. ಇದು ಇಂಚಿಂಚಾಗಿ ಸರಕಾರವನ್ನು ಬಲಿಷ್ಠ ಕಾರ್ಪೊರೇಟ್‌ಗಳ ಅಡಿಯಾಳು ಮಾಡುತ್ತಿದೆ. ಅಂತಹ ಲೋಪಗಳನ್ನು ಪ್ರಶ್ನಿಸಿದವರನ್ನು ಸರಕಾರದ ಮುಖ್ಯಸ್ಥರು ‘ಕ್ರಾನಿಕ್ ಡಿಸ್‌ಸ್ಯಾಟಿಸ್ಫ್ಯಾಕ್ಷನ್’ ರೋಗಿಗಳು ಎಂದು ಲೇವಡಿ ಮಾಡುವುದು ನಿಜಕ್ಕೂ ದುರಂತ. ‘ದೇಶ ಮೊದಲು (India First)’ ಎನ್ನುವ ಮೊದಲು ದೇಶವೆಂದರೆ, ಈ ದೇಶದ ಜನಸಮುದಾಯ. ಅವರ ಸುಸ್ಥಿರ, ಆರೋಗ್ಯವಂತ ಬದುಕು ತನ್ನ ಆದ್ಯತೆ ಎಂಬುದನ್ನು ಪ್ರಭುತ್ವ ಮರೆತಾಗ ಹೀಗೆಲ್ಲ ಆಗುತ್ತದೆ.

Tags

Administrationtrees
share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X